Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿಂದ ಪೊಲೀಸ್ ಇಲಾಖೆಗೆ ಎರಡು ಸ್ಕಾರ್ಪಿಯೋ ವಾಹನ ಕೊಡುಗೆ ; ರಾಜ್ಯದಲ್ಲಿ ನಾಗರಿಕರ ರಕ್ಷಣೆಗಾಗಿ ಸೈನಿಕರಂತೆ ಪೊಲೀಸರ ಸೇವೆ, ಎಂಎನ್ಆರ್ ಶ್ಲಾಘನೆ 

20-09-25 09:37 pm       Mangalore Correspondent   ಕರಾವಳಿ

 ಗಡಿಯಲ್ಲಿ ದೇಶದ ಭದ್ರತೆಗಾಗಿ ಸೈನಿಕರು ಕೆಲಸ ಮಾಡುವಂತೆ ರಾಜ್ಯದಲ್ಲಿ ನಾಗರಿಕರ ರಕ್ಷಣೆಗಾಗಿ ಪೊಲೀಸರು ಕೆಲಸ ಮಾಡುತ್ತಾರೆ.

ಮಂಗಳೂರು, ಸೆ.20: ಗಡಿಯಲ್ಲಿ ದೇಶದ ಭದ್ರತೆಗಾಗಿ ಸೈನಿಕರು ಕೆಲಸ ಮಾಡುವಂತೆ ರಾಜ್ಯದಲ್ಲಿ ನಾಗರಿಕರ ರಕ್ಷಣೆಗಾಗಿ ಪೊಲೀಸರು ಕೆಲಸ ಮಾಡುತ್ತಾರೆ. ನಗರದಲ್ಲಿ ಪೊಲೀಸ್ ಇಲಾಖೆಯ ಅನುಕೂಲಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಎರಡು ಸ್ಕಾರ್ಪಿಯೋ ವಾಹನಗಳನ್ನು ಒದಗಿಸಲಾಗಿದೆ. ಪೊಲೀಸರ ಎಲ್ಲ ಕೆಲಸಗಳಿಗೂ ಈ ವಾಹನಗಳು ನೆರವಿಗೆ ಬರಲಿ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹಾರೈಸಿದರು. 

ನಗರದ ಎಸ್‌ಸಿಡಿಸಿಸಿ ಬ್ಯಾಂಕ್‌ ಪ್ರಧಾನ ಕಚೇರಿ ಆವರಣದಲ್ಲಿ ಶನಿವಾರ ನಡೆದ ಮಂಗಳೂರು ನಗರ ಪೊಲೀಸ್ ಇಲಾಖೆಗೆ ಎರಡು ಸ್ಕಾರ್ಪಿಯೋ ವಾಹನಗಳ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆ ಹಲವಾರು ಬ್ಯಾಂಕ್‌ಗಳ ಪಾಲಿಗೆ ತವರೂರು ಎನಿಸಿದ್ದರೂ, ಇತ್ತೀಚಿನ ಬೆಳವಣಿಗೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಹುಟ್ಟಿದ ಬ್ಯಾಂಕ್‌ಗಳು ಬೇರೆ ಬ್ಯಾಂಕ್‌ಗಳೊಂದಿಗೆ ವಿಲೀನಗೊಂಡು ಹೆಸರೇ  ಮರೆಯಾಗುತ್ತಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್‌ಗಳು ಜನಸ್ನೇಹಿ ಬ್ಯಾಂಕ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದ ಆಶೋತ್ತರಗಳಿಗೆ ಸ್ಪಂದಿಸುತ್ತಿವೆ ಎಂದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ, ಕೇವಲ 20 ದಿನಗಳ ಹಿಂದೆ ಮಾಡಿದ ಮನವಿಗೆ ಸ್ಪಂದಿಸಿ ಎಸ್‌ಸಿಡಿಸಿಸಿ ಬ್ಯಾಂಕ್ ಪೊಲೀಸ್ ಇಲಾಖೆಗೆ ಎರಡು ವಾಹನಗಳನ್ನು ಒದಗಿಸಿದೆ. ಯಾವುದೇ ಘಟನೆ ನಡೆದ ಸಂದರ್ಭದಲ್ಲಿ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಲು, ಕಳ್ಳರನ್ನು ಬೆನ್ನಟ್ಟುವ ವೇಳೆ ಸುಸಜ್ಜಿತ ವಾಹನಗಳ ಅಗತ್ಯವಿದೆ. ನಗರ ಪೊಲೀಸ್ ವ್ಯಾಪ್ತಿಯಲ್ಲಿ 21 ಹೊಯ್ಸಳ ವಾಹನಗಳಿವೆ. 112ಕ್ಕೆ ಕರೆ ಬಂದ ತಕ್ಷಣ ನಗರ ವ್ಯಾಪ್ತಿಯಲ್ಲಿ 6-7 ನಿಮಿಷದಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ 15 ನಿಮಿಷದಲ್ಲಿ ಸ್ಪಂದನೆ ಸಿಗುತ್ತಿದೆ. ಎಸ್‌ಸಿಡಿಸಿಸಿ ಬ್ಯಾಂಕ್ ನೀಡಿದ ವಾಹನಗಳನ್ನು ಮಹಿಳಾ ಸುರಕ್ಷತೆಗೆ ಸಂಬಂಧಿಸಿ ಬಳಸಲಾಗುವುದು ಎಂದರು.

ನಬಾರ್ಡ್ ಬೆಂಗಳೂರಿನ ಸಿಜಿಎಂ ಡಾ. ಸುರೇಂದ್ರ ಬಾಬು ಮಾತನಾಡಿ, ಪೊಲೀಸ್ ಇಲಾಖೆಗೆ ವಾಹನ ನೀಡುವ ಮೂಲಕ ಎಸ್‌ಸಿಡಿಸಿಸಿ ಬ್ಯಾಂಕ್ ಅತ್ಯುತ್ತಮ ಕಾರ್ಯ ಮಾಡಿದೆ. ದೇಶದಲ್ಲಿರುವ 300ಕ್ಕೂ ಹೆಚ್ಚು ಡಿಸಿಸಿ ಬ್ಯಾಂಕ್‌ಗಳ ಪೈಕಿ ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್ ಮಾದರಿ ಹಾಗೂ ಉತ್ತಮ ಕಾರ್ಯತತ್ಪರತೆ ಹೊಂದಿದ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳೂರು ನಗರ ಡಿಸಿಪಿಗಳಾದ ಮಿಥುನ್ ಎಚ್.ಎನ್., ರವಿಶಂಕರ್, ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಎಂ. ವಾದಿರಾಜ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಅಶೋಕ್‌ ಕುಮಾರ್ ಶೆಟ್ಟಿ, ಮುಖ್ಯ ಕಾರ್ಯ ನಿರ್ವಹಣಾಽಕಾರಿ ಗೋಪಾಲಕೃಷ್ಣ ಭಟ್ ಕೆ. ಉಪಸ್ಥಿತರಿದ್ದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಬ್ಯಾಂಕ್ ಸಿಬ್ಬಂದಿ ರಾಜೀವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

The South Canara District Central Cooperative (SCDCC) Bank has donated two Scorpio vehicles to the Mangaluru City Police Department to strengthen public safety initiatives. Speaking at the handover ceremony held at the bank’s head office on Saturday, SCDCC Bank President Dr. M.N. Rajendra Kumar lauded the police force, saying, “Just as soldiers guard the nation at the borders, police protect citizens within the state. These vehicles will aid them in carrying out their duties more effectively.”