ಕ್ರೀಡಾರತ್ನ ; ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ, ಸುರೇಶ್ ಶೆಟ್ಟಿ ಸೇರಿ ನಾಲ್ವರಿಗೆ ಗೌರವ

02-11-20 12:24 pm       Mangalore Correspondent   ಕರಾವಳಿ

ರಾಜ್ಯ ಸರಕಾರ ಏಕಲವ್ಯ, ಕ್ರೀಡಾರತ್ನ ಮತ್ತು ಜೀವಮಾನದ ಸಾಧನೆ ಪ್ರಶಸ್ತಿಗಳಿಗೆ ಸಾಧಕರನ್ನು ಗುರುತಿಸಿದ್ದು, ಕ್ರೀಡಾರತ್ನ ಪ್ರಶಸ್ತಿಗೆ ಕರಾವಳಿಯ ನಾಲ್ವರು ಕಂಬಳ ಸಾಧಕರು ಆಯ್ಕೆಯಾಗಿದ್ದಾರೆ.

ಮಂಗಳೂರು, ನವೆಂಬರ್ 02: ರಾಜ್ಯ ಸರಕಾರ ಕಳೆದ ಮೂರು ವರ್ಷಗಳಿಂದ ಪ್ರಕಟಿಸದೇ ಉಳಿದಿದ್ದ ಏಕಲವ್ಯ, ಕ್ರೀಡಾರತ್ನ ಮತ್ತು ಜೀವಮಾನದ ಸಾಧನೆ ಪ್ರಶಸ್ತಿಗಳಿಗೆ ಸಾಧಕರನ್ನು ಗುರುತಿಸಿದ್ದು, ಕ್ರೀಡಾರತ್ನ ಪ್ರಶಸ್ತಿಗೆ ಕರಾವಳಿಯ ನಾಲ್ವರು ಕಂಬಳ ಸಾಧಕರು ಆಯ್ಕೆಯಾಗಿದ್ದಾರೆ.

2017ರ ಸಾಲಿನ ಕ್ರೀಡಾರತ್ನ ಪ್ರಶಸ್ತಿಗೆ ಉಸೇನ್ ಬೋಲ್ಟ್ ಖ್ಯಾತಿಯ ಕಂಬಳದ ವೇಗದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಮತ್ತು ಕಂಬಳದ ಆಯೋಜಕ ಸುರತ್ಕಲ್ ಚೇಳಾರು ಗ್ರಾಮದ ಗೋಪಾಲಕೃಷ್ಣ ಪ್ರಭು ಅವರನ್ನು ಆಯ್ಕೆ ಮಾಡಲಾಗಿದೆ. 2018ರ ಸಾಲಿನ ಕ್ರೀಡಾರತ್ನ ಪ್ರಶಸ್ತಿಗೆ ಕಂಬಳ ಓಟಗಾರ ಹಕ್ಕೇರಿ ಸುರೇಶ್ ಶೆಟ್ಟಿ ಅವರನ್ನು ರಾಜ್ಯ ಸರಕಾರ ಆಯ್ಕೆ ಮಾಡಿದ್ದು 2019ರ ಸಾಲಿನ ಕ್ರೀಡಾರತ್ನರಾಗಿ ಪ್ರವೀಣ್ ಕೋಟ್ಯಾನ್ ಅಳಿಯೂರು ಅವರನ್ನು ಆಯ್ಕೆ ಮಾಡಲಾಗಿದೆ.

2019ರಲ್ಲಿ ಕಂಬಳದಲ್ಲಿ ಅತಿ ವೇಗವಾಗಿ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆ ಮುರಿದಿದ್ದ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡರನ್ನು ಕಳೆದ ಬಾರಿಯೇ ಕ್ರೀಡಾರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು. ಎಂಟು ವರ್ಷಗಳಿಂದ ಕಂಬಳದಲ್ಲಿ ಮಿಂಚುತ್ತಿರುವ ಶ್ರೀನಿವಾಸ ಗೌಡ, ಒಂದೇ ಸೀಸನ್ ನಲ್ಲಿ ಮೂರು ಕಂಬಳಗಳಲ್ಲಿ ತಲಾ ನಾಲ್ಕು ಬಹುಮಾನ ಪಡೆದು ಹೊಸ ದಾಖಲೆ ನಿರ್ಮಿಸಿದ್ದರು. ಪ್ರತಿ ಕಂಬಳದಲ್ಲಿಯೂ 3 ಅಥವಾ ನಾಲ್ಕು ಜೋಡಿ ಕೋಣಗಳನ್ನು ಓಡಿಸುತ್ತಿದ್ದು, 2019-20ರಲ್ಲಿ ಬಂಗಾಡಿ ಕೊಲ್ಲಿಯಲ್ಲಿ 5 ಜತೆ ಕೋಣಗಳನ್ನು , ಉಪ್ಪಿನಂಗಡಿಯಲ್ಲಿ 6 ಜತೆ ಕೋಣಗಳನ್ನು ಓಡಿಸಿ ದಾಖಲೆ ನಿರ್ಮಿಸಿದ್ದಾರೆ.  

ಬಾರಾಡಿ ಬೀಡು ಕಂಬಳದಲ್ಲಿ 5 ಬಹುಮಾನ ಪಡೆದ ಶ್ರೀನಿವಾಸ ಗೌಡ, ಐಕಳ ಕಂಬಳದಲ್ಲಿ 142.5 ಮೀಟರ್ ದೂರವನ್ನು 13.44 ಸೆಕೆಂಡಿನಲ್ಲಿ ಕ್ರಮಿಸಿದ್ದು ಭಾರೀ ಪ್ರಸಿದ್ಧಿಗೆ ಕಾರಣವಾಗಿತ್ತು. ಅದನ್ನು ಲೆಕ್ಕ ಹಾಕಿದರೆ 100 ಮೀಟರ್ ಓಟವನ್ನು 9.23 ಸೆಕೆಂಡಿನಲ್ಲಿ ಕ್ರಮಿಸಿದಂತಾಗುತ್ತದೆ ಎಂಬ ಲೆಕ್ಕಾಚಾರ ಹುಸೇನ್ ಬೋಲ್ಟ್ ಸಾಧನೆಯನ್ನು ಮೀರಿಸಿದಂತಾಗಿದೆ ಎಂದು ಕಂಬಳಾಭಿಮಾನಿಗಳು ಹರ್ಷ ಪಟ್ಟಿದ್ದರು.

ಹಕ್ಕೇರಿ ಸುರೇಶ್ ಶೆಟ್ಟಿ 13 ವರ್ಷಗಳಿಂದ ಕಂಬಳ ಕಳದಲ್ಲಿ ಚಿರಿಪರಿಚಿತರು. 2103ರಿಂದ ಓಟಗಾರನಾಗಿ ಮಿಂಚು ಹರಿಸಿದ್ದ ಸುರೇಶ್ ಶೆಟ್ಟಿ 250ಕ್ಕೂ ಅಧಿಕ ಪದಕಗಳನ್ನು ಪಡೆದಿದ್ದಾರೆ. ಬೋಳದಗುತ್ತು ಸತೀಶ್ ಶೆಟ್ಟಿ ಯಜಮಾನಿಕೆಯ ಕೋಣಗಳನ್ನು ಓಡಿಸಿ ಸತತ ಆರು ವರ್ಷ ಸರಣಿ ಶ್ರೇಷ್ಠ ಬಹುಮಾನ ಪಡೆದಿದ್ದಾರೆ. ಐಕಳ ಕಂಬಳದ ಬಳಿಕ ಉಸೇನ್ ಬೋಲ್ಟ್ ಖ್ಯಾತಿಯ ಓಟ ಪ್ರಚಾರ ಪಡೆದಿತ್ತು. ಕಳೆದ ಬಾರಿ ಬೆಳ್ತಂಗಡಿ ತಾಲೂಕಿನ ಬಂಗಾಡಿಯಲ್ಲಿ ನಡೆದ ಕಂಬಳದಲ್ಲಿ ಸುರೇಶ್ ಶೆಟ್ಟಿ 9.39 ಸೆಕೆಂಡಿನಲ್ಲಿ 100 ಮೀಟರ್ ದೂರವನ್ನು ಪೂರೈಸಿ, ಹೊಸ ದಾಖಲೆ ನಿರ್ಮಿಸಿದ್ದರು.

ಕೃಷಿ ಮತ್ತು ಕಂಬಳದಲ್ಲಿ ಸಾಧನೆ ಮಾಡಿರುವ ಗೋಪಾಲಕೃಷ್ಣ ಪ್ರಭು ಸುರತ್ಕಲ್ ಸಮೀಪದ ಚೇಳಾರು ಗ್ರಾಮದವರು. 1963ರಿಂದ 2019ರ ವರೆಗೆ ನಿರಂತರ 57 ವರ್ಷಗಳ ಕಾಲ ಕಂಬಳವನ್ನು ಆಯೋಜಿಸಿದ್ದಲ್ಲದೆ ಅವರ ಕಂಬಳದ ಎತ್ತುಗಳು ಅದ್ವಿತೀಯ ಸಾಧನೆ ಮಾಡಿದ್ದವು. ಕನೆಹಲಗೆ, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡ ಹಲಗೆ ವಿಭಾಗದಲ್ಲಿ ಅವರ ಕೋಣಗಳು ಪ್ರಶಸ್ತಿಗಳನ್ನು ತಂದುಕೊಟ್ಟಿವೆ.

ಕಂಬಳ ಓಟಗಾರ ಪ್ರವೀಣ್ ಕೋಟ್ಯಾನ್ ಅಳಿಯೂರು ಮೂಡುಬಿದಿರೆಯ ಪಣಪಿಲ ಗ್ರಾಮದವರು. ಕಳೆದ ಎಂಟು ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. 2013ರಿಂದ ಕಂಬಳದ ಕೋಣಗಳನ್ನು ಓಡಿಸುತ್ತಿದ್ದಾರೆ. ಕಂಬಳದಲ್ಲಿ ಇದುವರೆಗೆ 25 ಚಿನ್ನ, 20 ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. 2014-15ರಿಂದ 2018-19ರ ಸತತ ನಾಲ್ಕು ವರ್ಷಗಳಲ್ಲಿ ಸರಣಿ ಶ್ರೇಷ್ಠರಾಗಿ ಬಹುಮಾನ ಪಡೆದಿದ್ದು ಇವರ ಸಾಧನೆ. 

Moodbidri Kambala Jockey Srinivasa Gowda and four other sports persons to receive Ekalavya, Karnataka Kreeda Ratna 2020 Achievement Awards.