ಬಂಟ್ವಾಳ ಮತ್ತೆ ಜಿದ್ದಾಜಿದ್ದಿನ ಕಣ ; ರಮಾನಾಥ ರೈ- ರಾಜೇಶ್ ನಾಯ್ಕ್ ಸೆಣಸಾಟಕ್ಕೆ ವೇದಿಕೆ ಸಜ್ಜು, ಅಲ್ಪಸಂಖ್ಯಾತರ ಮತಗಳೇ ನಿರ್ಣಾಯಕ !

12-03-23 06:46 pm       Richard, Mangaluru Staffer   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಅಂದರೆ, ಕಳೆದ ಚುನಾವಣೆಯಲ್ಲಿ ಸುರತ್ಕಲ್ ಬಿಟ್ಟರೆ ಅತಿ ಹೆಚ್ಚು ಕೋಮು ಧ್ರುವೀಕರಣಕ್ಕೆ ಒಳಗಾಗಿದ್ದ ಕಣ.

ಮಂಗಳೂರು, ಮಾ.12: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಅಂದರೆ, ಕಳೆದ ಚುನಾವಣೆಯಲ್ಲಿ ಸುರತ್ಕಲ್ ಬಿಟ್ಟರೆ ಅತಿ ಹೆಚ್ಚು ಕೋಮು ಧ್ರುವೀಕರಣಕ್ಕೆ ಒಳಗಾಗಿದ್ದ ಕಣ. ಕ್ಷೇತ್ರದಲ್ಲಿ ಅರ್ಧಕ್ಕರ್ಧ ಅಲ್ಪಸಂಖ್ಯಾತ ಮತಗಳಿದ್ದರೂ, ನಿರಂತರ ಕೋಮು ದಳ್ಳುರಿ, ಹಿಂದುತ್ವದ ಅಸ್ತ್ರಕ್ಕೆ ನಲುಗಿದ ಪರಿಣಾಮ ಕಾಂಗ್ರೆಸ್ ಯಾರೂ ಊಹಿಸಿರದ ರೀತಿ ಧೂಳೀಪಟ ಆಗಿತ್ತು. ಆರು ಬಾರಿಯ ಶಾಸಕರಾಗಿದ್ದ ರಮಾನಾಥ ರೈ ಹೀನಾಯ ಸೋಲು ಕಂಡಿದ್ದರು. ಈ ಬಾರಿ ಹಿಂದಿನ ರೀತಿಯಲ್ಲೇ ಮತ್ತೆ ಬಂಟ್ವಾಳ ಜಿದ್ದಾಜಿದ್ದಿನ ಕಣ ಆಗುವ ಲಕ್ಷಣ ಕಂಡುಬಂದಿದೆ.

ಕರಾವಳಿಯಲ್ಲಿ 2018ರ ಚುನಾವಣೆ ಕಾಂಗ್ರೆಸ್ ಪಾಲಿಗೆ ಯಾರೂ ಊಹಿಸಿರದ ರೀತಿಯ ಫಲಿತಾಂಶ. ಕೊಲೆ ಸರಣಿಯಿಂದಾಗಿ ಎದ್ದಿದ್ದ ಕೋಮು ಧ್ರುವೀಕರಣ ಕಾಂಗ್ರೆಸನ್ನು ಕರಾವಳಿಯ ಪ್ರತೀ ಕ್ಷೇತ್ರಗಳಲ್ಲಿ 15-20 ಸಾವಿರ ಮತಗಳಿಂದ ಮಕಾಡೆ ಮಲಗಿಸಿತ್ತು. ಬಂಟ್ವಾಳದಲ್ಲಿ ಆರು ಬಾರಿಯ ಶಾಸಕರಾಗಿದ್ದ ರಮಾನಾಥ ರೈ ಅವರನ್ನು 16 ಸಾವಿರ ಮತಗಳಿಂದ ಸೋಲಿಸಿ ಬಿಜೆಪಿಯ ರಾಜೇಶ್ ನಾಯ್ಕ್ ಶಾಸಕರಾಗಿದ್ದರು. ಈ ಬಾರಿಯೂ ಅಂತಹದ್ದೇ ಚಿತ್ರಣ ಇದೆಯೇ ಎಂದರೆ ಇಲ್ಲ ಅಂತಲೇ ಹೇಳಬೇಕು. ಈ ಬಾರಿ ಆಡಳಿತಾರೂಢ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ, ಜೊತೆಗೆ ಭ್ರಷ್ಟಾಚಾರದ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ ನಾಯಕರು ಹೋದಲ್ಲಿ ಬಂದಲ್ಲಿ ರಾಜ್ಯ ಸರಕಾರದ ಭ್ರಷ್ಟಾಚಾರದ ಬಗ್ಗೆ ಟೀಕಿಸುತ್ತಿರುವುದು ಮತ್ತೆ 2013ರ ರೀತಿಯ ಫಲಿತಾಂಶ ಹೊರಬೀಳುತ್ತಾ ಅನ್ನುವ ಮಾತು ಕೇಳಿಬರುತ್ತಿದೆ.

ಮತ್ತೆ ಹಳಬರದ್ದೇ ಸೆಣಸಾಟ ಸಾಧ್ಯತೆ

ಈ ಬಾರಿಯೂ ಬಿಜೆಪಿಯಿಂದ ಶಾಸಕ ರಾಜೇಶ್ ನಾಯ್ಕ್ ಸ್ಪರ್ಧಿಸುವುದು ಬಹುತೇಕ ಖಚಿತ. ಇವರ ಮುಂದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೆ ರಮಾನಾಥ ರೈ ಅವರೇ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಮಾತುಗಳಿವೆ. ಇವರೇ ಅಭ್ಯರ್ಥಿಗಳಾದರೆ, ಕಳೆದ ಎರಡು ಬಾರಿಯ ಚುನಾವಣೆ ರೀತಿಯಲ್ಲೇ ಜಿದ್ದಾಜಿದ್ದಿನ ಕಣ ಬಂಟ್ವಾಳದಲ್ಲಿ ಎದುರಾಗಲಿದೆ. ಕಾಂಗ್ರೆಸಿನಲ್ಲಿ ರಮಾನಾಥ ರೈ ಜೊತೆಗೆ ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವನಿ ಕುಮಾರ್ ರೈ ಕೂಡ ರೇಸಿನಲ್ಲಿದ್ದಾರೆ. ರಮಾನಾಥ ರೈ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಕೂಡ ಕ್ಷೇತ್ರದಲ್ಲಿ ಒಂದು ಬಾರಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಪ್ರತಿ ಗ್ರಾಮಕ್ಕೂ ವಾಹನ ಜಾಥಾ ಮಾಡಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದ್ದಾರೆ.

ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕ

ಬಂಟ್ವಾಳ ಕ್ಷೇತ್ರದಲ್ಲಿ ಸದ್ಯಕ್ಕೆ 2,22,901 ಮತದಾರರಿದ್ದಾರೆ. ಈ ಪೈಕಿ 1,09,715 ಪುರುಷರು ಮತ್ತು 1,13,186 ಮಹಿಳಾ ಮತದಾರರಿದ್ದಾರೆ. ಈ ಪೈಕಿ ಮುಸ್ಲಿಂ ಮತ್ತು ಕ್ರಿಸ್ತಿಯನ್ ಸೇರಿ ಅಲ್ಪಸಂಖ್ಯಾತರ ಮತಗಳೇ 84 ಸಾವಿರ ಇದ್ದಾರೆ. ಬಿಲ್ಲವ 64 ಸಾವಿರ, ಬಂಟ ಸಮುದಾಯ 22 ಸಾವಿರದಷ್ಟಿದ್ದಾರೆ. ಇನ್ನು 23 ಸಾವಿರದಷ್ಟು ಕುಲಾಲ ಮತದಾರರಿದ್ದಾರೆ. ಇತರೇ ಹಿಂದುಳಿದ ಮತ್ತು ಎಸ್ಸಿ-ಎಸ್ಟಿ ಮತದಾರರು 27 ಸಾವಿರ ಇದ್ದಾರೆ. ಹೀಗಾಗಿ ಇಲ್ಲಿ ಹಿಂದೆಲ್ಲಾ ಅಲ್ಪಸಂಖ್ಯಾತರ ಮತಗಳೇ ನಿರ್ಣಾಯಕವಾಗಿದ್ದವು. ಆದರೆ, 2014ರ ಲೋಕಸಭೆ ಚುನಾವಣೆ ಬಳಿಕ ಕ್ಷೇತ್ರದಲ್ಲಿ ಬಿಜೆಪಿ ಮತಗಳಿಕೆ ಹೆಚ್ಚಿದ್ದು, 2018ರ ಅಸೆಂಬ್ಲಿ ಚುನಾವಣೆಯಲ್ಲಿ 16 ಸಾವಿರ ಲೀಡ್, 2019ರ ಲೋಕಸಭೆ ಚುನಾವಣೆಯಲ್ಲಿ 29 ಸಾವಿರ ಮತ ಬಿಜೆಪಿ ಪಾಲಿಗೆ ಮುನ್ನಡೆ ಸಿಕ್ಕಿತ್ತು. ಆದರೆ 2008 ಮತ್ತು 2013ರ ಚುನಾವಣೆಯಲ್ಲಿ ರಮಾನಾಥ ರೈ ಗೆದ್ದಿದ್ದು ಅತ್ಯಂತ ಅಲ್ಪ ಮತಗಳ ಅಂತರದಿಂದ. ಈ ಬಾರಿಯೂ ಅದೇ ರೀತಿಯ ಫಲಿತಾಂಶ ಬರಬಹುದು ಅನ್ನುವ ಚಿತ್ರಣ ಇಲ್ಲವಾದರೂ, ಕಾಂಗ್ರೆಸ್ ಕಾರ್ಯಕರ್ತರ ಕೆಲಸದ ಮೇಲೆ ಫಲಿತಾಂಶದ ದಿಕ್ಕು ನಿರ್ಣಯ ಆಗಲಿದೆ.

ಬಿಲ್ಲವರು ತಮಗೆ ಸೀಟು ಕೇಳಿರುವುದು ಒಂದೆಡೆಯಾದರೆ, ಬಿಜೆಪಿಯ ಹಿಂದುತ್ವದ ಅಸ್ತ್ರವನ್ನು ಎದುರಿಸುವುದು ಕಾಂಗ್ರೆಸ್ ಪಾಲಿನ ಸವಾಲು. ಇದೇ ವೇಳೆ, ಈ ಬಾರಿ ಎಸ್ಡಿಪಿಐ ಕಡೆಯಿಂದ ಇಲ್ಯಾಸ್ ಮಹಮ್ಮದ್ ತುಂಬೆ ಅವರನ್ನು ಅಭ್ಯರ್ಥಿಯಾಗಿ ಮಾಡಿದೆ. ಇವರು ಕನಿಷ್ಠ ಅಂದರೂ ಐದಾರು ಸಾವಿರ ಮತಗಳನ್ನು ಸೆಳೆದುಕೊಳ್ಳುವುದು ಖಚಿತ. ಉಳಿದಿರುವ ಮತಗಳಲ್ಲಿ ಈ ಹಿಂದಿನ ರೀತಿಯಲ್ಲೇ ಕಾಂಗ್ರೆಸ್- ಬಿಜೆಪಿ ನಡುವೆ ತೀವ್ರ ಸೆಣಸಾಟ ನಡೆಯೋದು ಖಚಿತ ಅನ್ನುವ ಚಿತ್ರಣ ಇದೆ. ಹೀಗಾಗಿ ಇಲ್ಲಿ ಯಾರು ಗೆದ್ದರೂ, ಅತ್ಯಂತ ಕಡಿಮೆ ಅಂತರದಿಂದ ಅನ್ನುವುದು ದಿಟ.

Bantwal tough fight between BJP Rajesh Naik and Congress leader Ramanath Rai for the upcoming elections 2022.