Father Muller Medical College, Hospital, Mangalore; ಮಕ್ಕಳಲ್ಲಿ ಬೆಳವಣಿಗೆ ಸಮಸ್ಯೆ ; ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ 'ಬಾಂಧವ್ಯ' ಮಕ್ಕಳ ವಿಕಾಸ ಕೇಂದ್ರ ಸ್ಥಾಪನೆ, ಆಗಸ್ಟ್ 12ರಂದು ಚಾಲನೆ 

09-08-25 04:22 pm       Mangaluru Correspondent   ಕರಾವಳಿ

ಆಧುನಿಕ ಮೊಬೈಲ್ ಯುಗದಲ್ಲಿ ಮಕ್ಕಳ ಬೆಳವಣಿಗೆ, ವಿಕಾಸದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದು ಇದನ್ನು ಮನಗಂಡು ಮಕ್ಕಳ ಯೋಗಕ್ಷೇಮಕ್ಕೆ ವಿಶೇಷ ಆದ್ಯತೆ ನೀಡುವ ನಿಟ್ಟಿನಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವತಿಯಿಂದ 'ಬಾಂಧವ್ಯ' ಎಂಬ ಮಕ್ಕಳ ವಿಕಾಸ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಮಂಗಳೂರು, ಆ.9: ಆಧುನಿಕ ಮೊಬೈಲ್ ಯುಗದಲ್ಲಿ ಮಕ್ಕಳ ಬೆಳವಣಿಗೆ, ವಿಕಾಸದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದು ಇದನ್ನು ಮನಗಂಡು ಮಕ್ಕಳ ಯೋಗಕ್ಷೇಮಕ್ಕೆ ವಿಶೇಷ ಆದ್ಯತೆ ನೀಡುವ ನಿಟ್ಟಿನಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವತಿಯಿಂದ 'ಬಾಂಧವ್ಯ' ಎಂಬ ಮಕ್ಕಳ ವಿಕಾಸ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರವನ್ನು ಇದೇ ಆಗಸ್ಟ್ 12ರಂದು ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದು ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗದ ಎಚ್ಓಡಿ ಮತ್ತು ಮಕ್ಕಳ ತಜ್ಞ ಡಾ.ಅನಿಲ್ ಶೆಟ್ಟಿ ಹೇಳಿದ್ದಾರೆ.‌ 

ಮಕ್ಕಳ ಬಹುವಿಧ ಚಿಕಿತ್ಸೆ ಮತ್ತು ಸೇವಾ ಕೇಂದ್ರವಾಗಿ 'ಬಾಂಧವ್ಯ' ಮಕ್ಕಳ ವಿಕಾಸ ಕೇಂದ್ರವನ್ನು ವಿನ್ಯಾಸಗೊಳಿಸಲಾಗಿದೆ. ಮಕ್ಕಳಲ್ಲಿ ಕಂಡುಬರುವ ಬೆಳವಣಿಗೆಯ ವಿಳಂಬಗಳು, ಕಲಿಕೆಯ ತೊಂದರೆಗಳು, ನಡವಳಿಕೆಯಲ್ಲಿ ವ್ಯತ್ಯಾಸಗಳು ಮತ್ತು ಭಾಷಾ ಸವಾಲುಗಳು ಹಾಗೂ ಚಲನಾ ಕೌಶಲ್ಯ ಸಮಸ್ಯೆಗಳಿರುವ ಮಕ್ಕಳ ಮತ್ತು ಹದಿಹರೆಯದವರ ವಿಕಾಸ ಮೌಲ್ಯಮಾಪನ, ಸಮಾಲೋಚನೆ, ಮಧ್ಯಸ್ಥಿಕೆಗಳು, ಪೋಷಕರ ಶಿಕ್ಷಣ ಮತ್ತು ವೈಯಕ್ತಿಕ ಚಿಕಿತ್ಸೆ ಸೇರಿದಂತೆ ಸಮಗ್ರ ಸೇವೆಗಳನ್ನು ಇಲ್ಲಿ ಒದಗಿಸಲಾಗುತ್ತದೆ ಎಂದು ಅವರು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ. 

'ಬಾಂಧವ್ಯ' ಮಕ್ಕಳ ವಿಕಾಸ ಕೇಂದ್ರದ ಬಗ್ಗೆ ನಮ್ಮ ಧ್ಯೇಯ ಸರಳವಾದರೂ ತುಂಬ ಜಟಿಲ ವಿಷಯವಾಗಿದೆ. ಪ್ರತಿ ಮಗುವೂ ಮನೆಯಲ್ಲಿ, ಶಾಲೆಯಲ್ಲಿ ಮತ್ತು ಜೀವನದಲ್ಲಿ ವಿಕಾಸ ಹೊಂದಲು ಅಗತ್ಯವಾದ ಬೆಂಬಲ ಬೇಕಾಗುತ್ತದೆ. ನಗರ ಪ್ರದೇಶದಲ್ಲಿ ತಂದೆ, ತಾಯಿ ಇಬ್ಬರೂ ಕೆಲಸಕ್ಕೆ ಹೋಗುವ ಸನ್ನಿವೇಶದಲ್ಲಿ ಮಕ್ಕಳ ಮೇಲೆ ಪರಿಣಾಮ ಬೀಳುತ್ತದೆ. ಕೆಲವೊಂದು ಕಡೆ ಒಂಟಿ ಮಕ್ಕಳು ಬೇರೆಯದೇ ಸಮಸ್ಯೆ ಎದುರಿಸುತ್ತಾರೆ. ಇಂಥ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಿದರೆ ಸಣ್ಣ ವಯಸ್ಸಿನಲ್ಲೇ ಸಮಸ್ಯೆ ಸರಿಪಡಿಸಲು ಸಾಧ್ಯ. ಈ ಉದ್ದೇಶದಿಂದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ವತಿಯಿಂದ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ದೊರಕುವಂತೆ ಈ ಕೇಂದ್ರವನ್ನು ತೆರೆಯಲಾಗಿದೆ. ಈ ನಿಟ್ಟಿನಲ್ಲಿ ತಜ್ಞ ಶಿಶು ವೈದ್ಯರು, ಮಕ್ಕಳ ಮನೋವೈದ್ಯರು, ಕ್ಲಿನಿಕಲ್ ಮನಶ್ಯಾಸ್ತ್ರಜ್ಞರು, ಅಡಿಯಾಲಜಿಸ್ಟ್‌ಗಳು ಮತ್ತು ಭಾಷಾ ರೋಗ ಶಾಸ್ತ್ರಜ್ಞರು, ಮಕ್ಕಳ ಫಿಸಿಯೊಥೆರಪಿಸ್ಟ್‌ಗಳು, ಸಲಹೆಗಾರರು, ವಿಶೇಷ ಶಿಕ್ಷಕರು, ಔದ್ಯೋಗಿಕ ಚಿಕಿತ್ಸಕರು ಮತ್ತು ಪೌಷ್ಠಿಕ ತಜ್ಞರು ಲಭ್ಯರಿದ್ದು ಅತ್ಯಾಧುನಿಕ ರೀತಿಯ ಚಿಕಿತ್ಸೆ ಸಾಧ್ಯವಾಗಲಿದೆ.‌ 

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಗುಣಮಟ್ಟದ ಆರೈಕೆ ಮತ್ತು ಸಹಾನುಭೂತಿಯ ಸೇವೆಯನ್ನು ಒದಗಿಸುವ 145 ವರ್ಷಗಳ ಸುದೀರ್ಘ ಪರಂಪರೆಯನ್ನು ಹೊಂದಿದ್ದು, ಅದಕ್ಕನುಗುಣವಾಗಿ ಮಕ್ಕಳ ವಿಕಾಸ ಕೇಂದ್ರವು ಪರಿಣತರ ಸಹಯೋಗದಲ್ಲಿ ಕೈಗೆಟುಕುವ ದರದಲ್ಲಿ ಆರೈಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದೇ ಮಾದರಿಯ ಚಿಕಿತ್ಸೆಗೆ ಬೇರೆ ನಗರಗಳಲ್ಲಿ ದುಬಾರಿ ದರ ಇದ್ದರೆ, ನಮ್ಮಲ್ಲಿ ಎಲ್ಲ ರೀತಿಯ ತಜ್ಞರು ಇರೋದ್ರಿಂದ ಕಡಿಮೆ ವೆಚ್ಚದಲ್ಲಿ ನೀಡಲು ಸಾಧ್ಯವಾಗಿದೆ ಎಂದು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಆಂಟೊನಿ ಸಿಲ್ವನ್ ಡಿಸೋಜ ಹೇಳಿದರು. 

ಇದೇ ಆಗಸ್ಟ್ 12 ರಂದು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆವರಣದಲ್ಲಿ 'ಬಾಂಧವ್ಯ' ಮಕ್ಕಳ ವಿಕಾಸ ಕೇಂದ್ರವು ಉದ್ಘಾಟನೆಗೊಳ್ಳಲಿದ್ದು, ಫಸ್ಟ್ ನ್ಯೂರೋ ಆಸ್ಪತ್ರೆಯ ಎಂಡಿ ಡಾ.ರಾಜೇಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೈರೆಕ್ಟರ್ ರೆ.ಫಾ. ಫಾಸ್ಟಿನ್ ಲುಕಾಸ್ ಲೋಬೊ ಉದ್ಘಾಟಿಸುವರು.‌ ಆಸಕ್ತ ಕುಟುಂಬಗಳ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆಯಬಹುದು ಎಂದು ಆಂಟನಿ ಸಿಲ್ವನ್ ಡಿಸೋಜ ತಿಳಿಸಿದ್ದಾರೆ. 

ಆಡಳಿತಾಧಿಕಾರಿ ಫಾ.ವಿಲಿಯಂ ಡಿಸೋಜ, ವೈದ್ಯಕೀಯ ಅಧೀಕ್ಷಕ ಡಾ.ಉದಯ ಕುಮಾರ್ ಉಪಸ್ಥಿತರಿದ್ದರು.‌

With developmental challenges among children becoming more common in today’s modern mobile-driven era, Father Muller Medical College Hospital in Mangaluru has taken a significant step towards child welfare by establishing the ‘Bandhavya’ Child Development Centre. The centre will be officially inaugurated on August 12, announced Dr. Anil Shetty, Professor and Head of the Department of Pediatrics, in a press briefing.