ಬ್ರೇಕಿಂಗ್ ನ್ಯೂಸ್
23-06-25 10:28 pm Giridhar Shetty, HK Staffer ಕರಾವಳಿ
ಉಡುಪಿ, ಜೂನ್ 22 : ರಾಜಕೀಯ ಅಂದರೆ ಏಳು ಬೀಳು ಇದ್ದದ್ದೇ. ಒಬ್ಬರ ಏಳಿಗೆ ಸಹಿಸಲಾರದೆ ಕಾಲೆಳೆಯುವುದು, ಮೇಲಿದ್ದವರನ್ನು ತುಳಿದು ಕೆಳಗೆ ಬೀಳಿಸುವುದು ರಾಜಕೀಯ ಪಟ್ಟುಗಳಲ್ಲಿ ಸಾಮಾನ್ಯ. ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳಿಗೆ ಬಿಜೆಪಿ ಅಧ್ಯಕ್ಷರ ನೇಮಕ ಮಾಡಿದೆ. ಬಹುತೇಕ ಕಡೆ ಒಂದೂವರೆ ವರ್ಷ ಹಿಂದೆ ನೇಮಕಗೊಂಡಿದ್ದವರನ್ನೇ ಮತ್ತೆ ಮೂರು ವರ್ಷಕ್ಕೆ ಅಧಿಕೃತ ಮುದ್ರೆ ಒತ್ತಲಾಗಿದೆ. ಕೆಲವು ಕಡೆ ಮಾತ್ರ ಬದಲಾವಣೆ ಆಗಿದೆ, ಅದರಲ್ಲಿ ಉಡುಪಿ ಜಿಲ್ಲೆಯದ್ದೂ ಒಂದು.
ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಕಿಶೋರ್ ಕುಂದಾಪುರ ಅವರನ್ನು ಬದಲಿಸಿದ್ದು ಹೊರಗಿನವರಿಗೆ ಅನಿರೀಕ್ಷಿತ ಅಂತ ಅನಿಸಿದರೂ, ಮೊನ್ನೆ ಅವರ ಮಾತು ನೋಡಿದರೆ ಅವರಿಗೆ ಮೊದಲೇ ಸುಳಿವು ಸಿಕ್ಕಿತ್ತು ಎನ್ನುವುದು ತಿಳಿಯುತ್ತದೆ. ಮೊದಲಿನಿಂದಲೂ ಪಕ್ಷದ ಶಿಸ್ತಿನ ಸಿಪಾಯಿ, ಯಾವುದೇ ಹುದ್ದೆಗೇರಿದರೂ ಸಾಮಾನ್ಯ ಕಾರ್ಯಕರ್ತ ಎನ್ನುವ ರೀತಿಯಲ್ಲೇ ಚಟುವಟಿಕೆಯಲ್ಲಿದ್ದ ಕಿಶೋರ್ ಅವರಿಗೆ ತನ್ನನ್ನು ಅರ್ಧದಲ್ಲಿ ಕೆಳಗಿಳಿಸಿದ್ದು ಮನಸ್ಸಿಗೆ ನೋವಾಗಿಸಿದೆ. ಅದಕ್ಕಾಗಿಯೇ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ನೇರ ಮಾತುಗಳನ್ನಾಡಿ ಮೇಲಿನ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಮೊದಲಿನಿಂದಲೂ ವ್ಯಕ್ತಿಗಿಂತ ಪಕ್ಷ ದೊಡ್ಡದು ಎನ್ನುವ ನೆಲೆಯಲ್ಲಿ ಕಾರ್ಯ ಚಟುವಟಿಕೆ ಮಾಡುತ್ತ ಬಂದವರು ಕಿಶೋರ್. 2013ರಲ್ಲಿ ಕುಂದಾಪುರದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷದ ವಿರುದ್ಧ ಬಂಡಾಯ ಸಾರಿದಾಗ, ಪಕ್ಷದ ಪರವಾಗಿ ನಿಲ್ಲುವುದಕ್ಕೆ ಅಭ್ಯರ್ಥಿಗಳೇ ಇರಲಿಲ್ಲ. ಆ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾಗಿದ್ದ ಕಿಶೋರ್ ಅವರನ್ನೇ ಅಭ್ಯರ್ಥಿ ಮಾಡಲಾಗಿತ್ತು. 15 ಸಾವಿರ ಮತಗಳಷ್ಟೇ ಬಿಜೆಪಿಗೆ ಬಿದ್ದರೂ, 2018ರ ಚುನಾವಣೆ ವೇಳೆಗೆ ಮತ್ತೆ ಕಿಶೋರ್ ಅವರದ್ದೇ ಹೆಸರು ಕಾರ್ಯಕರ್ತರ ನಡುವೆ ಮುನ್ನೆಲೆಗೆ ಬಂದಿತ್ತು. ಸೋಲುವುದಕ್ಕೆ ನೀವಾದ್ರಿ, ಗೆಲ್ಲುವುದಕ್ಕೆ ಆಗಲ್ವಾ ಎಂಬ ಮಾತು ಬಂದಿತ್ತು. ಅಂದಿನ ಸಂದರ್ಭದಲ್ಲಿ ತಾನೇ ಆಕಾಂಕ್ಷಿ ಎನ್ನುವ ಬದಲು ಕಿಶೋರ್, ನಾವೆಲ್ಲ ಪಕ್ಷದ ಕಾರ್ಯಕರ್ತರು, ಯಾರು ಕೂಡ ಕಿಶೋರ್ ಕುಮಾರ್ ಬೆಂಬಲಿಗರು ಅನ್ನಬೇಡಿ ಎಂದು ಸ್ಪಷ್ಟನೆ ಹೇಳಿ ಕಾರ್ಯಕರ್ತರನ್ನು ಸಮಾಧಾನಿಸಿ ಪತ್ರ ಬರೆದಿದ್ದರು. ಆನಂತರ, ಪಕ್ಷೇತರ ಶಾಸಕರಾಗಿದ್ದ ಹಾಲಾಡಿ ಅವರನ್ನೇ 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿಸಿ ಗೆಲ್ಲಿಸಲಾಗಿತ್ತು.
2023ರ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದ ರಘುಪತಿ ಭಟ್ ಉಡುಪಿಯಿಂದ ಟಿಕೆಟ್ ತಪ್ಪಿಸಿಕೊಂಡಿದ್ದರಿಂದ ಕುಂದಾಪುರದಲ್ಲಿ ಅದೇ ಸಮುದಾಯಕ್ಕೆ ಸೇರಿದ ಕಿಶೋರ್ ಕೊಡ್ಗಿ ಅಭ್ಯರ್ಥಿಯಾಗಿದ್ದರು. ಆರೆಸ್ಸೆಸ್ ಹಿನ್ನೆಲೆಯ ಕುಟುಂಬದ ಕೊಡ್ಗಿ ಅವರ ಬಗ್ಗೆ ಎರಡು ಮಾತು ಇರಲಿಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟಿ ತಾನು ನಿಲ್ಲುವುದಿಲ್ಲ ಎಂದಿದ್ದರಿಂದ ಕಿಶೋರ್ ಕೊಡ್ಗಿ ಅವರನ್ನು ಅಭ್ಯರ್ಥಿ ಮಾಡಲಾಗಿತ್ತು. ಮೊಗವೀರ ಸಮುದಾಯದ ಕಿಶೋರ್ ಹೆಸರು ಇದ್ದರೂ, ಜಾತಿ ಕೋಟಾದ ಮೇಲೆ ಟಿಕೆಟ್ ಕಿಶೋರ್ ಕೊಡ್ಗಿ ಪಾಲಾಗಿತ್ತು. ಇತ್ತ ಉಡುಪಿಯಲ್ಲಿ ರಘುಪತಿ ಭಟ್ ಮಿಸ್ ಹೊಡೆದಿದ್ದರಿಂದ ಮೊಗವೀರ ಸಮುದಾಯದ ಯಶಪಾಲ್ ಸುವರ್ಣ ಬಿಜೆಪಿ ಅಭ್ಯರ್ಥಿಯಾಗಿದ್ದರು. ಇದರಿಂದ ಜಿಲ್ಲೆಯ ಮಟ್ಟಿಗೆ ಮೊಗವೀರ – ಬ್ರಾಹ್ಮಣ ಸಮನ್ವಯ ಅಲ್ಲಿಂದಲ್ಲಿಗೆ ಆಗಿತ್ತು. ಆದರೆ ಮುಂದಿನ ಬಾರಿಯೂ ಇಂತಹದ್ದೇ ಸಮನ್ವಯ ಉಳಿದೀದು ಎಂಬುದಕ್ಕೆ ಗ್ಯಾರಂಟಿ ಇಲ್ಲ.
ಇಂತಹ ಹೊತ್ತಿನಲ್ಲೇ ಕುಂದಾಪುರದಲ್ಲಿ ಪ್ರಬಲ ಸಂಘಟಕರಾಗಿ ಗುರುತಿಸಿಕೊಂಡಿದ್ದ ಕಿಶೋರ್ ಕುಂದಾಪುರ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಹುದ್ದೆಗೇರಿಸಲಾಗಿತ್ತು. ಆಮೂಲಕ ಮೊಗವೀರ ಸಮುದಾಯಕ್ಕೆ ದೊಡ್ಡ ಪಾಲು ನೀಡಲಾಗಿತ್ತು. ಹೊಸತಾಗಿ ಬಂದಿದ್ದ ವಿಜಯೇಂದ್ರ ಅವರ ತಂಡಕ್ಕೂ ಇಂತಹದ್ದೇ ಸೌಮ್ಯ ಮತ್ತ ನಿಷ್ಠಾವಂತ ವ್ಯಕ್ತಿ ಬೇಕಾಗಿತ್ತು. ಮೊದಲಿಗೆ ಅವರ ನೇಮಕದ ಬಗ್ಗೆ ಯಾರ ಅಪಸ್ವರವೂ ಇರಲಿಲ್ಲ. ಆದರೆ ಕಿಶೋರ್ ಜನಪ್ರಿಯತೆ ಹೆಚ್ಚುತ್ತಿದ್ದಂತೆ ಶಾಸಕರಲ್ಲಿಯೇ ಕೆಲವರಿಗೆ ಅಸಹನೆ ಮೂಡಿತ್ತು. ಇದೇ ರೀತಿ ಹೋದರೆ ತಮ್ಮ ಸ್ಥಾನಕ್ಕೆ ಮುಳ್ಳಾಗಬಹುದು ಅನ್ಕೊಂಡಿದ್ದರು ಕೆಲವರು. ಉಡುಪಿ ಶಾಸಕ ಯಶಪಾಲ್ ಸುವರ್ಣ ಇದೇ ಕಾರಣಕ್ಕೆ ಕಿಶೋರ್ ಬದಲಾವಣೆಗೆ ಮೊದಲಾಗಿ ಪಟ್ಟು ಹಾಕಿದ್ದರು ಎನ್ನುವ ಮಾತು ಕೇಳಿಬರುತ್ತಿದೆ. ಅಧ್ಯಕ್ಷ ಸ್ಥಾನಕ್ಕೇರಿದ ಎಂಟು ತಿಂಗಳಲ್ಲಿಯೇ ಇದರ ಸುಳಿವು ಸಿಕ್ಕಿತ್ತು ಎನ್ನುವುದನ್ನು ಸ್ವತಃ ಕಿಶೋರ್ ಅವರೇ ಹೇಳಿಕೊಂಡಿದ್ದಾರೆ. ಆದರೆ ಆಗಿನ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ತಂಡ ಶಾಸಕರ ಒತ್ತಡಕ್ಕೆ ಸೊಪ್ಪು ಹಾಕಿರಲಿಲ್ಲ. ಈ ಬಾರಿ ಸಂಘಟನಾ ಪರ್ವ ಹೆಸರಲ್ಲಿ ಜಿಲ್ಲಾಧ್ಯಕ್ಷರ ಕಾರ್ಯಕ್ಷಮತೆ ನೋಡುತ್ತ ಬಂದ ರಾಜ್ಯ ತಂಡಕ್ಕೆ ಕಿಶೋರ್ ವಿರುದ್ಧ ಸಂದೇಶ ನೀಡುವುದನ್ನು ಯಶಸ್ವಿಯಾಗಿ ಮಾಡಲಾಗಿತ್ತು.
ಒಂದೂವರೆ ವರ್ಷದಲ್ಲಿ ಜಿಲ್ಲಾಧ್ಯಕ್ಷ ಸ್ಥಾನ ಕಳಕೊಂಡ ವಿಷಯ ತಿಳಿಯುತ್ತಲೇ ಕಿಶೋರ್ ಕುಮಾರ್ ಅವಮಾನಿತರಾಗಿದ್ದರು. ಇದರ ಹಿಂದೆ ಯಾರು ಪಿತೂರಿ ಮಾಡಿದ್ದಾರೆ, ಯಾಕಾಗಿ ಮಾಡಿದ್ದಾರೆ ಎನ್ನುವುದನ್ನು ಅರಿತಿದ್ದರೂ, ಅದನ್ನು ಹೇಳಲು ಹೋಗದೆ ಉಳಿದೆಲ್ಲವನ್ನೂ ಹೇಳಿ ಜಿಲ್ಲಾಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರ ಮಾಡದೇ ಅಸಮಾಧಾನ ತೋರಿಸಿದ್ದಾರೆ. ನನ್ನಿಂದ ಅಧಿಕಾರ ಕಸಿದುಕೊಂಡಿದ್ದಾರೆ, ನನ್ನಲ್ಲಿ ಇಲ್ಲದ ಅಧಿಕಾರವನ್ನು ಹಸ್ತಾಂತರ ಮಾಡುವುದು ಹೇಗೆಂದು ಮಾರ್ಮಿಕ ಪ್ರಶ್ನೆಯಿಟ್ಟು ಕಾರ್ಯಕರ್ತರ ನಡುವಲ್ಲೇ ಸಂಚಲನ ಮೂಡಿಸಿದ್ದಾರೆ. ಇದಲ್ಲದೆ, ತನ್ನನ್ನು ಕಾರಣ ಇಲ್ಲದೆ ಇಳಿಸಿ ಯಾರದ್ದೋ ಹಿತಕ್ಕಾಗಿ ಬಲಿ ಕೊಡಲಾಗಿದೆ ಎನ್ನುವ ಸಂದೇಶ ಹೋಗುವಂತೆ ಮಾಡಿದ್ದಾರೆ. ಸಾಮಾಜಿಕ ಕೆಲಸಕ್ಕೆ ಪಕ್ಷವೇ ಆಗಬೇಕಿಲ್ಲ, ಜಗತ್ತು ದೊಡ್ಡದಿದೆ ಎನ್ನುತ್ತ ತನ್ನ ಹೊರೆಯನ್ನು ಇಳಿಸಿಬಿಟ್ಟಿದ್ದಾರೆ.
ಇತ್ತ ಕುಂದಾಪುರದಲ್ಲಿ ಕಿಶೋರ್ ಕೊಡ್ಗಿ ಮುಂದಿನ ಬಾರಿಯೂ ಶಾಸಕನಾಗಬೇಕೆಂಬ ಉಮೇದಿನಲ್ಲಿ ಇದ್ದಂತಿಲ್ಲ. ಇತ್ತ ಉಡುಪಿಯಲ್ಲಿ ರಘುಪತಿ ಭಟ್ಟರು ಮತ್ತೆ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಯಶಪಾಲ್ ಬದಲು ಭಟ್ಟರು ಸೀಟು ಪಡೆದುಕೊಂಡರೆ, ಕುಂದಾಪುರದ ಬ್ರಾಹ್ಮಣ ಕೋಟಾ ಖಾಲಿಯಾಗುತ್ತದೆ. ಆಗೊಂದ್ವೇಳೆ, ಕಿಶೋರ್ ಕುಮಾರ್ ಜಿಲ್ಲಾಧ್ಯಕ್ಷನಾಗಿಯೇ ಇದ್ದರೆ ಕುಂದಾಪುರದ ಟಿಕೆಟ್ ಅವರ ಪಾಲಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ರೀತಿಯ ಲೆಕ್ಕಾಚಾರ ಮತ್ತು ಎಷ್ಟಾದರೂ ಮತ್ತೊಬ್ಬ ಮೊಗವೀರ ಚೇತರಿಸಿದರೆ ತನ್ನ ಸ್ಥಾನಕ್ಕೆ ಕುತ್ತು ಎನ್ನುವುದನ್ನರಿತ ಶಾಸಕರು ಕಿಶೋರಾವಸ್ಥೆಯಲ್ಲೇ ಇವನ್ನೆಲ್ಲ ಚಿವುಟಿ ಹಾಕುವ ಯತ್ನ ಮಾಡಿದ್ದಾರೆನ್ನುವ ಮಾತು ಕಾರ್ಯಕರ್ತರಲ್ಲೇ ಕೇಳಿಬರುತ್ತಿದೆ.
ಬೈಂದೂರಿನಲ್ಲೂ ಬದಲಾವಣೆ ಆಗಿದ್ದೇಕೆ ?
ಇದೇ ವೇಳೆ, ಬೈಂದೂರು ಮಂಡಲ ಅಧ್ಯಕ್ಷರಾಗಿ ಐದು ವರ್ಷಗಳಿಂದ ಇದ್ದ ದೀಪಕ್ ಕುಮಾರ್ ಶೆಟ್ಟಿ ಅವರನ್ನು ಈ ಬಾರಿ ಬದಲಿಸಲಾಗಿದೆ. ಬದಲಾವಣೆ ಸಹಜ ಎಂದೆನಿಸಿದರೂ, ಇದು ಸಹಜವಾಗಿಯೇ ನಡೆದಿದ್ದಲ್ಲ. ಬೇರಾವುದೇ ಮಂಡಲ ಹುದ್ದೆ ಬದಲಾಗದಿದ್ದರೂ ಬೈಂದೂರಿಗೆ ಮಾತ್ರ ಕೈಹಾಕಲು ಕಾರಣ ಇದೆ. ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆಗೂ, ಅದೇ ಸಮುದಾಯದ ಮಂಡಲಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿಗೂ ಕಳೆದೊಂದು ವರ್ಷದಿಂದ ತಾಗಿ ಬಂದಿತ್ತು. ಕಳೆದ ಬಾರಿ ಕಿಶೋರ್ ಕುಮಾರ್ ಜಿಲ್ಲಾಧ್ಯಕ್ಷರಾದ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ದೀಪಕ್ ಶೆಟ್ಟಿ ಬದಲಾವಣೆ ಮಾಡಲೇಬೇಕೆಂದು ಗಂಟಿಹೊಳೆ ಪಟ್ಟು ಹಾಕಿದ್ದರು. ಆದರೆ ದೀಪಕ್ ಶೆಟ್ಟಿ ಕಾರ್ಯಕರ್ತರ ಒಡನಾಟ ಗಟ್ಟಿ ಇರಿಸಿಕೊಂಡಿದ್ದರಿಂದಲೋ ಏನೋ ಅದು ಸಾಧ್ಯವಾಗಿರಲಿಲ್ಲ.
ಈ ಸಲ ದೀಪಕ್ ಶೆಟ್ಟಿ ಅವರಲ್ಲಿ ರಾಜಿನಾಮೆ ಕೊಡಿಸುವಂತೆ ಮಾಡಿ, ಅಲ್ಲಿಗೆ ಮೊಗವೀರ ಸಮುದಾಯದ ಅನಿತಾ ಆರ್.ಕೆ. ಎಂಬ ಮಹಿಳೆಯನ್ನು ಮಂಡಲಾಧ್ಯಕ್ಷರನ್ನಾಗಿ ಮಾಡಲಾಗಿದೆ. ಆಮೂಲಕ ಇಬ್ಬರು ಶಾಸಕರು ಸೇರಿ ಒಂದು ಕಲ್ಲನ್ನೆತ್ತಿ ತಮ್ಮ ವಿರುದ್ಧ ಇದ್ದ ಎರಡು ಹಕ್ಕಿಗಳನ್ನು ಹೊಡೆದು ಹಾಕಿದ್ದಾರೆ. ಜಿಲ್ಲೆಯಲ್ಲಿ ಕಿಶೋರ್ ಅವರಿಂದ ತಪ್ಪಿಹೋದ ಮೊಗವೀರ ಸ್ಥಾನಕ್ಕೆ ಮಹಿಳೆಯನ್ನು ತಂದು, ಬೈಂದೂರಿನಲ್ಲಿ ತನ್ನ ಸ್ಥಾನಕ್ಕೆ ಕುತ್ತು ತರಬಹುದು ಎಂಬಂತಿದ್ದ ದೀಪಕ್ ಶೆಟ್ಟಿಯನ್ನೂ ದೂರ ಇರಿಸಲಾಗಿದೆ. ಇದಕ್ಕೆ ಹೇಳೋದು, ರಾಜಕೀಯದಲ್ಲಿ ಕತ್ತಿ ಬೀಸುತ್ತಲೇ ಇರುತ್ತದೆ. ಕಾಲೆಳೆದಾಟವೂ ನಡೆಯುತ್ತಲೇ ಇರುತ್ತದೆ. ತಮಗಾಗದವರನ್ನು ಮುಗಿಸುವ ಕೆಲಸವನ್ನು ಬಲಾಢ್ಯರು ಮಾಡುತ್ತಲೇ ಇರುತ್ತಾರೆ. ಉಡುಪಿ ಬಿಜೆಪಿಯಲ್ಲಿ ಫೈಟ್ ಇದ್ದರೂ, ಈ ಬಾರಿಯ ಬಡಿದಾಟ ಒಂಚೂರು ಸುದ್ದಿಯಾಗಿದೆ, ಅಷ್ಟೇ.
The recent removal of Kishore Kumar Kundapura as the Udupi District BJP President has sparked widespread speculation about internal power struggles, caste-based lobbying, and behind-the-scenes maneuvering within the party. Once considered a loyal and disciplined foot soldier of the party, Kishore’s abrupt exit has raised eyebrows and stirred political discussion both within and outside BJP circles.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 10:54 am
HK News Desk
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
03-09-25 11:03 pm
Mangalore Correspondent
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
Sowjanya Case, SIT, Uday Jain: 13 ವರ್ಷಗಳ ಬಳಿಕ...
03-09-25 03:45 pm
College student Missing, Mangalore: ಮಂಗಳೂರಿನಲ...
03-09-25 11:53 am
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm