Mangalore NIA, Terror, Ammar Abdul Rahiman, Idinabba: ಐಸಿಸ್ ನಂಟು ; ಮಾಜಿ ಶಾಸಕ ಇದಿನಬ್ಬ ಮೊಮ್ಮಗನಿಗೆ ದೆಹಲಿ ಹೈಕೋರ್ಟ್ ಜಾಮೀನು, ಐಸಿಸ್ ಬಾವುಟ, ಕರಪತ್ರ ಮೊಬೈಲಿನಲ್ಲಿ ಇದೆ ಎಂದ ಮಾತ್ರಕ್ಕೆ ಉಗ್ರನಾಗಲ್ಲ! 

16-05-24 05:38 pm       Mangalore Correspondent   ಕರಾವಳಿ

ಉಳ್ಳಾಲದ ಮಾಜಿ ಶಾಸಕ ದಿ.ಇದಿನಬ್ಬ ಅವರ ಮೊಮ್ಮಗ, ಐಸಿಸ್ ನಂಟು ಆರೋಪದಲ್ಲಿ ಬಂಧಿತನಾಗಿದ್ದ ಅಮ್ಮರ್ ಅಬ್ದುಲ್ ರೆಹಮಾನ್ ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.

ಮಂಗಳೂರು, ಮೇ.16: ಉಳ್ಳಾಲದ ಮಾಜಿ ಶಾಸಕ ದಿ.ಇದಿನಬ್ಬ ಅವರ ಮೊಮ್ಮಗ, ಐಸಿಸ್ ನಂಟು ಆರೋಪದಲ್ಲಿ ಬಂಧಿತನಾಗಿದ್ದ ಅಮ್ಮರ್ ಅಬ್ದುಲ್ ರೆಹಮಾನ್ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.

2021ರ ಆಗಸ್ಟ್ 21ರಂದು ಐಸಿಸ್ ನಂಟಿನ ಆರೋಪದಡಿ ರೆಹಮಾನ್ ನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಆದರೆ ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದ ಅಬ್ದುಲ್ ರೆಹಮಾನ್ ಗೆ ಸುದೀರ್ಘ ವಿಚಾರಣೆ ಬಳಿಕ ಜಾಮೀನು ಸಿಕ್ಕಿದೆ. ಜಾಮೀನು ಆದೇಶದಲ್ಲಿ ಆತನ ವಕೀಲರು ವಾದಿಸಿದ ಅಂಶಗಳನ್ನು ಕೋರ್ಟ್ ಉಲ್ಲೇಖಿಸಿದೆ. 

'ಐಸಿಸ್ ಬಾವುಟ, ಕರಪತ್ರ ಮೊಬೈಲ್ ನಲ್ಲಿದೆ ಎಂದ ಮಾತ್ರಕ್ಕೆ ಉಗ್ರವಾದಿ ಸಂಘಟನೆಯ ಬೆಂಬಲಿಗ ಎನ್ನುವುದಕ್ಕೆ ಸಾಧ್ಯವಿಲ್ಲ. ಉಗ್ರ ಸಂಘಟನೆ ಜೊತೆಗಿನ ಆಕರ್ಷಣೆಯನ್ನೂ ಉಗ್ರರ ನಂಟು ಎನ್ನುವುದಕ್ಕೆ ಆಗಲ್ಲ. ಐಸಿಸ್ ಪರ ವಿಡಿಯೋ ಡೌನ್ ಲೋಡ್ ಮಾಡಿಕೊಂಡಿರುವುದು, ಮತೀಯ ಪ್ರಚಾರಕರ ಭಾಷಣ ಆಲಿಸೋದನ್ನು ಯುಎಪಿಎ ಕಾಯ್ದೆಯಡಿ ತರುವುದಕ್ಕೆ ಆಗಲ್ಲ. ಈ ಸಾಕ್ಷ್ಯ ಬಳಸಿ ಯುಎಪಿಎ ಸೆಕ್ಷನ್ 38 ಮತ್ತು 39 ರಡಿ ಆರೋಪ ಹೊರಿಸುವುದು ಸರಿಯಲ್ಲ.'

ಅಲ್ಲದೆ, ಆರೋಪಿ ಮೊಬೈಲ್ ನಲ್ಲಿ ಲಾಡೆನ್, ಐಸಿಸ್ ಬಾವುಟಗಳು, ಐಸಿಸ್ ಪರ ಭಾಷಣಗಳ ತುಣುಕು ಸಿಕ್ಕಿದೆ ಎಂದ ಮಾತ್ರಕ್ಕೆ ಆತನಿಗೆ ಐಸಿಸ್ ನಂಟಿದೆ ಎನ್ನಲಾಗಲ್ಲ. ಇವೆಲ್ಲ ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ ನೆಟ್ ನಲ್ಲಿ ಸುಲಭದಲ್ಲಿ ಸಿಗುವಂಥದ್ದು. ಕುತೂಹಲ ಇರುವ ಯಾರು ಬೇಕಾದರೂ ‌ಮೊಬೈಲ್, ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಬಹುದು‌. ಹಾಗಾಗಿ ಇದನ್ನು ಇಟ್ಟುಕೊಂಡು ಐಸಿಸ್ ನಂಟನ್ನು ಸಾಬೀತು ಪಡಿಸಲು ಆಗಲ್ಲ ಎಂಬ ಆತನ ಪರ ವಕೀಲ ನಿತ್ಯಾ ರಾಮಕೃಷ್ಣ ಮತ್ತು ತಂಡದ ವಾದವನ್ನು ಕೋರ್ಟ್ ಪುರಸ್ಕರಿಸಿದ್ದು ಷರತ್ತಿನ ಜಾಮೀನು ನೀಡಿ ಮಹತ್ವದ ತೀರ್ಪು ನೀಡಿದೆ. 

ಪ್ರಕರಣ ಸಂಬಂಧಿಸಿ ಹತ್ತಕ್ಕೂ ಹೆಚ್ಚು ಮಂದಿ ವಿರುದ್ದ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿತ್ತು. ಅಮ್ಮರ್ ಅಬ್ದುಲ್ ರೆಹಮಾನ್ ಜೊತೆಗೆ ಆತನ ಪತ್ನಿ ದೀಪ್ತಿ ಮರಿಯಂಳನ್ನೂ ಎನ್ ಎಐ ಬಂಧಿಸಿತ್ತು. 2022ರ ಜನವರಿ 4 ರಂದು ಮಂಗಳೂರಿನ ಉಳ್ಳಾಲದಲ್ಲಿ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂಳನ್ನು ಬಂಧಿಸಲಾಗಿತ್ತು. ಇದಿನಬ್ಬ ಮೊಮ್ಮಗ ಅಬ್ದುಲ್ ರೆಹಮಾನ್ ಬಂಧನದ ಆರು ತಿಂಗಳ ಬಳಿಕ ದೀಪ್ತಿ ಮರಿಯಂ ಬಂಧಿಸಲಾಗಿತ್ತು. ಕೊಡಗು ಮೂಲದ ದೀಪ್ತಿ ಮಾರ್ಲ ಎಂಬ ಹಿಂದು ಯುವತಿ ಮಂಗಳೂರಿನಲ್ಲಿ ಮೆಡಿಕಲ್ ಕಲಿಯುತ್ತಿದ್ದಾಗ ರೆಹಮಾನ್ ಪರಿಚಯ ಪ್ರೇಮಕ್ಕೆ ತಿರುಗಿ ಮದುವೆಯಾಗಿ ಮತಾಂತರ ಆಗಿದ್ದಳು. ಬಳಿಕ ಐಸಿಸ್ ಪರವಾಗಿ ಚಟುವಟಿಕೆ ನಡೆಸುತ್ತಿದ್ದಳು ಎಂಬ ಆರೋಪ ಕೇಳಿಬಂದಿತ್ತು.

Delhi HC grants bail to grandson of late Mangalore Congress MLA Idinabba in UAPA case to ISIS supporter Ammar Abdul Rahiman in a case under the anti-terror law UAPA, saying his 'fascination' with the banned terrorist organisation cannot be dubbed as his association with it