MLA Harish Poonja, Bail, Belthangady: ಹಗಲಿನ ಹೈಡ್ರಾಮಾ ಬಳಿಕ ರಾತ್ರಿ ವೇಳೆ ಠಾಣೆಗೆ ಹಾಜರಾದ ಹರೀಶ್ ಪೂಂಜ ; ಠಾಣೆಯಲ್ಲೇ ವಿಚಾರಣೆ- ಜಾಮೀನು, ಪಕ್ಷದ ನಾಯಕರನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಪ್ರಕರಣ 

22-05-24 10:58 pm       Mangalore Correspondent   ಕರಾವಳಿ

ದಿನವಿಡೀ ಪ್ರತಿಭಟನೆ, ಹೈಡ್ರಾಮಾ ನಾಟಕದ ಬಳಿಕ ರಾತ್ರಿ ವೇಳೆಗೆ ಶಾಸಕ ಹರೀಶ್ ಪೂಂಜ ವಕೀಲರು ಮತ್ತು ಪಕ್ಷದ ನಾಯಕರ ಜೊತೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

ಮಂಗಳೂರು, ಮೇ.22: ದಿನವಿಡೀ ಪ್ರತಿಭಟನೆ, ಹೈಡ್ರಾಮಾ ನಾಟಕದ ಬಳಿಕ ರಾತ್ರಿ ವೇಳೆಗೆ ಶಾಸಕ ಹರೀಶ್ ಪೂಂಜ ವಕೀಲರು ಮತ್ತು ಪಕ್ಷದ ನಾಯಕರ ಜೊತೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ರಾತ್ರಿ 9.30ಕ್ಕೆ ಜಿಲ್ಲೆಯ ಇತರ ಬಿಜೆಪಿ ಶಾಸಕರು, ವಕೀಲರು ಮತ್ತು ಇತರ ನಾಯಕರ ಜೊತೆಗೆ ಪೂಂಜ ಠಾಣೆಗೆ ಹಾಜರಾಗಿದ್ದು, ವಿಚಾರಣೆ ಎದುರಿಸಿದ್ದಾರೆ. 

ಸಂಜೆ ವೇಳೆಗೆ ತಾನೇ ಖುದ್ದಾಗಿ ಶಾಸಕರನ್ನು ಪೊಲೀಸ್ ಠಾಣೆಗೆ ಕರೆತರುವುದಾಗಿ ಸಂಸದ ನಳಿನ್ ಕುಮಾರ್ ಹೇಳಿದ್ದರಿಂದ ಪೊಲೀಸರು ಠಾಣೆಗೆ ಹಿಂತಿರುಗಿದ್ದರು.‌ ಅದರಂತೆ, ಸಂಸದರ ಸೂಚನೆಯಂತೆ ಬಿಜೆಪಿ ನಾಯಕರ ಜೊತೆಗೆ ಶಾಸಕ ಹರೀಶ್ ಪೂಂಜ ಬೆಳ್ತಂಗಡಿ ಠಾಣೆಗೆ ಬಂದಿದ್ದು ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರೆ. 

ಬೆಳ್ತಂಗಡಿ ಠಾಣೆಯಲ್ಲಿ ಶಾಸಕ ಪೂಂಜ ವಿರುದ್ಧ ಎರಡು ಎಫ್ಐಆರ್ ದಾಖಲಾಗಿದ್ದು ಅದರ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪ್ರತಿಭಟನೆ ಸಭೆಯಲ್ಲಿ ಪೊಲೀಸರಿಗೆ ನಿಂದಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ  ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಶನ್ ಜಮೀನಿನಲ್ಲಿ ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾ ಎಸ್ಪಿ ರಿಷ್ಯಂತ್ ಸಿಂಗ್ ರಾತ್ರಿ  10.45ಕ್ಕೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಶಾಸಕ ಹರೀಶ್ ಪೂಂಜ, ಕಾರ್ಯಕರ್ತರ ಕಾರಣಕ್ಕೆ ಪೊಲೀಸರ ಕಾಲರ್ ಪಟ್ಟಿ ಹಿಡಿಯುತ್ತೇನೆ ಎಂದಿದ್ದರು.ಅಲ್ಲದೆ, ಅಕ್ರಮ ಕಲ್ಲು ಕೋರೆ ಪ್ರಕರಣದಲ್ಲಿ ಠಾಣೆಗೆ ನುಗ್ಗಿ ಪೊಲೀಸರಿಗೂ ಬೆದರಿಕೆ ಹಾಕಿದ್ದರು. ಪ್ರಕರಣ ನೆಪದಲ್ಲಿ ಶಾಸಕರನ್ನು ವಶಕ್ಕೆ ಪಡೆದು ಠಾಣೆಗೆ ಒಯ್ಯಲು ಪೊಲೀಸರು ಬಂದಿದ್ದರು. ಆದರೆ ಮನೆಯ ಆವರಣದಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಶಾಸಕರ ಬಂಧನಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ರಂಪ ಮಾಡಿದ್ದರು. ಇದೀಗ ಒಂದು ಪ್ರಕರಣದಲ್ಲಿ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದ್ದಾರೆ. ಮತ್ತೊಂದು ಪ್ರಕರಣದ ಬಗ್ಗೆ ವಿಚಾರಣೆಗೆ ಮತ್ತೆ ಬರುವಂತೆ ಕರೆಯುವ ಸಾಧ್ಯತೆಯಿದೆ.

Police to investigate MLA Harish poonja full night over making threats to the police at Belthangady. Nalin Kateel who convinced the police of getting poonja to the station is now in the process of enuiry.