Mangalore Yesuraj, AEO, Kukke Subrahmanya Temple: ಕುಕ್ಕೆ ಸುಬ್ರಹ್ಮಣ್ಯಕ್ಕೆ ಎಇಓ ಆಗಿ ಯೇಸುರಾಜ್ ನೇಮಕ ; ಹಿಂದು ಸಂಘಟನೆಗಳ ಆಕ್ಷೇಪಕ್ಕೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ, ಕ್ರಿಶ್ಚಿಯನ್ ಧರ್ಮದ ವ್ಯಕ್ತಿಯಲ್ಲ..!  

02-05-24 02:24 pm       Mangalore Correspondent   ಕರಾವಳಿ

ರಾಜ್ಯದ ಮುಜರಾಯಿ ಇಲಾಖೆಗೊಳಪಟ್ಟ ಶ್ರೀಮಂತ ದೇಗುಲ ಎಂದು ಹೆಸರಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಎಸ್.ಜೆ. ಯೇಸುರಾಜ್ ಎಂಬವರನ್ನು ನೇಮಕ ಮಾಡಲಾಗಿತ್ತು.

ಮಂಗಳೂರು, ಮೇ.2: ರಾಜ್ಯದ ಮುಜರಾಯಿ ಇಲಾಖೆಗೊಳಪಟ್ಟ ಶ್ರೀಮಂತ ದೇಗುಲ ಎಂದು ಹೆಸರಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಎಸ್.ಜೆ. ಯೇಸುರಾಜ್ ಎಂಬವರನ್ನು ನೇಮಕ ಮಾಡಲಾಗಿತ್ತು. ರಾಮನಗರ ಜಿಲ್ಲಾ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೇಸುರಾಜ್ ಅವರನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಎಇಓ ಆಗಿ ನೇಮಕ ಮಾಡಿರುವುದು ಚರ್ಚೆಗೂ ಕಾರಣವಾಗಿತ್ತು.

ಯೇಸುರಾಜ್ ಎನ್ನುವ ಹೆಸರಿನ ಕಾರಣಕ್ಕೆ ಅನ್ಯ ಧರ್ಮದವರನ್ನು ಹಿಂದುಗಳ ದೇವಸ್ಥಾನಕ್ಕೆ ನೇಮಕ ಮಾಡಿದ್ದಾರೆಂದು ಹಿಂದು ಸಂಘಟನೆಗಳ ನಾಯಕರು ಆಕ್ಷೇಪಿಸಿದ್ದರು. ಅವರ ಧರ್ಮದ ಹಿನ್ನೆಲೆಯ ಬಗ್ಗೆ ಪ್ರಶ್ನೆಯನ್ನೂ ಮಾಡಿದ್ದರು. ಈ ವಿಚಾರ ಆಕ್ಷೇಪಕ್ಕೆ ಗುರಿಯಾದ ಬೆನ್ನಲ್ಲೇ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದು, ಯೇಸುರಾಜ್ ಅವರ ಹಿನ್ನೆಲೆ, ಗೋತ್ರಗಳ ದಾಖಲೆಯನ್ನು ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

ಯೇಸುರಾಜ್ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಚುನಾವಣೆ ಹೊತ್ತಲ್ಲಿ ಬಿಜೆಪಿಯ ಮತ್ತೊಂದು ಸುಳ್ಳು ಸುದ್ದಿ ಹಬ್ಬಿಸುವ ವಾಟ್ಸಪ್ ಫೇಕ್ ಯುನಿವರ್ಸಿಟಿಯ ಆಟವಾಗಿದೆ. ಯೇಸುರಾಜ್ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ದಾಖಲೆಗಳು ಇಲ್ಲಿವೆ ಎಂದು ಅವುಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಇನ್ನೊಂದು ಹಂತದ ಚುನಾವಣೆ ಇರುವುದರಿಂದ ಜರನ್ನು ದಾರಿ ತಪ್ಪಿಸಿ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಇದೆಂದು ಟೀಕಿಸಿದ್ದಾರೆ.

ಮೈಸೂರು ಜಿಲ್ಲೆಯ ಸಿದ್ಧಾರ್ಥ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್ ನಲ್ಲಿ ಪರಿಶಿಷ್ಟ ಜಾತಿಯೆಂದು ನಮೂದಾಗಿರುವ ದಾಖಲೆ, ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕು ಕೃಷ್ಣರಾಜನಗರ ವಾರ್ಡ್ ನಿವಾಸಿಯಾಗಿರುವ ಎಸ್.ಜೆ. ಯೇಸುದಾಸ್ ಅವರಿಗೆ ಕಂದಾಯ ಇಲಾಖೆ ನೀಡಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸಚಿವ ರಾಮಲಿಂಗಾರೆಡ್ಡಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಹಿಂದು, ಪರಿಶಿಷ್ಟ ಜಾತಿಯೆಂದು ನಮೂದಾಗಿರುವುದನ್ನು ತೋರಿಸಲಾಗಿದೆ. ಆಮೂಲಕ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ವ್ಯಕ್ತಿಯಲ್ಲ ಎಂಬುದನ್ನು ಸಚಿವರು ತೋರಿಸಿದ್ದಾರೆ.

ಎರಡು ದಿನಗಳ ಹಿಂದೆ ಎಸ್.ಜೆ ಯೇಸುರಾಜ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಪ್ರಭಾರ ಎಇಓ ಆಗಿದ್ದ ಪರಮೇಶ್ ಅಧಿಕಾರ ಹಸ್ತಾಂತರ ಮಾಡಿದ್ದರೆ, ದೇವಳದ ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರು ಸ್ವಾಗತಿಸಿದ್ದರು. ಇದರ ಬಗ್ಗೆ ಪತ್ರಿಕೆಯಲ್ಲಿ ಬಂದ ಸುದ್ದಿ ತುಣುಕನ್ನು ಮುಂದಿಟ್ಟು ಹಿಂದು ಸಂಘಟನೆಗಳು ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದು ಭಾರೀ ವೈರಲ್ ಆಗಿತ್ತು.

Mangalore Yesuraj appointed as the new AEO of Shri Kukke Subrahmanya Temple sparks controversy, government says he's not a Christian but a Hindu.