ಕೊಣಾಜೆ ; ವೃದ್ಧನ ಕೊಂದು ಹೂತಿಟ್ಟ ಯುವಕರು ! ಬೆಳಕಿಗೆ ಬಂದಿದ್ದು ಹೇಗೆ ಗೊತ್ತಾ ?

01-11-20 04:03 pm       Headline Karnataka   ಕರಾವಳಿ

ಪೊಲೀಸರು ಸಜಿಪ ಮೂಡದ ಯುವಕನೊಬ್ಬನನ್ನು ಸಂಶಯದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಪೊಲೀಸ್ ಟ್ರೀಟ್ಮೆಂಟ್ ಸಿಕ್ಕಾಗ ಯುವಕ ಕೊಲೆ ವಿಚಾರ ಬಾಯ್ಬಿಟ್ಟಿದ್ದಾನೆ.

ಮಂಗಳೂರು, ನವೆಂಬರ್ 1: ಕೊಣಾಜೆ ಠಾಣೆ ವ್ಯಾಪ್ತಿಯ ಇರಾ ಪದವಿನಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆಗೈದು ಹೂತಿಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತರನ್ನು ಪಾವೂರು ಗ್ರಾಮದ ಮಲಾರ್ ಅರಸ್ತಾನದ ನಿವಾಸಿ ಪಲ್ಲಿಯಾಕ ಯಾನೆ ಪಲ್ಲಿಯಬ್ಬ (70) ಎಂದು ಗುರುತಿಸಲಾಗಿದೆ. 

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಪಲ್ಲಿಯಬ್ಬ ಬಗ್ಗೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಅಲ್ಲದೆ, ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿ ಸಂಶಯಿತ ವ್ಯಕ್ತಿಗಳ ಬಗ್ಗೆ ಸುಳಿವು ನೀಡಿದ್ದರು. ಪಲ್ಲಿಯಬ್ಬ ಗುರುವಾರ ಮಧ್ಯಾಹ್ನ ಪೇಟೆಗೆಂದು ಹೋದವರು ಕಾಣೆಯಾಗಿದ್ದರು. ಆದರೆ, ಅವರ ಮೊಬೈಲ್ ಶುಕ್ರವಾರ ಮಧ್ಯಾಹ್ನ ವರೆಗೂ ರಿಂಗಣಿಸುತ್ತಿದ್ದರಿಂದ ಅಪಹರಣದ ಶಂಕೆ ವ್ಯಕ್ತವಾಗಿತ್ತು. ಬಳಿಕ‌ ಫೋನ್ ಸ್ವಿಚ್ ಆಫ್ ಆಗಿತ್ತು. 

ಈ ನಡುವೆ, ಪೊಲೀಸರು ಸಜಿಪ ಮೂಡದ ಆಟೋ ಚಾಲಕ ಅಝರ್ ಎಂಬಾತನನ್ನು ಸಂಶಯದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಪೊಲೀಸ್ ಟ್ರೀಟ್ಮೆಂಟ್ ಸಿಕ್ಕಾಗ ಯುವಕ ಕೊಲೆ ವಿಚಾರ ಬಾಯ್ಬಿಟ್ಟಿದ್ದಾನೆ. ಅದರಂತೆ, ಇಂದು ಬೆಳಗ್ಗೆ ಕೊಣಾಜೆ ಪೊಲೀಸರು ಇರಾ ಪದವು ಬಳಿಯ ನಿರ್ಜನ ಕಲ್ಲು ಕೋರೆಗೆ ಯುವಕನನ್ನು ಕರೆದೊಯ್ದಿದ್ದಾರೆ. ಸಾರ್ವಜನಿಕರು ಕುತೂಹಲದಿಂದ ಸೇರಿದ್ದು ಕಲ್ಲು ಕೋರೆಯ ಮಧ್ಯೆ ಹೂತಿಟ್ಟಿದ್ದ ಶವ ಪತ್ತೆಯಾಗಿದೆ. 70 ವರ್ಷದ ವೃದ್ಧರನ್ನು ಕೊಲೆಗೈದು ಹೂತು ಹಾಕಿದ್ದು ಕೊಣಾಜೆ, ಮುಡಿಪು ಪರಿಸರದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. 

ಪ್ರಕರಣ ಸಂಬಂಧ ಪೊಲೀಸರು ಸಜಿಪ ಮೂಡದ ಮೂವರನ್ನು ಬಂಧಿಸಿದ್ದಾರೆ. ಅಮೀರ್, ಸರ್ಫಾಜ್, ಅಲ್ತಾಫ್ ಬಂಧಿತರು. ಪ್ರಮುಖ ಆರೋಪಿ ಬೋಳಿಯಾರಿನ ಹಂಝ ಎಂಬಾತನಾಗಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 

ಕೇವಲ 15 ಸಾವಿರಕ್ಕೆ ಕೊಲೆ ! 

ಹಣಕಾಸಿನ ವ್ಯವಹಾರದಲ್ಲಿ ಸಂಬಂಧಿಕನೇ ಕೊಲೆಗೈದಿರುವ ಬಗ್ಗೆ ತಿಳಿದುಬಂದಿದೆ. ಪಲ್ಲಿಯಬ್ಬ ಬಡ್ಡಿಗೆ ಹಣ ಕೊಡುತ್ತಿದ್ದು ಸಣ್ಣಪುಟ್ಟ ಫೈನಾನ್ಸ್ ವಹಿವಾಟು ಮಾಡುತ್ತಿದ್ದರು. ಬೋಳಿಯಾರಿನ ಹಂಝ 15 ಸಾವಿರ ಹಣ ಪಡೆದಿದ್ದು ಅದನ್ನು ಹಿಂತಿರುಗಿಸದ್ದರಿಂದ ಪಲ್ಲಿಯಬ್ಬ ನಡುವೆ ಮಾತಿನ ಚಕಮಕಿ ನಡೆದಿತ್ತು. ಗುರುವಾರ ಸಂಜೆ ಹಣ ಕೊಡುವುದಾಗಿ ಹೇಳಿ ಆಟೋದಲ್ಲಿ ಬೋಳಿಯಾರಿಗೆ ಹೋಗಿದ್ದಾರೆ. ಅಲ್ಲಿ ಆಟೋ ಹತ್ತಿದ್ದ ಅಮೀರ್, ಅಲ್ತಾಫ್ ಮತ್ತು ಸರ್ಫಾಜ್ ಸೇರಿ ಆಟೋದಲ್ಲಿ ಹೋಗುವಾಗಲೇ ಶಾಲನ್ನು ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ. ಶವ ಹೂಳಲು ಹಾರೆ, ಪಿಕ್ಕಾಸು ಇಲ್ಲದ್ದರಿಂದ ಶವ ಮರುದಿನದ ವರೆಗೆ ಕಾದು ಇರಾ ಪದವಿನ ಕಲ್ಲು ಕೋರೆಯ ಮಧ್ಯೆ ನಿರ್ಜನ ಪ್ರದೇಶದಲ್ಲಿ ಹೂತು ಬಂದು ಏನೂ ಆಗದವರಂತೆ ತಮ್ಮ ಪಾಡಿಗೆ ಇದ್ದರು. ಈ ವೇಳೆ, ಮೊಬೈಲ್ ಎಲ್ಲೋ ಬಿದ್ದು ಹೋಗಿತ್ತು. ಅದು ಮರುದಿನ ಮಧ್ಯಾಹ್ನ ವರೆಗೂ ರಿಂಗ್ ಆಗಿ ಸ್ವಿಚ್ ಆಫ್ ಆಗಿತ್ತು. 

ಆಟೋ ಚಾಲಕ ಅಝರ್ ನನ್ನು ವಶಕ್ಕೆ ಪಡೆದ ಪೊಲೀಸರು ಒಂದೇ ದಿನದಲ್ಲಿ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.

The mortal remains of a man, who went missing since two days were found today After killing him, the killers buried his body. Palliaka alias Palliabba (70), a resident of Malar Arasthana of Pavoor village under Konaje police station limits is the person who was murdered brutally.