Udupi College Toilet Camera Video Update: ಉಡುಪಿ ವಿಡಿಯೋ ಪ್ರಕರಣ ; ವಿದ್ಯಾರ್ಥಿನಿಯರ ವೈರಲ್ ವಿಡಿಯೋ ಇದೆಯೆಂದು ಗುಲ್ಲು ಎಬ್ಬಿಸಿದ್ದು ಯಾಕೆ ? ನಿಜಕ್ಕೂ ಆಗಿದ್ದೇನು? ಒಂದು ಟ್ವೀಟ್ ಮಾಡಿತ್ತು ಸಂಚಲನ

25-07-23 11:03 pm       Udupi correspondent   ಕರಾವಳಿ

ಉಡುಪಿಯ ಪ್ರಸಾದ್ ನೇತ್ರಾಲಯದ ಅಂಗಸಂಸ್ಥೆ ನೇತ್ರ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ವಿಡಿಯೋ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ಇದನ್ನು ಅಸ್ತ್ರ ಮಾಡಿಕೊಳ್ಳಲು ಮುಂದಾಗಿದ್ದರೆ, ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಒಟ್ಟು ಪ್ರಕರಣವನ್ನು ಹೆಚ್ಚು ಸದ್ದು ಮಾಡದಂತೆ ಮುಚ್ಚಿ ಹಾಕಲು ಪ್ರಯತ್ನ ಪಟ್ಟಿದೆ.

ಉಡುಪಿ, ಜುಲೈ 25: ಉಡುಪಿಯ ಪ್ರಸಾದ್ ನೇತ್ರಾಲಯದ ಅಂಗಸಂಸ್ಥೆ ನೇತ್ರ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ವಿಡಿಯೋ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ಇದನ್ನು ಅಸ್ತ್ರ ಮಾಡಿಕೊಳ್ಳಲು ಮುಂದಾಗಿದ್ದರೆ, ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಒಟ್ಟು ಪ್ರಕರಣವನ್ನು ಹೆಚ್ಚು ಸದ್ದು ಮಾಡದಂತೆ ಮುಚ್ಚಿ ಹಾಕಲು ಪ್ರಯತ್ನ ಪಟ್ಟಿದೆ. ಇಷ್ಟಕ್ಕೂ ಅಲ್ಲಿ ಆಗಿದ್ದೇನೆಂದು ಕೆದಕುತ್ತಾ ಹೋದರೆ, ವಿದ್ಯಾರ್ಥಿನಿಯರ ಆಟಾಟೋಪದ ಪ್ರಕರಣ ಬಿಚ್ಚಿ ಬರುತ್ತದೆ.

ಅಂಬಲಪಾಡಿಯ ನೇತ್ರಾ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಇತ್ತೀಚೆಗೆ ಒಂದೇ ಕ್ಲಾಸಿನ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಬೇರೊಂದು ಕ್ಲಾಸಿನ ಒಬ್ಬಳು ಹಿಂದು ವಿದ್ಯಾರ್ಥಿನಿಯ ನಡುವೆ ಆ ಘಟನೆ ನಡೆದಿತ್ತು. ಕಾಲೇಜಿನಲ್ಲಿ ಮೊಬೈಲ್ ತರುವುದಕ್ಕೆ ನಿಷೇಧ ಇದ್ದರೂ, ಮುಸ್ಲಿಂ ವಿದ್ಯಾರ್ಥಿನಿಯರು ಮೊಬೈಲ್ ತಂದಿದ್ದಲ್ಲದೆ, ಒಬ್ಬಳು ವಿದ್ಯಾರ್ಥಿನಿ ಶೌಚಕ್ಕೆ ತೆರಳಿದ್ದಾಗ ವಿಡಿಯೋ ಮಾಡಿದ್ದರು. ಇದು ವಿಷಯ ಆ ವಿದ್ಯಾರ್ಥಿನಿಗೆ ತಿಳಿಯುತ್ತಲೇ ವಿಡಿಯೋ ಮಾಡಿದ್ದ ಮೊಬೈಲನ್ನು ಪಡೆದು ಡಿಲೀಟ್ ಮಾಡಿಸಿದ್ದಳು. ಅಷ್ಟೇ ಅಲ್ಲ, ಆಗಿರುವ ಘಟನೆ ಬಗ್ಗೆ ಕಾಲೇಜಿನ ಮ್ಯಾನೇಜ್ಮೆಂಟ್ ಗಮನಕ್ಕೆ ತಂದಿದ್ದಳು. ಮರುದಿನವೇ ಹಿಂದು ಸಂಘಟನೆಯ ಗುಂಪೊಂದು ಕಾಲೇಜಿಗೆ ಎಂಟ್ರಿ ಕೊಟ್ಟು ಕ್ರಮ ಜರುಗಿಸಲು ಒತ್ತಾಯ ಮಾಡಿತ್ತು.

ಘಟನೆ ಬಗ್ಗೆ ಕಾಲೇಜು ಆಡಳಿತ ಮಂಡಳಿ ಸಭೆ ನಡೆಸಿ, ಮೊಬೈಲ್ ದುರ್ಬಳಕೆ ಮಾಡಿದ್ದು ಮತ್ತು ನಿಷೇಧ ಇದ್ದರೂ ಮೊಬೈಲ್ ತಂದಿರುವ ಹಿನ್ನೆಲೆಯಲ್ಲಿ ಮೂವರು ವಿದ್ಯಾರ್ಥಿನಿಯರನ್ನೂ ಕಾಲೇಜಿನಿಂದ ಅಮಾನತು ಮಾಡಿತ್ತು. ಅಲ್ಲದೆ, ಘಟನೆ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿತ್ತು. ಇದೇ ಮಾಹಿತಿ ಆಧರಿಸಿ ಕೆಲವರು ರಹಸ್ಯ ಕ್ಯಾಮರಾ ಇಟ್ಟಿದ್ದಾರೆಂದು ಬಿಂಬಿಸಿ ನೂರಾರು ವಿದ್ಯಾರ್ಥಿನಿಯರ ವಿಡಿಯೋ ಮಾಡಿ ಜಾಲತಾಣದಲ್ಲಿ ಬಿಟ್ಟಿದ್ದಾರೆಂದು ಸುದ್ದಿ ಹಬ್ಬಿಸಿದ್ದರು. ಪೊಲೀಸರು ಆ ಮೊಬೈಲ್ ಪಡೆದು ತನಿಖೆಯನ್ನು ನಡೆಸಿದ್ದು ಅದರಲ್ಲಿ ಅಂತಹ ವಿಡಿಯೋ ಸಿಕ್ಕಿಲ್ಲ ಮತ್ತು ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಕೂಡ ಸಿಕ್ಕಿಲ್ಲವೆಂದು ತಿಳಿಸಿದ್ದರು.

ಜಾಲತಾಣದಲ್ಲಿ ಸಂಚಲನ ಎಬ್ಬಿಸಿದ ಟ್ವೀಟ್ ವಾರ್

ಅಲ್ಲಿಗೆ ಮುಚ್ಚಿ ಹೋಗುತ್ತಿದ್ದ ಪ್ರಕರಣಕ್ಕೆ ಮತ್ತೆ ಜೀವ ಕೊಟ್ಟಿದ್ದು ಮುಂಬೈನಲ್ಲಿ ನೆಲೆಸಿರುವ ರಶ್ಮಿ ಸಾವಂತ್ ಅನ್ನುವಾಕೆ. ಉಡುಪಿ ಮೂಲದವಳು ಎಂದು ಹೇಳಿಕೊಳ್ಳುವ ಈಕೆ, ಇದೇ ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ್ದು, ವಿದ್ಯಾರ್ಥಿನಿಯರು ಸಸ್ಪೆಂಡ್ ಆಗಿರುವ ಸುದ್ದಿಯ ಪತ್ರಿಕಾ ತುಣುಕನ್ನು ಪೋಸ್ಟ್ ಮಾಡಿ, ಇದರ ವೈರಲ್ ವಿಡಿಯೋ ವಾಟ್ಸಪ್ ಜಾಲತಾಣದಲ್ಲಿ ಷೇರ್ ಆಗುತ್ತಿದ್ದರೂ, ಉಡುಪಿ ಪೊಲೀಸರು ತಣ್ಣಗಿದ್ದಾರೆ. ಅಲ್ಲದೆ, ಕರ್ನಾಟಕ ಸರಕಾರ ಒಟ್ಟು ಪ್ರಕರಣ ಮುಚ್ಚಿ ಹಾಕುತ್ತಿದೆ ಎಂದು ಆರೋಪಿಸಿದ್ದರು. ಆಕೆಯ ಟ್ವೀಟ್ ಹೇಳಿಕೆಯನ್ನು ಆಲ್ಟ್ ನ್ಯೂಸ್ ನ ಮಹಮ್ಮದ್ ಜುಬೈರ್ ಆಕ್ಷೇಪಿಸಿದ್ದು, ಫ್ಯಾಕ್ಟ್ ಚೆಕ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿ ಮತ್ತೊಂದು ಮಣಿಪುರ ರೀತಿಯ ಘಟನೆ ಆಗುವ ಮೊದಲು ಈಕೆಯನ್ನು ಬಂಧಿಸಿ ಎಂದು ಉಡುಪಿ ಪೊಲೀಸರಿಗೆ ಪೋಸ್ಟ್ ಮಾಡಿದ್ದರು.

ಇಷ್ಟಾಗುತ್ತಲೇ ಉಡುಪಿ ಪೊಲೀಸರು ರಶ್ಮಿ ಸಾವಂತ್ ಅವರ ಉಡುಪಿಯ ಮನೆಗೆ ತೆರಳಿ, ಸುಳ್ಳು ಸುದ್ದಿ ಹಬ್ಬಿಸುವ ಬಗ್ಗೆ ಜಾಗ್ರತೆ ಇರುವಂತೆ ಸೂಚನೆ ನೀಡಿದ್ದಾರೆ. ವಿಡಿಯೋಗಳಿದ್ದರೆ ಕೊಟ್ಟು ಬಿಡಿ, ಅದು ಬಿಟ್ಟು ಸುಳ್ಳು ಸುದ್ದಿ ಹಬ್ಬಿಸಿ ಶಾಂತಿ ಕದಡುವ ಯತ್ನ ಯಾಕೆಂದು ಪ್ರಶ್ನೆ ಮಾಡಿದ್ದರು. ಪೊಲೀಸರು ತೆರಳಿ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದು, ರಶ್ಮಿ ಸಾವಂತ್ ಪರವಾಗಿ ಹೇಳಿಕೆ ನೀಡಿದೆ. ಅಲ್ಲದೆ, ರಾಜ್ಯದ ಕಾಂಗ್ರೆಸ್ ಸರಕಾರ ಹಿಂದುಗಳ ದಮನಕ್ಕಾಗಿ ಟೊಂಕ ಕಟ್ಟಿದೆ. ಉಡುಪಿಯ ಪ್ರಕರಣ ಅದಕ್ಕೊಂದು ಸಾಕ್ಷಿ ಎಂದು ಆರೋಪಿಸಿದೆ. ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯ ಸರಕಾರ ಅಲ್ಲಿ ಸಂತ್ರಸ್ತರು ಮುಸ್ಲಿಮರು ಅನ್ನುವ ಕಾರಣಕ್ಕೆ ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ಆಪಾದಿಸಿದ್ದಾರೆ.

ಘಟನೆ ನಡೆದೇ ಇಲ್ಲ, ವಿಡಿಯೋ ಇದ್ದರೆ ಕೊಡಿ

ಪ್ರಕರಣ ರಾಜಕೀಯ ಸ್ವರೂಪ ಪಡೆಯುತ್ತಲೇ ಉಡುಪಿ ಎಸ್ಪಿ ಮಚ್ಚೀಂದ್ರ ಹಾಕೆ ಪ್ರತಿಕ್ರಿಯಿಸಿದ್ದು, ಆ ರೀತಿಯ ಘಟನೆ ನಡೆದೇ ಇಲ್ಲ. ನಾವು ಮೊಬೈಲನ್ನು ಚೆಕ್ ಮಾಡಿದ್ದೇವೆ. ಅದರಲ್ಲಿ ವೈರಲ್ ಆದ ವಿಡಿಯೋ ಆಗಲೀ, ಆಕ್ಷೇಪಾರ್ಹ ವಿಡಿಯೋ ಆಗಲೀ ಕಂಡುಬಂದಿಲ್ಲ. ಈ ಬಗ್ಗೆ ಯಾವುದೇ ಕಂಪ್ಲೇಂಟ್ ಕೂಡ ಆಗಿಲ್ಲ. ವಿದ್ಯಾರ್ಥಿನಿಯರ ರಹಸ್ಯ ವಿಡಿಯೋ ಜಾಲತಾಣದಲ್ಲಿ ಹರಡುತ್ತಿರುವುದಾಗಿ ಬಿಂಬಿಸುತ್ತಿರುವುದು ಸುಳ್ಳು ಸುದ್ದಿ. ಅಂತಹ ವಿಡಿಯೋಗಳಿದ್ದರೆ, ಯಾರಾದರೂ ಪೊಲೀಸರ ಗಮನಕ್ಕೆ ತರಬೇಕು. ಕಾಲೇಜು ಒಳಗೆ ಘಟನೆ ಆಗಿದ್ದು ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ.

ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆವು

ಅತ್ತ ಪ್ರಕರಣ ಗಂಭೀರ ಸ್ವರೂಪ ಪಡೆದ ಬೆನ್ನಲ್ಲೇ ನೇತ್ರಾ ಕಾಲೇಜಿನ ಮುಖ್ಯಸ್ಥರು ಸುದ್ದಿಗೋಷ್ಟಿ ಕರೆದು ಸ್ಪಷ್ಟನೆ ನೀಡಿದ್ದಾರೆ. ಘಟನೆ ಆಗಿರುವುದು ಸತ್ಯ. ಆದರೆ, ಈಗ ಬಿಂಬಿಸುತ್ತಿರುವ ರೀತಿ ಅಲ್ಲ. ನೂರಾರು ವಿದ್ಯಾರ್ಥಿನಿಯರ ವಿಡಿಯೋ ಪ್ರಸಾರ ಆಗಿರುವುದೆಂದು ಬಿಂಬಿಸುತ್ತಿರುವುದು ತಪ್ಪು. ಕಾಲೇಜಿಗೆ ಮೊಬೈಲ್ ತರುವಂತಿಲ್ಲ, ದುರ್ಬಳಕೆ ಮಾಡಿದ ಕಾರಣ ಅವರನ್ನು ಅಮಾನತು ಮಾಡಿ, ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ತಮಾಷೆಗೆ ವಿಡಿಯೋ ಮಾಡಿದ್ದಾಗಿ ವಿದ್ಯಾರ್ಥಿನಿಯರು ತಪ್ಪನ್ನು ಒಪ್ಪಿಕೊಂಡಿದ್ದರು. ಮೊಬೈಲ್ ನಮಗೆ ಕೊಡುವಾಗಲೇ ಅದರಲ್ಲಿ ವಿಡಿಯೋ ಇರಲಿಲ್ಲ. ವಾಶ್ ರೂಮ್ ಗೆ ಹೋಗಿದ್ದಾಗ, ಮೊಬೈಲ್ ನೋಡಿದ್ದೆ. ತಕ್ಷಣ ಹೊರಗೆ ಬಂದು ಸ್ಥಳದಲ್ಲೇ ಡಿಲೀಟ್ ಮಾಡಿಸಿದ್ದಾಗಿ ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದಳು. ಅಲ್ಲದೆ, ಘಟನೆ ಬಗ್ಗೆ ದೂರು ನೀಡುವುದಿಲ್ಲ ಎಂದೂ ಹೇಳಿದ್ದಳು. ಆದರೂ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವು. ಈ ಕುರಿತಾಗಿ ಧರ್ಮದ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ

Hidden camera in college toilet at Udupi, SP asks public not to believe rumours; Rashmi Samant tweets spark controversy. Rashmi Samant, a social activist who used a social media platform to voice her objection against the way the Udupi Police handled a case wherein three second-year nursing college students were suspended for recording another female student in the toilet using a hidden camera, has alleged that her family is facing police harassment.