Sowjanya rape, Prasanna Ravi, Belthangady: ಹೆಗ್ಗಡೆಯವರ ತಮ್ಮ ತಾನ್ಯಾವುದೇ ಅತ್ಯಾಚಾರ ಮಾಡಿಲ್ಲವೆಂದು ಅಣ್ಣಪ್ಪನ ಮುಂದೆ ಆಣೆ ಪ್ರಮಾಣ ಮಾಡಲಿ ; ಪ್ರಸನ್ನ ರವಿ ಸವಾಲು 

03-09-23 03:34 pm       Mangalore Correspondent   ಕರಾವಳಿ

ಹೆಗ್ಗಡೆ ಕುಟುಂಬದ ಬಗ್ಗೆ ಪ್ರಶ್ನೆ ಮಾಡಬಾರದೆಂದು ಇವರು ಕೋರ್ಟಿನಿಂದ ತಡೆ ತರುತ್ತಾರೆ. ಆದರೆ ಇವರು ನ್ಯಾಯ ಕೊಡುವ ಧರ್ಮಾಧಿಕಾರಿ ಪಟ್ಟದಲ್ಲಿದ್ದಾರೆ. ಅಷ್ಟೇ ಅಲ್ಲ, ರಾಜ್ಯಸಭೆ ಸದಸ್ಯರಾಗಿದ್ದಾರೆ.

ಬೆಳ್ತಂಗಡಿ, ಸೆ.3: ಹೆಗ್ಗಡೆ ಕುಟುಂಬದ ಬಗ್ಗೆ ಪ್ರಶ್ನೆ ಮಾಡಬಾರದೆಂದು ಇವರು ಕೋರ್ಟಿನಿಂದ ತಡೆ ತರುತ್ತಾರೆ. ಆದರೆ ಇವರು ನ್ಯಾಯ ಕೊಡುವ ಧರ್ಮಾಧಿಕಾರಿ ಪಟ್ಟದಲ್ಲಿದ್ದಾರೆ. ಅಷ್ಟೇ ಅಲ್ಲ, ರಾಜ್ಯಸಭೆ ಸದಸ್ಯರಾಗಿದ್ದಾರೆ. ಇವರ ಮನೆಯವರ ಬಗ್ಗೆ ಜನ ಆರೋಪ ಮಾಡುತ್ತಿದ್ದಾರೆ. ಇವರ ತಮ್ಮನ ಬಗ್ಗೆ ಆರೋಪ ಮಾಡುತ್ತಾರೆ. ಇವರ ಬಗ್ಗೆ ಪ್ರಶ್ನೆ ಮಾಡಬಾರದೇ.. ಇವರ ತಮ್ಮ ಸಮಾಜದ ಮುಂದೆ ಬರಲಿ, ಅಣ್ಣಪ್ಪ ಸ್ವಾಮಿ ಎದುರಲ್ಲಿ ತಾನು ಯಾವುದೇ ಅತ್ಯಾಚಾರ ಮಾಡಿಲ್ಲ ಎಂದು ಆಣೆ ಪ್ರಮಾಣ ಮಾಡಲಿ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಸವಾಲು ಹಾಕಿದ್ದಾರೆ. 

ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪ್ರಸನ್ನ ರವಿ ಉಗ್ರ ಭಾಷಣ ಮಾಡಿದ್ದಾರೆ. ಸೌಜನ್ಯಾಗೆ ನ್ಯಾಯ ಸಿಗದೇ ಇದ್ದರೆ, ಚುನಾವಣೆ ಬಹಿಷ್ಕಾರ ಮಾಡಬೇಕೆಂದು ಹೇಳಿದ್ದಕ್ಕೆ ಕೆಲವರು ಟ್ರೋಲ್ ಮಾಡಿದ್ದಾರೆ. ಹಿಂದುಗಳು ಓಟ್ ಹಾಕ್ತಾರೆಂದು ಹೇಳುತ್ತಿದ್ದಾರೆ. ನೋಡಿ ಸ್ವಾಮಿ, ಹಿಂದುಗಳನ್ನು ಯಾವುದೇ ರಾಜಕೀಯದವರಿಗೆ ಬರೆದುಕೊಟ್ಟಿಲ್ಲ. ಯಾವುದೇ ಪಕ್ಷದ ಬಗ್ಗೆ ಹೇಳುವುದಿಲ್ಲ. ಎರಡು ಪಕ್ಷದವರಿಗೂ ಹೇಳ್ತೇನೆ. ಚುನಾವಣೆ ಬಹಿಷ್ಕಾರದ ನಿರ್ಧಾರಕ್ಕೆ ನಾವು ಬರಬೇಕಿದೆ. 

ವಿಶ್ವ ಹಿಂದು ಪರಿಷತ್ತಿನ ಕಾರ್ಯಕರ್ತರು ಬೀದಿಗೆ ಇಳಿದಿದ್ದಾರೆ. ಮೊನ್ನೆ ಧರ್ಮಸ್ಥಳಕ್ಕೆ ಹೋದಾಗ ಅಲ್ಲಿ ಭಗವಾಧ್ವಜವನ್ನು ಒಳಗೆ ಬಿಡಲಿಲ್ಲ. ನಾವು ಶ್ರೇಷ್ಠ ಎಂದು ನಂಬುವ ಧ್ವಜವನ್ನು ಧರ್ಮಸ್ಥಳದವರು ನಂಬುವುದಿಲ್ಲ. ಯಾಕೆ, ಹಿಂದು ನಾಯಕರು ಇದರ ಬಗ್ಗೆ ಮಾತನಾಡಿಲ್ಲ. ಯಾಕೆ ಧ್ವಜ ಸ್ಥಾಪನೆಗೆ ಇವರು ಬಿಡಲ್ಲ. ಇವರು ಹಿಂದುತ್ವದ ಬಗ್ಗೆ ನಂಬಿಕೆ ಇರಿಸಿದ್ದಾರೆಯೇ ಎಂದು ಯೋಚನೆ ಮಾಡಬೇಕಿದೆ. ಫೇಸ್ಬುಕ್, ಜಾಲತಾಣದಲ್ಲಿ ಇವರ ಪರವಾಗಿ ಬರೆಯುವ ಚೇಲಾಗಳಿಗೆ ಇಲ್ಲಿ ಸೇರಿದ ಎಲ್ಲರೂ ಉತ್ತರ ಕೊಡಬೇಕಾಗಿದೆ. ನಾವು ಹೋರಾಟಕ್ಕೆ ಇಳಿದಿರುವುದು ಒಬ್ಬ ಹೆಣ್ಮಗಳ ಪರವಾಗಿ. ನಾವೆಲ್ಲ ತಾಯಿ ಹೊಟ್ಟೆಯಿಂದ ಬಂದವರು ಎನ್ನುವುದನ್ನು ನೆನಪಿಡಬೇಕು ಎಂದು ಪ್ರಸನ್ನ ರವಿ ಹೇಳಿದರು. 

ಪೊಲೀಸರೇ ತನಿಖೆಯ ದಿಕ್ಕು ತಪ್ಪಿಸಿದ್ದು ; ವಕೀಲ ಮೋಹಿತ್ 

ಕೋರ್ಟಿನಲ್ಲಿ ಸಂತೋಷ್ ರಾವ್ ಪರವಾಗಿ ವಕಾಲತ್ತು ನಡೆಸಿದ್ದ ವಕೀಲ ಮೋಹಿತ್, ಸಭೆಯಲ್ಲಿ ಕೆಲವು ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ವೈದ್ಯರು ಮತ್ತು ಪೊಲೀಸರ ತನಿಖೆಯೇ ದಿಕ್ಕು ತಪ್ಪಿಸಿದ್ದು ಎಂದಿದ್ದಾರೆ. ಚಾರ್ಜ್ ಶೀಟಲ್ಲೇ ತನಿಖೆಯ ದಿಕ್ಕು ತಪ್ಪಿಸಿರುವುದು ಕಂಡುಬರುತ್ತದೆ. ಘಟನೆ ನಡೆದಿರುವ ಸ್ಥಳದಿಂದ ಆರೋಪಿ ಸಂತೋಷ್, ಒಬ್ಬನೇ ಆ ಹುಡುಗಿಯನ್ನು ಹೊತ್ತುಕೊಂಡು ತೋಡು ದಾಟಿ ಹೋಗಿದ್ದಾನೆಂದು ಬರೆದಿದ್ದಾರೆ.‌ ಆದರೆ ಅದೇ ಜಾಗಕ್ಕೆ ಶ್ವಾನದಳ ಕರೆದುಕೊಂಡು ಹೋಗಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ಬರೆದಿದ್ದೀರಿ. ಹೆಣ ಸಿಕ್ಕ ಜಾಗದಲ್ಲಿ ಒಂದು ಚೀಟಿ ಸಿಕ್ಕಿತ್ತು ಎಂದು ಚಾರ್ಜ್ ಶೀಟಲ್ಲಿದೆ. ಆದರೆ ಆ ಚೀಟಿ ಎಲ್ಲಿದೆ, ಯಾಕೆ ಮಿಸ್ ಆಯ್ತು ಎನ್ನುವುದಕ್ಕೆ ಉತ್ತರ ಇಲ್ಲ. 

ಅಂದು ಬೆಳಕಿನ ವ್ಯವಸ್ಥೆ ಇಲ್ಲದಿದ್ದರೂ ಪೊಲೀಸ್ ಅಧಿಕಾರಿಗಳು ಬೆಳ್ತಂಗಡಿಯಲ್ಲೇ ಪೋಸ್ಟ್ ಮಾರ್ಟಂ ನಡೆಸಿದ್ದರು. ಡಾಕ್ಟರ್ ನೀಡಿದ್ದ ವರದಿಯಲ್ಲೇ ಮುನ್ನಾ ದಿನ ಸಂಜೆ ಆರು ಗಂಟೆಗೆ ಸೌಜನ್ಯಾಗೆ ಆಹಾರ ಕೊಟ್ಟಿದ್ದನ್ನು ತಿಳಿಸಿದ್ದೀರಿ. ಅದನ್ನು ಯಾರು ಕೊಟ್ಟಿದ್ದರು. ಆರೋಪಿ ಸಂತೋಷ್ ರಾವ್ ಆಕೆಗೆ ಕಾಡಿನಲ್ಲಿ ಆಹಾರ ತರಿಸಿ ಕೊಟ್ಟಿದ್ದನೇ? 

ಆ ದಿನ ಕುಟುಂಬಸ್ಥರು, ಪರಿಸರದ ಜನರೆಲ್ಲ ಹುಡುಕಾಟ ನಡೆಸಿದ್ದರೂ ಸೌಜನ್ಯಾ ಆ ಜಾಗದಲ್ಲಿ ಸಿಕ್ಕಿರಲಿಲ್ಲ. ಮರುದಿನ ಬೆಳಗ್ಗೆ ಆಕೆಯ ಡೆಡ್ ಬಾಡಿ ಅಲ್ಲಿ ಸಿಕ್ಕಿದ್ದು ಹೇಗೆ ಎಂದು ಕುಟುಂಬದ ಪ್ರಶ್ನೆಗೆ ಪೊಲೀಸರೇ ಉತ್ತರ ಕೊಡಬೇಕು. 12ನೇ ತಾರೀಕಿಗೆ ಬಾಹುಬಲಿ ಬೆಟ್ಟದಲ್ಲಿ ಸಿಕ್ಕಿದ್ದ ಸಂತೋಷ್ ರಾವ್ ನನ್ನು ಯಾರೋ ಹಿಡಿದು ಕೊಟ್ಟರೆಂದು ಅತ್ಯಾಚಾರ ಮಾಡಿದವನು ಇವನೇ ಅಂತ ಪೊಲೀಸರು ರಿಪೋರ್ಟ್ ಕೊಟ್ಟಿದ್ದೀರಿ. ವೈದ್ಯರ ವರದಿಯಲ್ಲೇ ಗ್ಯಾಂಗ್ ರೇಪ್ ಆಗಿದೆ ಅಂತ ಇದೆ. ಮೂರರಿಂದ ನಾಲ್ಕು ಜನ ಇದ್ದರೆಂದು ವೈದ್ಯರು ತಿಳಿಸಿದ್ದರೂ ಯಾಕೆ ಬೇರೆ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿಲ್ಲ. ಆ ಸ್ಥಳದಲ್ಲಿ ಅಂಡರ್ ವೇರ್ ಸಿಕ್ಕಿಲ್ಲವೆಂದು ವರದಿಯಲ್ಲಿ ಕೊಟ್ಟಿದ್ದೀರಿ. ವೈದ್ಯರು ಮತ್ತು ಪೊಲೀಸ್ ಅಧಿಕಾರಿ ಸಂತೋಷ್ ರಾವ್ ಪ್ರಭಾವಕ್ಕೊಳಗಾಗಿ ಎಡವಟ್ಟು ಮಾಡಿದ್ದಾರೆಯೇ ಎಂಬ ಪ್ರಶ್ನೆ ಕೇಳಬೇಕಾಗುತ್ತದೆ. 

ತೀರ್ಪಿನ 136ನೇ ಪ್ಯಾರಾದಲ್ಲಿ ನ್ಯಾಯಾಧೀಶರು ಬರೆದಿದ್ದಾರೆ, ಪೊಲೀಸ್ ಅಧಿಕಾರಿ ಮತ್ತು ವೈದ್ಯರು ಮಾಡಿದ ಅನಾಹುತದಿಂದಾಗಿಯೇ ಈ ಕೇಸ್ ಮುಚ್ಚಿ ಹೋಗಿದೆ ಎಂದು. ಪೊಲೀಸರು ಸಾಕ್ಷ್ಯ ನಾಶ ಮಾಡಿರುವುದು ನ್ಯಾಯಾಲಯದ ಗಮನಕ್ಕೂ ಬಂದಿದೆ. ತನಿಖೆಯ ಬಗ್ಗೆಯೇ ಸಂಶಯ ಇದೆಯೆಂದು ಬರೆದಿದ್ದಾರೆ. ಎಲ್ಲ ಪೊಲೀಸರ ಬಗ್ಗೆ ಸಂಶಯ ಪಡುವುದಲ್ಲ. ಇಲ್ಲಿ ತನಿಖಾಧಿಕಾರಿ ಆಗಿದ್ದವರನ್ನು ಮಾತ್ರ ಪ್ರಶ್ನೆ ಮಾಡುತ್ತೇನೆ. ಸಂತೋಷ್ ರಾವ್ ಜೈಲಿನಿಂದ ಹೊರಬಂದು 2019ರಲ್ಲಿ ಏನೋ ಮಾಡಿದ್ದಾನೆ ಎಂದು 2023 ರಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಈಗ ನೆನಪಾಗಿದ್ದೇ ನಿಮಗೆ ಆತ ಅಪರಾಧ ಮಾಡಿದ್ದಾನೆ ಅಂತ. ಪೊಲೀಸರು ತಮ್ಮ ಕೆಲಸ ಸರಿಯಾಗಿ ಮಾಡಿರುತ್ತಿದ್ದರೆ, ಜನ ಇವತ್ತು ಈ ರೀತಿ ಬೀದಿಗೆ ಬರುವ ದಿನ ಬರುತ್ತಿರಲಿಲ್ಲ ಎಂದು ಹೇಳಿದರು ಮೋಹಿತ್.

rape Sowjanya slams Prasanna Ravi at protest at Belthangady.