ಬ್ರೇಕಿಂಗ್ ನ್ಯೂಸ್
04-06-25 02:26 pm Giridhar Shetty, Mangaluru ಕರಾವಳಿ
ಮಂಗಳೂರು, ಜೂನ್ 4 : ಈ ಸಲ ಕಪ್ ನಮ್ದೇ ಎನ್ನುವ ಘೋಷವಾಕ್ಯ ನೀವು ಎಲ್ಲೆಡೆ ಕೇಳ್ತಾ ಇರಬಹುದು. ಇದನ್ನು ಸೃಷ್ಟಿಸಿದ್ದೇ ಬಹುರಾಷ್ಟ್ರೀಯ ಕಂಪನಿಗಳು ಅಂದರೆ ನೀವು ನಂಬಲಿಕ್ಕಿಲ್ಲ. ಹೌದು.. ಭಾರತದಲ್ಲಿ ಇರುವಷ್ಟು ಕ್ರಿಕೆಟ್ ಹುಚ್ಚು ಬೇರೆ ಯಾವ ದೇಶದಲ್ಲೂ ಇಲ್ಲ ಎನ್ನುವುದನ್ನೇ ಬಂಡವಾಳ ಮಾಡಿಕೊಂಡಿರುವ ಕಂಪನಿಗಳು ಐಪಿಎಲ್ ಹೆಸರಲ್ಲಿ ಯುವಜನರನ್ನು ಆಕರ್ಷಿಸಿ ಏನೋ ಯುದ್ಧ ಗೆದ್ದಿರುವಂತೆ ಶೋಬಾಜಿ ಮಾಡ್ತಿವೆ. ಮಾಧ್ಯಮಗಳಿಗೆಲ್ಲ ಇನ್ನಿಲ್ಲದಷ್ಟು ಜಾಹೀರಾತು ಸುರಿದು ಜನರನ್ನೇ ಯಾಮಾರಿಸುತ್ತಿದ್ದರೆ, ಜನಸಾಮಾನ್ಯ ಸಮೂಹ ಸನ್ನಿಯ ರೀತಿ ಐಪಿಎಲ್ ಕ್ರಿಕೆಟ್ ಮೇಲೆ ಇನ್ನಿಲ್ಲದ ಹುಚ್ಚುತನ ಬೆಳೆಸಿಕೊಂಡಿದ್ದಾನೆ.
ಐಪಿಎಲ್ ಈ ಬಾರಿಯದ್ದು 18ನೇ ಸೀಸನ್. ಇದರ ಹಿಂದಿರುವುದು ಯಾರದ್ದೋ ಆಟ, ಇನ್ಯಾರದ್ದೋ ಗೂಟ ಎನ್ನುವ ಕಲೆಗಾರಿಕೆ. ಕಂಪನಿಗಳು ಆಟಗಾರರನ್ನು ಖರೀದಿಸಿ, ಒಂದಷ್ಟು ಹೂಡಿಕೆ ಮಾಡಿ, ಅದರ ಹತ್ತು ಪಟ್ಟು ಹಣ ಗಳಿಸುವುದರಲ್ಲಿ ತೊಡಗಿದ್ದರೆ, ಇತ್ತ ಯುವಜನರು ತಾವೇ ಏನೋ ಸಾಧನೆ ಮಾಡಿದವರಂತೆ ತೇಲಾಡುತ್ತಿದ್ದಾರೆ. ಈ ಬಾರಿ ಐಪಿಎಲ್ ಬಗ್ಗೆ ಯುವಕರ ಹುಚ್ಚಾಟ ವಿಪರೀತ ಎನ್ನುವಷ್ಟು ತಾರಕಕ್ಕೇರಿದ್ದು, ಇದಕ್ಕೆ ಸಾಕ್ಷಿ ಎನ್ನುವಂತೆ ನಿನ್ನೆ ರಾತ್ರಿ ಆರ್ ಸಿಬಿ ಗೆಲುವಿನ ನೆಪದಲ್ಲಿ ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಜನರು ಬೀದಿ ರಂಪ ಮಾಡಿದ್ದಾರೆ. ಈ ಸಲ ಕಪ್ ನಮ್ದೇ ಎನ್ನುವ ಘೋಷವಾಕ್ಯ ಮುಂದಿಟ್ಟು ಟಿವಿ ಚಾನೆಲ್, ಪತ್ರಿಕೆಗಳನ್ನೇ ಖರೀದಿಸಿ ಬಿಟ್ಟು ಕಂಪನಿಗಳು ಸಮೂಹ ಸನ್ನಿ ಎಬ್ಬಿಸಿದ್ದರೆ ಯುವಜನರು ಹುಚ್ಚರಂತೆ ವರ್ತಿಸುತ್ತಿದ್ದಾರೆ.
ಕ್ರಿಕೆಟ್ ಎನ್ನುವುದೀಗ ಕೇವಲ ಆಟವಾಗುಳಿದಿಲ್ಲ. ಕಂಪನಿಗಳಿಗೆ, ದಲ್ಲಾಳಿಗಳಿಗೆ ಹಣ ದೋಚುವ ಸರಕಾಗಿದ್ದರೆ, ಜಾಹೀರಾತು ಕಂಪನಿಗಳು ತಮ್ಮ ಉತ್ಪನ್ನವನ್ನು ಕೆಲವು ಕೋಟಿ ಸುರಿದು ಇಡೀ ಜಗತ್ತಿಗೆತ್ತರಿಸುವ ಹುನ್ನಾರದಲ್ಲಿರುತ್ತವೆ. ಇಷ್ಟೇ ಅಲ್ಲ, ಈ ಕೊಳ್ಳುಬಾಕತನದಲ್ಲಿ ಮಾಧ್ಯಮ ಜಗತ್ತೂ ಹಿಂದೆ ಬಿದ್ದಿಲ್ಲ. ದೊಡ್ಡ ಮಟ್ಟದ ಆದಾಯವನ್ನು ಬುಟ್ಟಿಗೆ ಹಾಕ್ಕೊಂಡು ಜನರಲ್ಲಿ ಭ್ರಮಾಲೋಕ ಸೃಷ್ಟಿಸುವುದರಲ್ಲಿ ಪಾಲು ಒದಗಿಸುತ್ತಿವೆ. ಐಪಿಎಲ್ ಆಡೋದ್ರಲ್ಲಿ ಪಾಕಿಸ್ತಾನ ಬಿಟ್ಟು ಜಗತ್ತಿನ ಬಹುತೇಕ ಕ್ರಿಕೆಟ್ ಆಡುವ ರಾಷ್ಟ್ರಗಳ ಆಟಗಾರರಿದ್ದಾರೆ. ಅಂದರೆ, ಈ ಐಪಿಎಲ್ ಸೀಸನ್ ಆಗೋ ವೇಳೆ ಬೇರಾವುದೇ ದೇಶಗಳ ಮಧ್ಯೆ ಕ್ರಿಕೆಟ್ ಆಗುವಂತಿಲ್ಲ. ಅಷ್ಟರ ಮಟ್ಟಿಗೆ ಐಸಿಸಿಯನ್ನೇ ಈ ಐಪಿಎಲ್ ಆಯೋಜಿಸುವ ಕಂಪನಿಗಳು ಕಂಟ್ರೋಲ್ನಲ್ಲಿ ಇಟ್ಟುಕೊಂಡಿವೆ. ಭಾರತದಲ್ಲಿ ಕ್ರಿಕೆಟ್ ಅತಿದೊಡ್ಡ ಮಾರ್ಕೆಟ್ ಎನ್ನುವುದನ್ನು ಅರಿತಿರುವ ಈ ಕಂಪನಿಗಳು ಕಳೆದ ಹತ್ತು ವರ್ಷಗಳಲ್ಲಿ ಸಮೂಹ ಸನ್ನಿಯನ್ನೇ ಸೃಷ್ಟಿಸುತ್ತ ಬಂದಿವೆ. ಇದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ, ಮಾಡೋದೂ ಇಲ್ಲ.
ಆಯಾ ಪ್ರದೇಶಕ್ಕೂ ಫ್ರಾಂಚೈಸಿ ಕಂಪನಿಗೂ ಸಂಬಂಧ ಇಲ್ಲದಿದ್ದರೂ ದೇಶದ ಒಂದೊಂದು ನಗರಗಳ ಹೆಸರಿನಲ್ಲಿ ಕಂಪನಿಗಳು ಫ್ರಾಂಚೈಸಿ ಮಾಡಿಕೊಂಡು ಆ ಭಾಗದ ಜನರಲ್ಲಿ ಭ್ರಮಾಲೋಕ ಸೃಷ್ಟಿಸುವುದೇ ಮುಠ್ಠಾಳತನ. ಇದಕ್ಕಾಗಿ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲ ಮಾಧ್ಯಮಗಳಿಗೂ ಸಾಕಷ್ಟು ದುಡ್ಡು ಸುರಿಯುತ್ತವೆ. ಇಲ್ಲಿ ಯಾರು ಗೆದ್ದರೂ, ಸೋತರೂ ಈ ಕಂಪನಿಗಳಿಗೇನು ನಷ್ಟ ಇರುವುದಿಲ್ಲ. ಬೇರೆ ಬೇರೆ ರೂಪದಲ್ಲಿ ಲಾಭ ಮಾಡಿಕೊಳ್ಳುವುದೇ ಹಿಂದಿರುವ ಐಯಾಲಜಿ. ತಮಗೆ ಬೇಕಾದ ಆಟಗಾರರನ್ನು ಮೊದಲೇ ಹಣ ಕೊಟ್ಟು ಖರೀದಿಸುವ ಈ ಕಂಪನಿಗಳು, ಅವರನ್ನು ತಮಗೆ ಬೇಕಾದಂತೆ ಕುಣಿಸಿ ಬುಟ್ಟಿ ತುಂಬಿಸಿಕೊಳ್ಳುತ್ತವೆ, ಅದರಲ್ಲಿ ಬೆಟ್ಟಿಂಗೂ ಇರುತ್ತದೆ, ಬುಕ್ಕಿಂಗೂ ಇರುತ್ತದೆ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ.
ಈ ಬಾರಿ ಐಪಿಎಲ್ ಟ್ರೋಫಿ ಗೆದ್ದ ಆರ್ ಸಿಬಿ ತಂಡ ಬೆಂಗಳೂರು ಹೆಸರಿನಲ್ಲಿದೆ ಬಿಟ್ಟರೆ ಈ ತಂಡದಲ್ಲಿ ಯಾರೂ ಕನ್ನಡಿಗರಿಲ್ಲ. ಕರ್ನಾಟಕದವರೂ ಇಲ್ಲ. ಈ ಹಿಂದೆ ರಾಹುಲ್ ಸೇರಿದಂತೆ ಕೆಲವು ಕನ್ನಡಿಗರಿದ್ದರೂ, ಆನಂತರ ಹೆಚ್ಚು ಬಿಡ್ ಮಾಡಿದ ತಂಡದತ್ತ ಹೊರಳಿದ್ದಾರೆ. ಅತಿ ಹೆಚ್ಚು ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿಯೇ ಆರ್ ಸಿಬಿಯಲ್ಲಿ ದೊಡ್ಡ ಆಕರ್ಷಣೆ. ಅದೇ ಕಾರಣಕ್ಕೆ ಆರ್ ಸಿಬಿ ಅಂದ್ರೆ ಕೊಹ್ಲಿ ಎನ್ನೋ ಘೋಷಣೆ, ಅದೇ ಕಾರಣಕ್ಕೆ ಕಪ್ ನಮ್ದೇ ಎನ್ನುವ ಹುಚ್ಚಾಟ. ಇದನ್ನೆಲ್ಲ ಸಮೂಹ ಸನ್ನಿಯಂತೆ ಜನರ ನಡುವೆ ಹಬ್ಬಿಸುತ್ತಿರುವುದು ಮಾಧ್ಯಮಗಳೇ ಎನ್ನುವುದು ದುರ್ದೈವ.
ನಿನ್ನೆ ಫೈನಲ್ ಪಂದ್ಯ ಆಗೋಕೂ ಮೊದಲೇ ಕಪ್ ನಮ್ದೇ ಘೋಷವಾಕ್ಯ ಮೊಳಗತೊಡಗಿತ್ತು. ಗೆಲುವು ದಕ್ಕುತ್ತಿದ್ದಂತೆ ಪ್ರಮುಖ ನಗರಗಳ ಬೀದಿಗಳಲ್ಲಿ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರೆ. ಅಲ್ಲಲ್ಲಿ ವಾಹನ ಮೆರವಣಿಗೆ ನಡೆಸಿದ್ದಾರೆ. ಕುಡಿದು ತೂರಾಟ ಮಾಡಿದ್ದಾರೆ. ಶಿವಮೊಗ್ಗದಲ್ಲಿ ವಾಹನ ರ್ಯಾಲಿ ಮಾಡಿ ಅಪಘಾತದಲ್ಲಿ ಯುವಕನೊಬ್ಬ ಬಲಿಯಾಗಿದ್ದಾನೆ. ಬೆಂಗಳೂರಿನಲ್ಲಿ ಯುವಜನರ ಹುಚ್ಚಾಟವನ್ನು ತೋರಿಸುವುದೇ ಟಿವಿ ಮಾಧ್ಯಮಗಳ ದೊಡ್ಡ ಸುದ್ದಿಯಾಗಿತ್ತು. ಮಂಗಳೂರಿನ ಯೆಯ್ಯಾಡಿ, ಪಂಪ್ವೆಲ್, ಕಂಕನಾಡಿ, ಲಾಲ್ ಬಾಗ್ ಹೀಗೆ ಎಲ್ಲ ಕಡೆಯೂ ರಸ್ತೆಗಳಲ್ಲಿ ನಡುರಾತ್ರಿಯಲ್ಲೂ ಯುವಕರು ಅತಿರೇಕದ ಅಭಿಮಾನ ಮೆರೆದಿದ್ದಾರೆ ಎನ್ನುವುದೇ ಇವರೆಲ್ಲ ಯಾವ ಭ್ರಮಾಲೋಕದಲ್ಲಿದ್ದಾರೆ ಎನ್ನುವುದಕ್ಕೆ ಸಾಕ್ಷಿ.
ಐಪಿಎಲ್ ಆಟ ಅಷ್ಟೇ, ಯಾರಿಗಿದೆ ಲಾಭ ?
ಐಪಿಎಲ್ ಯಾವುದೇ ದೇಶವನ್ನು ಪ್ರತಿನಿಧಿಸುವುದಿಲ್ಲ. ಯಾವುದೇ ತಂಡವೂ ಒಂದೂ ರಾಜ್ಯವನ್ನಾಗಲೀ, ಪ್ರದೇಶವನ್ನಾಗಲೀ ಪ್ರತಿನಿಧಿಸುವುದೂ ಇಲ್ಲ. ಆದರೆ ನಮ್ಮ ಯುವಜನರು ಮಾತ್ರ ಬೆಂಗಳೂರು ನಮ್ಮದೇ ತಂಡ ಅನ್ನುವ ಭ್ರಮೆಯಲ್ಲಿ ಈ ಸಲ ಕಪ್ ನಮ್ದೇ ಎನ್ನುವ ಹುಚ್ಚಿನಲ್ಲಿ ಮೆರೆದಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ ಐಪಿಎಲ್ ಸೀಸನಿನ ಜಾಹಿರಾತು ಗಳಿಕೆಯೇ 1500 ಕೋಟಿ ಆಗಿತ್ತು. ಈಗಿನದ್ದು ಅದಕ್ಕಿಂತಲೂ ಹೆಚ್ಚಿರುತ್ತದೆ. 2024-25ರ ಐಪಿಎಲ್ ಸೀಸನಲ್ಲಿ ಅಂದಾಜು ಗಳಿಕೆ ಹತ್ತು ಸಾವಿರ ಕೋಟಿಯಂತೆ. ಒಂದು ತಂಡಕ್ಕೆ 125 ಕೋಟಿಯಷ್ಟು ಸುರಿಯುವ ಕಂಪನಿಗಳು ಅದರಲ್ಲಿ ಏಳೆಂಟು ಪಟ್ಟು ಗಳಿಸುತ್ತವೆ ಎನ್ನುವುದೇ ಐಪಿಎಲ್ ಒಳಗಿನ ಹೂರಣವನ್ನು ತೋರಿಸುತ್ತದೆ. ಇಷ್ಟೆಲ್ಲ ಮಾಡಿದರೂ ನಮ್ಮ ಸರಕಾರಕ್ಕೆ ಅಥವಾ ದೇಶಕ್ಕಾಗಲೀ ಏನು ಲಾಭ ಇದೆ, ಹೂಡಿಕೆ ಮೇಲಿನ ತೆರಿಗೆ ಬಿಟ್ಟರೆ ಈ ಕಂಪನಿಗಳಾಗಲೀ, ಆಟಗಾರರಾಗಲೀ ಚಿಕ್ಕಾಸನ್ನೂ ದೇಣಿಗೆ ನೀಡಲ್ಲ. ಇಷ್ಟಿದ್ದರೂ, ಮಾಧ್ಯಮಗಳ ಮೂಲಕ ಐಪಿಎಲ್ ಎನ್ನುವುದೇ ಇಡೀ ದೇಶದ ಜನರ ಅತಿ ದೊಡ್ಡ ಹಬ್ಬ ಎನ್ನುವ ರೀತಿ ಬಿಂಬಿಸುತ್ತಿರುವುದು, ಜನರು ಅದನ್ನೇ ಅನುಕರಿಸುತ್ತಿರುವುದನ್ನು ನೋಡಿದರೆ ಹೇಸಿಗೆ ಹುಟ್ಟುತ್ತದೆ.
The slogan “This time the cup is ours” echoed across cities as IPL 2025 ended, with RCB fans celebrating wildly. But behind the glitter lies a growing concern—multinational companies using cricket mania to generate massive profits while youth are swept into a fantasy world created by media and marketing.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 03:07 pm
Mangalore Correspondent
ದಶಮ ಸಂಭ್ರಮದಲ್ಲಿ ಮಿಥುನ್ ರೈ ಸಾರಥ್ಯದ ಪಿಲಿನಲಿಕೆ ;...
09-09-25 02:30 pm
Mangalore Accident, Kulur, Death: ಕುಳೂರಿನಲ್ಲಿ...
09-09-25 11:48 am
Gopadi Beach Drowning, Kundapura: ಕುಂದಾಪುರ ;...
08-09-25 12:08 pm
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm