Operation Sindhoor, MP Brijesh Chowta, Mangalore: ಆಪರೇಷನ್ ಸಿಂಧೂರ್ ; ನವ ಭಾರತದ ಅಪ್ರತಿಮ ಶಕ್ತಿ ಜಗತ್ತಿಗೆ ಸಾರಿದ ಐತಿಹಾಸಿಕ ದಿನ ; ಸಂಸದ ಕ್ಯಾ. ಚೌಟ ಪ್ರತಿಕ್ರಿಯೆ 

07-05-25 03:36 pm       Mangalore Correspondent   ಕರಾವಳಿ

"ಆಪರೇಷನ್ ಸಿಂಧೂರ್ ಕೇವಲ  ಭಯೋತ್ಪಾದಕರ ವಿರುದ್ದ ಕಾರ್ಯಾಚರಣೆ ಮಾತ್ರ ಆಗಿರಲಿಲ್ಲ, ಬದಲಾಗಿ ನವ ಭಾರತದ ಅಪ್ರತಿಮ ಶಕ್ತಿಯನ್ನು ಜಗತ್ತಿಗೆ ಸಾರಿದ ಐತಿಹಾಸಿಕ ದಿನ" ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಬಣ್ಣಿಸಿದ್ದಾರೆ. 

ಮಂಗಳೂರು, ಮೇ 7 : "ಆಪರೇಷನ್ ಸಿಂಧೂರ್ ಕೇವಲ  ಭಯೋತ್ಪಾದಕರ ವಿರುದ್ದ ಕಾರ್ಯಾಚರಣೆ ಮಾತ್ರ ಆಗಿರಲಿಲ್ಲ, ಬದಲಾಗಿ ನವ ಭಾರತದ ಅಪ್ರತಿಮ ಶಕ್ತಿಯನ್ನು ಜಗತ್ತಿಗೆ ಸಾರಿದ ಐತಿಹಾಸಿಕ ದಿನ" ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಬಣ್ಣಿಸಿದ್ದಾರೆ. 

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಅತಿಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ಮಧ್ಯರಾತ್ರಿ ನಡೆಸಿದ ವೈಮಾನಿಕ ದಾಳಿಯ ಕುರಿತಂತೆ ಪ್ರತಿಕ್ರಿಯಿಸಿರುವ ಸಂಸದರು,  ’ಸಿಂಧೂರ ’ ಎನ್ನುವುದು ರಾಷ್ಟ್ರದ ವೀರತ್ವ, ಧೈರ್ಯ ಮತ್ತು ಸಂಕಲ್ಪದ ಪ್ರತೀಕವಾಗಿ ಹೊರಹೊಮ್ಮಿದೆ. ನಮ್ಮ ಸೇನೆಯ ವ್ಯವಸ್ಥಿತ ಹಾಗೂ ಕೆಚ್ಚೆದೆಯ ಕಾರ್ಯಾಚರಣೆಯ ಮೂಲಕ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ’ ಎಂದು ಹೇಳಿದ್ದಾರೆ. 

ಹೊಸ ಭಾರತವನ್ನು ಯಾರಾದರೂ ಕೆಣಕಿದರೆ, ನಮ್ಮ ಉತ್ತರವು ಇತಿಹಾಸವನ್ನೇ ನಡುಗಿಸುವಂತಹ ಶಕ್ತಿಯನ್ನು ಹೊಂದಿರುತ್ತದೆ.  ಕೇವಲ 25 ನಿಮಿಷಗಳಲ್ಲಿ ನಡೆದ ಪರಿಣಾಮಕಾರಿ ಕಾರ್ಯಾಚರಣೆಯಲ್ಲಿ ನಮ್ಮ ಸೇನೆಯು ಭಯೋತ್ಪಾದಕ ಅಜ್ಮಲ್‌ ಕಸಬ್‌ನ ತರಬೇತಿ ಕೇಂದ್ರ ಸೇರಿ 9 ಪ್ರದೇಶಗಳಲ್ಲಿನ 21 ಉಗ್ರರ ಅಡಗುತಾಣಗಳನ್ನು ಕ್ಷಿಪಣಿ ದಾಳಿ ಮಾಡಿ ನಾಶ ಮಾಡಿರುವುದು ಬದಲಾದ ಭಾರತ ನೀಡಿದ ಪ್ರತಿಕ್ರಿಯೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಢ ಮತ್ತು ಅಚಲ ನಾಯಕತ್ವದಲ್ಲಿ, ಭಾರತವು ಮತ್ತೊಮ್ಮೆ ಭಯೋತ್ಪಾದನೆ ಅಥವಾ ಅದನ್ನು ಬೆಂಬಲಿಸುವವರನ್ನು ಸಹಿಸುವುದಿಲ್ಲ ಎಂದು ಮತ್ತೊಮ್ಮೆ ವಿಶ್ವಕ್ಕೆ ತೋರಿಸಿಕೊಟ್ಟಿದೆ ಎಂದು ಪ್ರತಿಪಾದಿಸಿದ್ದಾರೆ. 

ನಾಗರಿಕರಿಗೆ ಹಾನಿಯಾಗದಂತೆ ನಮ್ಮ ಸೇನೆಯ ಜವಾಬ್ದಾರಿಯುತ ಮತ್ತು ಪರಿಣಾಮಕಾರಿ ಕಾರ್ಯ ನಿಜಕ್ಕೂ ಶ್ಲಾಘನೀಯ. ಭಯೋತ್ಪಾದಕ ಹಾಗೂ ಪಾಕಿಸ್ತಾನದ ಕುತಂತ್ರ ವಿರುದ್ಧ ಪ್ರತೀಕಾರ ತೀರಿಸಬೇಕೆಂಬ ಭಾರತೀಯರ ಅಪೇಕ್ಷೆ ಈಡೇರಿದೆ. ಉಗ್ರರು ಹಾಗೂ ಅವರ ಸಹಚರರು ಎಲ್ಲೇ ಅಡಗಿ ಕುಳಿತರೂ, ಅವರೆಲ್ಲರನ್ನೂ ನುಗ್ಗಿ ಹೊಡೆದು ಸಂಹಾರ ಮಾಡುವ ಅತ್ಯಂತ ಬಲಿಷ್ಠ ರಾಷ್ಟ್ರ ಎಂಬುದನ್ನು ನಮ್ಮ ಹೆಮ್ಮೆಯ ಭಾರತ ತೋರಿಸಿ ಕೊಟ್ಟಿದೆ. ಆ ಮೂಲಕ ಇತ್ತೀಚೆಗೆ ಪ್ರಧಾನಮಂತ್ರಿ ಬಿಹಾರದಲ್ಲಿ ಮಾಡಿದ್ದ ಶಪಥ, ವಾಗ್ದಾನವನ್ನು ನೆರವೇರಿಸಿದ್ದಾರೆ ಎಂದು ಹೇಳಿದ್ದಾರೆ.

Operation Sindhoor, A Historic Day Showcasing New India's Unmatched Power to the World, Says MP Capt Chowta in Mangalore.