ದಕ್ಷಿಣ ಕನ್ನಡದಲ್ಲಿ ಶೇ. 75.87 ಮತದಾನ ; ಅಂತಿಮ ಕ್ಷಣದಲ್ಲಿ ಏರಿಕೆ, ಮಂಗಳೂರು ದಕ್ಷಿಣದಲ್ಲಿ ಒಂದು ಲಕ್ಷ ಜನ ಹಕ್ಕಿನಿಂದ ದೂರ ! ಬೆಳ್ತಂಗಡಿ, ಬಂಟ್ವಾಳ ಗರಿಷ್ಠ !

10-05-23 11:07 pm       Mangalore Correspondent   ಕರಾವಳಿ

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.75.87 ಮತದಾನ ದಾಖಲಾಗಿದ್ದು ಅಭ್ಯರ್ಥಿಗಳ ಎದೆಯಲ್ಲಿ ಡವ ಡವ ಶುರುವಾಗಿದೆ. 

ಮಂಗಳೂರು, ಮೇ 10 : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.75.87 ಮತದಾನ ದಾಖಲಾಗಿದ್ದು ಅಭ್ಯರ್ಥಿಗಳ ಎದೆಯಲ್ಲಿ ಡವ ಡವ ಶುರುವಾಗಿದೆ. 

ಜಿಲ್ಲೆಯಲ್ಲಿ ಒಟ್ಟು 17,81,389 ಮತದಾರರಿದ್ದು ಈ ಪೈಕಿ 13,51,582 ಮತದಾರರು ಮತ ಚಲಾಯಿಸಿದ್ದಾರೆ. 8,70,991 ಪುರುಷ ಮತದಾರರಲ್ಲಿ 6,58,761
ಹಾಗೂ 9,10,314 ಮಹಿಳಾ ಮತದಾರರಲ್ಲಿ 6,92,803 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 

ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಬೆಳ್ತಂಗಡಿ ಶೇ.80.33 ಮತ ದಾಖಲಿಸಿದ್ದು ಮೊದಲ ಸ್ಥಾನ ಪಡೆದಿದೆ. ನಗರ ಪ್ರದೇಶದ ಜನ ನಿರಾಸಕ್ತಿ ತೋರಿದ್ದು ಕಾರಣವೋ ಏನೋ, ಶೇ.64.89 ಮತದೊಂದಿಗೆ ಮಂಗಳೂರು ದಕ್ಷಿಣ ಕೊನೆಯ ಸ್ಥಾನದಲ್ಲಿದೆ. ಪುತ್ತೂರು ಕ್ಷೇತ್ರದಲ್ಲಿ 79.91 ಮತ ಚಲಾವಣೆಯಾಗಿದ್ದು ಗೆಲುವಿನ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. 

ಮೂಡುಬಿದಿರೆಯಲ್ಲಿ ಶೇ. 76, ಮಂಗಳೂರು ನಗರ ಉತ್ತರದಲ್ಲಿ ಶೇ.71.6, ಮಂಗಳೂರು (ಉಳ್ಳಾಲ) ನಲ್ಲಿ ಶೇ. 77.38, ಬಂಟ್ವಾಳದಲ್ಲಿ ಶೇ 80.27 ಹಾಗೂ ಸುಳ್ಯದಲ್ಲಿ ಶೇ.78.53 ಮತದಾನವಾಗಿದೆ. 5 ಗಂಟೆಗೆ ಜಿಲ್ಲಾಡಳಿತ ನೀಡಿದ್ದ ಮಾಹಿತಿಯಲ್ಲಿ ಸುಳ್ಯ 62, ಮಂಗಳೂರು ಉತ್ತರ 65 ಮತದಾನ ಆಗಿರುವುದು ಉಲ್ಲೇಖಿಸಿತ್ತು. ಇದರಿಂದ ಬಿಜೆಪಿ ಕಾರ್ಯಕರ್ತರು ತಮ್ಮ ಕಡೆಯ ವೋಟಿಂಗ್ ಕಡಿಮೆಯಾಗಿದೆ ಎಂದು ಒಳಗಿಂದೊಳಗೆ ಆತಂಕ ಅನುಭವಿಸಿದ್ದರು. ಕಾಂಗ್ರೆಸಿಗರ ಮುಖದಲ್ಲಿ ಸಂತೋಷದ ಕಳೆ ಆವರಿಸಿತ್ತು. 

ಆರು ಗಂಟೆ ವರೆಗಿನ ಮತದಾನ  ಪ್ರಮಾಣ ರಾತ್ರಿ 10 ಗಂಟೆ ವೇಳೆಗೆ ಜಿಲ್ಲಾಡಳಿತ ನೀಡಿದ್ದು ಅದರಲ್ಲಿ ಎಲ್ಲ ಕಡೆಯೂ ವ್ಯತಿರಿಕ್ತ ಅಂಕಿ ಅಂಶ ಇತ್ತು. ಸುಳ್ಯದಲ್ಲಿ 62 ಇದ್ದುದು ಒಂದೇ ಗಂಟೆಯಲ್ಲಿ 17 ಪರ್ಸೆಂಟ್ ಏರಿಕೆಯಾಗಿದ್ದು ಕೇಸರಿ ಪಾಳಯದಲ್ಲಿ ತುಸು ಸಮಾಧಾನಕ್ಕೆ ಕಾರಣವಾಗಿದೆ. 

ಮಂಗಳೂರು ದಕ್ಷಿಣ ; ಒಂದು ಲಕ್ಷ ಜನ ಮತಕ್ಕೆ ಗೈರು ! 

ಮಂಗಳೂರು ನಗರ ಉತ್ತರದಲ್ಲಿ ಒಟ್ಟು 2,49,421 ಮತದಾರರ ಪೈಕಿ 1,78,574 ಮತ ಬಿದ್ದಿದೆ. ಪುತ್ತೂರಿನಲ್ಲಿ ಒಟ್ಟು 2,12,753 ಮತದಾರರಲ್ಲಿ 1,70,002 ಮತಗಳು, ಸುಳ್ಯದಲ್ಲಿ ಒಟ್ಟು 2,06,029 ಮತದಾರರಲ್ಲಿ 161,788 ಮತ ಚಲಾವಣೆಯಾಗಿದೆ. ಮಂಗಳೂರು ಕ್ಷೇತ್ರದಲ್ಲಿ 2,05,129 ಮಂದಿಯಲ್ಲಿ 1,58,728, ಬಂಟ್ವಾಳದಲ್ಲಿ 2,28,377 ಮತದಾರರ ಪೈಕಿ 1,83,326 ಮತಗಳು ಬಿದ್ದಿವೆ.  ಮೂಡುಬಿದಿರೆಯಲ್ಲಿ 2,05,065 ಮತದಾರರಲ್ಲಿ 1,55,847 ಮತಗಳು, ಮಂಗಳೂರು ನಗರ ದಕ್ಷಿಣದಲ್ಲಿ 2,45,744 ಮತಗಳಲ್ಲಿ 1,59,474 ಮತದಾನ ಆಗಿದ್ದು ಸುಮಾರು ಒಂದು ಲಕ್ಷದಷ್ಟು ಜನ ಮತ ಚಲಾಯಿಸಿಲ್ಲ. ಬೆಳ್ತಂಗಡಿಯಲ್ಲಿ 2,28,871 ಮಂದಿಯಲ್ಲಿ 1,83,843 ಮತಗಳು ಚಲಾವಣೆಯಾಗಿದ್ದು ಒಳ್ಳೆಯ ಫಲಿತಾಂಶವೆಂದು ದಾಖಲಾಗಿದೆ.

Karnataka election 2023, Dakshina Kannada registered 75.87 percentage voting, Mangalore south least in Dk, Belthangady, Puttur, Bantwal highest.