Mangalore BJP Janakrosha Rally, Protest: ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ವನ್ ಆಗಿದ್ದನ್ನು ಸಿಎಂ ಆರ್ಥಿಕ ಸಲಹೆಗಾರರೇ ಹೇಳಿದ್ದಾರೆ, ಗ್ಯಾರಂಟಿ ಹೆಸರಲ್ಲಿ ಜನರನ್ನು ಲೂಟಿ ಮಾಡುತ್ತಿದ್ದಾರೆ ; ಜನಾಕ್ರೋಶ ಯಾತ್ರೆಯಲ್ಲಿ ಬಿವೈ ವಿಜಯೇಂದ್ರ

09-04-25 10:23 pm       Mangalore Correspondent   ಕರಾವಳಿ

ಬಿಜೆಪಿ ಸರಕಾರ ಇದ್ದಾಗ ದೇಶದಲ್ಲಿ ಗುಜರಾತ್ ಬಿಟ್ಟರೆ ಕರ್ನಾಟಕವೇ ಅಭಿವೃದ್ಧಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ವನ್ ಆಗಿಬಿಟ್ಟಿದೆ.

ಮಂಗಳೂರು, ಎ.9: ಬಿಜೆಪಿ ಸರಕಾರ ಇದ್ದಾಗ ದೇಶದಲ್ಲಿ ಗುಜರಾತ್ ಬಿಟ್ಟರೆ ಕರ್ನಾಟಕವೇ ಅಭಿವೃದ್ಧಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ವನ್ ಆಗಿಬಿಟ್ಟಿದೆ. ಈ ಮಾತನ್ನು ನಾವು ಹೇಳುತ್ತಿಲ್ಲ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರೇ ಈ ಮಾತು ಹೇಳಿದ್ದಾರೆ. ಕಾಂಗ್ರೆಸ್ ಸರಕಾರದ ಸ್ಥಿತಿ ಎಲ್ಲಿಗೆ ಮುಟ್ಟಿದೆ ಎನ್ನುವುದನ್ನು ಅವರ ನಾಯಕರೇ ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಮಂಗಳೂರಿನಲ್ಲಿ ರಾಜ್ಯ ಸರಕಾರದ ನಿರಂತರ ಬೆಲೆಯೇರಿಕೆ ಮತ್ತು ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲು ನೀಡುವುದನ್ನು ವಿರೋಧಿಸಿ ನಡೆದ ಜನಾಕ್ರೋಶ ಯಾತ್ರೆಯಲ್ಲಿ ವಿಜಯೇಂದ್ರ ಮಾತನಾಡಿದರು. ಹಿಂದು ಹುಡುಗಿಯರ ಮೇಲೆ ಅತ್ಯಾಚಾರ, ಆಕ್ರಮಣ ಆಗುತ್ತಿದ್ದರೂ ಸಿದ್ದರಾಮಯ್ಯ ಸರಕಾರ ಆವರ ಆತ್ಮರಕ್ಷಣೆಗೆ ಯೋಜನೆ ರೂಪಿಸಿಲ್ಲ. ಮುಸ್ಲಿಮ್ ಹುಡುಗಿಯರ ರಕ್ಷಣೆಗಾಗಿ ಸಿದ್ದರಾಮಯ್ಯ ಹಣ ತೆಗೆದಿಟ್ಟಿದ್ದಾರೆ. ಅಲ್ಲದೆ, ಮುಸ್ಲಿಮ್ ಹೆಣ್ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆಯಲು ಹಣ ಕೊಡುತ್ತಿದ್ದಾರೆ ಎಂದು ಹೇಳಿದ ವಿಜಯೇಂದ್ರ, ದಕ್ಷಿಣ ಕನ್ನಡ ಜಿಲ್ಲೆಯ ಜನರು ಇವರಿಗೆ ಓಟ್ ಕೊಟ್ಟಿಲ್ಲ ಎಂದು ಅನುದಾನ ಕೊಡುತ್ತಿಲ್ಲ. ಬಿಜೆಪಿ ಸರಕಾರ ಇದ್ದಾಗ ದಕ್ಷಿಣ ಕನ್ನಡ ಜಿಲ್ಲೆಗೆ 19 ಸಾವಿರ ಕೊಟ್ಟಿತ್ತು. ಕಾಂಗ್ರೆಸ್ ಸರಕಾರ ಎರಡು ವರ್ಷದಲ್ಲಿ ಏನಾದ್ರೂ ಕೊಟ್ಟಿದೆಯಾ ಎಂದು ಪ್ರಶ್ನಿಸಿದರು.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ಕರ್ನಾಟಕವನ್ನು ಎಟಿಎಂ ಮಾಡುತ್ತೆ ಎಂದು ನಾವು ಹೇಳಿದ್ದೆವು. ಅದೇ ರೀತಿ ಕರ್ನಾಟಕವನ್ನು ಕಾಂಗ್ರೆಸಿಗರು ಮಾಡಿದ್ದಾರೆ. ಗ್ಯಾರಂಟಿ ಹೆಸರಲ್ಲಿ ಬೆಲೆಯೇರಿಸಿ ಜನರಿಂದ ಹಣ ಲೂಟಿ ಮಾಡುತ್ತಿದ್ದಾರೆ. ಜನರು ಗ್ಯಾರಂಟಿ ಹೆಸರಲ್ಲಿ ಓಟು ಕೊಟ್ಟು ಮೋಸ ಹೋಗಿದ್ದಾರೆ ಎಂದು ಹೇಳಿದರು. ಸಿದ್ದರಾಮಯ್ಯ ಬೆಂಗಳೂರಿಗೆ ಮಾತ್ರ ಸಿಎಂ ಆಗಿದ್ದಾರೆ, ಬೆಂಗಳೂರು ಬಿಟ್ಟು ಹೊರಬಂದಲ್ಲಿ ಡಿಕೆಶಿ ತಮ್ಮ ಸ್ಥಾನವನ್ನು ಕಿತ್ತುಕೊಳ್ಳುತ್ತಾರೆಂಬ ಭಯ ಇದೆ, ಜೊತೆಗೆ ಜನರು ಬೆಲೆಯೇರಿಸಿದ ವಿಚಾರದಲ್ಲಿ ಬಡಿಗೆ ತೆಗೆದು ತಲೆಗೆ ಬಡಿಯುತ್ತಾರೆಂಬ ಭಯವೂ ಇದೆ ಎಂದು ಟೀಕಿಸಿದರು.

ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ಕಾಂಗ್ರೆಸ್ ಸರಕಾರ ಬಂದಾಗಲೆಲ್ಲ ಜಿಹಾದಿ ಶಕ್ತಿಗಳು ವಿಜೃಂಭಿಸುತ್ತಿದ್ದು, ಹಿಂದುಗಳ ಹತ್ಯೆ ಮಾಡುತ್ತಿದ್ದಾರೆ. ಈಗಲೂ ಅದೇ ಸ್ಥಿತಿಯಾಗಿದ್ದು, ಬಿಜೆಪಿ ಕಾರ್ಯಕರ್ತರು ಈ ಸರಕಾರವನ್ನು ಕಿತ್ತೊಗೆಯಲು ಪಣ ತೊಡಬೇಕು. ಜಿಹಾದಿ ಶಕ್ತಿಗಳೇ ಸಿದ್ದರಾಮಯ್ಯ ಹೆಸರಲ್ಲಿ ಆಡಳಿತ ನಡೆಸುತ್ತಿದ್ದು, ಪಿಎಫ್ಐ ಕ್ರಿಮಿಗಳ ಹೆಸರಲ್ಲಿದ್ದ ಕೇಸುಗಳನ್ನು ಹಿಂಪಡೆಯುತ್ತಿದ್ದಾರೆ. ಹಿಂದೆ ನಾವು ಆಡಳಿತದಲ್ಲಿದ್ದಾಗ ಹಿಂದು ಸಂಘಟನೆಗಳ ಕೇಸನ್ನು ಹಿಂದಕ್ಕೆ ಪಡೆದಿರಲಿಲ್ಲ. 2028ರಲ್ಲಿ ಬಿಜೆಪಿ ಸರಕಾರ ಬಂದೇ ಬರುತ್ತದೆ, ಬಂದ ಕೂಡಲೇ ಹಿಂದು ಕಾರ್ಯಕರ್ತರ ಮೇಲಿನ ಕೇಸನ್ನು ಹಿಂಪಡೆದೇ ತೀರುತ್ತೇವೆ ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ನಾಚಿಕೆ ಮಾನ ಮರ್ಯಾದೆ ಇಲ್ಲದ ಸರಕಾರ ಇದ್ದರೆ ಅದು ಸಿದ್ದರಾಮಯ್ಯ ಸರಕಾರ. ಸೋತ ಅಭ್ಯರ್ಥಿಗಳು ಕೂಡ ಈ ಸರಕಾರದಲ್ಲಿ ಆಡಳಿತ ಮಾಡುತ್ತಿದ್ದಾರೆ. ವರ್ಗಾವಣೆಯಲ್ಲಿ ಕೈಯಾಡಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ, ಹಿಂದು ವಿರೋಧಿ ನೀತಿಯನ್ನು ಕೊನೆಯಾಗಿಸಲು ಪ್ರತಿ ಬೂತಿನಲ್ಲೂ ಕಾರ್ಯಕರ್ತರು ಸಜ್ಜಾಗಬೇಕು ಎಂದು ಹೇಳಿದರು.

ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಬಿಜೆಪಿ ನಾಯಕರ ಜೊತೆಗೆ ಕಾರ್ಯಕರ್ತರು ಕಾಲ್ನಡಿಗೆ ಯಾತ್ರೆ ನಡೆಸಿ ಮಿನಿ ವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಿದರು. ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಿಎಂ ಸದಾನಂದ ಗೌಡ, ಸುನಿಲ್ ಕುಮಾರ್, ಎನ್. ರವಿಕುಮಾರ್ ಸೇರಿದಂತೆ ಜಿಲ್ಲೆಯ ಶಾಸಕರು, ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

The State BJP organised a 'Janakrosha Rally' from Jyothi Circle to the Clock Tower on Wednesday, April 9, protesting against the Siddaramaiah-led state government.