Dharmasthala, Attack on YouTubers: ಯೂಟ್ಯೂಬರ್ ಮತ್ತು ಮಾಧ್ಯಮ ವರದಿಗಾರನ ಮೇಲೆ ಹಲ್ಲೆ ಘಟನೆ ; ಧರ್ಮಸ್ಥಳ ಬಳಿ 50-100 ಮಂದಿ ಸೇರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಎರಡು ಸುಮೊಟೋ ಸೇರಿ ಏಳು ಪ್ರಕರಣ ದಾಖಲಿಸಿದ ಪೊಲೀಸರು 

07-08-25 03:26 pm       Mangalore Correspondent   ಕರಾವಳಿ

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಾಳ ಕ್ರಾಸ್ ಎಂಬಲ್ಲಿ ಬುಧವಾರ ನಡೆದ ಸಂಜೆ ನಡೆದ ಹಲ್ಲೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಧರ್ಮಸ್ಥಳ ಠಾಣೆಯಲ್ಲಿ ನಾಲ್ಕು ಪ್ರಕರಣ ಹಾಗೂ ಬೆಳ್ತಂಗಡಿ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿ, ಆ.7 : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಾಳ ಕ್ರಾಸ್ ಎಂಬಲ್ಲಿ ಬುಧವಾರ ನಡೆದ ಸಂಜೆ ನಡೆದ ಹಲ್ಲೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಧರ್ಮಸ್ಥಳ ಠಾಣೆಯಲ್ಲಿ ನಾಲ್ಕು ಪ್ರಕರಣ ಹಾಗೂ ಬೆಳ್ತಂಗಡಿ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ಕುಡ್ಲ ರಾಂಪೇಜ್ ಯೂಟ್ಯೂಬರ್ ಬಂಟ್ವಾಳ ನಿವಾಸಿ ಅಜಯ್ ಎಂಬವರ ದೂರಿನಂತೆ, ಆ.6ರಂದು ಸಂಜೆ ಧರ್ಮಸ್ಥಳ ಪಾಂಗಳ ಕ್ರಾಸ್ ಎಂಬಲ್ಲಿ, ವ್ಯಕ್ತಿಯೋರ್ವರೊಂದಿಗೆ ವಿಡಿಯೊ ಬೈಟ್ ಮಾಡುತ್ತಿದ್ದಾಗ, ಸದ್ರಿ ಸ್ಥಳಕ್ಕೆ  ಸುಮಾರು 15 ರಿಂದ 50 ಜನರ ಕಿಡಿಗೇಡಿಗಳ ಗುಂಪು ಬಂದಿದ್ದು , ಕ್ಯಾಮರ ಮ್ಯಾನ್ ಸುಹಾಸ್, ಸಂಚಾರಿ ಸ್ಟುಡಿಯೋ ಸಂತೋಷ್ ಹಾಗೂ ಯುನೈಟೆಡ್ ಮೀಡಿಯಾ ಅಭಿಷೇಕ್ ಎಂಬವರುಗಳಿಗೆ ಹಲ್ಲೆ ನಡೆಸಿ, ಪಿರ್ಯಾದಿರವರ ಕ್ಯಾಮರಾವನ್ನು ರಸ್ತೆಗೆಸೆದು ಹಾನಿಗೊಳಿಸಿ, ಅದರಲ್ಲಿದ್ದ ಮೆಮೊರಿ ಕಾರ್ಡ್ ಕಳವು ಮಾಡಿ, ಬಳಿಕ ಜೀವ ಬೆದರಿಕೆ ಒಡ್ಡಿರುತ್ತಾರೆ. ಈ ಬಗ್ಗೆ ಅ.ಕ್ರ: 46/2025 ಕಲಂ: 189(2), 191(2), 115(2), 324(5) , 352, 307 ಜೊತೆಗೆ 190 ಬಿ.ಎನ್‌.ಎಸ್‌- 2023 ರಂತೆ ಪ್ರಕರಣದ ದಾಖಲಾಗಿರುತ್ತದೆ.

ಆ.6ರಂದು ಸಂಜೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಾಳ ಕ್ರಾಸ್ ಎಂಬಲ್ಲಿ ಸುಮಾರು 25 ರಿಂದ 50 ಜನರು, ಎರಡು ಪ್ರತ್ಯೇಕ ಗುಂಪುಗಳಾಗಿ ಅಪರಾಧಿಕ ಕೃತ್ಯ ನಡೆಸಲು ಅಕ್ರಮ ಕೂಟ ಸೇರಿದ್ದು, ಈ ವೇಳೆ ಸ್ಥಳಕ್ಕೆ ಬಂದ ಧರ್ಮಸ್ಥಳ ಪೊಲೀಸ್‌ ಠಾಣಾ ಉಪನಿರೀಕ್ಷಕರು ಹಾಗೂ ಇತರೆ ಪೊಲೀಸ್ ಅಧಿಕಾರಿಗಳು, ಯಾವುದೇ ಅಹಿತಕರ ಘಟನೆಗೆ ನಡೆಸದೇ ಸ್ಥಳದಿಂದ ತೆರಳುವಂತೆ ಸೂಚಿಸಿದರೂ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡ್ಡಿಪಡಿಸಿ, ಸೇರಿದ್ದ ಗುಂಪುಗಳು ಪರಸ್ಪರ ಗಲಾಟೆ ನಡೆಸಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಅ.ಕ್ರ: 47/2025 ಕಲಂ: 189(2), 191(2), 132, 324(6) ಜೊತೆಗೆ 190 ಬಿ ಎನ್‌ ಎಸ್‌ ರಂತೆ ಸುಮೋಟೊ ಪ್ರಕರಣ ದಾಖಲಾಗಿದೆ. 

ಧರ್ಮಸ್ಥಳ ಗ್ರಾಮದ ಪಾಂಗಾಳ ಕ್ರಾಸ್ ಬಳಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಸುಮಾರು 50-100 ಮಂದಿ, ಧರ್ಮಸ್ಥಳ ಠಾಣೆಯ ಆವರಣ ಮುಂದೆ ಯಾವುದೇ ಪೂರ್ವಾನುಮತಿಯಿಲ್ಲದೇ, ಕಾನೂನು ಬಾಹಿರವಾಗಿ ಅಕ್ರಮ ಕೂಟ ಸೇರಿರುತ್ತಾರೆ. ಅವರುಗಳ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 48/2025 ಕಲಂ: 189(2) ಜೊತೆಗೆ 190 ಬಿಎನ್‌ ಎಸ್‌ ರಂತೆ ಸುಮೋಟೊ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಎಸ್ಪಿ ಡಾ.ಅರುಣ್ ತಿಳಿಸಿದ್ದಾರೆ. 

ಧರ್ಮಸ್ಥಳ ಪಾಂಗಾಳ ಕ್ರಾಸ್ ಎಂಬಲ್ಲಿ, ಯೂಟ್ಯೂಬರ್ಸ್‌ಗಳಿಗೆ ಹಲ್ಲೆ ನಡೆದಿರುವ ವಿಚಾರ ತಿಳಿದು ಸದ್ರಿ ಸ್ಥಳಕ್ಕೆ ಬಂದಿದ್ದ ಬೆಳ್ತಂಗಡಿ ನಿವಾಸಿ ಪ್ರಮೋದ್‌ ಕುಮಾರ್ ಶೆಟ್ಟಿ (42) ಎಂಬವರಿಗೆ, ಅಲ್ಲಿ ಸೇರಿದ್ದ ಸುಮಾರು 30 ರಿಂದ 40 ಜನರ ಗುಂಪು ಅವಾಚ್ಯವಾಗಿ‌ ಬೈದು, ಹಲ್ಲೆ ನಡೆಸಿರುತ್ತಾರೆ. ಸ್ಥಳದಲ್ಲಿದ್ದ ಎರಡು ವಾಹನಗಳಿಗೆ ಹಾಗೂ ಕ್ಯಾಮರಾಕ್ಕೆ ಹಾನಿಗೊಳಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 49/2025 ಕಲಂ: 189(2), 191(2), 115(2), 110, 324(3),  352, 351(2) ಜೊತೆಗೆ 190 ಬಿಎನ್‌ ಎಸ್‌ ರಂತೆ ಪ್ರಕರಣ ದಾಖಲಾಗಿರುತ್ತದೆ.

ಬೆಳ್ತಂಗಡಿ ಠಾಣೆಯಲ್ಲಿ ದಾಖಲಾದ ಪ್ರಕರಣಗಳು

ಸುವರ್ಣ ಸುದ್ದಿ ವಾಹಿನಿಯ ವರದಿಗಾರ, ಬೆಂಗಳೂರು ನಿವಾಸಿ ಹರೀಶ್ ಆರ್. (34) ಎಂಬವರ ದೂರಿನಂತೆ, ಧರ್ಮಸ್ಥಳ ಪಾಂಗಾಳ ಕ್ರಾಸ್ ನಲ್ಲಿ ನಡೆದ ಹಲ್ಲೆಯ ಗಾಯಾಳುಗಳ ಬಗ್ಗೆ ವರದಿ ಮಾಡಲು ಉಜಿರೆ ಬೆನಕ ಆಸ್ಪತ್ರೆಯ ಬಳಿ ತೆರಳಿದ್ದರು. ಈ ವೇಳೆ ಸ್ಥಳದಲ್ಲಿದ್ದ ಗಿರೀಶ್ ಮಟ್ಟಣ್ಣನವರ್ ಎಂಬವರೊಂದಿಗೆ ವಿಡಿಯೋ ಬೈಟ್ ಕೊಡುವಂತೆ ಕೇಳಿದಾಗ, ಆರೋಪಿತರು ಏಕಾಏಕಿ ಬೈದಿರುತ್ತಾರೆ. ಅವರ ಜೊತೆಗಿದ್ದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರು ಸೇರಿ ಹಲ್ಲೆ ನಡೆಸಿ ಅವಾಚ್ಯವಾಗಿ ಬೈದಿರುತ್ತಾರೆ. ಆ ವೇಳೆ ಸ್ಥಳಕ್ಕೆ ಬಂದ ಮತ್ತೋರ್ವ ಆರೋಪಿ ಸಮೀರ್ ಯೂಟ್ಯೂಬರ್ ಎಂಬಾತ ಪಿರ್ಯಾದಿದಾರರನ್ನು ಉದ್ದೇಶಿಸಿ ಜೀವ ಬೆದರಿಕೆ ಹಾಕಿರುತ್ತಾನೆಂದು ದೂರು ನೀಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಅಕ್ರ: 75/2025 ಕಲಂ: 189(2), 191(1) (2), 115(2), 351(2), 352 ಜೊತೆಗೆ 190 ಬಿಎನ್ಎಸ್ -2023 ರಂತೆ ಪ್ರಕರಣ ದಾಖಲಾಗಿರುತ್ತದೆ.

ಬೆಳ್ತಂಗಡಿ ನಿವಾಸಿ ಗಣೇಶ್ ಶೆಟ್ಟಿ (28) ಎಂಬವರ ದೂರಿನಂತೆ, ಧರ್ಮಸ್ಥಳದ ಪಾಂಗಾಳ ಎಂಬಲ್ಲಿ ಹಲ್ಲೆಗೊಳಗಾದವರನ್ನು ಚಿಕಿತ್ಸೆಗಾಗಿ ಉಜಿರೆ ಬೆನಕ ಆಸ್ಪತ್ರೆಗೆ ವಾಹನವೊಂದರಲ್ಲಿ ಕರೆತಂದಿದ್ದು, ಗಾಯಾಳುಗಳನ್ನು ನೋಡಲು ಬಂದ ಮಹೇಶ್‌ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್‌ ಮಟ್ಟಣ್ಣನವರ್‌ ಅವರನ್ನು ಬೈಟ್‌ ಕೊಡುವಂತೆ ಆರೋಪಿತ ಸುವರ್ಣ ನ್ಯೂಸ್‌ ವರದಿಗಾರ ಹಾಗೂ ಕ್ಯಾಮರಾಮೆನ್‌ ತಡೆದು ನಿಲ್ಲಿಸಿರುತ್ತಾರೆ. ಸದ್ರಿಯವರು ಬೈಟ್ ಕೊಡಲು ನಿರಾಕರಿಸಿದಾಗ ಆರೋಪಿಗಳು ಅವಾಚ್ಯ  ಶಬ್ದಗಳಿಂದ ನಿಂದಿಸುತ್ತ, ತಳ್ಳಾಟ ನಡೆಸಿರುತ್ತಾರೆ. ಈ ಘಟನೆ ನಡೆದು ಕೆಲಹೊತ್ತಿನಲ್ಲಿ ಸುವರ್ಣ ಸುದ್ದಿ ವಾಹಿನಿಯಲ್ಲಿ ಅಜಿತ್‌ ಹನುಮಕ್ಕನವರ್‌ ಎನ್ನುವ ನ್ಯೂಸ್‌ ಆಂಕರ್‌ , "ಸುವರ್ಣ ನ್ಯೂಸ್‌  ವರದಿಗಾರರ ಮೇಲೆ ಮಹೇಶ್‌ ಶೆಟ್ಟಿ ತಿಮರೋಡಿಯಿಂದ ಹಲ್ಲೆ" ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಅಕ್ರ: 76/2025 ಕಲಂ:126(2), 296, 351   ಜೊತೆಗೆ 3(5) ಬಿಎನ್ಎಸ್ -2023 ರಂತೆ ಪ್ರಕರಣ ದಾಖಲಾಗಿರುತ್ತದೆ.

ಧರ್ಮಸ್ಥಳ ಪಾಂಗಾಳ ಕ್ರಾಸ್ ನಲ್ಲಿ ನಡೆದ ಹಲ್ಲೆಯ ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲಿಸಿದ್ದ ಬೆಳ್ತಂಗಡಿ ಉಜಿರೆ ಬೆನಕ ಆಸ್ಪತ್ರೆಯ ಬಳಿ ಸಾರ್ವಜನಿಕರು ಜಮಾಯಿಸಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ, ಸದ್ರಿ ಸ್ಥಳದಲ್ಲಿ ಸುಮಾರು 50 ರಿಂದ 100 ಜನರು ಕಾನೂನು ಬಾಹಿರವಾಗಿ ಅಕ್ರಮ ಕೂಟ ಸೇರಿ, ಘೋಷಣೆಗಳನ್ನು ಕೂಗುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಸದಂತೆ ಹಾಗೂ ಸ್ಥಳದಿಂದ ತೆರಳುವಂತೆ ಸೂಚಿಸಿದರೂ, ಪೂರ್ವಾನುಮತಿ ಪಡೆಯದೇ ಅಕ್ರಮ ಕೂಟ ಸೇರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಅಕ್ರ: 77/2025 ಕಲಂ:Sec 189(2)r/ w 190 BNS ಬಿಎನ್ಎಸ್ -2023 ರಂತೆ ಸುಮೋಟೊ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

A series of violent incidents unfolded near Pangala Cross in Dharmasthala on Wednesday evening, leading to the registration of seven FIRs, including two suo motu cases, by the Dharmasthala and Belthangady police.