Thumbe reservoir, Mangalore: ತುಂಬೆ ಡ್ಯಾಮಿನಲ್ಲಿ ಎಂಟು ವರ್ಷದಲ್ಲೇ ಅತಿ ಕೆಳಮಟ್ಟಕ್ಕೆ ನೀರು ಇಳಿಕೆ ; ಮಳೆ ಬಾರದಿದ್ದರೆ ಮಂಗಳೂರಿಗೆ ನೀರು ಕಡಿತ 

11-05-24 12:25 pm       Mangalore Correspondent   ಕರಾವಳಿ

ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ಎಂಟು ವರ್ಷದಲ್ಲೇ ಅತಿ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಡ್ಯಾಮ್ ನಲ್ಲಿ ಶುಕ್ರವಾರ ನೀರಿನ ಮಟ್ಟ 3.86 ಮೀಟರ್ ಗೆ ಇಳಿದಿದ್ದು ಮಳೆ ಬಾರದೇ ಇದ್ದರೆ ನೀರು ಪೂರೈಕೆ ಕಡಿತಗೊಳ್ಳುವ ಸಾಧ್ಯತೆಯಿದೆ.

ಮಂಗಳೂರು, ಮೇ.11: ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ಎಂಟು ವರ್ಷದಲ್ಲೇ ಅತಿ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಡ್ಯಾಮ್ ನಲ್ಲಿ ಶುಕ್ರವಾರ ನೀರಿನ ಮಟ್ಟ 3.86 ಮೀಟರ್ ಗೆ ಇಳಿದಿದ್ದು ಮಳೆ ಬಾರದೇ ಇದ್ದರೆ ನೀರು ಪೂರೈಕೆ ಕಡಿತಗೊಳ್ಳುವ ಸಾಧ್ಯತೆಯಿದೆ. 

ಮೇ ತಿಂಗಳ ಹೊತ್ತಿಗೆ ಪ್ರತಿ ವರ್ಷ ಒಂದೆರಡು ಬಾರಿ ಮುಂಗಾರು ಪೂರ್ವ ಮಳೆ ಬಂದು ನೀರಿನ ಮಟ್ಟ ಏರಿಕೆಯಾಗುತ್ತಿತ್ತು. ಈ ಬಾರಿ ಕೆಲವು ಕಡೆ ಮಳೆಯಾದರೂ ತುಂಬೆಯಲ್ಲಿ ನೀರು ಹೆಚ್ಚುವಷ್ಟು ಮಳೆ ಆಗಿಲ್ಲ. ಹೀಗಾಗಿ ಮಂಗಳೂರಿಗೆ ನೀರುಣಿಸಲು ಮಹಾನಗರ ಪಾಲಿಕೆ ಹೆಣಗಾಡುತ್ತಿದ್ದು ಕೆಳಭಾಗದ ಅಡ್ಯಾರ್ ನಲ್ಲಿ ಹೊಸತಾಗಿ ಮಾಡಿರುವ ಅಣೆಕಟ್ಟಿನಿಂದ ನೀರನ್ನು ಏಳು ಪಂಪ್ ಗಳ ಮೂಲಕ ಮೇಲಕ್ಕೆ ಎತ್ತಿ ಡ್ಯಾಮಿಗೆ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. 

ಈ ಹಿಂದಿನ ದಾಖಲೆಗಳನ್ನು ನೋಡಿದರೆ, 2017ರಲ್ಲಿ ಮೇ 10ರಂದು ತುಂಬೆ ಡ್ಯಾಮ್ ನಲ್ಲಿ 4.84 ಮೀ., 2018ರಲ್ಲಿ 5.86 ಮೀಟರ್, 2019ರಲ್ಲಿ 4.14 ಮೀಟರ್, 2020ರಲ್ಲಿ 4.93 ಮೀಟರ್, 2021ರಲ್ಲಿ 6 ಮೀಟರ್, 2022 ರಲ್ಲಿ 6 ಮೀ., 2023 ರಲ್ಲಿ 3.88 ಮೀಟರ್, 2024 ರಲ್ಲಿ 3.86 ಮೀಟರ್ ಗೆ ನೀರಿನ ಮಟ್ಟ ಇಳಿಕೆಯಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಸಲ 0.2 ಮೀಟರ್ ನಷ್ಟು ಕಡಿಮೆಯಾಗಿದ್ದು ಮಳೆ ಬಾರದಿದ್ದರೆ ಕುಡಿಯುವ ನೀರಿಗೆ ತೊಂದರೆ ಎದುರಾಗಬಹುದು. 

ಒಂದು ವಾರದಿಂದ ಮಂಗಳೂರಿಗೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಜೊತೆಗೆ, ನೀರು ತಲುಪದೇ ಇರುವ ಅಪಾರ್ಟ್ಮೆಂಟ್, ಹೊಟೇಲ್ ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಡ್ಯಾಮ್ ನಲ್ಲಿ ಅಡಿಭಾಗದ ಮೂರು ಮೀಟರ್ ವರೆಗೆ ಕೆಸರು ತುಂಬಿಕೊಂಡಿರುವುದರಿಂದ ಬಿಸಿಲಿನ ಧಗೆಯಿಂದಾಗಿ ಇದಕ್ಕಿಂತ ಹೆಚ್ಚು ನೀರು ಕೆಳಗಿಳಿದರೆ ಪಂಪಿಂಗ್ ಕೂಡ ಕಷ್ಟವಾಗಬಹುದು. ಒಂದೆರಡು ವಾರ ನೀರನ್ನು ಅತ್ಯಂತ ಮಿತವಾಗಿ ಬಳಸಿ ಉಳಿಸಿಕೊಳ್ಳುವುದಷ್ಟೇ ಸದ್ಯಕ್ಕೆ ಉಳಿದಿರುವ ದಾರಿ.

The district administration and the Mangaluru City Corporation have decided to introduce water rationing in the city, as water levels in the city's only water source, the Thumbe reservoir, has fallen, officials have said.