ಬ್ರೇಕಿಂಗ್ ನ್ಯೂಸ್
17-07-24 05:35 pm Mangalore Correspondent ಕರಾವಳಿ
ಮಂಗಳೂರು, ಜುಲೈ.17: ಮಂಗಳೂರು ಭಾಗದ ರೈಲ್ವೇ ಅಭಿವೃದ್ಧಿ ಕುರಿತಾಗಿ ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರೈಲ್ವೇ ಅಧಿಕಾರಿಗಳು ಮತ್ತು ಸಂಸದರು, ಶಾಸಕರ ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪ್ರತ್ಯೇಕವಾಗಿರುವ ಕೊಂಕಣ ರೈಲ್ವೇಯನ್ನು ರೈಲ್ವೇ ಇಲಾಖೆಯ ಜೊತೆಗೆ ವಿಲೀನ ಮಾಡುವುದು ಮತ್ತು ಮಂಗಳೂರು ಪ್ರತ್ಯೇಕ ರೈಲ್ವೇ ವಲಯ ಮಾಡುವುದಕ್ಕೆ ಸಚಿವ ಸೋಮಣ್ಣ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಇದನ್ನು ಯಾವ ರೀತಿ ಮಾಡಬೇಕು ಎನ್ನುವ ಬಗ್ಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ ರೈಲ್ವೇ ಅಧಿಕಾರಿಗಳು ಮತ್ತು ಶಾಸಕರು ಜುಲೈ 20ರಂದು ಕುಳಿತು ಚರ್ಚೆ ನಡೆಸುವಂತೆ ಸಚಿವರು ಸಲಹೆ ಮಾಡಿದ್ದಾರೆ.
ಸಭೆಯ ಆರಂಭದಲ್ಲಿ ಮಾತನಾಡಿದ ಸಂಸದ ಬ್ರಿಜೇಶ್ ಚೌಟ, ಮಂಗಳೂರು ಭಾಗದ ರೈಲ್ವೇ ತ್ರಿಶಂಕು ಸ್ಥಿತಿಯಲ್ಲಿದ್ದು ಅತ್ತ ಕೇರಳಕ್ಕೂ ಅಲ್ಲ, ಇತ್ತ ಮೈಸೂರು ವಲಯಕ್ಕೂ ಇಲ್ಲದೆ ಅಭಿವೃದ್ಧಿಗೆ ತೊಡಕಾಗಿದೆ. ಮಂಗಳೂರು- ಬೆಂಗಳೂರು ಮಧ್ಯೆ ಶಿರಾಡಿ, ಸಕಲೇಶಪುರ ಘಾಟ್ ನಲ್ಲಿ ಮತ್ತೊಂದು ರೈಲ್ವೇ ಹಳಿಯಾಗಬೇಕು. ಸ್ಥಳೀಯವಾಗಿ ಪುತ್ತೂರು, ಸುಬ್ರಹ್ಮಣ್ಯದಿಂದ ಇತ್ತ ಉಡುಪಿ, ಕುಂದಾಪುರಕ್ಕೆ ಲೋಕಲ್ ರೈಲು ಸೇವೆ ಆಗಬೇಕು. ಕೊಂಕಣ ರೈಲ್ವೇ ನಿಗಮವನ್ನು ವಿಲೀನ ಮಾಡುವುದರಿಂದ ಅಭಿವೃದ್ಧಿಗೆ ವೇಗ ಸಿಗಬಹುದು. ಮಂಗಳೂರು- ಬೆಂಗಳೂರು ಮಧ್ಯೆ ಕಡಿಮೆ ಸಮಯದಲ್ಲಿ ತಲುಪುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು.
ಇದಕ್ಕೆ ಸ್ಪಂದಿಸಿದ ರೈಲ್ವೇ ಸಚಿವ ಸೋಮಣ್ಣ, ಈ ಭಾಗದ ಏನೆಲ್ಲ ಸಮಸ್ಯೆಗಳಿವೆ ಅದನ್ನೆಲ್ಲ ಮೇ 20ರಂದು ಕುಳಿತು ಚರ್ಚೆ ಮಾಡಿ. ಸಂಸದ ಚೌಟ ಮತ್ತು ಶಾಸಕ ವೇದವ್ಯಾಸ ಕಾಮತ್ ಏನು ಹೇಳುತ್ತಾರೋ ಅದನ್ನೆಲ್ಲ ಕೇಳಿಸಿಕೊಂಡು ಕಾರ್ಯಗತ ಮಾಡಬೇಕು. ಇದು ನನ್ನ ಸೂಚನೆ ಎಂದು ಅಲ್ಲಿದ್ದ ಮೂರು ರೈಲ್ವೇ ಮಂಡಳಿಯ ಮುಖ್ಯಸ್ಥರಿಗೆ ಸೂಚಿಸಿದರು. ಇದೇ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ನಗರದ ಪಾಂಡೇಶ್ವರದಲ್ಲಿ ಗೂಡ್ಸ್ ಶೆಡ್ ಇದ್ದು, ಅದೀಗ ಕಾರ್ಯಾಚರಣೆ ಇಲ್ಲದಿದ್ದರೂ ಅಲ್ಲಿನ ರೈಲ್ವೇ ಗೇಟ್ ಜನರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ತುರ್ತು ಗಮನ ಹರಿಸಬೇಕು ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಕರಾವಳಿಯಲ್ಲಿ ಟೆಂಪಲ್ ಟೂರಿಸಂ ಬೆಳೆಸುವ ದೃಷ್ಟಿಯಿಂದ ಧರ್ಮಸ್ಥಳ- ಕುಕ್ಕೆ ಸುಬ್ರಹ್ಮಣ್ಯ- ಕಾರ್ಕಳ ಮೂಲಕ ಕೊಲ್ಲೂರಿಗೆ ಪ್ರತ್ಯೇಕ ರೈಲ್ವೇ ಹಳಿ ನಿರ್ಮಾಣ ಆಗಬೇಕು. ಇದರಿಂದ ಪ್ರಸಿದ್ಧ ದೇವಸ್ಥಾನಗಳಿಗೆ ಒಂದಕ್ಕೊಂದು ಸಂಪರ್ಕ ಆಗುವುದರಿಂದ ಭಕ್ತರಿಗೆ ಅನುಕೂಲವಾಗುತ್ತದೆ. ಇದಲ್ಲದೆ, ಅಂಕೋಲಾ ಭಾಗದಲ್ಲಿ ಹುಬ್ಬಳ್ಳಿ ಕಡೆಗೆ ರೈಲು ಹಳಿ ಮಾಡುವುದಕ್ಕೆ ಅರಣ್ಯ ಇಲಾಖೆ ಅಡ್ಡಿ ಇದೆ. ಎತ್ತಿನಹೊಳೆಗೆ ನೂರು ಹೆಕ್ಟೇರ್ ಅರಣ್ಯ ಕೊಟ್ಟ ರೀತಿ ರೈಲ್ವೇ ಹಳಿ ಮಾಡೋದಕ್ಕೂ ಅವಕಾಶ ನೀಡಬೇಕು ಎಂದರು.
ಜಪಾನಲ್ಲಿ ಗಂಟೆಗೆ 300 ಕಿಮೀ ರೈಲು ಓಡತ್ತೆ
ಎಂಎಲ್ಸಿ ಮಂಜುನಾಥ ಭಂಡಾರಿ ಮಾತನಾಡಿ, ಮಂಗಳೂರು- ಚೆನ್ನೈ ರೈಲನ್ನು ವಯಾ ಕೊಯಂಬತ್ತೂರು ಬದಲು ಬೆಂಗಳೂರು ಮೂಲಕ ಮಾಡಿದರೆ, 200 ಕಿಮೀ ಉಳಿತಾಯವಾಗುತ್ತದೆ. ಜಪಾನಲ್ಲಿ ರೈಲು ಒಂದು ಗಂಟೆಯಲ್ಲಿ 300 ಕಿಮೀ ಸಂಚಾರ ಮಾಡುತ್ತದೆ. ನಮ್ಮಲ್ಲಿ ಮಂಗಳೂರು- ಬೆಂಗಳೂರು ಮಧ್ಯೆ 350 ಕಿಮೀ ಕ್ರಮಿಸಲು 11 ಗಂಟೆ ಬೇಕಾಗುತ್ತದೆ. ತಾಳಗುಪ್ಪ ರೈಲು ನಿಲ್ದಾಣವನ್ನು ಭಟ್ಕಳಕ್ಕೆ ಕನೆಕ್ಟ್ ಮಾಡಿದರೆ, ಮುಂಬೈ ಸಂಪರ್ಕ ಸುಲಭವಾಗುತ್ತದೆ ಎಂದು ಹೇಳಿದರು.
ಸುರತ್ಕಲ್ ರೈಲು ನಿಲ್ದಾಣ ತೋಕೂರಿಗೆ
ಕೊಂಕಣ ರೈಲ್ವೇ ನಿಗಮದ ಸಿಎಂಡಿ ಸಂತೋಷ್ ಕುಮಾರ್ ಝಾ ಪ್ರತಿಕ್ರಿಯಿಸಿ, ಅಮೃತ ಭಾರತ್ ಯೋಜನೆಯಡಿ ಉಡುಪಿ, ಕಾರವಾರ ರೈಲು ನಿಲ್ದಾಣ ಅಭಿವೃದ್ಧಿಯಾಗಲಿದೆ. ಸುರತ್ಕಲ್ ರೈಲು ನಿಲ್ದಾಣವನ್ನು ತೋಕೂರಿಗೆ ಸ್ಥಳಾಂತರಿಸಲು ನಿರ್ಧಾರ ಮಾಡಲಾಗಿದೆ. ಆದರೆ ತೋಕೂರಿನಲ್ಲಿ ಭೂಸ್ವಾಧೀನಕ್ಕೆ ಸಮಸ್ಯೆಯಾಗಿದೆ ಎಂದು ಹೇಳಿದರು. ಸುರತ್ಕಲ್ ರೈಲು ನಿಲ್ದಾಣದಲ್ಲಿ ವೀಲ್ ಚೇರ್ ಒಯ್ಯುವುದಕ್ಕೂ ಆಗದ ಸ್ಥಿತಿಯಿದೆ ಎಂದು ಸಂಸದ ಬ್ರಿಜೇಶ್ ಚೌಟ ಆಕ್ಷೇಪಿಸಿದರು.
ಮಂಗಳೂರು – ಬೆಂಗಳೂರು ಸಾಗುವ ರೈಲಿಗೆ ಯಶವಂತಪುರ ಬದಲು ಬೈಯಪ್ಪನಹಳ್ಳಿ, ಕುಣಿಗಲ್ ನಲ್ಲಿ ಸ್ಟಾಪ್ ಕೊಟ್ಟಿದ್ದಾರೆ. ಇದರಿಂದ ರೈಲು ಪ್ರಯಾಣಿಕರಿಗೆ ಸಮಸ್ಯೆ ಆಗುತ್ತಿದೆ ಎಂದು ಸಂಸದ ಚೌಟ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರೈಲ್ವೇ ಅಧಿಕಾರಿ ಕ್ರಿಸ್ಟೋಫರ್, ಅದು ತಾತ್ಕಾಲಿಕ ಮಾತ್ರ. 154 ದಿನದಲ್ಲಿ ಸರಿಪಡಿಸುತ್ತೇವೆ ಎಂದರು. ಅಷ್ಟು ದಿನ ಯಾಕೆ, ಅದು ವಿಳಂಬವಾಗುತ್ತದೆ. ಕೂಡಲೇ ಸರಿಪಡಿಸಿ ಎಂದು ಸಚಿವ ಸೋಮಣ್ಣ ಸೂಚಿಸಿದರು.
ಮಂಗಳೂರಿಗೆ 4-5 ಪ್ಲಾಟ್ ಫಾರಂ ಬರತ್ತೆ
ದಕ್ಷಿಣ ರೈಲ್ವೇ ಪಾಲ್ಘಾಟ್ ವಿಭಾಗದ ಜನರಲ್ ಮ್ಯಾನೇಜರ್ ಆರ್.ಎನ್ ಸಿಂಗ್ ಮಾತನಾಡಿ, ಅಮೃತ್ ಭಾರತ್ ಯೋಜನೆಯಡಿ ಮಂಗಳೂರು ರೈಲು ನಿಲ್ದಾಣಕ್ಕೆ 4-5 ಪ್ಲಾಟ್ ಫಾರಂ ಹೆಚ್ಚುವರಿ ಸಿಗಲಿದೆ. ಅಭಿವೃದ್ಧಿಯೂ ಆಗಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಚೌಟ, ರೈಲು ನಿಲ್ದಾಣದ ಹೊಸ ಪ್ಲಾನ್ ಬಗ್ಗೆ ನಮ್ಮೊಂದಿಗೆ ಚರ್ಚಿಸಬೇಕು. ಕರಾವಳಿಯ ಸಂಸ್ಕೃತಿ ಬಿಂಬಿಸುವ ರೀತಿ ರೈಲು ನಿಲ್ದಾಣದ ಹೊಸ ಕಟ್ಟಡ ಇರಬೇಕು. ಅದಕ್ಕಾಗಿ ನಿಮ್ಮ ಡಿಪಿಆರ್ ಮಾಡುವಾಗ ಸ್ಥಳೀಯ ತಜ್ಞರನ್ನು ಬಳಸಿಕೊಳ್ಳಬೇಕು ಎಂದರು.
ರಾಜ್ಯದ 59 ರೈಲು ನಿಲ್ದಾಣಕ್ಕೆ 5900 ಕೋಟಿ
ಕೊನೆಯಲ್ಲಿ ಸಭೆಯಲ್ಲಿ ಕೇಳಿಬಂದ ಪ್ರಶ್ನೆ, ಸಲಹೆಗಳಿಗೆ ಉತ್ತರಿಸಿದ ಸಚಿವ ಸೋಮಣ್ಣ, ಮೋದಿ ಸರಕಾರ ಕರ್ನಾಟಕದಲ್ಲಿ 59 ರೈಲು ನಿಲ್ದಾಣಗಳ ಅಭಿವೃದ್ಧಿಗೆ 5900 ಕೋಟಿ ಅನುದಾನ ನೀಡಿದೆ. ಇಡೀ ದೇಶದಲ್ಲಿ 1924 ರೈಲು ನಿಲ್ದಾಣಗಳನ್ನು ಆಧುನೀಕರಣ ಮಾಡಿದ್ದಾರೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವನ್ನು ಒಂದು ಸಾವಿರ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಕರಾವಳಿಯ ರೈಲ್ವೇ ಅಭಿವೃದ್ಧಿಗಾಗಿ ಕೊಂಕಣ ರೈಲ್ವೇ, ಮೈಸೂರು ಮತ್ತು ಪಾಲ್ಘಾಟ್ ರೈಲ್ವೇ ಮಂಡಳಿ ಅಧಿಕಾರಿಗಳು, ಶಾಸಕರು, ಜಿಲ್ಲಾಧಿಕಾರಿಗಳು ಸಂಸದ ಬ್ರಿಜೇಶ್ ಚೌಟರ ನೇತೃತ್ವದಲ್ಲಿ ಸಭೆ ನಡೆಸಿ, ಚರ್ಚೆ ಮಾಡಿ. ಚರ್ಚೆಯ ಬಳಿಕ ಯಾವ ರೀತಿ ಮಾಡಬಹುದು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಿ. ಪ್ರತಿ ಮೂರು ತಿಂಗಳಿಗೊಮ್ಮೆ ಮಂಗಳೂರಿಗೆ ಬರುತ್ತೇನೆ. ಮೋದಿಯವರು ನಂಬಿಕೆ ಇಟ್ಟು ಈ ಹೊಣೆ ನೀಡಿದ್ದಾರೆ. ಅದನ್ನು ಸೂಕ್ತವಾಗಿ ನಿಭಾಯಿಸುತ್ತೇನೆ ಎಂದರು.
ಇದೇ ಮೊದಲ ಬಾರಿಗೆ ರೈಲ್ವೇ ಅಭಿವೃದ್ಧಿ ಕುರಿತಾಗಿ ಮಂಗಳೂರಿನಲ್ಲಿ ರೈಲ್ವೇ ಸಚಿವರೇ ಬಂದು ಅಧಿಕಾರಿಗಳು ಮತ್ತು ಶಾಸಕರ ಜೊತೆಗೆ ಸಭೆ ನಡೆಸಿದ್ದಾರೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ, ಜಾಫರ್ ಶರೀಫ್, ಡಿವಿ ಸದಾನಂದ ಗೌಡ ರೈಲ್ವೈ ಸಚಿವರಾಗಿದ್ದರೂ ಮಂಗಳೂರಿನಲ್ಲಿ ಸಭೆ ನಡೆಸಿರಲಿಲ್ಲ.
Railway Minister V Somanna agrees to merger of Konkan Railway in Mangalore, holds meeting with MP Chowta. Union Minister of State for Railways V Somanna visited the Mangaluru Central Railway Station on Wednesday morning and inspected the station.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
12-01-25 05:07 pm
HK News Desk
Hollywood hills, Los Angeles fires: ಲಾಸ್ ಏಂಜ...
09-01-25 12:11 pm
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
12-01-25 11:03 pm
Mangalore Correspondent
PLD bank election, MLA Ashok Rai, Puttur: ಪಿಎ...
12-01-25 10:06 pm
Hardeep Singh Puri, Brijesh Chowta, Mangalore...
12-01-25 12:33 pm
CM Siddaramaiah, Kambala Mangalore, Naringana...
11-01-25 10:34 pm
Mangalore Lit Fest 2025, Hardeep Singh Puri;...
11-01-25 07:19 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm