ಪೊಲೀಸರು, ಹೆದ್ದಾರಿ ಪ್ರಾಧಿಕಾರದ ಎಡವಟ್ಟು ; ತೊಕ್ಕೊಟ್ಟಿನ ಬದಲಿ ವ್ಯವಸ್ಥೆಯಲ್ಲೂ ಅಪಘಾತ !! ಬಸ್ಸಿನಡಿಗೆ ಬಿದ್ದು ಬಚಾವಾದ ಸವಾರ !!

29-10-20 07:28 pm       Mangalore Reporter   ಕರಾವಳಿ

ತೊಕ್ಕೊಟ್ಟಿನಿಂದ ಉಳ್ಳಾಲಕ್ಕೆ ತೆರಳಲು ಬದಲಾದ ಸಂಚಾರಿ ವ್ಯವಸ್ಥೆಯಲ್ಲಿ ಇಂದು ಮತ್ತೊಬ್ಬ ಬೈಕ್ ಸವಾರ ಬಸ್ಸಿನ ಅಡಿಗೆ ಬಿದ್ದು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾನೆ.

ಮಂಗಳೂರು, ಅಕ್ಟೋಬರ್, 29: ಹೆದ್ದಾರಿ ಪ್ರಾಧಿಕಾರ ಮತ್ತು ಸಂಚಾರಿ ಪೊಲೀಸರ ಎಡವಟ್ಟಿನಿಂದಾಗಿ ತೊಕ್ಕೊಟ್ಟು ಪ್ಲೈ ಓವರ್ ಕಾರಣದಿಂದ ಮತ್ತೆ ಮತ್ತೆ ಜೀವ ಬಲಿ ಬೀಳುವಂತಾಗಿದೆ. ತೊಕ್ಕೊಟ್ಟಿನಿಂದ ಉಳ್ಳಾಲಕ್ಕೆ ತೆರಳಲು ಬದಲಾದ ಸಂಚಾರಿ ವ್ಯವಸ್ಥೆಯಲ್ಲಿ ಇಂದು ಮತ್ತೊಬ್ಬ ಬೈಕ್ ಸವಾರ ಬಸ್ಸಿನ ಅಡಿಗೆ ಬಿದ್ದು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾನೆ.

ಮುಂಬೈಯಿಂದ ಬುಲೆಟ್ ನಲ್ಲಿ ಕೇರಳ ಕಡೆ ಪಯಣಿಸುತ್ತಿದ್ದ ಮೌಷೂಕ್ ಎಂಬ ಯುವಕ ರಾಷ್ಟ್ರೀಯ ಹೆದ್ದಾರಿ 66 ರ ತೊಕ್ಕೊಟ್ಟಿನ ಕಾಪಿಕಾಡು ತಲುಪುತ್ತಿದ್ದಾಗ ಉಳ್ಳಾಲ ಕಡೆ ಹಠಾತ್ತಾಗಿ ತಿರುವು ಪಡೆಯುತ್ತಿದ್ದ ಖಾಸಗಿ ಬಸ್ಸಿಗೆ ತಾಗಿ ಅಡಿಗೆ ಬಿದ್ದಿದ್ದಾನೆ. ಅದೃಷ್ಟವಶಾತ್ ಬಸ್ ಸಡನ್ ನಿಂತಿದ್ದರಿಂದ ಮೌಷೂಕ್ ಅಪಾಯದಿಂದ ಪಾರಾಗಿದ್ದಾನೆ. ಘಟನೆಯಿಂದ ಬುಲೆಟ್ ಬೈಕಿನ ಗಾರ್ಡ್, ಮಡ್ಗರ್ ಜಖಂಗೊಂಡಿದೆ. ಆದರೆ, ಬಸ್ ಚಾಲಕ ಬೈಕ್ ಸವಾರ ಮೌಷೂಕ್ ಗೆ 500 ರೂ. ನೀಡಿ ಪ್ರಕರಣ ರಾಜಿಗೊಳಿಸಿ ಸ್ಥಳದಿಂದ ಕಳಚಿದ್ದಾನೆ. 

ಎರಡು ದಿನಗಳ ಹಿಂದಷ್ಟೇ ತೊಕ್ಕೊಟ್ಟು ಪ್ಲೈ ಓವರ್  ಕೊನೆಯಲ್ಲಿ ಉಳ್ಳಾಲಕ್ಕೆ ತಿರುವು ಪಡೆಯುತ್ತಿದ್ದ ಬೈಕ್ ಮೇಲೆ ಟ್ರಕ್ ಹರಿದು ಬೈಕ್ ನಲ್ಲಿದ್ದ ನವ ದಂಪತಿ ದುರಂತ ಸಾವು ಕಂಡಿದ್ದ ಘಟನೆ ನಡೆದಿತ್ತು. ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಓವರ್ ಬ್ರಿಡ್ಜ್ ಕೊನೆಯಲ್ಲಿ ಉಳ್ಳಾಲಕ್ಕೆ ಸಾಗುವ ವಾಹನಗಳ ತಿರುವನ್ನು ತೆರವುಗೊಳಿಸಿದ್ದರು. ಬದಲಿಗೆ, ಮುಂದಿನ ನಿಲ್ದಾಣ ಕಾಪಿಕಾಡಿನಲ್ಲಿ ವಾಹನಗಳ ತಿರುವಿಗೆ ವ್ಯವಸ್ಥೆ ಮಾಡಿದ್ದರು. ಆದರೆ, ಇದೀಗ ಅಲ್ಲಿಯೂ ಅಪಘಾತ ಆಗತೊಡಗಿದ್ದು 
ಅವೈಜ್ನಾನಿಕ ಪ್ಲೈ ಓವರ್ ದಿಸೆಯಲ್ಲಿ ಅಮಾಯಕರು ಪ್ರಾಣ ಕಳಕೊಳ್ಳುವಂತಾಗಿದೆ. ಇದೀಗ ಬದಲಾದ ಸಂಚಾರಿ ವ್ಯವಸ್ಥೆಯಲ್ಲೂ ಅಪಘಾತ ಆಗುತ್ತಿರುವುದು ಸಂಚಾರಿ ಪೊಲೀಸರ ತಲೆಕೆಡುವಂತಾಗಿದೆ. 
 

ಈ ಹಿಂದೆಯೂ ಇದೇ ಆಗಿತ್ತು... 

ಮೇಲ್ಸೇತುವೆ ಕೊನೆಯಲ್ಲಿ ಅಪಘಾತ ಆಗುತ್ತಿರುವುದರಿಂದ ಅವೈಜ್ಞಾನಿಕ ತಿರುವು ಎಂದು ಕಂಡುಬಂದ ಹಿನ್ನೆಲೆಯಲ್ಲಿ ಉಳ್ಳಾಲದತ್ತ ತಿರುವು ಪಡೆಯಲು ಕಾಪಿಕಾಡ್ ನಲ್ಲಿ ಹೆದ್ದಾರಿ ಅಗೆದು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಏಕಮುಖದ ಸಂಚಾರ ಇರುವ ರಸ್ತೆಯನ್ನು ಅಗೆದು ತಿರುವು ಕೊಟ್ಟು ಮತ್ತಷ್ಟು ಅಪಾಯ ಎದುರಾಗಿತ್ತು. ಬಳಿಕ ಉಳ್ಳಾಲ ಶಾಸಕ ಯು‌ಟಿ ಖಾದರ್, ಕಾಪಿಕಾಡ್ ತಿರುವನ್ನು ತೆಗೆದು ಮೇಲ್ಸೇತುವೆ ಕೊನೆಯಲ್ಲೇ ಉಳ್ಳಾಲದ ತಿರುವು ಕೊಟ್ಟಿದ್ದರು. ಅಲ್ಲದೆ, ಆ ಜಾಗದಲ್ಲಿ ಶಾಶ್ವತವಾಗಿ ಟ್ರಾಫಿಕ್ ಪೊಲೀಸರನ್ನು ನಿಯೋಜನೆ ಮಾಡಿದ್ದರು. ಬರ ಬರುತ್ತಾ ಪೊಲೀಸರು ಅಲ್ಲಿ ಇದ್ದರೇ ವಿನಾ ರಸ್ತೆ ಸಂಚಾರದತ್ತ ಕಣ್ಣಿಡುವ ಬದಲು ದಂಡ ಹಾಕುವ ನೆಪದಲ್ಲಿ ದ್ವಿಚಕ್ರ ವಾಹನ ಸವಾರರ ಬೆನ್ನು ಬಿದ್ದಿದ್ದರು. ಪೊಲೀಸರ ನಿರ್ಲಕ್ಷ್ಯ ಮತ್ತು ಅದಕ್ಷತೆ ಅಲ್ಲೀಗ ಮತ್ತೆ ಅಪಘಾತಕ್ಕೆ ಕಾರಣವಾಗುತ್ತಿದೆ. ಅವೈಜ್ಞಾನಿಕ ತಿರುವೇ ಆಗಿದ್ದರೂ, ಮಧ್ಯೆ ಪೊಲೀಸರು ಇದ್ದರೆ ವಾಹನಗಳು ನುಗ್ಗಿ ಬರುವುದಿಲ್ಲ. ಅಮಾಯಕರ ಪ್ರಾಣ ಬಲಿಯಾದಾಗ ಎಚ್ಚತ್ತುಕೊಳ್ಳುವ ವ್ಯವಸ್ಥೆ ಈಗ ಮತ್ತೊಂದು ಎಡವಟ್ಟು ಮಾಡಿಕೊಳ್ಳಲು ಮುಂದಾಗಿದೆ !

After the tragic death of newly married couple at thokottu road diversion was decreed but even after so accidents haven't come to halt.