Mangalore Mahesh travels bus owner Prakash Suicide: ಮಹೇಶ್ ಬಸ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಶೇಖ ಸಾವಿಗೆ ಶರಣು ; ನೂರಕ್ಕೂ ಹೆಚ್ಚು ಬಸ್ ಗಳನ್ನು ಕಟ್ಟಿದ್ದ ಮಂಗಳೂರಿನ ಯಶಸ್ವಿ ಉದ್ಯಮಿ 

01-10-23 08:31 pm       Mangalore Correspondent   ಕರಾವಳಿ

ಮಂಗಳೂರಿನಲ್ಲಿ ಮಹೇಶ್ ಬಸ್ ಟ್ರಾವೆಲ್ಸ್ ಉದ್ಯಮದ ಮೂಲಕ ಹೆಸರು ಮಾಡಿದ್ದ ಪ್ರಕಾಶ್ ಶೇಖ (43) ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮಂಗಳೂರು, ಅ.1: ಮಂಗಳೂರಿನಲ್ಲಿ ಮಹೇಶ್ ಬಸ್ ಟ್ರಾವೆಲ್ಸ್ ಉದ್ಯಮದ ಮೂಲಕ ಹೆಸರು ಮಾಡಿದ್ದ ಪ್ರಕಾಶ್ (43) ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕದ್ರಿಯ ಮೌರಿಷ್ಕಾ ಅಪಾರ್ಟ್ಮೆಂಟ್ ನಲ್ಲಿರುವ ಮನೆಯಲ್ಲಿ ಭಾನುವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 50 ವರ್ಷಗಳ ಹಿಂದೆಯೇ 1972ರ ವೇಳೆಗೆ ಜಯರಾಮ ಶೇಖ ಅವರು ಮಹೇಶ್ ಬಸ್ ಟ್ರಾವೆಲ್ಸ್ ಉದ್ಯಮ ಆರಂಭಿಸಿದ್ದರು. ಮೊದಲಿಗೆ ಜ್ಯೋತಿ ಎಂದಿದ್ದ ಹೆಸರನ್ನು ಬಳಿಕ ಎರಡನೇ ಮಗ ಮಹೇಶ್ ಹೆಸರಿಗೆ ಬದಲಿಸಿದ್ದರು.‌  ಆರಂಭದಿಂದಲೇ ಮಂಗಳೂರಿನಿಂದ ಕೊಣಾಜೆ ರೂಟಿನಲ್ಲಿ ಬಸ್ ಉದ್ಯಮ ಆರಂಭಿಸಿದ್ದರು. ಆನಂತರ ಇತರ ರೂಟಿನಲ್ಲೂ ಮಹೇಶ್ ಬಸ್ ಸಂಚಾರ ಆರಂಭಿಸಿತ್ತು. ಮೂರನೇ ಮಗ ಪ್ರಕಾಶ್ ಶೇಖ ಉದ್ಯಮದಲ್ಲಿ ತೊಡಗಿಸಿಕೊಂಡ ಬಳಿಕ ವ್ಯವಹಾರ ವಿಸ್ತರಣೆಯಾಗಿತ್ತು.‌

ಕಳೆದ 15 ವರ್ಷಗಳಲ್ಲಿ ಮಹೇಶ್ ಹೆಸರಲ್ಲಿ ಟೂರಿಸ್ಟ್ ಉದ್ಯಮ, ಟಿಪ್ಪರ್, ಸಿಮೆಂಟ್ ಮಿಕ್ಸರ್ ಲಾರಿ ಹೀಗೆ ಹಲವಾರು ವ್ಯವಹಾರ ಮಾಡಿಕೊಂಡಿದ್ದರು. ಹಿರಿಯ ಪುತ್ರರಿಬ್ಬರು ಬೆಂಗಳೂರು, ಮುಂಬೈನಲ್ಲಿ ನೆಲೆಸಿದ ಬಳಿಕ ಪೂರ್ತಿ ಬಸ್ ಉದ್ಯಮದ ವ್ಯವಹಾರವನ್ನು ಪ್ರಕಾಶ್ ಅವರೇ ನೋಡಿಕೊಂಡಿದ್ದರು. ಆಪ್ತರ ಪ್ರಕಾರ, ನೂರಕ್ಕೂ ಹೆಚ್ಚು ಬಸ್ಗಳು ಅವರ ಒಡೆತನದಲ್ಲಿದ್ದವು. ಹಲವಾರು ಬಸ್ ಗಳನ್ನು ಬೇರೆ ಬೇರೆ ಕಡೆ ಖಾಸಗಿಯಾಗಿ ಕಾಂಟ್ರಾಕ್ಟ್ ಕೊಟ್ಟಿದ್ದರು. ಪ್ರಕಾಶ್ ಅವರು ಪತ್ನಿ ಮಕ್ಕಳ ಜೊತೆಗೆ ಕದ್ರಿಯ ಅಪಾರ್ಟ್ಮೆಂಟ್ ನಲ್ಲಿ ನೆಲೆಸಿದ್ದರು. 80ರ ಹರೆಯದ ಜಯರಾಮ ಶೇಖ ಕುಲಶೇಖರದ ನಿವಾಸದಲ್ಲಿಯೇ ನೆಲೆಸಿದ್ದಾರೆ. 

ಇಂದು ಬೆಳಗ್ಗೆ ಹೊರಗೆ ಹೋಗಿ ಬಂದಿದ್ದ ಪ್ರಕಾಶ್ ಮತ್ತೆ ಬೆಡ್ ರೂಮಿಗೆ ತೆರಳಿದ್ದರು. ಮಧ್ಯಾಹ್ನ ನೋಡಿದರೆ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ ಎನ್ನುವ ಮಾಹಿತಿ ಇದೆ. ಈ ಬಗ್ಗೆ ಪತ್ನಿ ಕದ್ರಿ ಠಾಣೆಗೆ ದೂರು ನೀಡಿದ್ದಾರೆ. ಬಸ್ ಉದ್ಯಮದ ಬಗ್ಗೆ ಭಾರೀ ಪ್ರೀತಿ ಇಟ್ಟುಕೊಂಡಿದ್ದ ಪ್ರಕಾಶ್ ಯಾಕಾಗಿ ಸಾವಿಗೆ ಶರಣಾಗಿದ್ದಾರೆ ಎನ್ನುವುದು ಆಪ್ತ ಬಳಗಕ್ಕೆ ಶಾಕ್ ನೀಡಿದೆ. ಬಸ್ ಮಾಲಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಜೀಜ್ ಪರ್ತಿಪ್ಪಾಡಿ ಪ್ರತಿಕ್ರಿಯಿಸಿ, ಪ್ರಕಾಶ್ ತುಂಬ ಒಳ್ಳೆಯ ವ್ಯಕ್ತಿಯಾಗಿದ್ದರು. ಅವರ ತಂದೆಯ ಕಾಲದಿಂದಲೂ ಒಡನಾಟ ಇದೆ. ಜಿಲ್ಲಾ ಬಸ್ ಮಾಲಕರ ಸಂಘ ಗಾಢ ಶೋಕ ವ್ಯಕ್ತಪಡಿಸುತ್ತದೆ ಎಂದಿದ್ದಾರೆ.

Mahesh travels bus owner Prakash Sheka commits suicide at his house in Mangalore. He owns more than 100 private buses in Mangalore.