Mangalore Exit poll, Brijesh Chowta, congress Padmaraj, election: ದಕ್ಷಿಣ ಕನ್ನಡ ಲೋಕಸಭೆ ಗೆಲ್ಲೋದು ಯಾರು? ಬಿಜೆಪಿ ಬೂತ್ ಲೆಕ್ಕದಲ್ಲಿ ಸಿಕ್ಕ ಲೀಡ್ ಎಷ್ಟು? ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಪ್ಲಸ್- ಮೈನಸ್ ಅಂಶಗಳತ್ತ ಕಿರುನೋಟ, ‘ಗ್ಯಾರಂಟಿ’ ವಿಶ್ವಾಸದಲ್ಲಿ ಕಾಂಗ್ರೆಸ್ !

02-06-24 08:37 pm       Giridhar Shetty, HK, Mangaluru   ಕರಾವಳಿ

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರವೇ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ಹೇಳಿವೆ. ಕರ್ನಾಟಕದಲ್ಲಿಯೂ ಬಿಜೆಪಿ ಮೈತ್ರಿಕೂಟ 18 ಪ್ಲಸ್ ಸ್ಥಾನ ಗಳಿಸುವುದು ಗ್ಯಾರಂಟಿ ಎನ್ನುವ ಭವಿಷ್ಯ ಹೇಳುತ್ತಿವೆ.

ಮಂಗಳೂರು, ಜೂನ್ 1: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರವೇ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ಹೇಳಿವೆ. ಕರ್ನಾಟಕದಲ್ಲಿಯೂ ಬಿಜೆಪಿ ಮೈತ್ರಿಕೂಟ 18 ಪ್ಲಸ್ ಸ್ಥಾನ ಗಳಿಸುವುದು ಗ್ಯಾರಂಟಿ ಎನ್ನುವ ಭವಿಷ್ಯ ಹೇಳುತ್ತಿವೆ. ಆದರೆ, ಮತದಾರನ ನಿಜ ಭವಿಷ್ಯ ಮಾತ್ರ ಜೂನ್ 4ರಂದೇ ಗೊತ್ತಾಗಲಿದೆ. ಇತ್ತ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಕ್ಷೇತ್ರಗಳಲ್ಲಿ ಏನಾಗಬಹುದು ಎನ್ನುವ ಕುತೂಹಲ ಪ್ರತಿ ಮತದಾರನಲ್ಲಿದೆ. ಬಿಜೆಪಿ ಭದ್ರಕೋಟೆಗಳೆಂದೇ ಹೆಸರಾಗಿರುವ ಇವರೆಡು ಕ್ಷೇತ್ರಗಳಲ್ಲಿಯೂ ಬಿಜೆಪಿಯೇ ಗೆಲ್ಲುತ್ತದೆ ಎನ್ನುವುದು ಸದ್ಯದ ಸಮೀಕ್ಷಕಾರರ ಭವಿಷ್ಯ.

ಬಿಜೆಪಿ ಬೂತ್ ಲೆಕ್ಕಾಚಾರ ಏನು ?

ಈಗಾಗಲೇ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ಬಿಜೆಪಿಗೆ ಬಿದ್ದಿರುವ ಅಂದಾಜು ಮತಗಳನ್ನು ಲೆಕ್ಕ ಹಾಕಿದ್ದು, ಅದರ ಪ್ರಕಾರ ಅಭ್ಯರ್ಥಿಗೆ ಸಿಗಬಹುದಾದ ಒಟ್ಟು ಮತಗಳನ್ನು ದಕ್ಷಿಣ ಕನ್ನಡ ಬಿಜೆಪಿ ಲೆಕ್ಕ ಹಾಕಿದೆ. ಅದರ ಪ್ರಕಾರ, ಒಟ್ಟು 14,08226 ಮತ ಚಲಾವಣೆಯಾಗಿದ್ದು, ಈ ಪೈಕಿ 7,75,352 ಮತಗಳು ಬಿಜೆಪಿಗೆ ಮತ್ತು 6,06098 ಮತ ಕಾಂಗ್ರೆಸ್ ಅಭ್ಯರ್ಥಿಗೆ ಸಿಗಲಿವೆ. ಸುಮಾರು 1,69,254 ಮತಗಳಿಂದ ಬಿಜೆಪಿ ಗೆಲ್ಲಲಿದೆ ಎನ್ನುವುದು ಕಮಲ ಪಕ್ಷದ ಲೆಕ್ಕ. ಈ ಪೈಕಿ ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಎಷ್ಟು ಲೀಡ್ ಸಿಕ್ಕಿದೆ ಎನ್ನುವ ಮಾಹಿತಿಯನ್ನೂ ಬೂತ್ ಮತಗಳನ್ನು ಆಧರಿಸಿ ಬಿಜೆಪಿ ನಾಯಕರು ಕಲೆ ಹಾಕಿದ್ದಾರೆ.

Lok sabha elections 2024: Lok Sabha elections: How to cast your vote if you  live in a different city - The Economic Times

ವಿಧಾನಸಭೆ ಕ್ಷೇತ್ರಗಳಲ್ಲಿ ಬಿದ್ದ ಮತಗಳೆಷ್ಟು?

ಬೆಳ್ತಂಗಡಿ ಕ್ಷೇತ್ರದಲ್ಲಿ 1,89,289 ಮತ ಚಲಾವಣೆಯಾಗಿದ್ದು, ಈ ಪೈಕಿ 1,06357 ಬಿಜೆಪಿಗೆ, ಕಾಂಗ್ರೆಸಿಗೆ 76881 ಮತ ಬಿದ್ದಿದೆಯಂತೆ. ಮೂಡುಬಿದ್ರೆ ಕ್ಷೇತ್ರದಲ್ಲಿ 1,60,756 ಮತ ಚಲಾವಣೆಯಾಗಿದ್ದು, ಬಿಜೆಪಿಗೆ 95048 ಹಾಗೂ ಕಾಂಗ್ರೆಸಿಗೆ 64060 ಮತ ಬಿದ್ದಿದೆ ಎಂದು ಲೆಕ್ಕ ಹಾಕಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ 1,88,367 ಮತ ಚಲಾವಣೆಯಾಗಿದ್ದು, ಬಿಜೆಪಿಗೆ 1,11,312 ಮತ್ತು ಕಾಂಗ್ರೆಸಿಗೆ 72651 ಮತ ಬಿದ್ದಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 1,69,375 ಮತ ಚಲಾವಣೆಯಾಗಿದ್ದು 96,284 ಬಿಜೆಪಿ ಮತ್ತು 71620 ಕಾಂಗ್ರೆಸಿಗೆ ಬಿದ್ದಿದೆಯಂತೆ. ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ 1,64,672 ಮತ ಚಲಾವಣೆಗೊಂಡಿದ್ದು, ಬಿಜೆಪಿಗೆ 66450, ಕಾಂಗ್ರೆಸಿಗೆ 97165 ಮತ ಬಿದ್ದಿದೆ. ಬಂಟ್ವಾಳ ಕ್ಷೇತ್ರದಲ್ಲಿ 1,87291 ಮತ ಚಲಾವಣೆಯಾಗಿದ್ದು, 97800 ಬಿಜೆಪಿಗೆ ಮತ್ತು 85774 ಕಾಂಗ್ರೆಸ್ ಪಾಲಾಗಿದೆ. ಪುತ್ತೂರು ಕ್ಷೇತ್ರದಲ್ಲಿ ಒಟ್ಟು 1,75175 ಮತ ಚಲಾವಣೆ ಆಗಿದ್ದು, 98441 ಮತ ಬಿಜೆಪಿಗೆ ಮತ್ತು 73323 ಮತ ಕಾಂಗ್ರೆಸಿಗೆ ಸಿಕ್ಕಿದೆಯಂತೆ. ಸುಳ್ಯ ಕ್ಷೇತ್ರದಲ್ಲಿ 1,73301 ಮತ ಚಲಾವಣೆಗೊಂಡಿದ್ದು, ಈ ಪೈಕಿ ಬಿಜೆಪಿಗೆ 1,03660 ಹಾಗೂ ಕಾಂಗ್ರೆಸಿಗೆ 64,624 ಮತ ಬಿದ್ದಿದೆ ಎಂದು ಲೆಕ್ಕ ಹಾಕಿದೆ.

ಪ್ರತಿ ಕ್ಷೇತ್ರದಲ್ಲಿ ಸಿಕ್ಕ ಲೀಡ್ ಎಷ್ಟು ?

ವಿಧಾನಸಭೆ ಕ್ಷೇತ್ರವಾರು ನೋಡಿದರೆ, ಬೆಳ್ತಂಗಡಿ ಕ್ಷೇತ್ರದಲ್ಲಿ 29476 ಲೀಡ್, ಮೂಡುಬಿದ್ರೆಯಲ್ಲಿ 30,988, ಮಂಗಳೂರು ಉತ್ತರ ಕ್ಷೇತ್ರದಲ್ಲಿ 38661, ಮಂಗಳೂರು ದಕ್ಷಿಣದಲ್ಲಿ 24664, ಬಂಟ್ವಾಳ ಕ್ಷೇತ್ರದಲ್ಲಿ 12026, ಪುತ್ತೂರು ಕ್ಷೇತ್ರದಲ್ಲಿ 25118, ಸುಳ್ಯ ಕ್ಷೇತ್ರದಲ್ಲಿ 39036 ಮತ ಬಿಜೆಪಿಗೆ ಮುನ್ನಡೆ ಸಿಗಲಿದೆ. ಮುಸ್ಲಿಂ ಬಾಹುಳ್ಯದ ಮಂಗಳೂರು ವಿಧಾನಸಭೆ ಕ್ಷೇತ್ರದಲ್ಲಿ 30715 ಕಾಂಗ್ರೆಸಿಗೆ ಲೀಡ್ ಸಿಗಲಿದೆ ಎನ್ನುವುದು ದಕ್ಷಿಣ ಕನ್ನಡ ಬಿಜೆಪಿ ಲೆಕ್ಕಾಚಾರ. ಇದರಲ್ಲಿ ನೋಟಾ ಮತ್ತು ಜಾತಿವಾರು ಬಿದ್ದ ಮತಗಳ ಮಾಹಿತಿ ಇಲ್ಲ. ಸೌಜನ್ಯಾ ಪರ ನೋಟಾ ಅಭಿಯಾನ ಮತ್ತು ಬಿಲ್ಲವರ ಜಾತಿ ಲೆಕ್ಕಾಚಾರ ಈ ಸಲ ಚುನಾವಣೆ ಸಂದರ್ಭ ದೊಡ್ಡ ಸದ್ದು ಮಾಡಿತ್ತು. ಬಿಜೆಪಿ ನಾಯಕರ ಪ್ರಕಾರ, ನೋಟಾಗೆ ಹೆಚ್ಚೆಂದರೆ 15 ಸಾವಿರ ಮತ ಬೀಳಬಹುದು. ಜಾತಿ ಆಧರಿಸಿ ಬಿಲ್ಲವರಲ್ಲಿ ಹತ್ತು ಪರ್ಸೆಂಟ್ ಮತ ಕಾಂಗ್ರೆಸಿಗೆ ಹೋಗಿರಬಹುದು.

2019ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 2.70 ಲಕ್ಷ ಮತ ಬಿಜೆಪಿಗೆ ಲೀಡ್ ಸಿಕ್ಕಿತ್ತು. ಈ ಬಾರಿ ಎಸ್ಡಿಪಿಐ ಕಾಂಗ್ರೆಸಿಗೆ ಬೆಂಬಲ ನೀಡಿದ್ದು ಆ ಪಕ್ಷಕ್ಕೆ ಪ್ಲಸ್ ಪಾಯಿಂಟ್. ಎಸ್ಡಿಪಿಐ ಪಡೆಯಲಿದ್ದ ಸುಮಾರು 60 ಸಾವಿರ ಮತಗಳು ಕಾಂಗ್ರೆಸಿಗೆ ಬೀಳಬಹುದು. ಜೊತೆಗೆ, ಬಿಲ್ಲವರ ಜಾತಿ ವರ್ಕೌಟ್ ಒಂದಷ್ಟು ಮತಗಳನ್ನು ಕಾಂಗ್ರೆಸಿನತ್ತ ಬಾಚಿರಬಹುದು. ಇದರ ಜೊತೆಗೆ, ಕಾಂಗ್ರೆಸ್ ಸರಕಾರದ ಗ್ಯಾರಂಟಿ ಫಲಾನುಭವಿಗಳು, ಅದರಲ್ಲೂ ದೊಡ್ಡ ಗಾತ್ರದಲ್ಲಿ ಬಡ ಮತ್ತು ಮಧ್ಯಮ ವರ್ಗ ಮಹಿಳಾ ಮತದಾರರು ಕಾಂಗ್ರೆಸಿಗೆ ಮತ ಹಾಕಿರಬಹುದು ಎನ್ನುವ ಲೆಕ್ಕಾಚಾರವನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ. ಇದರ ಪ್ರಕಾರ, ಕಳೆದ ಬಾರಿಗಿಂತ ಎರಡು ಲಕ್ಷದಷ್ಟು ಹೆಚ್ಚು ಮತಗಳನ್ನು ಪಡೆಯುತ್ತೇವೆ. ಅಂದರೆ, ಗೆಲುವಿನ ಹತ್ತಿರದಷ್ಟು ಬರಲಿದ್ದೇವೆ ಎನ್ನುವುದು ಅವರ ಅಭಿಪ್ರಾಯ. ಹಾಗಾದಲ್ಲಿ ನಿಕಟ ಸ್ಪರ್ಧೆ ಎದುರಾಗಬಹುದು.

Lok Sabha elections: Congress to boycott exit poll debates - India Today

ಕಾಂಗ್ರೆಸಿಗೆ ತೊಡಕು ತಂದ ಅಂಶಗಳು

ಅಯೋಧ್ಯೆ ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ದೂರ ನಿಂತಿರುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವದ ಆಧಾರದಲ್ಲಿ ಮತ ಚಲಾಯಿಸುವ ಜನರು ಈ ಕಾರಣಕ್ಕೆ ಕಾಂಗ್ರೆಸಿಗೆ ಮತ ಹಾಕದಿರಬಹುದು. ಎರಡನೇ ಹಂತದ ಚುನಾವಣೆ ಸಂದರ್ಭದಲ್ಲೇ ಹುಬ್ಬಳ್ಳಿಯಲ್ಲಿ ನೇಹಾ ಎಂಬ ಯುವತಿ ಮುಸ್ಲಿಂ ಯುವಕನಿಂದ ಕೊಲೆಯಾಗಿದ್ದು ಹಿಂದುತ್ವ ಆಧರಿತ ಮತಗಳನ್ನು ಮತ್ತೆ ಕ್ರೋಡೀಕರಿಸುವಂತೆ ಮಾಡಿತ್ತು. ಜಾತಿ ಕಾರಣಕ್ಕೆ ಬಿಜೆಪಿಯಲ್ಲಿ ಸೈಲಂಟ್ ಆಗಿದ್ದ ಕೆಲವು ಬಿಲ್ಲವ ಕಾರ್ಯಕರ್ತರು ಹುಬ್ಬಳ್ಳಿ ಮರ್ಡರ್ ಬಳಿಕ ಫೀಲ್ಡಿಗೆ ಬಂದಿದ್ದರು ಅನ್ನುವ ಮಾಹಿತಿಯಿದೆ. ಹುಬ್ಬಳ್ಳಿ ಕೊಲೆಯ ಬಳಿಕ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಆಡಿದ್ದ ಮಾತೂ ಜಿಲ್ಲೆಯಲ್ಲಿ ಮೈನಸ್ ಆಗಿತ್ತು. ಗ್ಯಾರಂಟಿ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಕಳೆದ ವಿಧಾನಸಭೆ ಚುನಾವಣೆಯಲ್ಲೆ ಮತ ಹಾಕಿರಲಿಲ್ಲ. ಪುತ್ತೂರಿನಲ್ಲಿ ಬಿಜೆಪಿ, ಪುತ್ತಿಲ ಪರಿವಾರದ ಬಂಡಾಯದ ಕಾರಣಕ್ಕೆ ಕಾಂಗ್ರೆಸ್ ಗೆದ್ದಿದ್ದು ಬಿಟ್ಟರೆ ಪಕ್ಷದ ಕಾರಣದಿಂದ ಆಗಿರಲಿಲ್ಲ. ಚುನಾವಣೆಗೆ ಎರಡು ದಿನ ಇರುವಾಗ ಕಾಂಗ್ರೆಸ್ ಕಡೆಯಿಂದ ಬಂಟ ಬ್ರಿಗೇಡ್ ಎನ್ನುವ ಕರಪತ್ರ ವೈರಲ್ ಮಾಡಿಸಿದ್ದು ಬಂಟರನ್ನು ಕೆರಳುವಂತೆ ಮಾಡಿತ್ತು. ಕಾಂಗ್ರೆಸ್ ಬಿಲ್ಲವರನ್ನು ಹೈಲೈಟ್ ಮಾಡಿದ್ದು ಇತರೇ ಸಣ್ಣ ಜಾತಿಗಳ ಮತಗಳ ಧ್ರುವೀಕರಣಕ್ಕೆ ಕಾರಣವಾಗಿತ್ತು.

Mangalore Today | Latest main news of mangalore, udupi - Page Padmaraj-R-is- Congress-candidate-from-Dakshina-Kannada-LS-constituency

ಕಾಂಗ್ರೆಸ್ ಪ್ಲಸ್ ಪಾಯಿಂಟ್ ಏನಿತ್ತು ?

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಚುರುಕಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಜೊತೆಗೆ ಒಯ್ದಿದ್ದು ಪ್ಲಸ್ ಪಾಯಿಂಟ್. ಲೋಕಸಭೆ ಚುನಾವಣೆಯಲ್ಲಿ ಈ ಹಿಂದಿನ ಕಾಂಗ್ರೆಸ್ ಅಭ್ಯರ್ಥಿಗಳಿಗಿಂತ ಹೆಚ್ಚು ಪದ್ಮರಾಜ್ ಹವಾ ಎಬ್ಬಿಸಿದ್ದರು. ಜಿಲ್ಲಾ ಕಾಂಗ್ರೆಸ್ ನಾಯಕರು ಮಾತ್ರ ಆರಂಭದಿಂದಲೂ ಕಾಂಗ್ರೆಸ್ ಗೆಲ್ಲುತ್ತದೆ ಎನ್ನುವ ಭರವಸೆಯಲ್ಲಿ ಇರಲಿಲ್ಲ. ಆದರೆ ಕೊನೆಯ ಹತ್ತು ದಿನಗಳಲ್ಲಿ ಕ್ಷೇತ್ರದ ಚಿತ್ರಣ ಬದಲಾಗುವ ರೀತಿ ಕಾಂಗ್ರೆಸ್ ವರ್ಕೌಟ್ ಮಾಡಿತ್ತು. ಇಡೀ ಜಿಲ್ಲೆಯಲ್ಲಿ ಅಂದಾಜು 3 ಲಕ್ಷಕ್ಕಿಂತ ಹೆಚ್ಚು ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿ ಗೃಹಜ್ಯೋತಿ ಉಚಿತ ವಿದ್ಯುತ್ ಪಡೆದವರಿದ್ದಾರೆ ಎನ್ನುವುದು ಕಾಂಗ್ರೆಸ್ ಮಾಹಿತಿ. ಗ್ಯಾರಂಟಿ ಲಾಭ ಪಡೆದ ಋಣದಲ್ಲಿ ಬಡ, ಮಧ್ಯಮ ವರ್ಗ ಕಾಂಗ್ರೆಸಿಗೆ ಮತ ಹಾಕಿದ್ದರೆ, ಕ್ಷೇತ್ರದ ಚಿತ್ರಣ ಬದಲಾಗಬಹುದು.

Dakshina Kannada Lok Sabha constituency: BJP trying to retain its hold over  coastal seat for ninth consecutive term, Congress keen to bring back old  glory - The Hindu

ಬಿಜೆಪಿಗೆ ಮೈನಸ್ ಆಗಿದ್ದ ಅಂಶಗಳೇನು?

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಲ್ಲಿ ಒಡೆದ ಮನಸ್ಸುಗಳದ್ದೇ ಕಾರುಬಾರು ದೊಡ್ಡದಿತ್ತು. ಟಿಕೆಟ್ ತಪ್ಪಿದ ಕಾರಣಕ್ಕೆ ಸಂಸದ ನಳಿನ್ ಕುಮಾರ್ ಬೆಂಬಲಿಗರು ಸೈಲಂಟ್ ಆಗಿದ್ದರೆ, ಚುನಾವಣೆ ಮೊದಲೇ ಜಿಲ್ಲಾ ಬಿಜೆಪಿಯಲ್ಲಿ ಎರಡು ಬಣ ಸೃಷ್ಟಿಯಾಗಿತ್ತು. ಯುವಕರ ಬಳಗ, ಹಿರಿಯರ ಬಳಗ ಎನ್ನುವ ಎರಡು ತಂಡಗಳು ಒಳಗೊಳಗೆ ಹಾವು ಮುಂಗುಸಿಯಂತಿದ್ದರೂ, ಹೊರಗಡೆ ತೋರಿಸಿಕೊಳ್ಳದೆ ಜೊತೆ ಜೊತೆಯಾಗೇ ಚುನಾವಣೆ ಎದುರಿಸಿದ್ದರು. ಬಿಲ್ಲವರ ಮತಗಳನ್ನು ಚದುರಿಸಲೇಬೇಕೆಂದು ಒಂದು ಗುಂಪು ಬಿರುವೆರ್ ತಂಡದಿಂದ ಮತ್ತೆ ಮತ್ತೆ ಹೇಳಿಕೆ ಕೊಡಿಸಿತ್ತು. ಇದರಿಂದ ಒಡೆದ ಮನಸ್ಸುಗಳ ನಡುವಿನ ಬಿರುಕು ಮತ್ತಷ್ಟು ಹರಿದಿತ್ತು. ಸಂಘ ಪರಿವಾರದ ಸತ್ಯಜಿತ್ ಸುರತ್ಕಲ್ ನೇರವಾಗಿ ಬಿಲ್ಲವರಿಗೆ ಓಟು ಕೊಡುವಂತೆ ಹೇಳಿದ್ದೂ ಬಿಜೆಪಿಯಲ್ಲಿದ್ದ ಬಿಲ್ಲವರನ್ನು ಚದುರಿಸಲು ಪ್ರೇರಣೆಯಾಗಿತ್ತು. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಬಂದರೂ, ಬಿಜೆಪಿ ಪ್ರಚಾರ ಕಾರ್ಯ ಈ ಸಲ ಕಾವೇರಿದ ರೀತಿ ಇರಲಿಲ್ಲ.

Circulars : Regarding Good Governance Day | Bharatiya Janata Party

ಬಿಜೆಪಿಗೆ ಪ್ಲಸ್ ಆಗಿದ್ದ ಅಂಶಗಳ್ಯಾವುವು?

ಹಿಂದುತ್ವ ಮತ್ತು ಮೋದಿ ಹೆಸರಿನಲ್ಲಿ ಓಟು ಹಾಕುವುದು ಖಚಿತ ಎನ್ನಬಹುದಾದ ಕ್ಷೇತ್ರ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಬಿಟ್ಟರೆ ಮತ್ತೊಂದಿಲ್ಲ. ಸಂಘ ಪರಿವಾರದ ಗಟ್ಟಿ ನೆಲೆ ಇರುವುದು, ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆ ಗಟ್ಟಿಯಾಗಿರುವುದು ಇದಕ್ಕೆ ಕಾರಣ. ಈ ಬಾರಿ ಹಾಲಿ ಸಂಸದ ನಳಿನ್ ಕುಮಾರ್ ಬಗ್ಗೆ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಇರುವುದನ್ನು ಮನಗಂಡ ಪಕ್ಷದ ನಾಯಕರು, ಅಭ್ಯರ್ಥಿ ಬದಲಿಸಿದ್ದು ಪಕ್ಷದ ಪಾಲಿಗೆ ಪ್ಲಸ್ ಪಾಯಿಂಟ್. ಬಂಡಾಯ ಸಾರುವುದು ಖಚಿತ ಎಂದಿದ್ದ ಪುತ್ತಿಲ ಪರಿವಾರವೂ ಬಿಜೆಪಿ ಜೊತೆ ಕೈಜೋಡಿಸಿತ್ತು. ವಿದ್ಯಾವಂತ ಮತ್ತು ಸೇನಾ ಹಿನ್ನೆಲೆಯ ಕಳಂಕ ರಹಿತ ವ್ಯಕ್ತಿ ಬ್ರಿಜೇಶ್ ಚೌಟಗೆ ಟಿಕೆಟ್ ಕೊಟ್ಟಿರುವುದೂ ಪಕ್ಷಕ್ಕೆ ಪ್ಲಸ್ ಆಗಿತ್ತು. ಖುದ್ದು ಪ್ರಧಾನಿ ಮೋದಿ ಅವರೇ ಬಂದು ಪ್ರಚಾರ ನಡೆಸಿರುವುದು, ಟಿಕೆಟ್ ವಿಚಾರದಲ್ಲಿ ಪಕ್ಷದೊಳಗಡೆ ಅಸಮಾಧಾನ ಇದ್ದರೂ ನಾಯಕರು ಬಹಿರಂಗ ಹೇಳಿಕೆ ನೀಡದೆ ವಿವಾದಕ್ಕೆ ಆಸ್ಪದ ಕೊಡದಿರುವುದು ಪಕ್ಷದ ಪಾಲಿಗೆ ಪ್ಲಸ್ ಆಗಿತ್ತು.

Who will win the loksabha MP elections in Mangalore DK, BJP Brijesh Chowta or congress Padmaraj, exil poll by written by senior journalist of Headline Karnataka Giridhar Shetty.