MLC Bhoje Gowda in Mangalore: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತರ ಕರ್ನಾಟಕದಲ್ಲಿ ಸಾಮೂಹಿಕ ನಕಲು, ಈ ಬಾರಿ ನೈಜ ಫಲಿತಾಂಶ ಬಂದಿದೆ ; ನಕಲು ಒಪ್ಪಿಕೊಂಡ ಎಂಎಲ್ಸಿ ಭೋಜೇಗೌಡ 

19-05-24 04:11 pm       Mangalore Correspondent   ಕರಾವಳಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಾಮೂಹಿಕ ನಕಲು ಆಗುತ್ತಿರುವುದನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಒಪ್ಪಿಕೊಂಡಿದ್ದಾರೆ.

ಮಂಗಳೂರು, ಮೇ 19: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಾಮೂಹಿಕ ನಕಲು ಆಗುತ್ತಿರುವುದನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಒಪ್ಪಿಕೊಂಡಿದ್ದಾರೆ. ಈ ಬಾರಿ ನೈಜ ಫಲಿತಾಂಶ ಬಂದಿದ್ದು, ಮುಂದಿನ ಅಧಿವೇಶನದಲ್ಲಿ ಸಾಮೂಹಿಕ ನಕಲು ಬಗ್ಗೆ ಕ್ರಮ ಜರುಗಿಸಲು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ವಿಧಾನ ಪರಿಷತ್ ಚುನಾವಣೆ ಸಲುವಾಗಿ ಸುದ್ದಿಗೋಷ್ಠಿ ನಡೆಸಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಕಲು ಆಗುತ್ತಿರುವ ಶಂಕೆಯಲ್ಲಿ ಪರೀಕ್ಷಾ ಕೊಠಡಿಗಳಿಗೆ ಸಿಸಿಕ್ಯಾಮೆರಾ ಅಳವಡಿಸಬೇಕೆಂದು ಪರಿಷತ್ತಿನಲ್ಲಿ ಆಗ್ರಹ ಮಾಡಿದ್ದೆವು. ಹಾಗಾಗಿ, ಈ ಬಾರಿ ಸರಕಾರ ಪರೀಕ್ಷಾ ಹಾಲ್ ಗಳಲ್ಲಿ ಸಿಸಿ ಕ್ಯಾಮೆರಾ ಇಟ್ಟು ನಿಗಾ ವಹಿಸಲಾಗಿತ್ತು. ಇದರಿಂದಾಗಿ ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಬಂದಿದೆ. ಇದು ಶಾಲಾ ಮಕ್ಕಳ ಕಲಿಕೆಯ ನೈಜ ಫಲಿತಾಂಶವನ್ನು ತೋರಿಸಿದೆ ಎಂದು ಹೇಳಿದರು.

ಸಾಮೂಹಿಕ ನಕಲು ಆಗುತ್ತಿರುವ ಬಗ್ಗೆ ಇತ್ತೀಚೆಗೆ ಶಾಸಕ ಪ್ರದೀಪ್ ಈಶ್ವರ್ ಕೂಡ ಹೇಳಿದ್ದರು. ನೀವು ಯಾಕೆ ಇದರ ಬಗ್ಗೆ ಸರಕಾರದಿಂದ ತನಿಖೆ ಮಾಡಿಸಿಲ್ಲ ಎಂದು ಕೇಳಿದ ಪ್ರಶ್ನೆಗೆ, ನಾವು ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ದರಿಂದ ಈ ಸಲ ಕಟ್ಟುನಿಟ್ಟು ಆಗಿದೆ. ನೈಜ ಫಲಿತಾಂಶ ಬಂದಿದೆ ಎಂದರು.

ನೀವು ಆರು ವರ್ಷಗಳಿಂದ ಶಾಸಕರಾಗಿದ್ದೀರಿ, ಈಗ ಕಾಂಗ್ರೆಸ್ ಸರಕಾರ ಬಂದ ಬಳಿಕ ನೀವು ಈ ಒತ್ತಾಯ ಮಾಡಿದ್ದೇ ಎಂದು ಪ್ರಶ್ನೆ ಹಾಕಿದ್ದಕ್ಕೆ, ಅವರಲ್ಲಿ ಉತ್ತರ ಇರಲಿಲ್ಲ. ಏಳೆಂಟು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಏರಿಳಿತ ಆಗಿದೆ, ಚಿಕ್ಕೋಡಿ, ಚಿತ್ರದುರ್ಗ ಪ್ರಥಮ ಸ್ಥಾನಿಯಾದ ಉದಾಹರಣೆ ಇದೆ, ಅಲ್ಲಿ ಸಾಮೂಹಿಕ ನಕಲು ಮಾಡಿದ್ದರ ಬಗ್ಗೆ ಕ್ರಮ ಆಗಬೇಕಲ್ವಾ ಎಂದು ಪ್ರಶ್ನೆ ಮಾಡಿದಾಗ, ನಾವು ಅದರ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇವೆ. ಯಾರು ತಪ್ಪಿತಸ್ಥರಿದ್ದಾರೋ, ಅವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರಿನಲ್ಲಿ ನೀವು ಬಿಜೆಪಿ ವಿರುದ್ಧ ಕಾಂಗ್ರೆಸಿಗೆ ಓಟ್ ಹಾಕುವಂತೆ ಬಹಿರಂಗ ಹೇಳಿಕೆ ಕೊಟ್ಟಿದ್ದೀರಲ್ಲಾ, ಈ ಬಾರಿ ಅದು ತೊಂದರೆ ಆಗಲ್ಲವೇ. ಬಿಜೆಪಿ ಕಾರ್ಯಕರ್ತರು ವಿರೋಧಿಸುತ್ತಿದ್ದಾರಲ್ಲವೇ ಎಂದು ಕೇಳಿದ ಪ್ರಶ್ನೆಗೆ, ಈ ಪ್ರಶ್ನೆಗೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಆ ಬಗ್ಗೆ ಬಿಜೆಪಿ ನಾಯಕರ ಜೊತೆ ಕ್ಲಾರಿಫೈ ಮಾಡಿಕೊಂಡಿದ್ದೇನೆ. ಈಗ ಹಳೆಯದನ್ನು ಕೆದಕುವುದಕ್ಕೆ ಹೋಗಲ್ಲ. ಈ ಹೊತ್ತಿನಲ್ಲಿ ಅದೆಲ್ಲ ಅನಗತ್ಯ ಎಂದರು.

Mass Copying in North Karnataka in SSSC Exam, MLC Bhoje Gowda in Mangalore