Mangalore University, Ramegowda; ಮಂಗಳೂರು ವಿವಿಯ ಗೆಸ್ಟ್ ಹೌಸ್ನಲ್ಲಿ ಅಕ್ರಮ ವಾಸ ; 20 ತಿಂಗಳ ಕಾಲ ಅತಿಥಿ ಬಂಗಲೆಯನ್ನೇ ಮನೆ ಮಾಡಿಕೊಂಡ ಅಧಿಕಾರಿ, ವಿವಿಗೆ ಆರ್ಥಿಕ ದುಸ್ಥಿತಿಯಿದ್ದರೂ, ಬಿಲ್ ಚುಕ್ತಾ ?!

11-03-25 11:09 pm       Giridhar Shetty, Mangalore   ಕರಾವಳಿ

ಸರಕಾರದ ಉನ್ನತ ದರ್ಜೆಯ ಅಧಿಕಾರಿಯೊಬ್ಬರಿಗೆ ವಿವಿಯ ಆಡಳಿತವೇ ದೊಡ್ಡ ಮಟ್ಟದ ಆರ್ಥಿಕ ವಿನಾಯ್ತಿ ನೀಡಿರುವ ವಿಚಾರ ತಿಳಿದುಬಂದಿದೆ...

ಮಂಗಳೂರು, ಮಾ.12 : ಮಂಗಳೂರು ವಿಶ್ವವಿದ್ಯಾನಿಲಯ ಆರ್ಥಿಕವಾಗಿ ದುಸ್ಥಿತಿಯಲ್ಲಿದೆ ಎಂದು ಕುಲಪತಿ ಪ್ರೊ.ಪಿ.ಎಲ್. ಧರ್ಮ ಸಾರ್ವಜನಿಕ ವೇದಿಕೆಗಳಲ್ಲಿ ಹಲವು ಬಾರಿ ಹೇಳಿಕೊಂಡಿದ್ದಾರೆ. ಇದೇ ಕಾರಣಕ್ಕೆ ಕಳೆದ ಬಾರಿ ವಿವಿಯಲ್ಲಿ ಒಂಬತ್ತು ಸ್ನಾತಕೋತ್ತರ ವಿಭಾಗಗಳನ್ನೂ ಬಂದ್ ಮಾಡಲಾಗಿತ್ತು. ಅಲ್ಲದೆ, ವಿವಿಯಲ್ಲಿ ನಿವೃತ್ತರಾದವರಿಗೆ ಪಿಂಚಣಿ ನೀಡುವಲ್ಲಿ ಮತ್ತು ಅತಿಥಿ ಉಪನ್ಯಾಸಕರಿಗೆ ಸಕಾಲದಲ್ಲಿ ವೇತನ ನೀಡಲು ಆರ್ಥಿಕ ಸಂಪನ್ಮೂಲ ಕೊರತೆಯೇ ಕಾರಣ ಎಂದು ಹೇಳುತ್ತ ಬರಲಾಗಿದೆ. ಆದರೆ, ಸರಕಾರದ ಉನ್ನತ ದರ್ಜೆಯ ಅಧಿಕಾರಿಯೊಬ್ಬರಿಗೆ ವಿವಿಯ ಆಡಳಿತವೇ ದೊಡ್ಡ ಮಟ್ಟದ ಆರ್ಥಿಕ ವಿನಾಯ್ತಿ ನೀಡಿರುವ ವಿಚಾರ ತಿಳಿದುಬಂದಿದೆ.

ಮಂಗಳೂರಿನಲ್ಲಿ ಜಿಲ್ಲಾ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾಗಿ 2025ರ ಫೆಬ್ರವರಿ ತಿಂಗಳಿಗೆ ನಿವೃತ್ತರಾದ ಡಾ.ರಾಮೇ ಗೌಡ ಅವರು 2023ರ ಜುಲೈ 3ರಿಂದ ಸುಮಾರು 20 ತಿಂಗಳ ಕಾಲ ಮಂಗಳೂರು ವಿವಿಯ ಐಷಾರಾಮಿ ಅತಿಥಿ ಬಂಗಲೆ (ಕಾವೇರಿ ಗೆಸ್ಟ್ ಹೌಸ್) ಯನ್ನೇ ಅಕ್ರಮವಾಗಿ ತನ್ನ ಮನೆಯಾಗಿಸಿಕೊಂಡಿದ್ದರು. ಉನ್ನತ ಮಟ್ಟದ ಅಧಿಕಾರಿಗಳಿಗೆ ಖಾಸಗಿಯಾಗಿ ಮನೆ ಮಾಡಿಕೊಂಡಿರಲು ಸರಕಾರದಿಂದ ಭತ್ಯೆ ಇರುತ್ತದೆ. ಆದರೆ ಉನ್ನತ ಶಿಕ್ಷಣ ಇಲಾಖೆಯ ಪರವಾಗಿ ಮಂಗಳೂರು ವಿವಿಯನ್ನು ಪ್ರತಿನಿಧಿಸುವ ಪದನಿಮಿತ್ತ ಸಿಂಡಿಕೇಟ್ ಸದಸ್ಯ  ಸಿಂಡಿಕೇಟ್ ಸದಸ್ಯರೂ ಆಗಿದ್ದ ರಾಮೇಗೌಡ ಅದೇ ನೆಪದಲ್ಲಿ ಮಂಗಳೂರು ವಿವಿಯ ಕಾವೇರಿ ಗೆಸ್ಟ್ ಹೌಸ್ ನಲ್ಲಿ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಉಳಿದುಕೊಂಡಿದ್ದಾರೆ.

ವಿವಿಯಲ್ಲಿ ಸಿಂಡಿಕೇಟ್ ಸಭೆ ಇನ್ನಿತರ ಕೆಲಸಗಳಿದ್ದರೆ, ಸದಸ್ಯರಿಗೆ ಗೆಸ್ಟ್ ಹೌಸ್ ನಲ್ಲಿ ಆ ದಿನದ ಮಟ್ಟಿಗೆ ಉಚಿತವಾಗಿ ಉಳಿದುಕೊಳ್ಳುವುದಕ್ಕೆ ಅವಕಾಶ ಇದೆ. ಅದು ಬಿಟ್ಟರೆ ವಿಶ್ವವಿದ್ಯಾನಿಲಯಕ್ಕೆ ಬರುವ ಅತಿಥಿಗಳಿಗೆ, ಇನ್ನಿತರ ಅಧಿಕಾರಿಗಳಿಗೆ ಬಂದು ಹೋಗುವ ಸಂದರ್ಭದಲ್ಲಿ ಉಳಿದುಕೊಳ್ಳಲು ಅವಕಾಶ ಇರುತ್ತದೆ. ಕಾವೇರಿ ಅತಿಥಿ ಬಂಗಲೆ ಸಂಪೂರ್ಣ ಹವಾನಿಯಂತ್ರಿತ ಹೈಫೈ ಗೆಸ್ಟ್ ರೂಮ್ ಆಗಿದ್ದು, ಯಾವುದೇ ಕಾರಣಕ್ಕೂ ಅಧಿಕಾರಿಗಳಿಗಾಗಲೀ, ಇನ್ನಿತರ ಸಿಂಡಿಕೇಟ್ ಸದಸ್ಯರಾಗಲೀ ಅಲ್ಲಿ ತಿಂಗಳುಗಟ್ಟಲೆ ಮನೆ ಮಾಡಿಕೊಂಡಿರಲು ಅವಕಾಶ ಇರುವುದಿಲ್ಲ.

ಆದರೆ ಜಿಲ್ಲಾ ಶಿಕ್ಷಣ ಜಂಟಿ ನಿರ್ದೇಶಕರಾಗಿದ್ದ ರಾಮೇಗೌಡರಿಗೆ ವಿವಿಯ ಕುಲಪತಿ ಮತ್ತು ರಿಜಿಸ್ಟ್ರಾರ್ ಅಕ್ರಮವಾಗಿ ಉಳಿದುಕೊಳ್ಳುವುದಕ್ಕೆ ಅವಕಾಶ ನೀಡಿರುವುದಲ್ಲದೆ, ಅದರ ವೆಚ್ಚಕ್ಕೆ ಬಿಲ್ ನೀಡದೆ ಮನ್ನಾ ಮಾಡಿದ್ದಾರೆ. ಈ ಬಗ್ಗೆ ವ್ಯಕ್ತಿಯೊಬ್ಬರು ಆರ್ಟಿಐ ಮೂಲಕ ಮಾಹಿತಿ ಪಡೆದಿದ್ದು, ವಿಶ್ವವಿದ್ಯಾನಿಲಯದ ಅಧಿಕಾರಿಗಳೇ ಜುಲೈ 2023ರಿಂದ ಡಿಸೆಂಬರ್ 2024ರ ವರೆಗೆ ಸಿಂಡಿಕೇಟ್ ಸಭೆ ಹೊರತುಪಡಿಸಿ ರಾಮೇ ಗೌಡರು 362 ದಿನಗಳ ಕಾಲ ಅತಿಥಿ ಬಂಗಲೆಯಲ್ಲಿ ಉಳಿದುಕೊಂಡಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಆನಂತರವೂ, 2025ರ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿಯೂ ರಾಮೇಗೌಡರು ಅದೇ ವಸತಿ ಗೃಹವನ್ನು ತನ್ನ ಖಾಸಗಿ ಮನೆ ಮಾಡಿಕೊಂಡು ಉಳಿದಿದ್ದಾರೆ. ಇವರು ಫೆಬ್ರವರಿ 25ರಂದು ಸೇವಾ ನಿವೃತ್ತಿಯ ಕಾರಣಕ್ಕೆ ಕೆಲಸ ಮುಗಿಸ್ಕೊಂಡು ತನ್ನ ಸ್ವಂತ ಊರು ಮೈಸೂರಿಗೆ ನಿರ್ಗಮಿಸಿದ್ದಾರೆ.

ವಿಶೇಷ ಅಂದ್ರೆ, ತಾವು ಉಳಿದುಕೊಂಡ ಅವಧಿಗೆ ವೆಚ್ಚ ಭರಿಸಿಕೊಳ್ಳುವಂತೆ ವಿವಿಯ ಆಡಳಿತಕ್ಕೆ ರಾಮೇಗೌಡರು ಪತ್ರ ಬರೆದಿದ್ದಾರೆ. ಅದರಲ್ಲಿ ತನ್ನದೇ ಆದ ಲೆಕ್ಕವನ್ನೂ ಬರೆದುಕೊಂಡಿದ್ದು, ತಾನು ಸಿಂಡಿಕೇಟ್ ಸಭೆಗೆ ಹೆಚ್ಚುವರಿ ಸಂಭಾವನೆ ಪಡೆದಿಲ್ಲ, ಈ ಕಾರಣಕ್ಕೆ ಈ ಮೊತ್ತದಲ್ಲಿ ರಿಯಾಯ್ತಿಯನ್ನೂ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೆ ವಿವಿಯ ಆಡಳಿತ ರಾಮೇಗೌಡರಿಗೆ ಅತಿಥಿ ಬಂಗಲೆಯಲ್ಲಿ ಉಳಿದುಕೊಂಡಿದ್ದಕ್ಕೆ ಪ್ರತಿಯಾಗಿ ಬಿಲ್ಲನ್ನೇ ನೀಡದೆ ಚುಕ್ತಾ ಮಾಡಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ರಾಜು ಮೊಗವೀರ ಅವರಲ್ಲಿ ಕೇಳಲು ಫೋನ್ ಮಾಡಿದರೆ ಸ್ವೀಕರಿಸಿಲ್ಲ. ಕುಲಪತಿ ಧರ್ಮ ಅವರು, ಮಾಧ್ಯಮಕ್ಕೆ ನಾವು ಲಿಖಿತ ಉತ್ತರ ಮಾತ್ರ ನೀಡುತ್ತೇವೆ, ಸರಕಾರದ ಉನ್ನತ ಮಟ್ಟದ ಅಧಿಕಾರಿಗಳ ಬಗ್ಗೆ ಫೋನಲ್ಲಿ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಆರ್ಟಿಐ ಮಾಹಿತಿ ಪ್ರಕಾರ, ಕಾವೇರಿ ಗೆಸ್ಟ್ ಹೌಸ್ ನಲ್ಲಿ ಆಫೀಶಿಯಲ್ (ತಾತ್ಕಾಲಿಕ ನೆಲೆಯಲ್ಲಿ ಬರುವ ಅಧಿಕಾರಿ ವರ್ಗ) ಅಲ್ಲದೆ ಇತರರು ಉಳಿದುಕೊಂಡರೆ ದಿನವೊಂದಕ್ಕೆ ಒಂದು ಸಾವಿರ ರೂ. ಬಿಲ್ ಮಾಡಬೇಕಾಗುತ್ತದೆ. ಆಫೀಶಿಯಲ್ ಆಗಿರುವವರು ಅಂದರೆ ವಿವಿಯಲ್ಲಿ ಕೆಲಸ ಮಾಡುತ್ತ ಉಳಿದುಕೊಂಡವರು ದಿನಕ್ಕೆ 300 ರೂ. ನೀಡಬೇಕಾಗುತ್ತದೆ. ರಾಮೇಗೌಡರು 2023ರ ಜುಲೈನಿಂದ ಫುಲ್ ಟೈಮ್ ಆಗಿ ಉಳಿದುಕೊಂಡಿದ್ದರೆ, ಆದಿತ್ಯವಾರವೂ ಸೇರಿ ದಿನಕ್ಕೆ ಒಂದು ಸಾವಿರದಂತೆ ಬಿಲ್ ಮಾಡಬೇಕಾಗುತ್ತದೆ. ಯಾಕಂದ್ರೆ, ಅವರು ಹೊರಗೆ ಹೋದರೂ ಅವರ ವಸ್ತ್ರ, ಬ್ಯಾಗ್ ಇನ್ನಿತರ ವಸ್ತುಗಳಿರುವುದರಿಂದ ಅವರಿಲ್ಲದಿದ್ದರೂ ಆ ಕೊಠಡಿಯನ್ನು ಬೇರೆಯವರಿಗೆ ಕೊಡುವಂತಿಲ್ಲ. ಹಾಗಾದಲ್ಲಿ ಅವರ ಕೊಠಡಿಯ ಮೊತ್ತ ಒಂದೂವರೆ ವರ್ಷಕ್ಕೆ ಕೆಲವು ಲಕ್ಷ ಮೀರುತ್ತದೆ.

ಸರಕಾರಿ ಅತಿಥಿ ಬಂಗಲೆಗಳು ಇರುವುದು ಸರಕಾರದ ಅಧಿಕಾರಿಗಳು ಅಥವಾ ಇನ್ನಿತರ ಗಣ್ಯರಿಗೆ ತಾತ್ಕಾಲಿಕ ನೆಲೆಯಲ್ಲಿ ಉಳಿದುಕೊಳ್ಳಲು ಮಾತ್ರ. ಅದನ್ನು ಯಾರು ಕೂಡ ತಮ್ಮ ಮನೆಯಾಗಿಸ್ಕೊಂಡು ಅದರ ಉದ್ದೇಶಕ್ಕೆ ಧಕ್ಕೆ ತರುವುದಕ್ಕೆ ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಆದರೆ ಈ ನೀತಿಯನ್ನು ಮಂಗಳೂರು ವಿವಿಯ ಅಧಿಕಾರಿಗಳು ಗಾಳಿಗೆ ತೂರಿದ್ದಾರೆ. ವಿವಿಗೆ ಆರ್ಥಿಕ ದುರ್ಗತಿ ಇದ್ದರೂ, ಉನ್ನತ ಮಟ್ಟದ ಅಧಿಕಾರಿ ಎಂಬ ನೆಲೆಯಲ್ಲಿ ಬಿಲ್ ತೋರಿಸಿಕೊಳ್ಳದೆ ಮೊತ್ತವನ್ನು ಮನ್ನಾ ಮಾಡಿಕೊಂಡಿದ್ದಾರೆ.

It has come to light that Ramegowda, former joint director of the higher educaiton department, Mangalore, has been residing rent-free at the university's guest house for the past 20 months. This revelation comes at a time when the university is facing significant financial challenges. Sources indicate that Ramegowda's prolonged stay at the university guest house, which is intended for temporary accommodation of visiting dignitaries and official guests, has sparked outrage among faculty and staff. Many are questioning why the university administration allowed this situation to persist for such an extended period, especially given the financial constraints faced by the institution.