ಅವರಿಬ್ಬರನ್ನು ತೆಗೆದು ಹಾಕಿದ್ರೆ ಮಾತ್ರ ನಾವಿದ್ದೇವೆ, ಅಶೋಕ್ ರೈ ಗೆದ್ದರೆಂದು ಬಿಜೆಪಿ ಕಚೇರಿಯಲ್ಲಿ ಸಂಭ್ರಮಿಸುತ್ತಾರೆ, ಸಿದ್ಧಾಂತ ಇವರ ಸ್ವಾರ್ಥಕ್ಕೆ ಇರೋದಾ..? ಯತ್ನಾಳ್ ಮುಂದೆ ಕಾರ್ಯಕರ್ತರ ಕಣ್ಣೀರು 

19-05-23 02:22 pm       Mangalore Correspondent   ಕರಾವಳಿ

ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಪೊಲೀಸ್ ದೌರ್ಜನ್ಯದಿಂದ ಹಲ್ಲೆಗೀಡಾದ ಕಾರ್ಯಕರ್ತರ ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಪುತ್ತೂರು, ಮೇ 19 : ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಪೊಲೀಸ್ ದೌರ್ಜನ್ಯದಿಂದ ಹಲ್ಲೆಗೀಡಾದ ಕಾರ್ಯಕರ್ತರ ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಈ ರೀತಿ ಹೊಡೆಸುವುದಂದ್ರೆ ಏನರ್ಥ, ಇವರಿಗೆ ಮಾನವೀಯತೆ ಇದೆಯಾ? ಇವರೆಲ್ಲ ಹಿಂದುತ್ವದ ಕಾರ್ಯಕರ್ತರು. ಬಿಜೆಪಿ, ಹಿಂದುತ್ವ ಎಂದು ಜೀವ ಸವೆದವರು. ಈಗ ಇವರಿಂದಲೇ ಪೊಲೀಸರ ಮೂಲಕ ಹೊಡೆಸಿಕೊಂಡಿದ್ದಾರೆ. ಕಣ್ಣಿಗೂ ಪೆಟ್ಟು ಬಿದ್ದಿದೆ. ಕೈಕಾಲಿಗೆ ಏಟು ಬಿದ್ದು ನಡೆಯಲಾಗದ ಸ್ಥಿತಿಯಲ್ಲಿದ್ದಾರೆ.‌

ರಾಜ್ಯಾಧ್ಯಕ್ಷ ಮತ್ತು ಸದಾನಂದ ಗೌಡರನ್ನು ಬದಲಾವಣೆ ಮಾಡಬೇಕು, ಇಲ್ಲಾಂದ್ರೆ ನಾವು ಕೆಲಸ ಮಾಡಲ್ಲ. ಕಾರ್ಯಕರ್ತರಿಗೆ ಬೆಲೆ ಕೊಡದೇ ಇದ್ದರೆ ರಾಜ್ಯಾಧ್ಯಕ್ಷನಾಗಿ ಏನಕ್ಕಿರಬೇಕು. ರಾಜ್ಯಾಧ್ಯಕ್ಷರ ಕ್ಷೇತ್ರದಲ್ಲಿಯೇ ಕಾರ್ಯಕರ್ತರಿಗೆ ಈ ಸ್ಥಿತಿಯಾದರೆ ಹೇಗೆ ? ಇವರೇ ಪೊಲೀಸರಿಗೆ ದೂರು ಕೊಟ್ಟು ಹೊಡೆಸಿದ್ದಾರೆ. ಇಲ್ಲಿ ಬಂದು ಬೇರೆ ರೀತಿಯ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‌

ನೀವು ನಿಷ್ಠುರ ಇದ್ದೀರೆಂದು ನಮ್ಮ ನೋವು ಹೇಳಿಕೊಳ್ಳುತ್ತಿದ್ದೇವೆ.‌ ವಿಟ್ಲದಲ್ಲಿ ಅನ್ಯಧರ್ಮದ ವ್ಯಕ್ತಿಯೊಬ್ಬ ಹಿಂದು ಹುಡುಗಿಯ ಕೈ ಹಿಡಿದೆಳೆದು ಅತ್ಯಾಚಾರಕ್ಕೆ ಯತ್ನಿಸಿದ್ದ.‌ ಎರಡು ದಿನಗಳ ನಂತರ ಈಶ್ವರ ಮಂಗಲದಲ್ಲಿ ಹಿಂದು ಕಾರ್ಯಕರ್ತ ಕೇಸರಿ ಲುಂಗಿ ಉಟ್ಟಿದ್ದಾರೆಂದು ಮಸೀದಿಯಿಂದ ಬರ್ತಿದ್ದವರು ಥಳಿಸಿದ್ದಾರೆ. ಇದನ್ನೆಲ್ಲ ನೋಡಲು ನಾವು ಬದುಕಿರಬೇಕೇ.. ಹೀಗೆಲ್ಲ ನಡೀತಿರಬೇಕಾದ್ರೆ ಇವರು ಬಿಜೆಪಿ ಕಚೇರಿಯಲ್ಲಿ ಕುಳಿತು ಅಶೋಕ್ ರೈ ಗೆದ್ದರಲ್ಲ ಅಂತ ಸಂಭ್ರಮ ಪಡುತ್ತಾರೆ. ನಾವು ಯಾರಿಗಾಗಿ ಬದುಕಬೇಕು. ಪಕ್ಷದ ಸಿದ್ಧಾಂತ ಸ್ವಾರ್ಥಕ್ಕೆ ಇರೋದಾ ಎಂದು ಅರುಣ್ ಪುತ್ತಿಲ ಇದೇ ಸಂದರ್ಭದಲ್ಲಿ ಯತ್ನಾಳ್ ಅವರಲ್ಲಿ ಪ್ರಶ್ನೆ ಮಾಡಿದ್ದಾರೆ. 

ಪುತ್ತೂರಿನಲ್ಲಿ ಸರಣಿಯಂತೆ ಇಂತಹ ಅಕೃತ್ಯ ನಡೀತಾ ಇದೆ.‌ ಜನಪ್ರತಿನಿಧಿಗಳಾದವರು ಮೌನ ವಹಿಸುವುದಲ್ಲದೆ, ದೂರು ಕೊಟ್ಟು ಕಾರ್ಯಕರ್ತರಿಗೆ ಹೊಡೆಸುತ್ತಾರೆ ಎಂದು ಬಸನಗೌಡ ಯತ್ನಾಳ್ ಮುಂದೆ ಕಾರ್ಯಕರ್ತರು ಮತ್ತು ಅರುಣ್ ಪುತ್ತಿಲ ಕಣ್ಣೀರು ಹಾಕಿದ್ದಾರೆ. ಕಾರ್ಯಕರ್ತರ ಮಾತು ಕೇಳಿದ ಯತ್ನಾಳ್ ಆಸ್ಪತ್ರೆ ಒಳಗಡೆ ಏನೂ ಮಾತನಾಡದೆ ಹೊರ ನಡೆದಿದ್ದಾರೆ.

Basangouda Patil Yatnal visits puttur hospital to see victims of Police atrocity in BJP banner row. Speaking to Yatnal Hindu karyakartas said we will not work for party unless and until Nalin Kateel and Sadanadagowda gowda are removed from their post.