Mp Nalin Kateel, Ram Bhat, Kalladka Bhat; 2009ರ ಚುನಾವಣೆ ಮೆಲುಕು ; ಕಲ್ಲಡ್ಕ ಭಟ್ಟರ ವಿರುದ್ಧ ಸೆಟೆದು ನಿಂತಿದ್ದ ರಾಮ ಭಟ್ಟರು, ಬಿಜೆಪಿ ಸೋಲನ್ನು ತಪ್ಪಿಸಿದ್ದ ಆರೆಸ್ಸೆಸ್ ತಂತ್ರಗಾರಿಕೆ, ಹೊಸ ಮುಖ ನಳಿನ್ ಗೆಲ್ಲಿಸಿದ್ದು ಅಹಂ ಇಲ್ಲದ ನಡವಳಿಕೆ !  

15-03-24 12:32 pm       Giridhar Shetty, Mangaluru   ಕರಾವಳಿ

2009ರಲ್ಲಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದು ಭಾರೀ ಕುತೂಹಲ ಸೃಷ್ಟಿಸಿತ್ತು. ಆಗ ಹಾಲಿ ಸಂಸದರಾಗಿದ್ದ ಡಿವಿ ಸದಾನಂದ ಗೌಡರ ಬಗ್ಗೆ ಒಲವು ಅಷ್ಟಾಗಿಲ್ಲ ಎನ್ನುವ ಮಾತಿದ್ದುದರಿಂದ ಅಭ್ಯರ್ಥಿ ಬದಲಾವಣೆ ಆಗುತ್ತೆ ಎನ್ನುವ ಸುದ್ದಿಗಳಿದ್ದವು.

ಮಂಗಳೂರು, ಮಾ.15: 2009ರಲ್ಲಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದು ಭಾರೀ ಕುತೂಹಲ ಸೃಷ್ಟಿಸಿತ್ತು. ಆಗ ಹಾಲಿ ಸಂಸದರಾಗಿದ್ದ ಡಿವಿ ಸದಾನಂದ ಗೌಡರ ಬಗ್ಗೆ ಒಲವು ಅಷ್ಟಾಗಿಲ್ಲ ಎನ್ನುವ ಮಾತಿದ್ದುದರಿಂದ ಅಭ್ಯರ್ಥಿ ಬದಲಾವಣೆ ಆಗುತ್ತೆ ಎನ್ನುವ ಸುದ್ದಿಗಳಿದ್ದವು. ಆಕಾಂಕ್ಷಿಗಳಾಗಿ ಸುನಿಲ್ ಕುಮಾರ್, ನಾಗರಾಜ ಶೆಟ್ಟಿ, ಪ್ರತಾಪಸಿಂಹ ನಾಯಕ್ ಹೆಸರು ಮುಂಚೂಣಿಯಲ್ಲಿದ್ದವು. ನಾಮಪತ್ರ ಸಲ್ಲಿಕೆಗೆ ಎರಡು ದಿನ ಇರುವಾಗ ನಳಿನ್ ಕುಮಾರ್ ಹೆಸರು ಘೋಷಣೆಯಾಗಿತ್ತು.

Mangalore Today | Latest main news of mangalore, udupi - Page CDA-Chairman- Nagaraj-Shetty-to-leave-the-BJP

ನಳಿನ್ ಕುಮಾರ್ ಆಗ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಚುನಾವಣೆಗೆ ಒಂದು ವರ್ಷದ ಮೊದಲು ಕಟೀಲು ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆದು ಅದರಲ್ಲಿ ಅಧ್ಯಕ್ಷರಾಗಿದ್ದುದರಿಂದ ನಳಿನ್ ಕುಮಾರ್ ಹೆಸರು ಮಂಗಳೂರು, ಮೂಲ್ಕಿ ಭಾಗದಲ್ಲಿ ಒಂದಷ್ಟು ಪ್ರಚಾರಕ್ಕೆ ಬಂದಿದ್ದು ಬಿಟ್ಟರೆ ಜಿಲ್ಲೆಯಾದ್ಯಂತ ಖದರ್ ಇರಲಿಲ್ಲ. ಮೂಲತಃ ಸುಳ್ಯ- ಪುತ್ತೂರಿನ ಗಡಿಭಾಗ ಕೈಯ್ಯೂರಿನ ನಿವಾಸಿಯಾಗಿದ್ದರಿಂದ ಅಲ್ಲಿಯೂ ಕೆಲವು ಜನಕ್ಕಷ್ಟೇ ಪರಿಚಿತರಾಗಿದ್ದರು. ಅದೇ ಸಂದರ್ಭದಲ್ಲಿ ಸುಳ್ಯ ತಾಲೂಕಿನ ಪಂಜದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮ ಒಂದಕ್ಕೆ ಪ್ರಮುಖ ಭಾಷಣಕಾರರಾಗಿದ್ದ ಸುನಿಲ್ ಕುಮಾರ್ ಬರದೇ ಇದ್ದುದರಿಂದ ಅವರ ಬದಲಿಗೆ ನಳಿನ್ ಕುಮಾರ್ ಅವರನ್ನು ಕಳಿಸಲಾಗಿತ್ತು. ಅಲ್ಲಿನ ಜನರಿಗೆ ನಳಿನ್ ಕುಮಾರ್ ಪರಿಚಯ ಇರಲಿಲ್ಲ. ಬಜರಂಗದಳದ ಕಾರ್ಯಕ್ರಮಕ್ಕೆ ಯಾರೋ ಒಬ್ಬರನ್ನು ಭಾಷಣಕ್ಕೆ ಕಳಿಸಿರುತ್ತಾರೆಂದು ಅಂದುಕೊಂಡಿದ್ದರು. ಆದರೆ, ಕೋಲು ಶರೀರದ ಯುವಕ ತುಳುವಿನಲ್ಲಿ ಮಾಡಿದ್ದ ಭಾಷಣ ಅಲ್ಲಿ ಸೇರಿದ್ದ ಯುವಕರನ್ನು ಕೆರಳಿಸಿತ್ತು. ಎದುರಾಳಿಗಳನ್ನು ಛೇಡಿಸಿ ಮಾಡಿದ್ದ ಭಾಷಣದ ಬಗ್ಗೆ ಆನಂತರ ಕೇಸೂ ದಾಖಲಾಗಿತ್ತು. ನಳಿನ್ ಕುಮಾರ್ ಭಾಷಣವನ್ನು ಅಂದು ಕೆಲವರಲ್ಲಿ ಮಾತ್ರ ಇದ್ದ ವಿಡಿಯೋ ಸಹಿತ ಮೊಬೈಲುಗಳಲ್ಲಿ ಕುತೂಹಲದಿಂದ ನೋಡಿದ್ದರು.

ಆದರೆ, ನಳಿನ್ ಕುಮಾರ್ ಅವರನ್ನು ಸಂಸತ್ ಸ್ಥಾನಕ್ಕೆ ಅಭ್ಯರ್ಥಿಯಾಗಿಸಲು ಪಕ್ಷದ ಜಿಲ್ಲಾ ಸಮಿತಿಯಲ್ಲಾಗಲೀ, ತಾಲೂಕು ಸಮಿತಿಯಲ್ಲಾಗಲೀ ಶಿಫಾರಸು ಮಾಡಿರಲಿಲ್ಲ. ಆಗ ಸಂಘ ಪರಿವಾರ- ಬಿಜೆಪಿಯಲ್ಲಿ ಹುಲ್ಲು ಕಡ್ಡಿ ಅಲುಗಾಡುವುದಿದ್ದರೂ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರದ್ದೇ ಹುಕುಂ ಬೇಕಾಗಿತ್ತು. ಕರಾವಳಿ ಬಿಜೆಪಿ ಪಾಲಿಗೆ ಕಲ್ಲಡ್ಕ ಭಟ್ ಹೇಳಿದ್ದೇ ವೇದ ವಾಕ್ಯ ಎನ್ನುವಂತಿತ್ತು. ದಕ್ಷಿಣ ಕನ್ನಡ ಸಂಸದರಾಗಿದ್ದ ಡಿವಿ ಸದಾನಂದ ಗೌಡರನ್ನು ಉಡುಪಿಗೆ ಕಳಿಸಿ, ಇಲ್ಲಿ ತನ್ನ ಶಿಷ್ಯನಾಗಿದ್ದ ನಳಿನ್ ಕುಮಾರ್ ಗೆ ಮಣೆ ಹಾಕಿದ್ದರು. ಪಕ್ಷದ ಜಿಲ್ಲಾ ನಾಯಕರ ಸಮ್ಮತಿ ಇಲ್ಲದಿದ್ದರೂ ನಳಿನ್ ಕುಮಾರ್ ಹೆಸರನ್ನು ರಾಜ್ಯ ಸಮಿತಿಗೆ ಹೇಳಿದ್ದೂ ಕಲ್ಲಡ್ಕ ಭಟ್ಟರೇ ಆಗಿದ್ದರು. ಇದರಿಂದ ಕ್ರುದ್ಧರಾಗಿದ್ದವರು ಪುತ್ತೂರಿನ ಉರಿಮಜಲು ರಾಮ ಭಟ್ಟರು. ನೆಂಟಸ್ಥಿಕೆಯಲ್ಲಿ ಕಲ್ಲಡ್ಕ ಭಟ್ಟರು ತನ್ನ ಭಾವನೇ ಆಗಿದ್ದರೂ, ಬಿಜೆಪಿ, ಸಂಘ ಪರಿವಾರದ ವಿಷಯದಲ್ಲಿ ಸರ್ವಾಧಿಕಾರಿ ಪ್ರವೃತ್ತಿ ಹೊಂದಿದ್ದ ಪ್ರಭಾಕರ ಭಟ್ಟರ ಬಗ್ಗೆ ರಾಮ ಭಟ್ ಮೊದಲೇ ಸಿಟ್ಟಿನಲ್ಲಿದ್ದರು. ಯಾವುದೇ ತಾಲೂಕು ಸಮಿತಿಯಲ್ಲೂ ಶಿಫಾರಸು ಆಗದೇ ಇದ್ದರೂ, ನೇರವಾಗಿ ನಳಿನ್ ಹೆಸರನ್ನು ಶಿಫಾರಸು ಮಾಡಿದ್ದ ಬಗ್ಗೆ ಸಿಟ್ಟುಗೊಂಡ ರಾಮ ಭಟ್ಟರು ನೇರವಾಗಿ ವಾಗ್ದಾಳಿ ನಡೆಸಿದ್ದರು. ಅಲ್ಲದೆ, ನಳಿನ್ ಕುಮಾರ್ ಅಭ್ಯರ್ಥಿಯಾದರೇ ತಾನೇ ಪಕ್ಷೇತರ ಸ್ಪರ್ಧಿಸುತ್ತೇನೆಂದು ಚುನಾವಣಾ ಕಣಕ್ಕೆ ಧುಮುಕಿದ್ದರು.

ಉರಿಮಜಲು ರಾಮ ಭಟ್ಟರು ಕೂಡ ಕಲ್ಲಡ್ಕ ಭಟ್ಟರ ರೀತಿಯಲ್ಲೇ ಪ್ರಖರ ಹಿಂದುತ್ವದ ಭಾಷಣಕಾರ. ಮೊದಲೇ ಸ್ವಾಭಿಮಾನಿಯಾಗಿದ್ದ ರಾಮ ಭಟ್ಟರು ಪಕ್ಷೇತರ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಹಬ್ಬುತ್ತಲೇ ಈ ಸಲ ಬಿಜೆಪಿಗೆ ಗೆಲುವು ಕಷ್ಟ ಎಂದೇ ಮಾತುಗಳು ಬಂದಿದ್ದವು. ಕೇಂದ್ರದಲ್ಲಿ ಯುಪಿಎ ಸರಕಾರ ಇರುವುದು ಮತ್ತು ಕರಾವಳಿ ಕಾಂಗ್ರೆಸ್ ಪಾಲಿಗೆ ದೊಡ್ಡ ನಾಯಕರಾಗಿದ್ದ ಬಿಲ್ಲವ ಸಮುದಾಯದ ಜನಾರ್ದನ ಪೂಜಾರಿ ಎದುರಾಳಿಯಾಗಿ ಕಣಕ್ಕೆ ಇಳಿದಿದ್ದು ಕಾಂಗ್ರೆಸ್ 18 ವರ್ಷಗಳ ಬಳಿಕ ದಕ್ಷಿಣ ಕನ್ನಡ ಲೋಕಸಭೆ ಗೆಲ್ಲುತ್ತದೆ ಎನ್ನುವ ಭಾವನೆ ಜನರಲ್ಲಿ ಬಂದಿತ್ತು. ಆದರೆ ಕಲ್ಲಡ್ಕ ಭಟ್ಟರು ರಾಜಕಾರಣಿಯಲ್ಲದಿದ್ದರೂ, ತುಂಬ ಚಾಣಾಕ್ಷ. ಆರೆಸ್ಸೆಸ್ ಸೂಚನೆ ಎನ್ನುವ ಸಂದೇಶವನ್ನು ಇಡೀ ಜಿಲ್ಲೆಯ ಸಂಘ ಪರಿವಾರಕ್ಕೆ ರವಾನೆ ಮಾಡಿದ್ದರು. ಎಷ್ಟೇ ಕಷ್ಟವಾದರೂ, ಪರಿವಾರದ ಎಲ್ಲರೂ ಫೀಲ್ಡಿಗೆ ಇಳಿಯಲೇಬೇಕು, ರಾತ್ರಿ- ಹಗಲೆನ್ನದೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕೆಂದು ಸೂಚನೆ ಕೊಟ್ಟಿದ್ದರು.

ಒಂದ್ಕಡೆ ಪ್ರಚಾರ ಸಮಿತಿ ರೆಡಿಯಾಯ್ತು. ಮತ್ತೊಂದು ಕಡೆ ಪ್ರಮುಖ ಭಾಷಣಕಾರರನ್ನು ಮುಂಚೂಣಿಗೆ ತಂದು ಪ್ರಚಾರಕ್ಕೆ ಇಳಿಸಿದರು. ಸುನಿಲ್ ಕುಮಾರ್, ಪ್ರತಾಪಸಿಂಹ ನಾಯಕ್, ಕ್ರಿಸ್ತಿಯನ್ ಆಗಿದ್ದರೂ, ಆರೆಸ್ಸೆಸ್ ಗರಡಿಯಲ್ಲಿ ಪಳಗಿದ್ದ ಫ್ರಾಂಕ್ಲಿನ್ ಮೊಂತೇರೊ, ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ ಎಲ್ಲರೂ ಒಟ್ಟಾಗಿದ್ದರು. ಬೆಳ್ತಂಗಡಿಯಲ್ಲಿ ಕುಶಾಲಪ್ಪ ಗೌಡ, ಶಾರದಾ ರೈ, ಪ್ರಭಾಕರ ಬಂಗೇರ, ಬಂಟ್ವಾಳದಲ್ಲಿ ನಾಗರಾಜ ಶೆಟ್ಟಿ, ದೇವದಾಸ ಶೆಟ್ಟಿ, ಪುತ್ತೂರಿನಲ್ಲಿ ಪ್ರಸಾದ್ ಭಂಡಾರಿ, ಮಲ್ಲಿಕಾ ಪ್ರಸಾದ್, ಸುರತ್ಕಲ್ ನಲ್ಲಿ ಕುಂಬ್ಲೆ ಸುಂದರ ರಾವ್, ಮಂಗಳೂರಿನಲ್ಲಿ ಯೋಗೀಶ್ ಭಟ್ ಸೇರಿದಂತೆ ಆರೆಸ್ಸೆಸ್ ಪ್ರಮುಖರೆಲ್ಲ ಚುನಾವಣೆ ಕಾರ್ಯಕ್ಕೆ ಇಳಿದರು. ಬಾಂಜಾರುಮಲೆಯಂತಹ ರಸ್ತೆಯೇ ಇಲ್ಲದ ಕುಗ್ರಾಮಕ್ಕೂ ರಾತ್ರಿ ವೇಳೆ ನಡೆದು ತೆರಳಿದ್ದ ಬಿಜೆಪಿ ಪ್ರಮುಖರು, ಅಲ್ಲಿನ ಜನರನ್ನೂ ಮನವೊಲಿಸಿದ್ದರು. ತೊಕ್ಕೊಟ್ಟಿನಲ್ಲಿ ಪ್ರಚಾರ ಮಾಡುತ್ತಿದ್ದಾಗಲೇ ಕಾರಿನಿಂದ ಇಳಿಯುತ್ತಿದ್ದ ಜನಾರ್ದನ ಪೂಜಾರಿ ಬಳಿ ತೆರಳಿದ್ದ ನಳಿನ್ ಕುಮಾರ್ ನೇರವಾಗಿ ಕಾಲಿಗೆ ಬಿದ್ದು ಆಶೀರ್ವಾದ ಕೇಳಿದ್ದರು. ಈ ಫೋಟೊ ಮರುದಿನ ಪತ್ರಿಕೆಯಲ್ಲಿ ಬಂದು ಅಹಂ ಇಲ್ಲದ ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ ಎನ್ನುವ ಸಂದೇಶ ಹರಡುವಂತೆ ಮಾಡಿತ್ತು.

ಕಾಲಿಗೆ ಚಕ್ರ ಕಟ್ಟಿಕೊಂಡ ರೀತಿಯಲ್ಲಿ ನಳಿನ್ ಕುಮಾರ್ ಮಾಡಿದ ಪ್ರಚಾರ, ಜೊತೆಗಿದ್ದವರ ಪ್ರಖರ ಹಿಂದುತ್ವದ ಭಾಷಣಗಳು ಮತದಾನ ಹತ್ತಿರ ಬರುತ್ತಿದ್ದಂತೆ ಜನರ ಭಾವನೆಯನ್ನು ಬದಲು ಮಾಡಿತ್ತು. ಉರಿಮಜಲು ರಾಮ ಭಟ್ಟರ ಉಗ್ರ ಭಾಷಣ ಪುತ್ತೂರಿಗೆ ಸೀಮಿತಗೊಳ್ಳುವಂತೆ ಮಾಡಿತ್ತು. ಅಂದು, ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರು, ನಾಯಕರೆಲ್ಲ ಕೆಲಸ ಮಾಡಿದ್ದು ಅಭ್ಯರ್ಥಿ ನಳಿನ್ ಕುಮಾರ್ ಅಂತ ಆಗಿರಲಿಲ್ಲ. ಅಭ್ಯರ್ಥಿ ನಾನೇ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿ ಎಲ್ಲರನ್ನೂ ಫೀಲ್ಡಿಗೆ ಇಳಿಸಿದ್ದರು. ಆ ಕಾರಣದಿಂದ ರಾಮ ಭಟ್ ವಿರುದ್ಧ ಕಲ್ಲಡ್ಕ ಭಟ್ಟರ ತಿರುಗುಬಾಣದ ಪ್ರಯೋಗ ಯಶಸ್ವಿಯಾಗಿ ವರ್ಕೌಟ್ ಆಗಿತ್ತು. ಜನಾರ್ದನ ಪೂಜಾರಿ ತಮ್ಮ ನಿಷ್ಠುರ ಮಾತುಗಳ ಮಧ್ಯೆ ಮುಸ್ಲಿಮರ ಪರವಾಗಿ ನೀಡುತ್ತಿದ್ದ ಹೇಳಿಕೆಗಳನ್ನು ಮುಂದಿಟ್ಟು ಕಾಂಗ್ರೆಸನ್ನು ಹಣಿಯುವಂತೆ ಮಾಡಿದ್ದರು.

ಕೊನೆಗೆ, ನಳಿನ್ ಕುಮಾರ್ 4,99,385 ಮತಗಳನ್ನು ಪಡೆದರೆ, ಜನಾರ್ದನ ಪೂಜಾರಿ 4,58,965 ಮತಗಳನ್ನು ಪಡೆದಿದ್ದರು. ಎದುರಾಳಿಯಾಗಿದ್ದ ರಾಮ ಭಟ್ಟರು ಕೇವಲ 5960 ಮತಗಳನ್ನು ಗಳಿಸಿದ್ದರೆ, ಸುಳ್ಯ ಭಾಗದಲ್ಲಿ ಸ್ವತಂತ್ರ ಸ್ಪರ್ಧಿಸಿದ್ದ ಸುಬ್ರಹ್ಮಣ್ಯ ಕುಮಾರ್ ಕುಂಟಿಕಾನಮಠ 8932 ಮತ ಗಳಿಸಿದ್ದರು. ಸಿಪಿಎಂನಿಂದ ಸ್ಪರ್ಧಿಸಿದ್ದ ಬಿ. ಮಾಧವ 18,328 ಮತ ಪಡೆದಿದ್ದರು. ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಪುತ್ತೂರಿನ ಆಲೆಕ್ಕಾಡಿ ಗಿರೀಶ್ ರೈ 10,196 ಮತಗಳನ್ನು ಪಡೆದಿದ್ದರು. ಸುದ್ದಿ ಬಿಡುಗಡೆ ಪತ್ರಿಕೆಯ ಡಾ.ಯು.ಪಿ. ಶಿವಾನಂದ 4825 ಮತಗಳನ್ನು ಗಳಿಸಿದ್ದರು. ಕಣದಲ್ಲಿದ್ದ 11 ಮಂದಿಯಲ್ಲಿ ಏಳು ಮಂದಿ ಪಕ್ಷೇತರ ಸ್ಪರ್ಧಿಸಿದ್ದು, ಎಲ್ಲರೂ 3-4 ಸಾವಿರಕ್ಕಿಂತ ಹೆಚ್ಚು ಮತ ಗಳಿಸಿದ್ದು ವಿಶೇಷವಾಗಿತ್ತು. ನಳಿನ್ ಕುಮಾರ್ ದಿಢೀರ್ ಲಕ್ ಹೊಡೆದ ರೀತಿ ಸ್ಪರ್ಧಿಸಿ 40,420 ಮತಗಳಿಂದ ಗೆದ್ದು ಮೊದಲ ಬಾರಿಗೆ ಸಂಸದರಾಗಿದ್ದರು.

Political report on the 2009 MP elections in Dakshina Kannada, Who is Ram Bhat? why did he go against Kalladka Prabhakar Bhat, how Nalin Kateel became Mp. Nalin Kumar was then General Secretary of BJP Dakshina Kannada District Committee. A year before the elections, the Brahmakalashotsava of the Kateelu temple was held and he was the president of it, so the name of Nalin Kumar came to a little publicity in Mangalore and Mulki, but there was no Khadar in the district.