ಅಕ್ಕಿ ಬದಲು ನೇರ ನಗದು ; ದಕ್ಷಿಣ ಕನ್ನಡ ಜಿಲ್ಲೆಗೆ 15 ಕೋಟಿ ಬಿಡುಗಡೆ, 37 ಸಾವಿರ ಪಡಿತರ ಕುಟುಂಬದ ಬ್ಯಾಂಕ್ ಖಾತೆ ನಿಷ್ಕ್ರಿಯ! ಜುಲೈ 20ರ ಗಡುವು

13-07-23 10:35 pm       Mangalore Correspondent   ಕರಾವಳಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ 2023ರ ಜುಲೈನಿಂದ ಐದು ಕೆಜಿ ಅಕ್ಕಿ ಬದಲು ನೇರ ನಗದು ವರ್ಗಾವಣೆಗೆ ಚಾಲನೆ ನೀಡಲಾಗಿದೆ.

ಮಂಗಳೂರು,ಜು.13: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ 2023ರ ಜುಲೈನಿಂದ ಐದು ಕೆಜಿ ಅಕ್ಕಿ ಬದಲು ನೇರ ನಗದು ವರ್ಗಾವಣೆಗೆ ಚಾಲನೆ ನೀಡಲಾಗಿದೆ. ಅದರಂತೆ, ಮೊದಲ ಕಂತಿನಲ್ಲಿ ದಕ್ಷಿಣ ಕನ್ನಡ ಸೇರಿ ಐದು ಜಿಲ್ಲೆಗಳಿಗೆ ಜುಲೈ 13ರಂದು ರಾಜ್ಯ ಸರ್ಕಾರ ಆಯಾ ಜಿಲ್ಲೆಯ ಪಡಿತರ ಇಲಾಖೆಗೆ ನಗದು ರವಾನೆಯಾಗಿದೆ. 

ಈ ಮೂಲಕ ಅಂತ್ಯೋದಯ (3ಕ್ಕಿಂತ ಹೆಚ್ಚು ಸದಸ್ಯರಿರುವ ಅಂತ್ಯೋದಯ ಪಡಿತರ ಚೀಟಿಗಳು) ಹಾಗೂ ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಯಜಮಾನನ ಖಾತೆಗೆ ಜಮೆ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯ 2,15,322 ಪಡಿತರ ಚೀಟಿಗಳಿಗೆ 15.02 ಕೋಟಿ ರೂ. ಬಿಡುಗಡೆಯಾಗಿದೆ.

ದ.ಕ‌.‌ ಜಿಲ್ಲೆಯಲ್ಲಿನ 37,801 ಪಡಿತರ ಚೀಟಿಗಳ ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಂಡಿದ್ದು, ಇಂತಹ ಪಡಿತರ ಚೀಟಿದಾರರು ತಮ್ಮ ಬ್ಯಾಂಕ್ ಖಾತೆಯನ್ನು ಇದೇ ಜುಲೈ 20ರೊಳಗೆ ಸಕ್ರಿಯಗೊಳಿಸಿದಲ್ಲಿ 2023ರ ಆಗಸ್ಟ್ ಮಾಹೆಯಲ್ಲಿ ನಗದು ವರ್ಗಾವಣೆಗೆ ಅರ್ಹರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ. ಇಲ್ಲದೇ ಇದ್ದರೆ ಜುಲೈ ತಿಂಗಳ ನೇರ ನಗದು ಪಡೆಯಲು ಅರ್ಹತೆ ಸಿಗುವುದಿಲ್ಲ. 

ಬಿಪಿಎಲ್ ಪಡಿತರ ಕುಟುಂಬದ ಪ್ರತಿ ಸದಸ್ಯನಿಗೆ ತಲಾ 170 ರೂ.ನಂತೆ ಕಾರ್ಡ್ ನಲ್ಲಿ ನಮೂದಾಗಿರುವ ಸದಸ್ಯರ ಸಂಖ್ಯೆಗೆ ತಕ್ಕಂತೆ ಕುಟುಂಬದ ಯಜಮಾನನ ಖಾತೆಗೆ ನಗದು ಜಮಾ ಆಗಲಿದೆ. ಆದರೆ ಜಿಲ್ಲೆಯಲ್ಲಿ 37 ಸಾವಿರದಷ್ಟು ಗ್ರಾಹಕರ ಬ್ಯಾಂಕ್ ಖಾತೆಗಳು ನಿಷ್ಕ್ರಿಯ ಆಗಿರುವ ಮಾಹಿತಿಯನ್ನು ಜಿಲ್ಲಾಡಳಿತ ನೀಡಿದೆ.

Dakshina Kannada gets 15 crore cash instead of Rice from Congress government, 37 bank accounts found with error.