ಉಕ್ಕಿ ಹರಿದ ನೇತ್ರಾವತಿ ;  ಬಂಟ್ವಾಳ, ಉಪ್ಪಿನಂಗಡಿಯಲ್ಲಿ ನೆರೆ 

08-08-20 11:43 am       Mangalore Reporter   ಕರಾವಳಿ

ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಭಾರೀ ಮಳೆ ಮುಂದುವರಿದಿದೆ. ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದೆ.‌

ಮಂಗಳೂರು, ಆಗಸ್ಟ್ 8: ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಭಾರೀ ಮಳೆ ಮುಂದುವರಿದಿದೆ. ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದೆ.‌ ಬಂಟ್ವಾಳ ತಾಲೂಕಿನ ವಿವಿಧೆಡೆ ನೆರೆ ಕಾಣಿಸಿಕೊಂಡಿದ್ದು ಹಲವಾರು ಮನೆಗಳು ಮತ್ತು ಕೃಷಿ ಭೂಮಿ ಮುಳುಗಡೆಯಾಗಿದೆ. 

ಕುಮಾರಧಾರಾ ಮತ್ತು ನೇತ್ರಾವತಿ ನದಿಗಳ ಸಂಗಮ ಸ್ಥಾನ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ನೀರಿನ ಮಟ್ಟ 30 ಮೀಟರ್ ಆಗಿದ್ದು, ಇದೀಗ ಅದಕ್ಕಿಂತಲೂ ಹೆಚ್ಚಿನ ಎತ್ತರದಲ್ಲಿ ನೀರು ಹರಿಯುತ್ತಿದೆ. ನೀರಿನ ಹೆಚ್ಚಳದಿಂದಾಗಿ ಉಪ್ಪಿನಂಗಡಿ, ನಟ್ಟಿಬೈಲು, ನೆಲ್ಯಾಡಿ ಮೊದಲಾದ ಕಡೆ ಕೃಷಿಭೂಮಿಗೆ ನೀರು ನುಗ್ಗಿದೆ. ಬಂಟ್ವಾಳದಲ್ಲೂ ನೇತ್ರಾವತಿ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಈ ಭಾಗದಲ್ಲಿ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು, ಇದೀಗ ನದಿ 9 ಮೀಟರ್ ಗೂ ಹೆಚ್ಚಿನ ಎತ್ತರದಲ್ಲಿ ಹರಿಯುತ್ತಿದೆ. ಇದರಿಂದಾಗಿ ಪಾಣೆಮಂಗಳೂರು, ಗೂಡಿನ ಬಳಿ ಮೊದಲಾದ ಕಡೆ ನೀರು ವಸತಿ ಪ್ರದೇಶಗಳಿಗೆ ನುಗ್ಗಿದ್ದು ಕೃತಕ ನೆರೆ ಉಂಟಾಗಿದೆ.

ಕುಮಾರಧಾರಾ ನದಿಯಲ್ಲಿ ನೀರಿನ ಹರಿವಿನಲ್ಲಿ ಕೊಂಚ ಇಳಿಮುಖವಾಗಿದ್ದರೂ, ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಸತತ ಆರನೇ ದಿನವೂ ಮುಳುಗಡೆಯಾಗಿದೆ. ಚಾರ್ಮಾಡಿ ಘಾಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತಿರುವ ಹಿನ್ನಲೆಯಲ್ಲಿ ಚಾರ್ಮಾಡಿಯ ಮೃತ್ಯುಂಜಯ ಹೊಳೆಯಲ್ಲೂ ಪ್ರವಾಹದ ರೀತಿ ನೀರು ಹರಿಯಲಾರಂಭಿಸಿದೆ. ಕೊಳಂಬೆ, ಚಾರ್ಮಾಡಿ ಪ್ರದೇಶಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿವೆ. ಕೊಳಂಬೆ ಪ್ರದೇಶದಲ್ಲಿ ಸುಮಾರು 15 ಕ್ಕೂ ಮಿಕ್ಕಿದ ಮನೆಗಳು ಜಲಾವೃತಗೊಂಡಿದೆ. ಕಳೆದ ಬಾರಿ ರೌದ್ರ ನರ್ತನ ತೋರಿದ್ಧ ಮೃತ್ಯುಂಜಯ ಹೊಳೆ ಹರಿವು ಅಲ್ಲಿನ ಜನರಲ್ಲಿ ಆತಂಕ ಹುಟ್ಟಿಸಿದೆ.

Video: