Kadaba, Mangalore, Acid attack: ಕಡಬ ; ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣ, ಆರೋಪಿ ಜಾಮೀನು ಅರ್ಜಿ ವಜಾ

04-09-24 05:31 pm       Mangalore Correspondent   ಕರಾವಳಿ

ಕಡಬ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ ಆರೋಪಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.

ಕಡಬ, ಸೆ 04: ಕಡಬ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ ಆರೋಪಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ನ್ಯಾಯಾಂಗ ಬಂಧನದಲ್ಲಿರುವ ಯುವಕನ ಜಾಮೀನು ಅರ್ಜಿಯನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸರಿತಾ ಡಿ. ಅವರು ವಜಾಗೊಳಿಸಿದ್ದಾರೆ.

ಕೇರಳ ಮಲಪ್ಪುರಂ ನಿವಾಸಿ ಅಬಿನ್ ಎಂಬಾತ ವಿದ್ಯಾರ್ಥಿನಿಯು ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಎಂಬ ಕಾರಣಕ್ಕೆ ಕೃತ್ಯ ಎಸಗಿದ್ದ. ಕಡಬ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಮವಸ್ತ್ರವನ್ನು ಹೊಲಿಸಿ, ಪಡೆದುಕೊಂಡು ಬಂದಿದ್ದ. ಕೊಯಮುತ್ತೂರಿನಿಂದ ಆ್ಯಸಿಡ್ ಖರೀದಿಸಿ, ಸಮವಸ್ತ್ರ ಧರಿಸಿಕೊಂಡಿದ್ದ ಆರೋಪಿ, ಮಾರ್ಚ್ 4ರಂದು ಬೆಳಗ್ಗೆ ಕಾಲೇಜಿಗೆ ಬಂದು ದ್ವಿತೀಯ ಪಿಯುಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ. ಈ ವೇಳೆ ಇತರ ಇಬ್ಬರು ವಿದ್ಯಾರ್ಥಿನಿಯರಿಗೂ ಗಾಯಗಳಾಗಿದ್ದವು.

ಈ ಬಗ್ಗೆ ಯುವಕನ ಜಾಮೀನು ಅರ್ಜಿ ವಿಚಾರಣೆಯು ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ನಡೆಯಿತು. ಗಾಯಗೊಂಡಿದ್ದ ವಿದ್ಯಾರ್ಥಿನಿಯರು ಈಗಲೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಆರೋಪಿಗೆ ಜಾಮೀನು ನೀಡಿದರೆ, ವಿದ್ಯಾರ್ಥಿನಿಯಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟ ಕೋರ್ಟ್, ದೋಷಾರೋಪಣಾ ಪತ್ರದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಜಾಮೀನು ಅರ್ಜಿ ವಜಾಗೊಳಿಸಲಾಗಿದೆ.

ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಯಂತಿ ಕೆ. ಭಟ್ ವಾದ ಮಂಡಿಸಿದರು.

Kadaba acid attack on students, puttur court rejects bail plea of accused Abin.