ಸಕಲೇಶಪುರ - ಸುಬ್ರಹ್ಮಣ್ಯ ರೈಲು ಹಳಿಯಲ್ಲಿ ಭಾರೀ ಭೂಕುಸಿತ

07-08-20 07:03 pm       Headline Karnataka News Network   ಕರಾವಳಿ

ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಿಂದಾಗಿ ಮಂಗಳೂರು - ಬೆಂಗಳೂರು ಸಂಚಾರದ ರೈಲ್ವೇ ಮಾರ್ಗದಲ್ಲೂ ಭೂಕುಸಿತ ಸಂಭವಿಸಿದೆ. 

ಮಂಗಳೂರು, ಆಗಸ್ಟ್ 7: ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಿಂದಾಗಿ ಮಂಗಳೂರು - ಬೆಂಗಳೂರು ಸಂಚಾರದ ರೈಲ್ವೇ ಮಾರ್ಗದಲ್ಲೂ ಭೂಕುಸಿತ ಸಂಭವಿಸಿದೆ. 

ಹಾಸನ - ಮಂಗಳೂರು ವಿಭಾಗದ ಸಕಲೇಶಪುರದಿಂದ ಸುಬ್ರಹ್ಮಣ್ಯ ಮಧ್ಯದ ಹಲವು ಕಡೆ ಭೂಕುಸಿತಗಳಾಗಿವೆ. ದೋಣಿಗಲ್ ಮತ್ತು ಕಡಗರವಳ್ಳಿ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಆಗಿದ್ದು ಅಲ್ಲಿಂದ ಹರಿದು ಬರುವ ಕೆಸರು ನೀರು ಕಡಗರವಳ್ಳಿ ಮೂಲಕ ಹಾದು ಹೋಗುವ ರೈಲ್ವೇ ಹಳಿಗೆ ಬೀಳುತ್ತಿದೆ. ಇದರಿಂದಾಗಿ ರೈಲು ಹಳಿಯ ಉದ್ದಕ್ಕೂ ಒಂದು ಪಾರ್ಶ್ವ ಕುಸಿದಿದೆ. ಎರಡು ಕಡೆ 15 ಮೀಟರ್ ಉದ್ದಕ್ಕೆ ಕುಸಿದು ನಿಂತಿದ್ದು ಅಪಾಯಕ್ಕೀಡಾಗಿದೆ. ಈ ಭಾಗದಲ್ಲಿ ಹಳಿಯ ಅಡಿ ಭಾಗದ ಮಣ್ಣು ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದೆ. ಸಕಲೇಶಪುರದಿಂದ ಆಗಮಿಸಿದ ತಂತ್ರಜ್ಞರು ಕುಸಿತದ ಅಪಾಯ ಇರುವಲ್ಲಿ ಕಲ್ಲು ಮತ್ತು ಹೊಯಿಗೆ ಚೀಲಗಳನ್ನು  ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಸಕಲೇಶಪುರದಿಂದ ಗೂಡ್ಸ್ ರೈಲಿನಲ್ಲಿ ಮರಳು ಚೀಲ ಮತ್ತು ಸಲಕರಣೆಗಳನ್ನು ತರಲಾಗಿದ್ದು ಮಣ್ಣು ಬಿದ್ದಿರುವ ಜಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. 

ಲಾಕ್ ಡೌನ್ ಕಾರಣ ಸ್ಥಗಿತಗೊಂಡ ಮಂಗಳೂರು - ಬೆಂಗಳೂರು ನಡುವಿನ ಪ್ಯಾಸೆಂಜರ್ ರೈಲು ಸಂಚಾರ ಇನ್ನೂ ಆರಂಭಗೊಂಡಿಲ್ಲ.‌ ಹೀಗಾಗಿ ಪ್ಯಾಸೆಂಜರ್ ರೈಲಿಗೆ ಸದ್ಯಕ್ಕೆ ಅಪಾಯ ಇಲ್ಲ. ಕಳೆದ ವರ್ಷವೂ ಇದೇ ರೀತಿ ಹಾಸನ - ಮಂಗಳೂರು ರೈಲು ಹಳಿ ಈ ಭಾಗದಲ್ಲಿ ಕುಸಿದು ಬಿದ್ದಿತ್ತು. ಗುಡ್ಡ ಕುಸಿದು ರೈಲು ಸಂಚಾರ ವ್ಯತ್ಯಯವಾಗಿತ್ತು.