ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್ಲಿ ಕ್ರಿಶ್ಚಿಯನ್ ಹೆಸರು ಕೈಬಿಡದಿದ್ದರೆ ಬಹಿಷ್ಕಾರದ ಎಚ್ಚರಿಕೆ, ಮಂಗಳೂರಿನಲ್ಲಿ ಹಿಂದು ಸಾಧು ಸಂತರು, ವಿವಿಧ ಸಮುದಾಯಗಳ ಪ್ರಮುಖರ ಸಭೆ 

20-09-25 08:29 pm       Mangalore Correspondent   ಕರಾವಳಿ

ರಾಜ್ಯ ಸರಕಾರ ಜಾತಿ ಗಣತಿ ನಡೆಸುವುದನ್ನು ಕರಾವಳಿಯ ಹಿಂದು ಸಾಧು ಸಂತರು ವಿರೋಧಿಸಿದ್ದು, ಹಿಂದು ಧರ್ಮದ 47 ಉಪ ಜಾತಿಗಳಲ್ಲಿ ಕ್ರಿಶ್ಚಿಯನ್ ಎಂದು ಸೇರಿಸಿರುವುದನ್ನು ಮುಖ್ಯಮಂತ್ರಿಗಳು ಅಧಿಕೃತವಾಗಿ ಕೈಬಿಟ್ಟಿದ್ದಾಗಿ ಘೋಷಣೆ ಮಾಡದೇ ಇದ್ದರೆ ಜಾತಿ ಗಣತಿಯನ್ನು ಬಹಿಷ್ಕರಿಸಬೇಕೆಂದು ಕರೆ ನೀಡಿದ್ದಾರೆ.

ಮಂಗಳೂರು, ಸೆ.20 : ರಾಜ್ಯ ಸರಕಾರ ಜಾತಿ ಗಣತಿ ನಡೆಸುವುದನ್ನು ಕರಾವಳಿಯ ಹಿಂದು ಸಾಧು ಸಂತರು ವಿರೋಧಿಸಿದ್ದು, ಹಿಂದು ಧರ್ಮದ 47 ಉಪ ಜಾತಿಗಳಲ್ಲಿ ಕ್ರಿಶ್ಚಿಯನ್ ಎಂದು ಸೇರಿಸಿರುವುದನ್ನು ಮುಖ್ಯಮಂತ್ರಿಗಳು ಅಧಿಕೃತವಾಗಿ ಕೈಬಿಟ್ಟಿದ್ದಾಗಿ ಘೋಷಣೆ ಮಾಡದೇ ಇದ್ದರೆ ಜಾತಿ ಗಣತಿಯನ್ನು ಬಹಿಷ್ಕರಿಸಬೇಕೆಂದು ಕರೆ ನೀಡಿದ್ದಾರೆ.

ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ – ಕರ್ನಾಟಕ ಹೆಸರಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ಮಂಗಳೂರಿನಲ್ಲಿ ಆಯೋಜನೆಗೊಂಡ ಸಭೆಯಲ್ಲಿ ಹಲವು ಸಮುದಾಯಗಳ ಮುಖಂಡರು ಪಾಲ್ಗೊಂಡು ತಮ್ಮ ಆಕ್ಷೇಪ, ಅಭಿಪ್ರಾಯಗಳನ್ನು ಮಂಡಿಸಿದರು. ಸಭೆಯ ಬಳಿಕ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಸುದ್ದಿಗೋಷ್ಟಿಯಲ್ಲಿ ಸಭೆಯ ನಿರ್ಣಯಗಳನ್ನು ಓದಿ ಹೇಳಿದರು.

ಜಾತಿ ಗಣತಿ ಪಟ್ಟಿಯಲ್ಲಿ ಹಿಂದು ಉಪ ಜಾತಿಗಳ ಜೊತೆಗೆ ಕ್ರಿಶ್ಚಿಯನ್ ಪದ ಬಳಕೆಯನ್ನು ಕೂಡಲೇ ಹಿಂಪಡೆಯಬೇಕು. ಸರ್ಕಾರ ತಕ್ಷಣ ಆಯೋಗಕ್ಕೆ ಸಲಹೆ ಕೊಟ್ಟು 47 ಉಪ ಜಾತಿಗಳ ಪಟ್ಟಿಯನ್ನು ಕೈಬಿಡಬೇಕು. ಈ ರೀತಿ ಹಿಂದು ಜಾತಿಗಳ ಜೊತೆಗೆ ಕ್ರಿಶ್ಚಿಯನ್, ಮುಸ್ಲಿಂ ಸೇರಿಸಿದರೆ ಹಿಂದುಳಿದ ವರ್ಗದ ಮೀಸಲಾತಿಗೆ ಧಕ್ಕೆಯಾಗಲಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಹಿಂದು ಉಪ ಜಾತಿಗಳಲ್ಲಿ ಕ್ರಿಶ್ಚಿಯನ್ ಎಂದು ನಮೂದಿಸಿದರೆ ಯಾವುದೇ ಮೀಸಲಾತಿ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸುವಂತೆ ಸ್ವಾಮೀಜಿ ಒತ್ತಾಯಿಸಿದರು.

ಅಲ್ಲದೆ, ಈ ರೀತಿ ಹಿಂದು ಜಾತಿಗಳ ನಡುವೆ ಕ್ರಿಶ್ಚಿಯನ್ ಹೆಸರುಗಳನ್ನು ಸೇರಿಸುವುದು ಮತಾಂತರಕ್ಕೆ ಪ್ರೇರಣೆ ನೀಡಿದಂತಾಗುತ್ತದೆ. ಈಗಾಗಲೇ ಕ್ರಿಶ್ಚಿಯನ್ ಅಥವಾ ಮುಸ್ಲಿಂಗೆ ಮತಾಂತರ ಆಗಿದ್ದರೆ ಅವರು ಅದೇ ಧರ್ಮದಲ್ಲಿ ಗುರುತಿಸಿಕೊಳ್ಳಬೇಕು ವಿನಾ ಹಿಂದು ಧರ್ಮದಲ್ಲಿರುವ ಹಿಂದುಳಿದ ವರ್ಗದ ಜಾತಿ ಸವಲತ್ತನ್ನು ಪಡೆಯುವುದು ಸರಿಯಲ್ಲ. ಆದರೆ ಜಾತಿ ಗಣತಿಯಲ್ಲಿ ಹಿಂದು ಜಾತಿಗಳ ಜೊತೆಗೆ ಕ್ರಿಶ್ಚಿಯನ್ ಎಂದು ನಮೂದಿಸಿ ಜನರ ನಡುವೆಯೇ ಗೊಂದಲ ಮೂಡಿಸಿದ್ದಾರೆ. ಇದರಿಂದ ಎಲ್ಲ ಜಾತಿಗಳವರು ಗೊಂದಲದಲ್ಲಿದ್ದಾರೆ.

ಇದಲ್ಲದೆ, ಹಿಂದುಗಳ ಹಬ್ಬ ದಸರಾ ಸಂದರ್ಭ ತರಾತುರಿಯಲ್ಲಿ ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ, ಶಿಕ್ಷಕರನ್ನು ಬಳಸಿಕೊಂಡು ಸಮೀಕ್ಷೆಗೆ ಮುಂದಾಗಿದ್ದು, ಅವರಿಗೂ ದಸರಾಗೆ ಹಬ್ಬ ಆಚರಿಸದಂತೆ ಮಾಡಿದ್ದಾರೆ. ಜನರನ್ನು ಗೊಂದಲಕ್ಕೆ ತಳ್ಳಿ ಆತುರದಿಂದ ಸಮೀಕ್ಷೆ ನಡೆಸುವ ಅಗತ್ಯ ಏನಿದೆ. ಆದರೂ ಸಮೀಕ್ಷೆ ನಡೆಸಬೇಕಿದ್ದರೆ ಬೇಸಗೆ ರಜೆಯಲ್ಲಿ ಮಾಡಿ ಎಂದು ಸ್ವಾಮೀಜಿ ಸಲಹೆ ಮಾಡಿದ್ದಾರೆ.

ಸಭೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ವಿವಿಧ ಸಮುದಾಯಗಳ ಪ್ರಮುಖರು, ಬಜರಂಗದಳ ವಿಶ್ವ ಹಿಂದು ಪರಿಷತ್ತಿನ ಮುಖಂಡರು ಪಾಲ್ಗೊಂಡಿದ್ದರು.

Hindu seers and community leaders from coastal Karnataka have strongly opposed the ongoing caste and education survey, warning that they would boycott it if the government does not officially withdraw the inclusion of “Christian” alongside 47 Hindu sub-castes.