Bjp, Arun Puthila, Puttur, Mangalore: ಬಿಜೆಪಿ ವಿರುದ್ಧ ಮತ್ತೆ ತೊಡೆ ತಟ್ಟಿದ ಪುತ್ತಿಲ ಪರಿವಾರ ; ಶ್ರೀನಿವಾಸ ಕಲ್ಯಾಣೋತ್ಸವ ನೆಪದಲ್ಲಿ ಶಕ್ತಿಪ್ರದರ್ಶನ, ಬಿಜೆಪಿ ಹುದ್ದೆ ಬಿಡದ ಮುಖಂಡನಿಗೆ ಅವಮಾನ, ನ್ಯಾಯ ಕೇಳಿ ದೇವರ ಸನ್ನಿಧಿಯಲ್ಲಿ ಕಣ್ಣೀರು! 

01-12-25 09:25 pm       Mangalore Correspondent   ಕರಾವಳಿ

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಂಡಾಯ ಸಾರಿ ಇಡೀ ರಾಜ್ಯ ಬಿಜೆಪಿಯೇ ತಿರುಗಿ ನೋಡುವಂತೆ ಮಾಡಿದ್ದ ಅರುಣ್ ಪುತ್ತಿಲ ಮತ್ತು ಅವರ ಪರಿವಾರ ಮತ್ತೆ ಪಕ್ಷದ ವಿರುದ್ಧ ತೊಡೆ ತಟ್ಟಲು ಶುರು ಮಾಡಿದೆ.

ಮಂಗಳೂರು, ಡಿ.1 : ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಂಡಾಯ ಸಾರಿ ಇಡೀ ರಾಜ್ಯ ಬಿಜೆಪಿಯೇ ತಿರುಗಿ ನೋಡುವಂತೆ ಮಾಡಿದ್ದ ಅರುಣ್ ಪುತ್ತಿಲ ಮತ್ತು ಅವರ ಪರಿವಾರ ಮತ್ತೆ ಪಕ್ಷದ ವಿರುದ್ಧ ತೊಡೆ ತಟ್ಟಲು ಶುರು ಮಾಡಿದೆ. ಒಂದೆಡೆ ಅರುಣ್ ಪುತ್ತಿಲ ಅವರೇ ಮುಂದಿನ ಬಾರಿಯೂ ಕ್ಷೇತ್ರದ ಅಭ್ಯರ್ಥಿಯೆಂದು ಬಿಂಬಿಸುವ ಪ್ರಯತ್ನ ನಡೆದಿದ್ದರೆ, ಮತ್ತೊಂದೆಡೆ ಬಿಜೆಪಿಯಿಂದ ತಟಸ್ಥವಾಗಿ ಪುತ್ತಿಲ ಪರಿವಾರದ ಹೆಸರಲ್ಲಿ ಮತ್ತೆ ಸಂಘಟನೆ ಗಟ್ಟಿಗೊಳಿಸಲು ಯತ್ನ ನಡೆದಿದೆ.

ಇದಕ್ಕೆ ಸಾಕ್ಷಿ ಎನ್ನುವಂತೆ, ಪರಿವಾರದ ವತಿಯಿಂದ ಸತತ 3ನೇ ವರ್ಷವೂ ಅದ್ದೂರಿ ಶ್ರೀನಿವಾಸ ಕಲ್ಯಾಣೋತ್ಸವ, ಹಿಂದವೀ ಸಾಮ್ರಾಜ್ಯೋತ್ಸವ ಕಾರ್ಯಕ್ರಮ ನಡೆಸಲಾಗಿದ್ದು 20 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಶಕ್ತಿಪ್ರದರ್ಶನ ಮಾಡಲಾಗಿದೆ. ಆಮೂಲಕ ಪರಿವಾರದ ಕಾರ್ಯಕರ್ತರು, ಅಭಿಮಾನಿಗಳು ಬಿಜೆಪಿಗೆ ಸಡ್ಡು ಹೊಡೆಯುವ ಸುಳಿವು ನೀಡಿದ್ದಾರೆ. ಆದರೆ ಕಾರ್ಯಕ್ರಮ ಸಂದರ್ಭದಲ್ಲಿ ಪುತ್ತಿಲ ಘಟಕದ ಮೊದಲ ವರ್ಷದಲ್ಲಿ ಅಧ್ಯಕ್ಷರಾಗಿದ್ದ, ಹಿರಿಯ ಮುಖಂಡ ಪ್ರಸನ್ನ ಮಾರ್ತ ಅವರಿಗೆ ಅವಮಾನಿಸಿದ ಘಟನೆಯೂ ನಡೆದಿದ್ದು ಹಿಂದು ಸಮಾಜದ ಸಂಘಟನೆಯೆಂಬ ಪರಿವಾರದ ಉದ್ದೇಶವನ್ನೇ ಅಣಕಿಸುವಂಚೆ ಮಾಡಿದೆ. ಘಟನೆಯಿಂದ ತೀವ್ರ ನೊಂದಿರುವ ಪ್ರಸನ್ನ ಮಾರ್ತ, ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಗಳಗಳನೆ ಅತ್ತು ತನಗಾದ ಅವಮಾನಕ್ಕೆ ನ್ಯಾಯ ಕೇಳಿದ್ದಾರೆ.

ಇಷ್ಟಕ್ಕೂ ಪರಿವಾರದೊಳಗೆ ಭಿನ್ನ ಸ್ವರ ಭುಗಿಲೇಳಲು ಕಾರಣವಾಗಿದ್ದು ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಅಟಲ್ ವಿರಾಸತ್ ಎನ್ನುವ ಕಾರ್ಯಕ್ರಮ. ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ಅರುಣ್ ಪುತ್ತಿಲ ಮತ್ತು ಅವರ ಪರಿವಾರದ ಕಾರ್ಯಕರ್ತರು, ಕಾರ್ಯಕ್ರಮದಿಂದ ದೂರವುಳಿದಿದ್ದರು. ಇದಕ್ಕೂ ಮೊದಲೇ, ಪುತ್ತಿಲರಿಗೆ ಪಕ್ಷದಲ್ಲಿ ಜವಾಬ್ದಾರಿ ನೀಡಿಲ್ಲ ಎಂಬ ವಿಚಾರದಲ್ಲಿ ಪರಿವಾರ ಕಾರ್ಯಕರ್ತರು ಮತ್ತು ಬಿಜೆಪಿ ನಾಯಕರ ನಡುವೆ ಅಸಮಾಧಾನಗಳಿದ್ದವು. ಆದರೆ ಪಕ್ಷದಲ್ಲಿ ತಾಲೂಕು ಜವಾಬ್ದಾರಿ ಹೊಂದಿದ್ದವರು ವಿರಾಸತ್ ಕಾರ್ಯಕ್ರಮದಿಂದ ದೂರ ನಿಂತಿದ್ದು ಜಿಲ್ಲಾ ಬಿಜೆಪಿ ನಾಯಕರ ಸಿಟ್ಟಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ಪುತ್ತೂರು ನಗರ ಮತ್ತು ಗ್ರಾಮಾಂತರ ಕಾರ್ಯದರ್ಶಿ ಆಗಿದ್ದ ಪುತ್ತಿಲ ಪರಿವಾರದವರನ್ನು ಬದಲಿಸಿ ಹೊಸಬರನ್ನು ನೇಮಿಸಲಾಗಿತ್ತು.

ಈ ವೇಳೆ, ವಿರಾಸತ್ ಕಾರ್ಯಕ್ರಮಕ್ಕೆ ತನಗೇನೂ ಆಹ್ವಾನ ಇರಲಿಲ್ಲ. ಹಾಗಾಗಿ ಆ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ ಎಂದು ಅರುಣ್ ಪುತ್ತಿಲ ಮಾಧ್ಯಮಕ್ಕೆ ಸ್ಪಷ್ಟನೆ ಹೇಳಿದ್ದರು. ಅಷ್ಟೇ ಅಲ್ಲ, ಪುತ್ತೂರು ನಗರ ಮತ್ತು ಗ್ರಾಮಾಂತರ ಎರಡನ್ನೂ ಒಂದಾಗಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಬಿಜೆಪಿಯನ್ನು ಗೆಲ್ಲಿಸುವ ಕೆಲಸ ಮಾಡುತ್ತೇನೆ ಎಂದಿದ್ದರು. ಆದರೆ ಈ ಮಾತಿಗೆ ಕಿವಿಗೊಡದ ಜಿಲ್ಲಾ ನಾಯಕರು, ಪಕ್ಷದ ತಾಲೂಕು ಕಾರ್ಯದರ್ಶಿ ಸ್ಥಾನದಿಂದ ಉಮೇಶ್ ಕೋಡಿಬೈಲು ಸೇರಿದಂತೆ ನಾಲ್ವರನ್ನು ಬದಲಿಸಿದ್ದು ಪರಿವಾರವನ್ನು ಕೆರಳಿಸಿತ್ತು. ಇದಲ್ಲದೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸ್ಥಾನದಲ್ಲಿದ್ದ ಪ್ರಸನ್ನ ಮಾರ್ತ ಅವರನ್ನು ಹುದ್ದೆಗೆ ರಾಜಿನಾಮೆ ನೀಡುವಂತೆ ಒತ್ತಡ ಹೇರಲಾಗಿತ್ತು. ಹಲವು ಕಾರ್ಯಕರ್ತರು ಮಾರ್ತ ಅವರಿಗೆ ಕರೆ ಮಾಡಿ, ಪಕ್ಷ ಬಿಟ್ಟು ಬರುವಂತೆ ಹೇಳಿದ್ದರು ಎನ್ನಲಾಗಿದೆ.

ಇದರ ನಡುವೆಯೇ ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆದಿದ್ದು, ಭಾನುವಾರ ರಾತ್ರಿ ಕಾರ್ಯಕ್ರಮಕ್ಕೆ ತೆರಳಿದ ಪ್ರಸನ್ನ ಮಾರ್ತ ಅವರನ್ನು ತಡೆದು ನಿಲ್ಲಿಸಿ ಕಾರ್ಯಕರ್ತರು ಅವಮಾನಿಸಿದ್ದಾರೆ. ನೀವು ಬಿಜೆಪಿ ಅಲ್ವಾ, ನಮ್ಮ ಕಾರ್ಯಕ್ರಮಕ್ಕೆ ಯಾಕೆ ಬಂದಿದ್ದು ಎಂದು ಅಲ್ಲಿದ್ದ ಕೆಲವು ಕಾರ್ಯಕರ್ತರು ಪ್ರಶ್ನಿಸಿ ಕಲ್ಯಾಣೋತ್ಸವಕ್ಕೆ ಬರದಂತೆ ಗೇಟು ಹಾಕಿದ್ದಾರೆ. ಆನಂತರ, ಅಲ್ಲಿದ್ದ ಹಿರಿಯ ಮುಖಂಡರು ಪ್ರಸನ್ನ ಮಾರ್ತರನ್ನು ಒಳಗೆ ಕರೆದೊಯ್ದು ಸಮಾಧಾನ ಮಾಡಿದ್ದಾರೆ. ಆದರೆ ಮಾರ್ತ ಜೊತೆಗಿದ್ದ ಪತ್ನಿ ಈ ಘಟನೆಯಿಂದ ಕಣ್ಣೀರು ಹಾಕಿದ್ದಾರೆ.

ಎಲ್ಲರ ಎದುರಲ್ಲಿ ಅವಮಾನಿಸಿದ್ದರಿಂದ ನೊಂದಿರುವ ಪ್ರಸನ್ನ ಮಾರ್ತ ಇಂದು ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಪ್ರಾರ್ಥಿಸಿ, ಅವಮಾನ ಮಾಡಿದವರಿಗೆ ಶಿಕ್ಷೆ ನೀಡುವಂತೆ ಕೇಳುವುದಿಲ್ಲ, ಒಳ್ಳೆಯ ಬುದ್ಧಿ ಕೊಡು ಎಂದು ಕೇಳಿಕೊಂಡಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ತನ್ನ ಮೇಲೆ ಜಿಲ್ಲಾ ಬಿಜೆಪಿ ಹುದ್ದೆ ಬಿಡುವಂತೆ ಒತ್ತಡಗಳಿದ್ದವು. ಆದರೆ ಹಿಂದು ಸಮಾಜ ನಾವು ಒಟ್ಟಾಗಿಯೇ ಇರಬೇಕು, ಪುತ್ತಿಲ ಪರಿವಾರದಲ್ಲು ಬಿಜೆಪಿ ಮತ್ತು ಹಿಂದು ಕಾರ್ಯಕರ್ತರೇ ಇರೋದು. ನಮ್ಮ ನಡುವೆ ವಿಘಟನೆ ಯಾಕೆಂದು ಕೇಳಿದ್ದೆ. ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ವಿತರಣೆಗೂ ಹೋಗಿದ್ದೆ. ಎಲ್ಲ ಪ್ರಕ್ರಿಯೆಗಳಲ್ಲಿ ಭಾಗವಹಿಸಿದ್ದೇನೆ. ನಿನ್ನೆ ಪತ್ನಿಯೊಂದಿಗೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಕೆಲವು ಕಾರ್ಯಕರ್ತರು ಈ ರೀತಿ ನಡೆದುಕೊಂಡಿರುವುದು ನೋವಾಗಿದೆ ಎಂದು ಹೇಳಿದ್ದಾರೆ.

ಮಾಹಿತಿ ಪ್ರಕಾರ, ಬಿಜೆಪಿಯಲ್ಲಿ ನಗರ ಮತ್ತು ಗ್ರಾಮಾಂತರ ಎನ್ನುವ ಪ್ರತ್ಯೇಕ ಕಮಿಟಿ ಇರುವಾಗ ಅದನ್ನು ಬರ್ಖಾಸ್ತುಗೊಳಿಸಿ ಒಂದೇ ಘಟಕ ಮಾಡುವುದು ಆಗುವುದಿಲ್ಲ. ಗ್ರಾಮಾಂತರ ಘಟಕದ ಅಧ್ಯಕ್ಷ ಸ್ಥಾನ ಬೇಕಾದರೆ ಕೊಡಬಹುದು, ನಗರ ಘಟಕದಲ್ಲಿ ನಿಮ್ಮವರನ್ನೇ ಕೂರಿಸಬಹುದು ಎಂದು ರಾಜ್ಯ ಬಿಜೆಪಿಯಿಂದಲೂ ಅರುಣ್ ಪುತ್ತಿಲರಿಗೆ ಸಂದೇಶ ರವಾನಿಸಲಾಗಿತ್ತು. ರಾಜ್ಯ ಘಟಕದಲ್ಲಿ ಸ್ಥಾನ ಕೇಳಿದ್ದಕ್ಕೆ, ಸ್ವಲ್ಪ ತಾಳ್ಮೆ ವಹಿಸಿ ಎಂದೂ ಸೂಚನೆ ನೀಡಲಾಗಿತ್ತು. ಆದರೆ ಅರುಣ್ ಪುತ್ತಿಲ ರಾಜಕೀಯದಲ್ಲಿ ತಾಳಿದವನು ಬಾಳಿಯಾನು ಎನ್ನುವ ಮಾತನ್ನು ಅರಗಿಸಲಾಗದೆ ವಿಲ ವಿಲ ಎನ್ನುತ್ತಿದ್ದಾರೆ. ಕಾರ್ಯಕರ್ತರು ಹೇಳಿದಂತೆ ನಡೆದುಕೊಳ್ಳುತ್ತೇನೆ ಎನ್ನುತ್ತ ತನ್ನ ರಾಜಕೀಯ ಹಾದಿಗೆ ತಾನೇ ಮುಳ್ಳು ತಂದುಕೊಳ್ಳುತ್ತಿದ್ದಾರೆ.

Arun Puthila and his supporters, who created a stir in the last Assembly elections by rebelling against the BJP, have once again taken an oppositional stance. The Puthila Parivar showcased its strength by gathering over 20,000 people at the grand Srinivasa Kalyanotsava, signaling growing distance from the BJP.