ಉಳ್ಳಾಲ ನಗರಸಭೆ ; ಮತ್ತೆ ಕಾಂಗ್ರೆಸ್ ಅಧಿಕಾರದ ಗಾದಿ, ಚಿತ್ರಕಲಾ ಅಧ್ಯಕ್ಷೆ , ಅಯೂಬ್ ಮಂಚಿಲ ಉಪಾಧ್ಯಕ್ಷ

02-11-20 03:07 pm       Mangalore Correspondent   ಕರಾವಳಿ

ನೂತನ ಅಧ್ಯಕ್ಷರಾಗಿ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷರಾಗಿ ಅಯೂಬ್ ಮಂಚಿಲ ಆಯ್ಕೆಯಾಗಿದ್ದಾರೆ.

ಉಳ್ಳಾಲ, ನವೆಂಬರ್ 02: ಉಳ್ಳಾಲ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ನೂತನ ಅಧ್ಯಕ್ಷರಾಗಿ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷರಾಗಿ ಅಯೂಬ್ ಮಂಚಿಲ ಆಯ್ಕೆಯಾಗಿದ್ದಾರೆ.

ಎರಡು ವರುಷಗಳ ಹಿಂದೆ ನಡೆದ ಉಳ್ಳಾಲ ನಗರಸಭಾ ಚುನಾವಣೆಯಲ್ಲಿ ಯಾವ ಪಕ್ಷಗಳು ಬಹುಮತ ಪಡೆಯದೆ ಅತಂತ್ರ ಫಲಿತಾಂಶ ಬಂದಿತ್ತು. ಕಾಂಗ್ರೆಸ್ 13, ಬಿಜೆಪಿ 6 , ಜೆಡಿಎಸ್ 4, ಎಸ್ ಡಿಪಿಐ 6, ಪಕ್ಷೇತರ 2 ಸ್ಥಾನಗಳನ್ನು ಜಯಿಸಿದ್ದವು. ಒಟ್ಟು 31 ಸ್ಥಾನಗಳಲ್ಲಿ ಅಧಿಕಾರಕ್ಕೆ 17 ಸ್ಥಾನಗಳು ಬೇಕಾಗಿದ್ದು  ಫಲಿತಾಂಶ ಅತಂತ್ರವಾಗಿತ್ತು.

ಅಧ್ಯಕ್ಷ , ಉಪಾಧ್ಯಕ್ಷ ಗಾದಿಯ ನೇಮಕಾತಿಯ ಮೀಸಲಾತಿ ವಿಚಾರದಲ್ಲಿ ಕಾನೂನು ತೊಡಕು ಉಂಟಾಗಿ ವ್ಯಾಜ್ಯವು ಕೋರ್ಟ್ ಮೆಟ್ಟಿಲೇರಿ ಆಡಳಿತ ಚುನಾವಣೆ ವಿಳಂಬವಾಗಿತ್ತು. ಇದೀಗ ಕೋರ್ಟ್ ಆದೇಶದ ಪ್ರಕಾರ ನಡೆದ ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಸ್ಥಾನಕ್ಕೆ ಅತಂತ್ರ ಫಲಿತಾಂಶದ ಪರಿಣಾಮ ಸಂಖ್ಯಾಬಲದ ಆಧಾರದಲ್ಲಿ ಚುನಾವಣೆ ಪ್ರಕ್ರಿಯೆ ಚುನಾವಣಾಧಿಕಾರಿ ಮಂಗಳೂರು ಸಹಾಯ ಆಯುಕ್ತರಾದ ರವಿಚಂದ್ರ ನಾಯಕ್ ಸಮಕ್ಷಮದಲ್ಲಿ ನಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ಒಟ್ಟು ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ 3 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆ ನಡೆದು ನಗರಸಭಾ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾವಣೆ ಪ್ರಕ್ರಿಯೆ ನಡೆಸಲಾಯಿತು. 

ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸ್ಥಾನಕ್ಕೆ ನಡೆದ ಚುನಾವಣೆ ಪೈಕಿ ಬಿಜೆಪಿಯ ರೇಷ್ಮಾ ಜಗದೀಶ್ ಪರವಾಗಿ 10 ಮತಗಳು (ಬಿಜೆಪಿ 6, ಜೆಡಿಎಸ್ 3, ಪಕ್ಷೇತರ 1) ಚಲಾವಣೆಯಾದರೆ, ಕಾಂಗ್ರೆಸ್ ಪಕ್ಷದ ಚಿತ್ರಕಲಾ ಕೆ. ಪರವಾಗಿ ಶಾಸಕ ಖಾದರ್ ಸೇರಿದಂತೆ 15 ಮತಗಳು (ಕಾಂಗ್ರೆಸ್ 13, ಶಾಸಕ ಖಾದರ್ 1, ಪಕ್ಷೇತರ 1) ಚಲಾವಣೆಯಾಗಿ, ಎಸ್ ಡಿಪಿಐ ಪಕ್ಷದ ಝರೀನ ಬಾನು ಪರ 6 ಮತಚಲಾವಣೆ ( 6 ಎಸ್ ಡಿಪಿಐ) ನಡೆದು ಅಂತಿಮವಾಗಿ 15 ಮತ ಪಡೆದ ಚಿತ್ರಕಲಾ ಚಂದ್ರಕಾಂತ್ ಅಧ್ಯಕ್ಷೆಯಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸ್ಥಾನಕ್ಕೆ ನಡೆದ ಚುನಾವಣೆ ಪೈಕಿ ಜೆಡಿಎಸ್ ನ ಅಬ್ದುಲ್ ಜಬ್ಬಾರ್ ಪರವಾಗಿ 11 ಮತಗಳು( 6 ಬಿಜೆಪಿ, 4 ಜೆಡಿಎಸ್, 1 ಪಕ್ಷೇತರ) ಚಲಾವಣೆಯಾದರೆ, ಆಯೂಬ್ ಮಂಚಿಲ ಪರವಾಗಿ 14 ಮತಗಳು (14 ಕಾಂಗ್ರೆಸ್) ಚಲಾವಣೆಯಾಗಿ, ಎಸ್ ಡಿಪಿಐ ನ ಮಹಮ್ಮದ್ ರಮೀಝ್ ಪರವಾಗಿ 6 ಮತಗಳು (6 ಎಸ್ ಡಿಪಿಐ) ಚಲಾವಣೆಯಾಗಿ ಅಂತಿಮವಾಗಿ 14 ಮತಗಳನ್ನು ಪಡೆದ ಕಾಂಗ್ರೆಸಿನ ಆಯೂಬ್ ಮಂಚಿಲ ಉಪಾಧ್ಯಕ್ಷರಾಗಿ ಆಯ್ಕೆಯಾದರು.


 
ಜೆಡಿಎಸ್ ನಗರ ಸದಸ್ಯ ದಿನಕರ್ ಉಳ್ಳಾಲ್  ಯಾರಿಗೂ ಮತ ಚಲಾಯಿಸದೆ ತಟಸ್ಥವಾಗಿ ಉಳಿದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷ , ಉಪಾಧ್ಯಕ್ಷರನ್ನು  ಶಾಸಕ ಯು.ಟಿ ಖಾದರ್ ಅಭಿನಂದಿಸಿದರು.

Mangalore Chitra Chandrakanth and Ayub Manchila of the Congress have been elected president and vice-president respectively of Ullal municipality.