Mangalore Aravind Bolar; ಸಣ್ಣದಿರುವಾಗ ಊಟಕ್ಕೂ ತತ್ವಾರ ಇತ್ತು, ಬಾಟಲಿಯಲ್ಲಿ ಹಾಲು ಮಾರುತ್ತಿದ್ದೆ, ಕರ್ಬದ ಕೊಟ್ಯದಲ್ಲಿ ಕೆಲಸ ಮಾಡುತ್ತಿದ್ದೆ.. ಶಾಲೆಯಲ್ಲಿ ಮಾಸ್ಟ್ರು ಮರ್ಲ ಅಂದಿದ್ದೇ ಶಾರದೆ ಒಲಿಯುವಂತಾಗಿತ್ತು! ಅರವಿಂದ ಬೋಳಾರ್ ಮನದಾಳ

24-10-24 01:25 am       Mangaluru Correspondent   ಕರಾವಳಿ

ಸಣ್ಣದಿರುವಾಗ ತುಂಬ ಬಡತನ ಇತ್ತು. ಊಟಕ್ಕೂ ತತ್ವಾರ. ನನಗೆ ಎರಡು ತಿಂಗಳಿರುವಾಗಲೇ ತಂದೆ ತೀರಿಕೊಂಡಿದ್ದರು. ತಾಯಿ ಮನೆಗೆಲಸ, ಹಂಚಿನ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಿ ನಮ್ಮನ್ನು ಸಾಕಿದ್ದರು. ನಾವು ನಾಲ್ಕು ಜನ ಗಂಡು ಮಕ್ಕಳು. ಅಮ್ಮ ಓದಲು ಹೇಳುತ್ತಿದ್ದರೂ, ಓದು ತಲೆ ಹತ್ತಲಿಲ್ಲ....

ಮಂಗಳೂರು, ಅ.23: ಸಣ್ಣದಿರುವಾಗ ತುಂಬ ಬಡತನ ಇತ್ತು. ಊಟಕ್ಕೂ ತತ್ವಾರ. ನನಗೆ ಎರಡು ತಿಂಗಳಿರುವಾಗಲೇ ತಂದೆ ತೀರಿಕೊಂಡಿದ್ದರು. ತಾಯಿ ಮನೆಗೆಲಸ, ಹಂಚಿನ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಿ ನಮ್ಮನ್ನು ಸಾಕಿದ್ದರು. ನಾವು ನಾಲ್ಕು ಜನ ಗಂಡು ಮಕ್ಕಳು. ಅಮ್ಮ ಓದಲು ಹೇಳುತ್ತಿದ್ದರೂ, ಓದು ತಲೆ ಹತ್ತಲಿಲ್ಲ. ಸಣ್ಣದಿರುವಾಗ ಬಾಟಲಿಯಲ್ಲಿ ಹಾಲು ಮಾರುತ್ತಿದ್ದೆ. ಅದರಲ್ಲಿ ಬಾಟಲಿಗೆ ಹತ್ತು ಪೈಸೆ ಸಿಗುತ್ತಿತ್ತು. ಆನಂತರ ಕಬ್ಬಿಣದ ಕೆಲಸ (ಕರ್ಬದ ಕೊಟ್ಯ) ಕೆಲಸ ಮಾಡುತ್ತಿದ್ದೆ. ಅಲ್ಲಿರುವಾಗಲೇ ನಾಟಕ ಸೆಳೆದಿತ್ತು..

ಇದು ತುಳುನಾಡ ಮಾಣಿಕ್ಯ, ಖಾಸಗಿ ವಾಹಿನಿಯ ಪ್ರೈವೇಟ್ ಚಾಲೆಂಜ್ ಖ್ಯಾತಿಯ ಹಿರಿಯ ರಂಗಭೂಮಿ ಕಲಾವಿದ ಅರವಿಂದ ಬೋಳಾರ್ ಅವರ ಮಾತು. ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಡೆದ ಗೌರವ ಸನ್ಮಾನ ಸ್ವೀಕರಿಸಿ ತಮ್ಮ ಮನದಾಳ ಹೇಳಿಕೊಂಡರು. ಶಾಲೆಯಲ್ಲಿದ್ದಾಗ ತುಂಬ ನಾಚಿಕೆ ಸ್ವಭಾವ ಇತ್ತು. ವೇದಿಕೆಯಲ್ಲಿ ಪ್ರದರ್ಶನ ಮಾಡು ಅಂತ ಮಾಸ್ಟ್ರು ಹೇಳಿದ್ದಕ್ಕೆ ನಂಗೆ ಆಗುವುದಿಲ್ಲ ಎಂದಿದ್ದೆ. ಅದ್ಕೆ ಮಾಸ್ಟ್ರು ಇಂಬ್ಯೆ ದಾದ ಮರ್ಲೆ (ಇವನೆಂತ ಹುಚ್ಚ) ಎಂದು ಬೈದಿದ್ದರು. ಬೈದು ಅವಮಾನಿಸಿದ್ದನ್ನು ಸವಾಲಾಗಿ ಸ್ವೀಕರಿಸಿ ಮರ್ಲನ ಪಾತ್ರವನ್ನೇ ಮಾಡಿದ್ದೆ. ಅಂದು ನನ್ನ ಪಾತ್ರಕ್ಕೆ ಮೊದಲ ಬಹುಮಾನ ಲಭಿಸಿತ್ತು.

ನಗಿಸುವ ಪಾತ್ರಗಳನ್ನು ಮಾಡುತ್ತ ಹೋಗಿದ್ದೆ. ಜೀವನಕ್ಕಾಗಿ ಕೆಲಸ ಮಾಡಬೇಕಿತ್ತು. ಆಗೆಲ್ಲ ನಾವು ಒಟ್ಟು ಸೇರಿ ನಾಟಕ ಮಾಡುವುದಿತ್ತು. ಅದರಿಂದ ಹಣ ಬರುತ್ತಿರಲಿಲ್ಲ. ಮನಸ್ಸಿಗೆ ಸಂತೋಷ ಅಷ್ಟೇ. ಅಮ್ಮ ಇವನಿಗೇನು ನಾಟಕದ ಮರ್ಲ್ ಹತ್ತಿಕೊಂಡಿದೆ ಎಂದು ಬೈತಿದ್ದರು. ಹಗಲಲ್ಲಿ ಕಬ್ಬಿಣದ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತ ರಾತ್ರಿ ನಾಟಕಕ್ಕೆ ಹೋಗುತ್ತಿದ್ದೆ. ಮೊದಲ ಬಾರಿಗೆ ಮಾಧವ ಕೆ. ಉಳ್ಳಾಲ್ ಅವರ ಬ್ರಹ್ಮನ ಬರವು ನಾಟಕದಲ್ಲಿ ಮೊದಲ ಬಾರಿಗೆ ವೃತ್ತಿಪರ ನಾಟಕ ರಂಗದಲ್ಲಿ ಬಣ್ಣ ಹಚ್ಚಿದ್ದೆ. ಆನಂತರ ಜಗನ್ ಪವಾರ್ ಅವರ ಏರ್ ತೂಯಿನಿ ಸೇರಿದಂತೆ ಸಿಕ್ಕ ಸಿಕ್ಕ ನಾಟಕದಲ್ಲಿ ಪಾತ್ರ ಮಾಡಿದ್ದೆ. ಮೊದಲ ನಾಟಕಕ್ಕೆ ಆಗ ನನಗೆ ನೂರು ರೂಪಾಯಿ ಸಂಬಳ ಲಭಿಸಿತ್ತು.

ಸಮರ್ಥ ಕಲಾವಿದ ಮಾಡಿದ್ದು ಕಾಪಿಕಾಡ್

ನನ್ನನ್ನು ಬೇರೆ ಬೇರೆ ರೀತಿಯ ಪಾತ್ರಗಳನ್ನು ಕೊಟ್ಟು ಪರಿಪೂರ್ಣ ಕಲಾವಿದನನ್ನಾಗಿ ಮಾಡಿದ್ದು ದೇವದಾಸ್ ಕಾಪಿಕಾಡ್. ಅವರ ಚಾಪರ್ಕ್ ತಂಡದಲ್ಲಿ 365 ದಿನದಲ್ಲಿ 330 ದಿನವೂ ನಾಟಕದಲ್ಲಿಯೇ ತೊಡಗಿಕೊಂಡಿದ್ದೆ. ನಾಟಕದಲ್ಲಿ ಬಿಝಿಯಾಗುತ್ತಿದ್ದಂತೆ ಹಗಲಿನ ಕೆಲಸವನ್ನು ಬಿಟ್ಟಿದ್ದೆ. ಆಬಳಿಕ ವಿಯಜಕುಮಾರ್ ಕೊಡಿಯಾಲ್ ಬೈಲ್ ಮತ್ತು ಲಕುಮಿ ತಂಡದಲ್ಲಿಯೂ ಪಾತ್ರ ಮಾಡಿದ್ದೇನೆ. ಈಗ ಲಕುಮಿ ತಂಡದಲ್ಲಿಯೇ ಇದ್ದೇನೆ. ಒಬ್ಬ ಹಾಸ್ಯ ಕಲಾವಿದನಿಗೆ ಜನರನ್ನು ಸೆಳೆಯುವ ಕೆಪಾಸಿಟಿ ಇದೆ ಎಂಬುದನ್ನು ಅಭಿಮಾನಿಗಳು ತೋರಿಸಿಕೊಟ್ಟಿದ್ದಾರೆ. ಕೊರೊನಾ, ಡೆಂಗ್ಯು ಸಂದರ್ಭದಲ್ಲಿ ಜನ ಜಾಗೃತಿಗಾಗಿ ಜಿಲ್ಲಾಧಿಕಾರಿಯೇ ನನಗೆ ಫೋನ್ ಮಾಡಿದ್ದರು. ಇದು ನನಗೆ ಸಿಕ್ಕ ದೊಡ್ಡ ಗೌರವ ಎನಿಸಿಕೊಂಡಿದ್ದೆ. ನನ್ನ ಮಾತನ್ನೂ ಜನರು ಕೇಳುತ್ತಾರೆ ಎಂಬುದು ಮನಸ್ಸಿಗೆ ಬಂದಿತ್ತು.

ಮೊದಲ ಬಾರಿಗೆ ಮಾರಿಗುಡಿ ಯಕ್ಷಗಾನ ತಂಡದಲ್ಲಿ ಸೇರಿದ್ದೆ. ಅಲ್ಲಿದ್ದಾಗ ಇತರ ಕಲಾವಿದರಿಗೆ ಬೀಡಿ, ಸೋಡಾ ತಂದು ಕೊಡುತ್ತಿದ್ದೆ. ಜೊತೆಗೆ ಶೃತಿ ಪೆಟ್ಟಿಗೆ ಬಾರಿಸುವುದನ್ನು ಮಾಡುತ್ತಿದ್ದೆ. ಆಟದ ಆರಂಭದಲ್ಲಿ ಕುಣಿಯುವ ಸ್ತ್ರೀಪಾತ್ರಗಳನ್ನು ಮಾಡಲು ತೊಡಗಿದ್ದೆ. ಮಂಗಳಾದೇವಿ ಮೇಳದಲ್ಲಿಯೂ ಸ್ತ್ರೀ ಪಾತ್ರ ಮಾಡಿದ್ದೇನೆ. ಒಮ್ಮೆ ಸುಂಕದಕಟ್ಟೆ ಮೇಳದ ಮ್ಯಾನೇಜರ್, ಸೀತರಾಮ ಕುಮಾರ್ ಮತ್ತು ಬೋಳಾರ್ ಜುಗಲ್ ಬಂದಿ ಎಂದು ಹೇಳಿ ಪೋಸ್ಟರ್ ಮಾಡಿದ್ದರು. ಸೀತರಾಮ ಕುಮಾರ್ ದೊಡ್ಡ ಚಾರ್ಲಿ ಚಾಪ್ಲಿನ್ ಆಗಿದ್ದವರು. ಅವರ ಜೊತೆಗೆ ಪಾತ್ರ ಮಾಡಲು ಭಯ ಪಟ್ಟಿದ್ದೆ. ನಾಟಕದಲ್ಲಾದರೆ ಬಾಯಿತಪ್ಪಿ ಏನಾದರೂ ಬಂದರೆ ಕ್ಷಮೆ ಇದೆ, ಯಕ್ಷಗಾನದಲ್ಲಿ ಕ್ಷಮೆ ಇಲ್ಲ. ಹೀಗಾಗಿ ಅಳುಕಿದ್ದೆ. ಆಗಲಿಕ್ಕಿಲ್ಲ ಎಂದು ಹೇಳಿದರೂ, ಪ್ರಸಂಗಕರ್ತರು ಕೇಳಲಿಲ್ಲ. ಆಗುತ್ತೆ ಬನ್ನಿ, ನಾವಿದ್ದೇವೆ ಎಂದು ಕರೆಸಿಕೊಂಡಿದ್ದರು. ಸೀತರಾಮ ಕಟೀಲ್ ನೇರವಾಗಿ ಬಂದು ವೇಷಕ್ಕೆ ಕುಳಿತರು. ಅವರ ಶಿಷ್ಯನಾಗಿ ಕುಟ್ಟಿಚಾತು ಪಾತ್ರ ಇತ್ತು. ಬಳಿಕ ನೇರವಾಗಿ ವೇದಿಕೆಯತ್ತ ಕರೆದಿದ್ದರು. ಏನು ಮಾಡುವುದೆಂದೇ ತಿಳಿಯದ ನಾನು ಮೂಕ ವಿಸ್ಮಿತನಾಗಿದ್ದೆ. ಅಲ್ಲಿಂದ ಶುರುವಾದ ಯಕ್ಷಗಾನದಲ್ಲಿ ಮತ್ತೆಷ್ಟೋ ಆಟಗಳನ್ನು ಆಡಿದ್ದೇನೆ.

ದುಬೈ, ನೈಜೀರಿಯಾ, ಆಸ್ಟ್ರೇಲಿಯಾ ಹೀಗೆ ಹಲವು ದೇಶಗಳಿಗೆ ಹೋಗಿದ್ದೇನೆ. ತುಳುವರು ದೇವರಂತೆ ಕಾಣುತ್ತಾರೆ. ಅಭಿಮಾನಿಗಳಿಗೆ ಆಭಾರಿಯಾಗಿದ್ದೇನೆ, ಇದೆಲ್ಲವೂ ನನ್ನಿಂದ ಅಲ್ಲ. ಆ ಕಲಾಮಾತೆ ಶಾರದೆಯಿಂದ ಆಗಿರುವುದು. ನಾನು ಕಲಿತಿಲ್ಲ. ಆದರೆ ನನ್ನನ್ನು ಶಾರದಾ ಮಾತೆಯೇ ಇಷ್ಟೆತ್ತರಕ್ಕೆ ತಂದಿದ್ದಾಳೆ. ನನಗೆ ರಂಗಭೂಮಿಯೇ ಹೆಚ್ಚು ಆಪ್ತ. ಮುಂದೆ ಕಣ್ಣು ಮುಚ್ಚುವುದಿದ್ದರೂ, ರಂಗದಲ್ಲಿರುವಾಗಲೇ ಮುಚ್ಚಿ ಹೋಗಲಿ ಎಂದು ಆಶಿಸುತ್ತೇನೆ. ಮುಂದಿನ ಜನ್ಮ ಇದ್ದರೆ, ಕಲಾವಿದನಾಗಿಯೇ ಇರಬೇಕೆಂಬ ಆಸೆಯನ್ನೂ ಹೊಂದಿದ್ದೇನೆ.

ಮನೆ ವಿಷಯದಲ್ಲಿ ನಾನೇ ಭಾಗ್ಯವಂತ

ಮನೆಯ ವಿಷಯದಲ್ಲಿ ತುಂಬ ಭಾಗ್ಯವಂತ ಎಂದು ಹೇಳಿಕೊಳ್ಳುತ್ತೇನೆ. ಒಂದು ದಿನವೂ ಪತ್ನಿ ನನ್ನಲ್ಲಿ, ರವಿಕೆ ಬೇಕು, ಸೀರೆ ಬೇಕೆಂದು ಕೇಳಿಲ್ಲ. ಇಷ್ಟು ಹೊತ್ತು ಎಲ್ಲಿ ಹೋಗಿದ್ರಿ ಅಂತಲೂ ಕೇಳಿದ್ದಿಲ್ಲ. ಅದು ದೇವರು ಕೊಟ್ಟ ಯೋಗ ಎಂದು ಹೇಳಿಕೊಂಡ ಅರವಿಂದ ಬೋಳಾರ್, ರಂಗಭೂಮಿ, ಸಿನಿಮಾದಲ್ಲಿ ದುಡಿದ ಹಣದಲ್ಲಿ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದೇನೆ. ಪ್ರಾಮಾಣಿಕವಾಗಿ ದುಡಿದರೆ, ಒಬ್ಬನಿಗೆ ಜೀವನ ಸಾಗಿಸಲು ರಂಗಭೂಮಿಯಲ್ಲಿ ಸಿಕ್ಕ ಹಣ ಸಾಕು. ನನ್ನ ಪಾಲಿಗೆ ಮನೆಗಿಂತಲೂ ರಂಗಭೂಮಿಯೇ ಮುಖ್ಯ. ಮನೆಯಲ್ಲಿ ಏನೇ ಕಷ್ಟ ಇದ್ದರೂ, ನಗಿಸುವ ಕೆಲಸ ಮಾಡಲೇಬೇಕು. ಅದನ್ನು ಚಾಚೂ ತಪ್ಪದೆ ಮಾಡಿದ್ದೇನೆಂಬ ತೃಪ್ತಿ ನನಗಿದೆ ಎಂದರು.

ಕಾಮೆಡಿಯಲ್ಲಿ ವಿಲನ್ ಮಾಡುವ ಆಸೆಯಿದೆ

ಯಾವ ರೀತಿಯ ಪಾತ್ರ ಮಾಡಬೇಕೆಂಬ ವಿಶೇಷ ಬಯಕೆ ಇದೆಯೆಂಬ ಪ್ರಶ್ನೆಗೆ, ಕಾಮೆಡಿಯಲ್ಲಿ ವಿಲನ್ ಮಾಡಬೇಕೆಂಬ ಬಯಕೆ ಇದೆ. ನನಗೆ ವಿಲನ್ ಪಾತ್ರವೇ ಕೊಡುವುದಿಲ್ಲ. ಡೈರೆಕ್ಟರ್, ಕಥೆಗಾರರು ಅಂತಹ ಕತೆ ಮಾಡಿದರೆ, ಮುಸೋರೆ ಕೃಷ್ಣಮೂರ್ತಿ ಮಾದರಿಯ ಪಾತ್ರ ಮಾಡುವ ಬಯಕೆ ಇದೆ ಎಂದರು. ತುಳುವರು ಹಾಸ್ಯ ಇಷ್ಟಪಡುತ್ತಾರೆ, ಹಾಗಂತ ವಲ್ಗರ್ ಹಾಸ್ಯ ಇಷ್ಟಪಡಲ್ಲ. ಆರೋಗ್ಯವಂತ ಹಾಸ್ಯಕ್ಕೆ ಮಾತ್ರ ಬೆಲೆ ಕೊಡುತ್ತಾರೆ. ಸಿನಿಮಾದಲ್ಲಿಯೂ ಸಾಕಷ್ಟು ಅವಕಾಶ ಸಿಕ್ಕಿದೆ, ಈಗಲೂ ಏಳೆಂಟು ಮಂದಿ ಡೇಟ್ ಕೇಳಿದ್ದಾರೆ. ಆದರೆ ನನ್ನ ಪಾಲಿಗೆ ರಂಗಭೂಮಿಯೇ ಹೆಚ್ಚು ಇಷ್ಟದ ಕ್ಷೇತ್ರ ಎಂದರು ಬೋಳಾರ್.

ತುಳು ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ಭಾಷೆಗೆ ತುಳು ನಾಟಕಗಳೇ ದೊಡ್ಡ ಕೊಡುಗೆ ಕೊಟ್ಟಿವೆ. ಪ್ರತಿ ಊರಿನಲ್ಲೂ ನಾಟಕ ಪ್ರದರ್ಶನ ಆಗುತ್ತ ಬಂದಿರುವ ಹಿನ್ನೆಲೆ ನಮ್ಮಲ್ಲಿದೆ. ಇತ್ತೀಚಿನ 50-70 ವರ್ಷಗಳಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನ ಆಗಿರಬಹುದು. ಇವೆಲ್ಲ ಕೃತಿಯ ರೂಪಕ್ಕೆ ಬಂದಿಲ್ಲ. ಕೇವಲ 350ರಷ್ಟು ನಾಟಕಗಳಷ್ಟೇ ಕೃತಿಯಾಗಿ ಬಂದಿವೆ. ದ್ರಾವಿಡ ಭಾಷೆಗಳಲ್ಲಿ ತಮಿಳನ್ನು ಬಿಟ್ಟರೆ ತುಳುವಿನಲ್ಲೇ ಅತಿ ಹೆಚ್ಚು ಶಬ್ದ ಭಂಡಾರ ಇದೆ. ಮೊದಲಿನಿಂದಲೂ ತುಳುವಿಗೆ ರಾಜಾಶ್ರಯ ಇಲ್ಲದಿರುವುದರಿಂದ ಭಾಷೆ ಬೆಳೆಯಲು ಅವಕಾಶ ಸಿಗಲಿಲ್ಲ. ತುಳು ಭಾಷೆಯ ಪ್ರಾಚೀನತೆ ಎಷ್ಟು ಅಂದರೆ, ಕ್ರಿಸ್ತ ಪೂರ್ವ ಕಾಲದಲ್ಲಿಯೂ ಗ್ರೀಕ್ ನಾಟಕಗಳಲ್ಲಿ ತುಳು ಭಾಷೆಯ ಶಬ್ದಗಳು ಸಿಕ್ಕಿದ್ದವು. ಅಷ್ಟು ಪ್ರಾಚೀನ ಹಿನ್ನೆಲೆಯ ಅಸ್ತಿತ್ವ ಕನ್ನಡದಲ್ಲಿ ಸಿಕ್ಕಿಲ್ಲ. ಅದೇ ಕಾರಣಕ್ಕೆ ತುಳು ಭಾಷೆಗೆ ರಾಜ್ಯ ಸ್ಥಾನಮಾನ ಸಿಗಬೇಕೆಂಬ ಬೇಡಿಕೆ ಇಟ್ಟಿರುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಪಿಬಿ ಹರೀಶ್ ರೈ, ಪತ್ರಕರ್ತರ ಸಂಘದ ಶ್ರೀನಿವಾಸ ಇಂದಾಜೆ ಪ್ರೆಸ್ ಕ್ಲಬ್ ವತಿಯಿಂದ ಅರವಿಂದ ಬೋಳಾರ್ ಅವರನ್ನು ಸನ್ಮಾನಿಸಿದರು.

The Mangaluru Press Club held its "Guest of Honour Award" ceremony on Wednesday, recognising actor Aravind Bolar for his contributions to the arts. P B Harish Rai, president of the Press Club, welcomed the gathering, while journalist Harish Motukan served as the event's host. Among those present were Ramakrishna Rao, president of Patrika Bhavana Trust; general secretary Ibrahim Adkastala; and programme convenor Sathish Ira.