ಕೊರೊನಾಗಿಂತ ಭೀಕರ ಬಿಜೆಪಿಯ ಭ್ರಷ್ಟಾಚಾರವಾಗಿದ್ದು ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ದೊಡ್ಡ ಶಾಪ - ಡಿಕೆಶಿ

31-07-20 08:47 am       Mangalore Correspondant   ಕರಾವಳಿ

ಹೆಣಗಳ ಮೇಲೆ ಹಣ ಮಾಡಲು ಹೊರಟ ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ದೊಡ್ಡ ಶಾಪ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ರಾಜ್ಯ ಸರ್ಕಾರದ ವಿರುದ್ಧವಾಗ್ದಾಳಿ ನಡೆಸಿದರು.

ಮಂಗಳೂರು, ಜು. 31: ''ಹೆಣಗಳ ಮೇಲೆ ಹಣ ಮಾಡಲು ಹೊರಟ ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ದೊಡ್ಡ ಶಾಪ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ರಾಜ್ಯ ಸರ್ಕಾರದ ವಿರುದ್ಧವಾಗ್ದಾಳಿ ನಡೆಸಿದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ''ಸರ್ಕಾರ ಕೊರೊನಾದಿಂದ ಸಾವನ್ನಪ್ಪಿದವರ ಹೆಣಗಳ ಮೇಲೆ ಹಣ ಮಾಡಲು ಹೊರಟಿದೆ. ಕೊರೊನಾಗಿಂತ ಭೀಕರ ಬಿಜೆಪಿಯ ಭ್ರಷ್ಟಾಚಾರವಾಗಿದ್ದು ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ದೊಡ್ಡ ಶಾಪವಾಗಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

''ಬಿಜೆಪಿ ಮಂತ್ರಿಗಳು ಕೊರೊನಾ ಆಸ್ಪತ್ರೆಗಳಿಗೆ ಭೇಟಿ ನೀಡಿಲ್ಲ. ಹೊರ ರಾಜ್ಯ/ಹೊರ ದೇಶಗಳಿಂದ ಬಂದವರಿಗೆ ಬೀಗ ಹಾಕಿದ್ದೀರಿ. ನಾಡು ಕಟ್ಟಲು ಸಹಾಯ ಮಾಡಿದವರನ್ನು ನೀಚವಾಗಿ ನಡೆದುಕೊಂಡಿದ್ದೀರಿ. ಪ್ರತಿ ಪಕ್ಷವಾಗಿರುವ ನಾವು ಕೊರೊನಾ ವಿಚಾರದಲ್ಲಿ ಸರ್ಕಾರದ ಜೊತೆ ಕೈ ಜೋಡಿಸಿದ್ದೇವೆ. ಆದರೆ ಕೊರೊನಾ ವಿಚಾರದಲ್ಲಿ ಸರ್ಕಾರದ ಭ್ರಷ್ಟಾಚಾರಕ್ಕೆ ನಾವು ಬೆಂಬಲ ನೀಡುವುದಿಲ್ಲ. ಸರ್ಕಾರವು 4 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ 2 ಸಾವಿರ ಕೋಟಿ ರೂಪಾಯಿಯನ್ನು ಲೂಟಿ ಮಾಡಿದೆ. ಕೊರೊನಾದಲ್ಲಿ ಭ್ರಷ್ಟಾಚಾರ, ಬಿಜೆಪಿ ಸರ್ಕಾರದ ಸಂಸ್ಕಾರ'' ಎಂದು ದೂರಿದರು.

''ಪಬ್ಲಿಕ್ ಅಕೌಂಟ್ಸ್ ಕಮೀಟಿ ಸಭೆಗೆ ಅವಕಾಶ ಮಾಡಿಕೊಡಿ. ಸಾರ್ವಜನಿಕರ ದುಡ್ಡಿನ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು. ಸರ್ಕಾರದ ಭಷ್ಟಾಚಾರದ ಬಗ್ಗೆ ಕೋರ್ಟ್ ಮೂಲಕ ತನಿಖೆಯಾಗಬೇಕು. ನ್ಯಾಯಾಧೀಶರು ಈ ಪ್ರಕರಣವನ್ನು ತನಿಖೆ ನಡೆಸಬೇಕು'' ಎಂದು ಆಗ್ರಹಿಸಿದರು.

''ನನ್ನ ಮೇಲೆ ಇಡಿ, ಸಿಬಿಐ ಪ್ರಯೋಗ ಮಾಡಿದ್ದೀರಿ. ನನ್ನನ್ನು ಗಲ್ಲಿಗೆ ಹಾಕಲು ಹೊರಟಿದ್ದೀರಿ. ಸರ್ಕಾರದಿಂದ ಲೀಗಲ್‌ ನೊಟೀಸ್‌ ಬಂದಿದೆ. ನೋಟಿಸ್‌ಗೆ ಉತ್ತರ ನೀಡುತ್ತೇವೆ. ನಮ್ಮಲ್ಲಿ ಬೇಕಾದ ಎಲ್ಲಾ ದಾಖಲೆ ಇದೆ. ನೀವು ನನ್ನ ಮೇಲೆ ಕೇಸ್‌ ಮಾಡಿ, ಮಾನನಷ್ಟ ಮೊಕದ್ದಮೆ ಹೂಡಿ, ಬೇಕಾದರೆ ನನ್ನನ್ನು ಬಂಧಿಸಿ. ಆದರೆ ಹಗರಣದ ಬಗ್ಗೆ ತನಿಖೆ ಮಾಡಲು ಅವಕಾಶ ನೀಡಿ'' ಎಂದು ಹೇಳಿದರು.

''ರಾಜ್ಯದಲ್ಲಿ ಅಭಿವೃದ್ಧಿ ಕೆಲಸವನ್ನು ನಿಲ್ಲಿಸಲಾಗಿದ್ದು ಸರ್ಕಾರಕ್ಕೆ ಬೇಕಾದ ಕೆಲಸ ಮಾತ್ರ ಮಾಡಲಾಗುತ್ತಿದೆ. ಬೇಕಾಬಿಟ್ಟಿ ಬಿಲ್‌ಗಳನ್ನು ನೀಡುತ್ತಾರೆ. ನಾಲ್ಕು ಲಕ್ಷ ಮೌಲ್ಯದ ವೆಂಟಿಲೇಟರ್, ಕಿಟ್‌ನ್ನು 18 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ನಾನು 1050 ರೂಪಾಯಿಗೆ ಥರ್ಮಲ್ ಸ್ಕ್ಯಾನ್‌ನ್ನು ಖರೀದಿ ಮಾಡಿದ್ದೇನೆ. 100ರೂಪಾಯಿಗೆ ಸ್ಯಾನಿಟೈಸರ್‌ನ್ನು ಖರೀದಿ ಮಾಡಿದ್ದೇನೆ. ಆದರೆ ನೀವು ಸಾವಿರಾರು ರೂಪಾಯಿ ಖರ್ಚು ಮಾಡಿ ಖರೀದಿ ಮಾಡಿದ್ದೀರಿ'' ಎಂದು ಸರ್ಕಾರವನ್ನು ಟೀಕೆ ಮಾಡಿದರು.

''ಗಾಂಧಿ ಲೆಕ್ಕ ಬೇರೆ, ಕೃಷ್ಣ ಲೆಕ್ಕ ಬೇರೆ, ಸರ್ಕಾರದ ಲೆಕ್ಕ ಬೇರೆಯೇ ಇದೆ. ಸರ್ಕಾರದ ಕಿಟ್‌ಗಳಿಗೆ ಮೋದಿ ಚಿತ್ರ ಹಾಗೂ ಪಕ್ಷದ ಚಿಹ್ನೆ ಹಾಕಿದ್ದಾರೆ. ಕಿಟ್‌ಗಳಿಗೆ ಪಕ್ಷದ ಚಿಹ್ನೆ ಹಾಕಿದವರನ್ನು ದೂರು ದಾಖಲಿಸಿ ಬಂಧಿಸಲು ಆಗಿಲ್ಲ. ಹೀಗಿರುವಾಗ ಮತ್ತೆ ಯಾವ ರೀತಿಯ ಸಹಕಾರವನ್ನು ನೀವು ನಮ್ಮಿಂದ ಬಯಸುತ್ತಿದ್ದೀರಿ'' ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು.

''ಆಟೋ/ಕ್ಯಾಬ್ ಚಾಲಕರಿಗೆ ಈವರೆಗೂ ಸಹಾಯಧನ ದೊರೆತಿಲ್ಲ. ಇನ್ನು ಯಾವಾಗ ಚಾಲಕರು ಸತ್ತ ಬಳಿಕ ಸಹಾಯಧನ ನೀಡುತ್ತೀರಾ ಎಂದು ಪ್ರಶ್ನಿಸಿದ ಅವರು ವಲಸೆ ಕಾರ್ಮಿಕರಿಗೆ ಸರ್ಕಾರ ರಕ್ಷಣೆ ನೀಡಿಲ್ಲ'' ಎಂದು ಆರೋಪಿಸಿದರು.