Mangalore News, Bunts and Billava, Fake ID; ಬಂಟ- ಬಿಲ್ಲವರನ್ನು ಎತ್ತಿಕಟ್ಟಲು ಜಾಲತಾಣದಲ್ಲಿ ಫೇಕ್ ಐಡಿ ಬಳಕೆ ; ಚುನಾವಣೆ ಹೊತ್ತಲ್ಲಿ ಕಿಡಿಗೇಡಿ ಕೃತ್ಯ, ಸೈಬರ್ ಠಾಣೆಗೆ ದೂರು  

11-04-24 04:58 pm       Mangaluru Correspondent   ಕರಾವಳಿ

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರನ್ನು ಜಾತಿ ಹೆಸರಲ್ಲಿ ಎತ್ತಿಕಟ್ಟಲು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದಾರೆ.

ಮಂಗಳೂರು, ಎ.11: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರನ್ನು ಜಾತಿ ಹೆಸರಲ್ಲಿ ಎತ್ತಿಕಟ್ಟಲು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದಾರೆ. ಫೇಕ್ ಐಡಿ ಸೃಷ್ಟಿಸಿ ಬಿಲ್ಲವರನ್ನು ಅಣಕಿಸುವ ರೀತಿ, ಬಂಟರ ವಿರುದ್ಧ ಎತ್ತಿಕಟ್ಟುವ ರೀತಿ ಪೋಸ್ಟ್ ಹಾಕುತ್ತಿರುವುದು ಕಂಡುಬಂದಿದ್ದು, ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಸೈಬರ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

ದುಬೈನಲ್ಲಿ ಕುಳಿತು ಈ ರೀತಿ ಹಿಂದುಗಳ ನಡುವೆ ಬಿರುಕುವ ಮೂಡಿಸುವ ಯತ್ನ ಮಾಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ನಾವು ಪೊಲೀಸ್ ದೂರು ನೀಡುತ್ತೇವೆ ಎಂದು ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ತಿಳಿಸಿದ್ದಾರೆ.

ಫೇಸ್ಬುಕ್ ನಲ್ಲಿ ಕಮೆಂಟ್ ಮಾಡುವ ಬಿಲ್ಲವರನ್ನು, ಒಂದು ಕಾಲದಲ್ಲಿ ಜೀತ ಮಾಡುತ್ತಿದ್ದವರು ಈಗ ಅಧಿಕಾರ ಕೇಳುವ ಹಂತಕ್ಕೆ ಬಂದಿದ್ದಾರೆ. ದೇವಸ್ಥಾನ ಪ್ರವೇಶವೇ ಇಲ್ಲದ ಸಮುದಾಯ. ಇವರು ದೇವಸ್ಥಾನ ನೋಡಿದ್ದು ಯಾವಾಗ ಎಂದು ಜಯಕರ್ ಶೆಟ್ಟಿ ಶೆಟ್ಟಿ ಎಂಬ ಹೆಸರುಳ್ಳ ಫೇಕ್ ಐಡಿಯಲ್ಲಿ ಪ್ರಶ್ನೆ ಮಾಡಲಾಗಿದೆ. ಆತನ ಪ್ರೊಫೈಲ್ ಫೋಟೋದಲ್ಲಿ ಬಿಜೆಪಿ ಅಭ್ಯರ್ಥಿಯ ಫೋಟೋ ಹಾಕಿದ್ದು, ಉದ್ದೇಶಪೂರ್ವಕವಾಗಿ ಬಿಲ್ಲವರನ್ನು ಕೆಣಕುವ ಕೃತ್ಯ ಮಾಡಿದ್ದಾರೆ.

ಇನ್ನೊಂದು ಶ್ವೇತಾ ಶೆಟ್ಟಿ ಶೆಟ್ಟಿ ಹೆಸರಿನ ಫೇಕ್ ಐಡಿಯಲ್ಲಿ ಬಿಲ್ಲವರನ್ನು ಅಣಕಿಸಿ ಕಮೆಂಟ್ ಮಾಡಲಾಗಿದೆ. ಕಾರ್ತಿಕ್ ಗಣೇಶ್ ಶೆಟ್ಟಿ ಹೆಸರಿನ ಮತ್ತೊಂದು ಫೇಕ್ ಐಡಿಯಲ್ಲೂ ಬಿಲ್ಲವರನ್ನು ಕೆಣಕಿ, ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಹೀಯಾಳಿಸಿ ಕಮೆಂಟ್ ಹಾಕಲಾಗಿದೆ. ಇವರ ಕಮೆಂಟ್ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಂಟ- ಬಿಲ್ಲವ ಜಾತಿ ನಡುವೆ ಕಂದಕ ಸೃಷ್ಟಿಸಲು ಕಾರಣವಾಗಿದೆ. ವಿರೋಧಿಗಳು ಇದೇ ಕಮೆಂಟ್ ಗಳನ್ನು ವೈರಲ್ ಮಾಡಿಸಿ, ಬಿಲ್ಲವರನ್ನು ಎತ್ತಿಕಟ್ಟಲು ಬಳಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಯುವಮೋರ್ಚಾ ನಾಯಕರು ಹೇಳುತ್ತಾರೆ.

A case has been filed at the Mangalore cybercrime police station about the creation of fake social media accounts in the names of the Bunts and Billava communities, with the intention of inciting conflict between the two communities.