ಪಿಲಿಕುಳದಲ್ಲಿ ಹುಲಿ ಘರ್ಜನೆಯ ವಿಕ್ರಮ ಇನ್ನಿರಲ್ಲ !!

27-10-20 12:26 pm       Mangalore Correspondent   ಕರಾವಳಿ

ಪಿಲಿಕುಳ ನಿಸರ್ಗ ಧಾಮದಲ್ಲಿ ಜನರ ಆಕರ್ಷಣೆಗೆ ಕಾರಣವಾಗಿದ್ದ ಹುಲಿ ವಿಕ್ರಮ್ ಸಾವನ್ನಪ್ಪಿದೆ. 

ಮಂಗಳೂರು, ಅಕ್ಟೋಬರ್ 27: ಪಿಲಿಕುಳ ನಿಸರ್ಗ ಧಾಮದಲ್ಲಿ ಕಳೆದ 18 ವರ್ಷಗಳಿಂದ ಜನರ ಆಕರ್ಷಣೆಗೆ ಕಾರಣವಾಗಿದ್ದ 21 ವರ್ಷ ಪ್ರಾಯದ ಹುಲಿ ವಿಕ್ರಮ್ ಸಾವನ್ನಪ್ಪಿದೆ. 

2003ರಲ್ಲಿ ವಿಕ್ರಮ್, ನಾಲ್ಕು ವರ್ಷದ ಮರಿಯಾಗಿದ್ದ ಸಂದರ್ಭ ಶಿವಮೊಗ್ಗ ಜಿಲ್ಲೆಯ ತ್ಯಾವರೆಕೊಪ್ಪ ಸಫಾರಿಯಿಂದ ತರಲಾಗಿತ್ತು. ಈ ಹುಲಿಗೆ ಪಿಲಿಕುಳ ಮೃಗಾಲಯದಲ್ಲಿ 10 ಮರಿಗಳಾಗಿದ್ದವು. ಕದಂಬ, ಕೃಷ್ಣ, ವಿನಯ, ಒಲಿವರ್, ಅಕ್ಷಯ, ಮಂಜು, ಅಮರ್, ಅಕ್ಬರ್, ಆ್ಯಂಟನಿ ಮತ್ತು ನಿಶಾ ಎಂಬ ಮರಿಗಳಾಗಿದ್ದು ಅವನ್ನು ರಾಜಸ್ಥಾನ, ಗುಜರಾತ್, ತೆಲಂಗಾಣ, ಆಂಧ್ರ ಪ್ರದೇಶ, ಮೈಸೂರು ಮೃಗಾಲಯಗಳಿಗೆ ರವಾನಿಸಲಾಗಿತ್ತು.

ವೀಕ್ಷಣೆಗೆ ಸುಲಭದಲ್ಲಿ ಸಿಗುತ್ತಿದ್ದ ವಿಕ್ರಮ್, ಎರಡು ತಿಂಗಳಿಂದ ವಯೋಸಹಜ ಕಾಯಿಲೆಗೆ ತುತ್ತಾಗಿತ್ತು. ವಯೋಸಹಜ ದೃಷ್ಟಿ ಹೀನತೆ, ಸಂಧಿವಾತ ಮತ್ತು ಮೂತ್ರಪಿಂಡಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡಿದ್ದರು. ಒಂದು ವಾರದಿಂದ ಆಹಾರ ತಿನ್ನದೆ ಕೃಶವಾಗಿದ್ದ ಹುಲಿಗೆ ಡ್ರಿಪ್ಸ್ ಮತ್ತು ಆ್ಯಂಟಿಬಯೋಟಿಕ್ ನೀಡಲಾಗುತ್ತಿತ್ತು ಎಂದು ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಮಾಹಿತಿ ನೀಡಿದ್ದಾರೆ.

Mangalore Pilikula Biological Park lost its star attraction – Vikram – a 21-year-old Royal Bengal tiger to age-related illness on Vijayadasami day.