ರೈಲು ನಿಲ್ದಾಣದಲ್ಲಿ ಆಟೋ ಚಾಲಕರ ಜಟಾಪಟಿ, ಪ್ರಯಾಣಿಕರ ಜೊತೆಗೆ ತಳ್ಳಾಟ, ಅಸಭ್ಯ ವರ್ತನೆ, ವಿಡಿಯೋ ವೈರಲ್ 

08-05-24 03:20 pm       Mangalore Correspondent   ಕರಾವಳಿ

ನಗರದ ಹಂಪನಕಟ್ಟೆ ಬಳಿಯ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಆಟೋ ಚಾಲಕರು ಮತ್ತು ರೈಲು ಪ್ರಯಾಣಿಕರ ಮಧ್ಯೆ ಹೊಯ್ ಕೈ ನಡೆದಿದ್ದು ತಳ್ಳಾಟ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಮಂಗಳೂರು, ಮೇ 8: ನಗರದ ಹಂಪನಕಟ್ಟೆ ಬಳಿಯ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಆಟೋ ಚಾಲಕರು ಮತ್ತು ರೈಲು ಪ್ರಯಾಣಿಕರ ಮಧ್ಯೆ ಹೊಯ್ ಕೈ ನಡೆದಿದ್ದು ತಳ್ಳಾಟ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮಹಿಳೆಯರು ಎಂಬುದನ್ನೂ ಗಮನಿಸದೆ ಆಟೋ ಚಾಲಕರು ಅಸಭ್ಯವಾಗಿ ವರ್ತಿಸಿದ್ದಾರೆಂಬ ಆಕ್ಷೇಪ ಕೇಳಿಬಂದಿದೆ. 

ಸೆಂಟ್ರಲ್ ರೈಲ್ವೇ ನಿಲ್ದಾಣದ ಹೊರಗೆ ವಾಗ್ವಾದ ಘಟನೆ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಂಗಳವಾರ ಬೆಳಗ್ಗೆ ಚೆನ್ನೈನಿಂದ ದಂಪತಿ ಬಂದಿದ್ದು, ಅವರನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯಲು ಇಬ್ಬರು ಬಂದಿದ್ದರು. ರೈಲ್ವೇ ನಿಲ್ದಾಣದಲ್ಲಿ ನಿಗದಿತ ಸ್ಥಳಗಳಲ್ಲಿ ಮಾತ್ರ ವಾಹನ ಪಾರ್ಕಿಂಗ್ ಮಾಡಬೇಕು. ನಿಲ್ದಾಣದ ಮುಂದಿನ ಮುಖ್ಯ ಗೇಟ್‌ ಬಳಿ ಪಿಕಪ್ ಮತ್ತು ಡ್ರಾಪ್ ಗೆ ಮಾತ್ರ ಅನುಮತಿಯಿದ್ದು ಖಾಲಿ ವಾಹನ ತರುವುದಕ್ಕೆ ಅವಕಾಶ ಇಲ್ಲ. 

ಇದೇ ವಿಚಾರದಲ್ಲಿ ರೈಲು ಪ್ರಯಾಣಿಕರನ್ನು ಕರೆದೊಯ್ಯಲು ಬಂದಿದ್ದ ಇಬ್ಬರು ಮತ್ತು ಪಾರ್ಕಿಂಗ್ ನೋಡಿಕೊಳ್ಳುವ ಚಂದನ್ ಎಂಬ ವ್ಯಕ್ತಿ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ, ಪಾರ್ಕಿಂಗ್ ನೋಡಿಕೊಳ್ಳುವ ಚಂದನ್ ಪರವಾಗಿ ಆಟೋರಿಕ್ಷಾ ಚಾಲಕರು ಮಧ್ಯಪ್ರವೇಶಿಸಿದ್ದಾರೆ. ಆನಂತರ ವಾಗ್ವಾದ ತಾರಕಕ್ಕೇರಿದ್ದು, ಪ್ರಯಾಣಿಕರ ಜೊತೆಗೆ ಆಟೋ ಚಾಲಕರು ಜಗಳ ನಡೆಸಿದ್ದಾರೆ. ಹೊಡೆದಾಟದ ವಿಡಿಯೋ ಸಾರ್ವಜನಿಕರ ಮೊಬೈಲಿನಲ್ಲಿ ಸೆರೆಯಾಗಿದೆ. 

ಈ ಬಗ್ಗೆ ಪೊಲೀಸ್ - ಮಾಧ್ಯಮ ವಾಟ್ಸಪ್ ಗ್ರೂಪಿನಲ್ಲಿ ಪ್ರತಿಕ್ರಿಯೆ ಹಾಕಿರುವ ಮಂಗಳೂರು ಪೊಲೀಸ್ ಕಮಿಷನರ್, ಆಟೋ ಚಾಲಕರ ಗುರುತು ಪತ್ತೆಹಚ್ಚಲಾಗಿದೆ. ಪ್ರಯಾಣಿಕರ ಗುರುತನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಈ ವಿಷಯದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Fight between auto drivers and passenger go viral in Mangalore railway station over parking issues.