Mangalore, Harish Acharya, election: ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ಹರೀಶ್ ಆಚಾರ್ಯ ; ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮ ಜಾರಿಗೆ ಖಾಸಗಿ ಬಿಲ್, ಕಾಯ್ದೆ ಜಾರಿಗೆ ರಾಜ್ಯವ್ಯಾಪಿ ಹಕ್ಕೊತ್ತಾಯ

30-05-24 08:49 pm       Mangalore Correspondent   ಕರಾವಳಿ

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷೇತರ ಸ್ಪರ್ಧಿಸಿರುವ ಸಹಕಾರಿ ಕ್ಷೇತ್ರದ ಮುಖಂಡ ಎಸ್.ಆರ್.ಹರೀಶ್ ಆಚಾರ್ಯ ಚುನಾವಣೆಗೆ ನಾಲ್ಕು ದಿನ ಇರುವಾಗ ಸಂಚಲನ ಸೃಷ್ಟಿಸಿದ್ದಾರೆ.

ಮಂಗಳೂರು, ಮೇ 30: ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷೇತರ ಸ್ಪರ್ಧಿಸಿರುವ ಸಹಕಾರಿ ಕ್ಷೇತ್ರದ ಮುಖಂಡ ಎಸ್.ಆರ್.ಹರೀಶ್ ಆಚಾರ್ಯ ಚುನಾವಣೆಗೆ ನಾಲ್ಕು ದಿನ ಇರುವಾಗ ಸಂಚಲನ ಸೃಷ್ಟಿಸಿದ್ದಾರೆ. ಖಾಸಗಿ ಮತ್ತು ಸರಕಾರಿ ಶಾಲೆ, ಕಾಲೇಜು ಶಿಕ್ಷಕರ ಸಮಸ್ಯೆಗಳಿಗೆಲ್ಲ ಉತ್ತರ ಎಂಬಂತೆ ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮ ಕಾಯ್ದೆ ಜಾರಿಗಾಗಿ ವಿಧಾನ ಪರಿಷತ್ತಿನಲ್ಲಿ ಖಾಸಗಿ ಮಸೂದೆ ಮಂಡಿಸಿ ರಾಜ್ಯವ್ಯಾಪ್ತಿ ಹಕ್ಕೊತ್ತಾಯ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಶಾಲೆ, ಕಾಲೇಜುಗಳಲ್ಲಿ ಕಳೆದ 15-20 ವರ್ಷಗಳಲ್ಲಿ ಸರಿಯಾಗಿ ನೇಮಕಾತಿ ಆಗದೇ ಅತಿಥಿ ಶಿಕ್ಷಕರಿಂದಲೇ ಶಿಕ್ಷಣ ಸಂಸ್ಥೆ ನಡೆಯುವಂತಹ ಸ್ಥಿತಿಯಿದೆ. ಅವರಿಗೆ ಸೂಕ್ತ ವೇತನ, ಸೌಲಭ್ಯ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಶಿಕ್ಷಣವನ್ನು ಸೇವೆಯೆಂದು ಪರಿಗಣಿಸುವ ಬದಲು ಬೇರೆ ಇತರೇ ನೌಕರಿ ರೀತಿ ನೋಡುವ ದೃಷ್ಟಿ ಬಂದಿದೆ. ಈ ಬಗ್ಗೆ ಆರು ತಿಂಗಳು ಮೊದಲೇ ಶಿಕ್ಷಣ ತಜ್ಞರು, ಶಿಕ್ಷಣ ಸಂಘಟನೆಗಳ ಪ್ರಮುಖರು ಮತ್ತು ಕಾನೂನು ತಜ್ಞರ ಸಲಹೆ ಪಡೆದು ಶಿಕ್ಷಕರ ಸಮಸ್ಯೆಗಳಿಗೆ ಅಂತ್ಯ ಹಾಡಲು ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮ ಜಾರಿಗೆ ತರುವ ಬಗ್ಗೆ ರೂಪುರೇಷೆ ಸಿದ್ಧಪಡಿಸಿದ್ದೇನೆ. ವಿಧಾನ ಪರಿಷತ್ತಿನಲ್ಲಿ ಆಯ್ಕೆಯಾಗಿ ಬಂದರೆ, ಶಿಕ್ಷಕರ ಸೇವಾ ಅಧಿನಿಯಮದ ಮಸೂದೆಯನ್ನು ಮಂಡಿಸಿ ಜಾರಿಗೆ ತರುವ ಹೊಣೆ ಹೊರುತ್ತೇನೆ ಎಂದು ಸುದ್ದಿಗೋಷ್ಟಿಯಲ್ಲಿ ಹರೀಶ್ ಆಚಾರ್ಯ ತಿಳಿಸಿದ್ದಾರೆ.

ಶಿಕ್ಷಕರು ಇತರೇ ವೃತ್ತಿಗಳ ರೀತಿ ಯಂತ್ರಗಳಂತೆ ಕೆಲಸ ಮಾಡುವುದಲ್ಲ. ಅವರದ್ದು ಸೇವಾ ಮನೋಭಾವದ ವೃತ್ತಿ. ನೇಮಕಗೊಂಡ ಮಾತ್ರಕ್ಕೆ ಶಿಕ್ಷಕರಾಗಲ್ಲ. ಒಬ್ಬ ಸಮರ್ಥ ಶಿಕ್ಷಕನಾಗಲು ಐದಾರು ವರ್ಷ ಬೇಕಾಗುತ್ತದೆ. ಭವಿಷ್ಯದ ಪ್ರಜೆಗಳನ್ನು ರೂಪಿಸುವ ಅತ್ಯಂತ ಮಹತ್ತರ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ. ಆದರೆ, ಸರಕಾರಗಳ ಅಸಡ್ಡೆಯಿಂದಾಗಿ ಶಿಕ್ಷಕರಿಗೆ ಸೇವಾ ಭದ್ರತೆಯಿಲ್ಲ. ಕನಿಷ್ಠ ವೇತನದ ಕಾಯ್ದೆ ಮಿತಿ ಇಲ್ಲ. 11 ತಿಂಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಸಿ, ಅವರ ಭವಿಷ್ಯಕ್ಕೆ ಖಾತರಿ ಇರದ ಸ್ಥಿತಿಯಿದೆ. ಇಂತಹ ಅಭದ್ರ ಸ್ಥಿತಿಯನ್ನು ಹೋಗಲಾಡಿಸಲು ಶಿಕ್ಷಕರ ಸೇವಾ ಅಧಿನಿಯಮದ ಕಾಯ್ದೆ ಜಾರಿಗೊಳ್ಳಬೇಕಾಗಿದೆ.

ಶಿಕ್ಷಕ ಸೇವಾ ಅಧಿನಿಯಮದಲ್ಲಿ ಏನಿದೆ ?

ಈ ನಿಯಮದ ಪ್ರಕಾರ, ಖಾಸಗಿ ಶಾಲೆ, ಕಾಲೇಜಿನ ಅತಿಥಿ ಉಪನ್ಯಾಸಕರ ಕನಿಷ್ಠ ವೇತನವು ಆ ಹುದ್ದೆಗೆ ಸರಕಾರ ನಿಗದಿಪಡಿಸಿದ ಮೂಲ ವೇತನವಾಗಿರತಕ್ಕದ್ದು. ಮಹಿಳಾ ಶಿಕ್ಷಕರಿಗೆ ವಾರ್ಷಿಕ 15 ಸಾಂದರ್ಭಿಕ ರಜೆಗಳ ಜೊತೆಗೆ ಹೆಚ್ಚುವರಿ 5 ಸಾಂದರ್ಭಿಕ ರಜೆಗಳನ್ನು ನೀಡತಕ್ಕದ್ದು. ಶಿಕ್ಷಕರ ಗುತ್ತಿಗೆ ಆಧಾರದ ನೇಮಕಾತಿಯು 11 ತಿಂಗಳ ಬದಲಾಗಿ ಕನಿಷ್ಠ 36 ತಿಂಗಳ ವರೆಗೆ ಇರಬೇಕು. ಎಲ್ಲ ಗುತ್ತಿಗೆ ಆಧರಿತ ಶಿಕ್ಷಕರಿಗೆ ಭವಿಷ್ಯ ನಿಧಿ ಮತ್ತು ಇಎಸ್ಐ ಸೌಲಭ್ಯಗಳನ್ನು ನೀಡತಕ್ಕದ್ದು. ಕಾಲಮಿತಿಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಖಾಯಂ ನೇಮಕಾತಿ ಸಂದರ್ಭದಲ್ಲಿ ಬೋಧನಾನುಭವ ಇರುವ ಅಭ್ಯರ್ಥಿಗಳಿಗೆ ವಾರ್ಷಿಕ ಕೃಪಾಂಕವನ್ನು ನೀಡುವುದರೊಂದಿಗೆ ವಯೋಮಿತಿಯಲ್ಲಿ ಸಡಿಲಿಕೆ ಮಾಡತಕ್ಕದ್ದು. ಸರಕಾರ ಜೀವವಿಮೆ ಹಾಗೂ ಆರೋಗ್ಯ ವಿಮೆಯನ್ನು ಕಡ್ಡಾಯ ಜಾರಿಗೊಳಿಸಬೇಕು. 15 ವರ್ಷ ಮೇಲ್ಪಟ್ಟು ಸೇವಾನುಭವ ಇರುವ ಗುತ್ತಿಗೆ ಶಿಕ್ಷಕರಿಗೆ ರೂ. 10 ಲಕ್ಷ ಭದ್ರತಾ ಠೇವಣಿ ಇಡತಕ್ಕದ್ದು. ಸಾರ್ವತ್ರಿಕ ಚುನಾವಣೆ ಹಾಗೂ ಅನ್ಯಕಾರ್ಯಗಳಿಗೆ ಶಿಕ್ಷಕರನ್ನು ಬಳಸುವಾಗ ಶೈಕ್ಷಣಿಕ ಕಾರ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು. ಶಿಕ್ಷಕರ ದಂಡನಾ ನಿಯಮಗಳು ಶಿಕ್ಷಕ ಸ್ನೇಹಿಯಾಗಿರಬೇಕು ಇತ್ಯಾದಿ ಅಂಶಗಳನ್ನು ಹರೀಶ್ ಆಚಾರ್ಯ ಪ್ರಸ್ತಾವಿತ ಮಸೂದೆಯಲ್ಲಿ ಪಟ್ಟಿ ಮಾಡಿದ್ದಾರೆ.

ಒಂದೇ ವರ್ಷದಲ್ಲಿ ಮಸೂದೆ ಜಾರಿ ಸಾಧ್ಯ

ಖಾಸಗಿ ಮಸೂದೆ ಮಂಡನೆಯನ್ನು ಸರಕಾರ ಒಪ್ಪಿಕೊಳ್ಳುತ್ತಾ, ಇದನ್ನು ಜಾರಿ ಮಾಡಲು ಸಾಧ್ಯವೇ ಎಂಬ ಪತ್ರಕರ್ತರ ಪ್ರಶ್ನೆಗೆ, ಈ ಮಸೂದೆಯನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸುತ್ತೇನೆ, ಅದು ನನ್ನ ಬದ್ಧತೆ. ಇದರ ಜೊತೆಗೆ, ಪರಿಷತ್ತಿನಲ್ಲಿ ಚರ್ಚೆ ಆಗುವಂತೆ ಮಾಡುತ್ತೇನೆ. ಇದು ಸಮಗ್ರ ಶಿಕ್ಷಕ ಸಮುದಾಯದ ಪರವಾಗಿ ಎತ್ತಿರುವ ಪ್ರಶ್ನೆ. ಅಲ್ಲದೆ, ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕರ ಮೂಲಭೂತ ಅಗತ್ಯದ ಪ್ರಶ್ನೆ. ರಾಜ್ಯವ್ಯಾಪಿ ಶಿಕ್ಷಕ ಸಮುದಾಯ ಈ ಮಸೂದೆ ಜಾರಿಗೆ ಒತ್ತಾಯಿಸಿ ಹಕ್ಕೊತ್ತಾಯ ನಡೆಸಿದರೆ, ಒಂದೇ ವರ್ಷದಲ್ಲಿ ಮಸೂದೆ ಜಾರಿಗೆ ಬರುತ್ತದೆ. ಯಾವುದೇ ಸರಕಾರ ಇದ್ದರೂ, ಇದನ್ನು ಜಾರಿಗೊಳಿಸುವ ಅನಿವಾರ್ಯತೆ ಎದುರಾಗುತ್ತದೆ ಎಂದರು.

ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕರೇ ಆಯ್ಕೆಯಾಗಬೇಕೇ ಎಂಬ ಪ್ರಶ್ನೆಗೆ, ಈ ಪ್ರಶ್ನೆ ಸಹಜ ಮತ್ತು ಅದೇ ರೀತಿ ಆಗಬೇಕು ಅನ್ನುವುದಕ್ಕೆ ನನ್ನ ಸಹಮತ ಇದೆ. ಆದರೆ, ಇದು ಪ್ರಾಯೋಗಿಕವಾಗಿ ಸಾಧ್ಯವಾಗುವುದಿಲ್ಲ. ಒಬ್ಬ ಶಿಕ್ಷಕ ವೃತ್ತಿಯಲ್ಲಿದ್ದು ಆರು ತಿಂಗಳ ಮೊದಲಿನಿಂದಲೇ ಚುನಾವಣೆಗಾಗಿ ಕೆಲಸ ಮಾಡುವುದಕ್ಕೆ ಇಲಾಖೆ ಅನುಮತಿ ಕೊಡುವುದಿಲ್ಲ. ಇದಕ್ಕಾಗಿ ಶಿಕ್ಷಕರ ಬಗ್ಗೆ ಕಾಳಜಿ ಇದ್ದವರನ್ನು ಆಯ್ಕೆ ಮಾಡಬೇಕು ಅನ್ನುವುದು ನನ್ನ ಕಳಕಳಿ ಎಂದು ಹರೀಶ್ ಆಚಾರ್ಯ ಹೇಳಿದರು. ಇದೇ ಪ್ರಶ್ನೆಗೆ ಉತ್ತರಿಸಿದ ಮಂಗಳೂರು ವಿವಿಯ ನಿವೃತ್ತ ಪ್ರೊಫೆಸರ್ ರವಿಶಂಕರ್ ರಾವ್, ಈ ಕ್ಷೇತ್ರದಲ್ಲಿ ಆಯ್ಕೆಗೆ ಶಿಕ್ಷಕರೇ ಆಗಬೇಕಂತಿಲ್ಲ. ಶಿಕ್ಷಕರ ಬಗ್ಗೆ ಕಾಳಜಿ ಇದ್ದವರು ಸಾಕು. ಹರೀಶ್ ಆಚಾರ್ಯ ಆ ಕಾಳಜಿಯನ್ನು ಹೊಂದಿದ್ದಾರೆ. ಶಿಕ್ಷಕರ ಸೇವಾ ಅಧಿನಿಯಮ ಜಾರಿಗೊಳಿಸಬೇಕು ಎನ್ನುವ ಬದ್ಧತೆ ಹೊಂದಿದ್ದಾರೆ. ಹಿಂದೆ ಸಂಸತ್ತಿನಲ್ಲಿ ಶಿಕ್ಷಣದ ಬಗ್ಗೆ ಪ್ರಶ್ನೆ ಎತ್ತಿದ್ದ ಆರ್.ಕೆ. ನಾರಾಯಣ್ ಶಿಕ್ಷಕರಾಗಿರಲಿಲ್ಲ. ಅವರು ಎತ್ತಿದ ಪ್ರಸ್ತಾವನೆ ಇಡೀ ದೇಶದಲ್ಲಿ ಜಾರಿಗೆ ಬಂದಿದೆ ಎಂದು ಉದಾಹರಿಸಿದರು. ಸುದ್ದಿಗೋಷ್ಟಿಯಲ್ಲಿ ಉಪನ್ಯಾಸಕಿ ಸರಿತಾ ಶೆಟ್ಟಿ, ಮಲ್ಲಿಕಾ ಉಪಸ್ಥಿತರಿದ್ದರು.

SR Harish Acharya, the leader of the cooperative sector, who is contesting as a non-party candidate in the South-West teachers' constituency, has created a stir with four days left for the elections. Answer to all the problems of private and government school and college teachers.