ತುಳು ಸಂಸ್ಕೃತಿ ಬಗ್ಗೆ ಮತ್ತಷ್ಟು ಸಂಶೋಧನೆ ಆಗಬೇಕಾಗಿದೆ ; ಡಾ.ಇಂದಿರಾ ಹೆಗ್ಡೆ, ಸಂತ ಅಲೋಶಿಯಸ್ ವಿವಿಯಲ್ಲಿ ತುಳು ರಾಷ್ಟ್ರೀಯ ವಿಚಾರ ಸಂಕಿರಣ 

23-09-25 06:58 pm       Mangalore Correspondent   ಕರಾವಳಿ

ತುಳುನಾಡು ಮತ್ತು ಇಲ್ಲಿನ ಜಾನಪದ ಕ್ಷೇತ್ರದಲ್ಲಿ ಅಪಾರ ಜ್ಞಾನ ಸಂಪತ್ತು ಇದೆ. ಸಂಶೋಧನಾರ್ಥಿಗಳಿಗೆ ವಿಫುಲ ಅವಕಾಶಗಳಿದ್ದು, ಅವುಗಳನ್ನು ಹೊಸ ತಲೆಮಾರು ಬಳಸಿಕೊಳ್ಳಬೇಕು. ತುಳುನಾಡಿನ ಊರಿನ ಹೆಸರುಗಳಿಂದ ಹಿಡಿದು ಸಂಸ್ಕೃತಿ, ಭಾಷೆ, ಆಚರಣೆಗಳ ಬಗ್ಗೆ ಮತ್ತಷ್ಟು ಶೋಧನೆ ಆಗಬೇಕಿದೆ.

ಮಂಗಳೂರು, ಸೆ.23 : ತುಳುನಾಡು ಮತ್ತು ಇಲ್ಲಿನ ಜಾನಪದ ಕ್ಷೇತ್ರದಲ್ಲಿ ಅಪಾರ ಜ್ಞಾನ ಸಂಪತ್ತು ಇದೆ. ಸಂಶೋಧನಾರ್ಥಿಗಳಿಗೆ ವಿಫುಲ ಅವಕಾಶಗಳಿದ್ದು, ಅವುಗಳನ್ನು ಹೊಸ ತಲೆಮಾರು ಬಳಸಿಕೊಳ್ಳಬೇಕು. ತುಳುನಾಡಿನ ಊರಿನ ಹೆಸರುಗಳಿಂದ ಹಿಡಿದು ಸಂಸ್ಕೃತಿ, ಭಾಷೆ, ಆಚರಣೆಗಳ ಬಗ್ಗೆ ಮತ್ತಷ್ಟು ಶೋಧನೆ ಆಗಬೇಕಿದೆ. ಆಧುನಿಕ ಸಂದರ್ಭದಲ್ಲಿ ತುಳುನಾಡಿನ ಸಂಸ್ಕೃತಿ ಬದಲಾಗುತ್ತಿದ್ದು ಆ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದು ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಡೆ ಹೇಳಿದ್ದಾರೆ.

ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಹೊಸದಾಗಿ ಆರಂಭಗೊಂಡ ತುಳು ವಿಭಾಗದ ಉದ್ಘಾಟನೆ ಮತ್ತು ಕರ್ನಾಟಕ ತುಳು ಅಕಾಡೆಮಿ ಸಹಯೋಗದಲ್ಲಿ ನಡೆದ ತುಳು ಬರವು ಬಾಸೆ ಪರಿಪು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. 1995ರಲ್ಲಿ ವೇಳೆಗೆ ತುಳುವಿನಲ್ಲಿ ಬರೆದಾಗ, ನೀವು ಯಾಕೆ ಕನ್ನಡದಲ್ಲಿ ಬರೆಯಬಾರದು, ಕನ್ನಡದಲ್ಲಿ ನಿಮ್ಮನ್ನು ಮೆಚ್ಚುವ ಅಪಾರ ಓದುಗರಿದ್ದಾರೆ. ತುಳುವಿನಲ್ಲಿ ಬರೆದರೆ ಅಲ್ಲಿಗೆ ಸೀಮಿತಗೊಳ್ಳುತ್ತೀರಿ ಎಂದು ಒಬ್ಬರು ಗೆಳೆಯರು ಸಲಹೆ ಕೊಟ್ಟರು. ಹಾಗಾಗಿ ನಾನು ತುಳುನಾಡಿನ ವಿಚಾರ ಇಟ್ಟುಕೊಂಡು ಕನ್ನಡದಲ್ಲಿಯೇ ಸಂಶೋಧನಾ ಕೃತಿಗಳನ್ನು ಬರೆದೆ. ಯಾವುದೇ ಭಾಷೆಗೆ ಲಿಪಿ ಅಗತ್ಯವಿಲ್ಲ. ನಮ್ಮ ತುಳು ಸಂಸ್ಕೃತಿಯ ಸಮೃದ್ಧಿಯನ್ನು ಯಾವ ಭಾಷೆಯಲ್ಲಾದರೂ ಬೆಳಕಿಗೆ ತನ್ನಿ, ಆದರೆ ತುಳು ಭಾಷೆಯಲ್ಲಿ ಮಾತಾಡುವುದನ್ನು ಮಾತ್ರ ಬಿಡಬೇಡಿ ಎಂದರು.

ತುಳುನಾಡು ಹಿಂದಿನ ಕಾಲದಲ್ಲಿ ಗೇರುಸೊಪ್ಪೆಯ ವರೆಗೂ ವಿಸ್ತಾರವಾಗಿತ್ತು ಎನ್ನುವುದಕ್ಕೆ ದಾಖಲೆ ಇದೆ. ಈಗಲೂ ಅಲ್ಲಿ ಕೆಲವರು ತುಳುವರಿದ್ದಾರೆ. ಬಾರ್ಕೂರು ತುಳುನಾಡಿನ ರಾಜಧಾನಿಯಾಗಿತ್ತು. ಆದರೆ ಈಗ ಬಾರ್ಕೂರಿನಲ್ಲಿ ತುಳುವರು ಇದ್ದಾರೆಯೇ ಎಂದು ಕೇಳುವ ಸ್ಥಿತಿಯಾಗಿದೆ. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ತುಳು ಮಾತನಾಡುವವರು ಮಾತ್ರ ಇದ್ದಾರೆ, ತುಳು ಕೃತಿಗಳನ್ನು ಓದುವವರು, ಅಧ್ಯಯನ ಮಾಡುವವರು ಕಡಿಮೆಯಾಗುತ್ತಿದ್ದಾರೆ ಎಂದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳುವಿನಲ್ಲಿ ಅಪಾರ ಸಂಖ್ಯೆಯಲ್ಲಿ ಪುಸ್ತಕಗಳಿವೆ, ಅದನ್ನು ಓದುವ ಕೆಲಸ ಆಗಬೇಕು. ನಾವು ಅಕಾಡೆಮಿಯಲ್ಲಿ ಬಲೆ ತುಳು ಓದುಗ ಎನ್ನುವ ಹೆಸರಿನಲ್ಲಿ ಕಾಲೇಜು ಮಕ್ಕಳನ್ನು ಕರೆದು ಓದಿಸುವ ಕೆಲಸ ಮಾಡುತ್ತಿದ್ದೇವೆ. ತುಳು ಸಂಸ್ಕೃತಿ, ಭಾಷೆಯ ವಿಚಾರದಲ್ಲಿ ಸಂಶೋಧನೆಗೆ ಅವಕಾಶಗಳಿದ್ದು ಯುವ ಸಮುದಾಯ ಮುಂದೆ ಬಂದರೆ ಫೆಲೋಶಿಪ್ ನೀಡಲಾಗುವುದು ಎಂದು ಹೇಳಿದರು.

ಸಂತ ಅಲೋಶಿಯಸ್ ಪರಿಗಣಿತ ವಿವಿಯ ಕುಲಪತಿ ರೆ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ತುಳುವಿನಲ್ಲೇ ಮಾತನಾಡಿ ಭಾಷೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತುಳು ನಮ್ಮ ವ್ಯಾವಹಾರಿಕ ಭಾಷೆಯಾಗಿದ್ದು ರಾಜ್ಯದಲ್ಲಿ ದ್ವಿತೀಯ ಭಾಷೆಯಾಗಿ ಗೌರವ ಸಿಗಬೇಕು ಎಂದರು. 

ಭಾಷೆಗೆ ಲಿಪಿ ಅಗತ್ಯವಿಲ್ಲ; ಬೆಳ್ಳೂರು

ಪಳಂತುಳು ಸಾಹಿತ್ಯದ ವಿಚಾರ ಮಂಡಿಸಿದ ಕಣ್ಣೂರು ವಿವಿಯ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು, ಯಾವುದೇ ಭಾಷೆ ಬೆಳೆಯಲು ಲಿಪಿಯ ಅಗತ್ಯ ಇಲ್ಲ. ತುಳು ಲಿಪಿಯನ್ನು ಮತ್ತೆ ಬಳಕೆಗೆ ತರಬೇಕೆಂದು ಹೋರಾಟ ನಡೆಸುವುದು ದೊಡ್ಡ ತಪ್ಪು. ಕನ್ನಡ ಲಿಪಿಯಲ್ಲೇ ಬರೆಯುತ್ತಿದ್ದಾರೆ, ಅದನ್ನು ಮತ್ತೆ ತುಳು ಲಿಪಿಗೆ ಮಾಡಲು ಹೋದರೆ ಅದರಿಂದ ಮಲಯಾಳಿಗರಿಗಷ್ಟೇ ಲಾಭ. ಲಿಪಿ ಇದ್ದ ಭಾಷೆಗಳು ಈಗಲೇ ಬಿದ್ದುಹೋಗುವ ಸ್ಥಿತಿಯಲ್ಲಿವೆ. ತುಳು ಲಿಪಿ ಎನ್ನುವುದು ತಮಿಳುನಾಡಿನ ಪಲ್ಲವ ಮೂಲದ್ದು. ಅಲ್ಲಿಗೆ ಅಧ್ಯಯನಕ್ಕೆ ಹೋಗುತ್ತಿದ್ದ ಇಲ್ಲಿನ ಬ್ರಾಹ್ಮಣರು ಸಂಸ್ಕೃತ ಬರೆಯಲು ಈ ಲಿಪಿ ಬಳಸಿದರು. ಅದೇ ಲಿಪಿ ಉತ್ತರ ಕನ್ನಡದಲ್ಲಿ ತಿಗಳಾರಿ, ಕೇರಳದಲ್ಲಿ ಆರ್ಯಡ್ತ್ ಎನ್ನುವ ಹೆಸರಲ್ಲಿ ಮುಂದೆ ಮಲಯಾಳ ಲಿಪಿಯಾಯ್ತು. 

ತುಳು ಭಾಷೆಗೆ ಪ್ರಾಚೀನ ಗಟ್ಟಿತನ ಇಲ್ಲವೆಂಬುದೂ ಸುಳ್ಳು. ಮೊದಲಿಗೆ ಅನಂತಪುರದಲ್ಲಿ ತುಳು ಶಾಸನ ದೊರಕಿದ್ದು ಆಮೇಲೆ ನಲ್ವತ್ತು ಕಡೆ ತುಳು ಶಾಸನಗಳನ್ನು ಶೋಧಿಸಲಾಯಿತು. ಭಾರ್ಗವ ಸಂಹಿತಾ ಎನ್ನುವ ಕೃತಿಯಲ್ಲಿ ವಿಮಾನ ರಚಿಸುವುದು ಹೇಗೆಂದು ಇದೆಯೆಂಬ ಮಾಹಿತಿ ಆಧರಿಸಿ ವೆಂಕಟರಾಜ ಪುಣಿಂಚಿತ್ತಾಯರು ಹಳೆ ಕೃತಿಗಳ ಶೋಧಕ್ಕೆ ಇಳಿದಿದ್ದರು. ಆಗ ಸಿಕ್ಕಿದ್ದೇ ಶ್ರೀ ಭಾಗವತೋ ಕೃತಿ. ಅದರ ಮೊದಲ ಅಧ್ಯಾಯ ಅಷ್ಟೇ ಸಿಕ್ಕಿದ್ದರೂ, ಅದುವೇ 400 ಪುಟಗಳ ಕೃತಿಯಾಗಿದೆ. ಪೂರ್ತಿ ಸಿಗುತ್ತಿದ್ದರೆ ಇಡೀ ದೇಶದಲ್ಲೇ ಅತಿದೊಡ್ಡ ಕೃತಿಯಾಗುತ್ತಿತ್ತು. ಮಹಾಭಾರತೊ ಕೃತಿಯನ್ನು ಒಬ್ಬರೇ ಬರೆದಿದ್ದಲ್ಲ, ಗದ್ಯ ರೂಪದಲ್ಲಿದ್ದು ಬೇರೆ ಬೇರೆ ಭಾಷೆ ಬಳಕೆಯಾಗಿದ್ದರಿಂದ ಹಲವರು ಬರೆದಿರಬಹುದು ಎಂದು ಊಹಿಸಬಹುದು. ಶ್ರೀ ಭಾಗವತೊ, ಶ್ರೀದೇವಿ ಮಹಾತ್ಮೆ ಎನ್ನುವ ಗದ್ಯ ಕೃತಿ, ಕಾವೇರಿ ಎನ್ನುವ ಕಾವ್ಯ, ಅರುಣಾಬ್ಜನ ಮಹಾಭಾರತೊ ಕೃತಿಗಳು ತುಳುವಿನಲ್ಲಿ ಪ್ರಾಚೀನ ಸಾಹಿತ್ಯ ಇಲ್ಲ ಎಂಬುದನ್ನು ನೀಗಿಸಿವೆ ಎಂದರು.

ಆಂಧ್ರಪ್ರದೇಶದ ಕುಪ್ಪಂ ದ್ರಾವಿಡ ವಿವಿಯ ಸಹ ಪ್ರಾಧ್ಯಾಪಕ ಡಾ.ದುರ್ಗಾ ಪ್ರವೀಣ್, ಅಲೋಶಿಯಸ್ ಪದವಿ ಕಾಲೇಜಿನ ತುಳು ವಿಭಾಗದ ಉಪನ್ಯಾಸಕಿ ಪ್ರಶಾಂತಿ ಶೆಟ್ಟಿ ಇರುವೈಲು ಉಪನ್ಯಾಸ ಮಂಡಿಸಿದರು. ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು. ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ರಿಜಿಸ್ಟ್ರಾರ್ ಡಾ.ಆಲ್ವಿನ್ ಡೇಸಾ, ಸಂಶೋಧನಾ ವಿಭಾಗದ ನಿರ್ದೇಶಕ ಚಂದ್ರಶೇಖರ್ ಶೆಟ್ಟಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಹಾಲಿಂಗ ಭಟ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಡಾ.ದಿನೇಶ್ ನಾಯಕ್ ನಿರೂಪಿಸಿದರು. ಸಮಾರೋಪದಲ್ಲಿ ರಮೇಶ್ ಮಂಜೇಶ್ವರ ನಿರ್ದೇಶನದಲ್ಲಿ ಮೂಡಿಬಂದ ‘ಆಟಿದ ಬೂತಾರಾಧನೆ’ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು. ಮಂಗಳೂರು ವಿವಿಯ ತುಳು ಎಂಎ ವಿದ್ಯಾರ್ಥಿಗಳು, ಅಲೋಶಿಯಸ್ ಪರಿಗಣಿತ ವಿವಿ, ಕಾರ್ ಸ್ಟ್ರೀಟ್ ಕಾಲೇಜು ಮತ್ತು ಆಳ್ವಾಸ್ ಪದವಿ ಕಾಲೇಜಿನ ತುಳು ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.