Protest Mangalore, 400 KV, Catholic sabha: ಉಡುಪಿ- ಕಾಸರಗೋಡು 40 ಕೆವಿ ವಿದ್ಯುತ್ ಲೈನ್ ಅಳವಡಿಕೆಗೆ ವಿರೋಧ, ಮಂಗಳೂರಿನಲ್ಲಿ ಬೃಹತ್ ಕಾಲ್ನಡಿಗೆ ಜಾಥಾ, ಕೃಷಿ ಭೂಮಿ ಬಿಟ್ಟುಕೊಡಲ್ಲ ಎಂದು ಘೋಷಣೆ

20-02-25 06:48 pm       Mangalore Correspondent   ಕರಾವಳಿ

ಉಡುಪಿ – ಕಾಸರಗೋಡು ಮಧ್ಯೆ 40 ಕೆವಿ ಸಾಮರ್ಥ್ಯದ ವಿದ್ಯುತ್ ಲೈನ್ ಅಳವಡಿಸುವುದಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೃಷಿಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ವಿವಿಧ ಕೃಷಿಕ ಪರ ಸಂಘಟನೆಗಳು ಮಂಗಳೂರಿನ ಕೆಥೋಲಿಕ್ ಸಭಾ ನೇತೃತ್ವದಲ್ಲಿ ನಗರದಲ್ಲಿ ಕಾಲ್ನಡಿಗೆ ಜಾಥಾ ಕೈಗೊಂಡು ಸರ್ಕಾರಕ್ಕೆ ವಿರೋಧ ಸೂಚಿಸಿವೆ.

ಮಂಗಳೂರು, ಫೆ.20: ಉಡುಪಿ – ಕಾಸರಗೋಡು ಮಧ್ಯೆ 40 ಕೆವಿ ಸಾಮರ್ಥ್ಯದ ವಿದ್ಯುತ್ ಲೈನ್ ಅಳವಡಿಸುವುದಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೃಷಿಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ವಿವಿಧ ಕೃಷಿಕ ಪರ ಸಂಘಟನೆಗಳು ಮಂಗಳೂರಿನ ಕೆಥೋಲಿಕ್ ಸಭಾ ನೇತೃತ್ವದಲ್ಲಿ ನಗರದಲ್ಲಿ ಕಾಲ್ನಡಿಗೆ ಜಾಥಾ ಕೈಗೊಂಡು ಸರ್ಕಾರಕ್ಕೆ ವಿರೋಧ ಸೂಚಿಸಿವೆ.

ಬೆಳಗ್ಗೆ ಅಂಬೇಡ್ಕರ್ ವೃತ್ತದಿಂದ ಸಾವಿರಾರು ಮಂದಿ ಮಹಿಳೆಯರು, ಕೃಷಿಕರು, ಕೃಷಿ ಸಂಘಟನೆಗಳ ಪದಾಧಿಕಾರಿಗಳು ಕಾಲ್ನಡಿಗೆಯಲ್ಲಿ ಮಿನಿ ವಿಧಾನ ಸೌಧ ಬಳಿಗೆ ಬಂದು ತಮ್ಮ ಒಕ್ಕೊರಲ ವಿರೋಧವನ್ನು ಹೇಳಿಕೊಂಡಿದ್ದಾರೆ. ನಾವು ಯೋಜನೆಯ ವಿರೋಧಿಗಳಲ್ಲ, ಆದರೆ ಯೋಜನೆ ನೆಪದಲ್ಲಿ ಸಾವಿರಾರು ಎಕರೆ ಸಮೃದ್ಧ ಕೃಷಿ ಭೂಮಿಯನ್ನು ಹಾಳುಗೆಡವುದಕ್ಕೆ ಬಿಡುವುದಿಲ್ಲ. ಇದಕ್ಕೆ ನಮ್ಮ ಆಕ್ಷೇಪವಿದ್ದು, ಜನರ ಆರೋಗ್ಯ, ಕಾಳಜಿ ಬದಿಗಿಟ್ಟು ಮಾಡುವ ಅಭಿವೃದ್ಧಿಯನ್ನು ಕೈಬಿಡಿ ಎಂದು ಘೋಷಣೆ ಹಾಕಿದ್ದಾರೆ.

ಕೃಷಿ ವಿರೋಧಿ ಧೋರಣೆಯನ್ನು ಬದಿಗಿಡಿ ಎನ್ನುವ ಭಿತ್ತಿಪತ್ರಗಳನ್ನು ತೋರಿಸುತ್ತ ಮಹಿಳೆಯರು ಕೃಷಿಕರ ಪರ ಘೋಷಣೆಗಳನ್ನು ಕೂಗುತ್ತ ಕಾಲ್ನಡಿಗೆಯಲ್ಲಿ ಸಾಗಿದ್ದಾರೆ. ಜಾಥಾಕ್ಕೆ ಫಾದರ್ ಜೆಬಿ ಸಲ್ದಾನ ಚಾಲನೆ ನೀಡಿದರು. ಪ್ರತಿಭಟನಾ ಸಭೆಯಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ಟಲಿನೋ ಮಾತನಾಡಿ, ನಮಗೆಲ್ಲ ಕೃಷಿಕರೇ ಆಧಾರ. ಕೃಷಿ ಭೂಮಿ ಇಲ್ಲದೆ ನಮ್ಮ ಜೀವನ ನಡೆಯಲ್ಲ. ಅಂತಹ ಕೃಷಿಕರ ಜೀವನಾಡಿಯನ್ನೇ ಬರಿದು ಮಾಡುವ ಯೋಜನೆ ನಮಗೆ ಬೇಡ. ನಾವೆಲ್ಲ ಕೃಷಿಕರ ಪರ ಇದ್ದೇವೆ, ವಿದ್ಯುತ್ ಲೈನ್ ಒಯ್ಯುವುದಕ್ಕೆ ಈಗಿನ ತಂತ್ರಜ್ಞಾನದಲ್ಲಿ ಬಹಳಷ್ಟು ದಾರಿಗಳಿವೆ. ಭೂಮಿಯಡಿಯಲ್ಲಿ ಅಥವಾ ಸಮುದ್ರ ಮುಖೇನ ಸಾಗಿಸಬಹುದು, ಅದು ಬಿಟ್ಟು ಕೃಷಿ ನಾಶ ಮಾಡಿ ಭೂಮಿಯ ಮೇಲೆ ವಿದ್ಯುತ್ ತಂತಿ ಎಳೆದರೆ ಅದರಿಂದ ಪರೋಕ್ಷವಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಆಗುತ್ತದೆ. ತಂತಿಯ ಆಸುಪಾಸಿನಲ್ಲಿ ಬದುಕುವ ಮಂದಿಗೂ ತೊಂದರೆ ಎದುರಾಗುತ್ತದೆ ಎಂದು ಹೇಳಿದರು.

ಕೆಥೋಲಿಕ್ ಸಭಾ ಮಾಜಿ ಅಧ್ಯಕ್ಷ ಪಾವ್ಲ್ ರಾಲ್ಫಿ ಡಿಸೋಜ ಮಾತನಾಡಿ, ನಾವು ಈಗಾಗಲೇ ನಾಲ್ಕು ವರ್ಷದಿಂದ ಪ್ರತಿಭಟನೆ ಮಾಡುತ್ತಿದ್ದೇವೆ, ಎಲ್ಲ ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದೇವೆ, ಆದರೆ ನಮ್ಮ ಪರವಾಗಿ ಯಾರೂ ನಿಂತಿಲ್ಲ. ಮುಂದೆ ಯಾರೇ ಚುನಾವಣೆಗೆ ಬಂದರೂ ನಾವು ಸಹಕಾರ ನೀಡುವುದಿಲ್ಲ. ಅಲ್ಲದೆ, ಈ ಯೋಜನೆ ವಿರೋಧಿಸಿ ಅನ್ನ ಸತ್ಯಾಗ್ರಹ ನಡೆಸುವುದಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು. 

ಪ್ರಾಣ ಕೊಟ್ಟೇವು, ಕೃಷಿ ಭೂಮಿ ಕೊಡುವುದಿಲ್ಲ ;

ಪರಿಸರದ ಜೊತೆಗೆ ಮಾನವ ಸಹಿತ ಇಡೀ ಜೀವಸಂಕುಲಕ್ಕೆ ಮಾರಕವಾಗಿರುವ ಉಡುಪಿ ಕಾಸರಗೋಡು 400kv ಮತ್ತು ಪಾಲಡ್ಕ-ಕಡಂದಲೆ 400/220 KV ಯೋಜನೆಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ, ಈ ವಿಚಾರದಲ್ಲಿ ಪ್ರಾಣ ಕೊಡಲು ಸಿದ್ಧರಿದ್ದೇವೆಯೇ ಹೊರತು ಕೃಷಿ ಭೂಮಿ ಬಿಡಲು ಸಾಧ್ಯವಿಲ್ಲ ಎಂದು ಕಥೊಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿಸೋಜಾ ಪಾನೀರ್ ಎಚ್ಚರಿಸಿದ್ದಾರೆ.

ರೈತ ಸಂಘ, ಹಸಿರು ಸೇನೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಮಾತನಾಡಿ, ಉದ್ದೇಶಿತ ಯೋಜನಾ ಮಾರ್ಗದ ಭೂಮಾಲಕರುಗಳಿಗೆ ಯಾವುದೇ ನೋಟಿಸು, ತಿಳುವಳಿಕೆ ಪತ್ರಗಳನ್ನು ನೀಡದೆ, ಕೃಷಿಕರನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ, ಭೂಮಾಲಕರು, ಸಾರ್ವಜನಿಕರು ಮತ್ತು ಯೋಜನಾ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ತೀವ್ರ ವಿರೋಧವನ್ನು ದಿಕ್ಕರಿಸಿ, ದಬ್ಬಾಳಿಕೆ ಹಾಗೂ ಅಮಾನವೀಯ ವರ್ತನೆ ಮೂಲಕ ಕಾಮಗಾರಿ ನಡೆಸಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದರು.

ಪ್ರತಿಭಟನಾ ಸಭೆಯಲ್ಲಿ ಸಂತೋಷ್ ಕರ್ನೆಲಿಯೋ, ಆಲ್ವಿನ್ ಪ್ರಶಾಂತ್ ಮೊಂತೇರೊ, ವಿಕ್ಟರ್ ಡಿಸೋಜ, ಅಲ್ಫೋನ್ಸ್ ಡಿಸೋಜ, ಕೃಷಿಕ ಸಂಘದ ಚಂದ್ರಹಾಸ ಶೆಟ್ಟಿ ಇನ್ನಾ, ಕಿಸಾನ್ ಸಂಘ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಕುಡುಪು, NITK ನಿವೃತ್ತ ಪ್ರೊಫೆಸರ್ ಕುಮಾರ್ ರೈ, ಉಡುಪಿ ಜಿಲ್ಲಾ ಕೃಷಿಕರ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಶರ್ಮ  ಮೊದಲಾದವರು ಮಾತನಾಡಿದರು.

A large-scale protest rally was held in the city on Thursday, February 20 morning against the Udupi-Kasaragod 400 KV power transmission line and the Paladka-Kadandale 400/220 KV project. The rally was jointly organized by the Catholic Sabha Mangalore Pradesh, Catholic Sabha Udupi Pradesh, and several other organisations.