ಮಾರ್ವಾಡಿ ಹಠಾವೋ ಅಭಿಯಾನಕ್ಕೆ ಕಿಡಿ, ಬೆಂಕಿ ಹಚ್ಚುವ ಪ್ರಯತ್ನ ಎಂದ ನೆಟ್ಟಿಗರು !

28-10-20 02:57 pm       Udupi Correspondent   ಕರಾವಳಿ

ಮಾರ್ವಾಡಿ ಹಠಾವೋ ಅಭಿಯಾನಕ್ಕೆ ಪರ - ವಿರೋಧ ಕೇಳಿಬಂದಿದ್ದು ಶಾಂತಿ ಕದಡುವ ಮುನ್ನ ಪೊಲೀಸರು ಎಚ್ಚೆತ್ತುಕೊಳ್ಳಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ. 

ಉಡುಪಿ, ಅಕ್ಟೋಬರ್ 28: ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಾರ, ವಹಿವಾಟಿನಲ್ಲಿ ತೊಡಗಿರುವ ಗುಜರಾತ್, ರಾಜಸ್ಥಾನ ಮೂಲದ ಮಾರ್ವಾಡಿಗಳನ್ನು ಓಡಿಸಬೇಕೆಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ಈ ಅಭಿಯಾನಕ್ಕೆ ಪರ - ವಿರೋಧ ಕೇಳಿಬಂದಿದ್ದು ಶಾಂತಿ ಕದಡುವ ಮುನ್ನ ಪೊಲೀಸರು ಎಚ್ಚೆತ್ತುಕೊಳ್ಳಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಮಾರ್ವಾಡಿ ಹಟಾವೋ ಅಭಿಯಾನ ಆರಂಭಿಸಿದ್ದಾರೆ. ನಮ್ಮೂರು ನಮ್ಮ ಜನ, ನಮ್ಮ ವ್ಯಾಪಾರ ನಮ್ಮ ಜನರಿಗೆ... ಮಾರ್ವಾಡಿ ಹಠಾವೋ.. ಎಂಬ ಪೋಸ್ಟ್ ಗಳನ್ನು ಫೇಸ್ಬುಕ್ ಮೂಲಕ ಹಾಕುತ್ತಿದ್ದಾರೆ. ಇದು ಮಾರ್ವಾಡಿಗಳ ಗಮನಕ್ಕೂ ಬಂದಿದ್ದು, ಈ ರೀತಿ ಪೋಸ್ಟ್ ಹಾಕಿದವರ ವಿರುದ್ಧ ಮಾರ್ವಾಡಿ ವರ್ತಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಭಿಯಾನದ ಹಿಂದೆ ಮುಸ್ಲಿಂ ವರ್ತಕರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹಿಂದು ಸಂಘಟನೆಗಳೂ ಎಂಟ್ರಿ ಕೊಟ್ಟಿವೆ. 

ರಾಜಸ್ಥಾನ ವ್ಯಾಪಾರಿಗಳ ಪರವಾಗಿ ಹಿಂದೂ ಸಂಘಟನೆಗಳು ಬೆಂಬಲ ನೀಡಿವೆ. ಕೆಲವು ಕಾರ್ಯಕರ್ತರು ಬಹಿರಂಗವಾಗಿಯೇ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕುತ್ತಿದ್ದು ಭಾರತದ ಪ್ರಜೆಗಳಿಗೆ ದೇಶದ ಎಲ್ಲಿ ಬೇಕಾದರೂ ವ್ಯಾಪಾರ ಮಾಡಲು ಅವಕಾಶವಿದೆ. ಅವರು ಬಾಂಗ್ಲಾ ದೇಶಿಗರಲ್ಲ. ಪಾಕಿಸ್ತಾನದವರೂ ಅಲ್ಲ.. ನಮ್ಮದೇ ಜ‌ನ ಎಂದು ಪ್ರತಿ ಟೀಕೆ ಮಾಡುತ್ತಿದ್ದಾರೆ.‌

ಇದೇ ವೇಳೆ, ಇಂಥ ಪೋಸ್ಟ್ ಕ್ರಿಯೇಟ್ ಮಾಡಿರುವ ಕಿಡಿಗೇಡಿಗಳ ಬಗ್ಗೆ ಪೊಲೀಸರು ಕಣ್ಣಿಟ್ಟಿದ್ದು ತನಿಖೆ ಆರಂಭಿಸಿದ್ದಾರೆ. ರಾಜಸ್ಥಾನ ಮೂಲದ ವ್ಯಾಪಾರಿಗಳು ಮೋಸ ಮಾಡುತ್ತಾರೆ ಎಂಬ ವೀಡಿಯೋ ಹರಿಬಿಟ್ಟು ಜನರನ್ನು ಕೆರಳಿಸುವ ಯತ್ನ ನಡೆದಿದ್ದು ಇದರಿಂದಾಗಿ ಗೊಂದಲ, ಅಭಿಯಾನ ಶುರುವಾಗಿದೆ ಎನ್ನಲಾಗುತ್ತಿದೆ.

Marvadis who are living in the parts of Karavali Karnataka should be chased groups start campaign on social media.