ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತರೂ ನಿಯಮ ಉಲ್ಲಂಘಿಸಿ ಮಹಾಸಭೆ ; ಕ್ರಮ ಕೈಗೊಳ್ಳದ ವಕ್ಫ್ ಮಂಡಳಿ, ಪ್ರಭಾವಿಗಳ ಒತ್ತಡಕ್ಕೆ ಮಣಿದ ಅಧಿಕಾರಿಗಳು, ಕಮಿಟಿ ಸದಸ್ಯರ ಆಕ್ರೋಶ

17-01-26 05:00 pm       Mangalore Correspondent   ಕರಾವಳಿ

ಉಳ್ಳಾಲ ಸಯ್ಯದ್ ಮದನಿ ದರ್ಗಾ ಆಡಳಿತ ಕಮಿಟಿಯ ಅವ್ಯವಹಾರದ ಬಗ್ಗೆ ಕಮಿಟಿ ಸದಸ್ಯರೇ ಹೈಕೋರ್ಟ್ ಮೆಟ್ಟಿಲೇರಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಕೇಳಿದ್ದು, ಹೈಕೋರ್ಟ್ ಇವರ ಪರವಾಗಿ ತೀರ್ಪು ನೀಡಿದ್ದರೂ ದರ್ಗಾ ಕಮಿಟಿಯ ಪದಾಧಿಕಾರಿಗಳು ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮಹಾಸಭೆಯನ್ನು ಕರೆದಿದ್ದಾರೆ. ಇದು ಏಕಪಕ್ಷೀಯ ಮತ್ತು ವಕ್ಫ್ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು, ಜ.17 : ಉಳ್ಳಾಲ ಸಯ್ಯದ್ ಮದನಿ ದರ್ಗಾ ಆಡಳಿತ ಕಮಿಟಿಯ ಅವ್ಯವಹಾರದ ಬಗ್ಗೆ ಕಮಿಟಿ ಸದಸ್ಯರೇ ಹೈಕೋರ್ಟ್ ಮೆಟ್ಟಿಲೇರಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಕೇಳಿದ್ದು, ಹೈಕೋರ್ಟ್ ಇವರ ಪರವಾಗಿ ತೀರ್ಪು ನೀಡಿದ್ದರೂ ದರ್ಗಾ ಕಮಿಟಿಯ ಪದಾಧಿಕಾರಿಗಳು ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮಹಾಸಭೆಯನ್ನು ಕರೆದಿದ್ದಾರೆ. ಇದು ಏಕಪಕ್ಷೀಯ ಮತ್ತು ವಕ್ಫ್ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿ ಕರೆದು ಮಾತನಾಡಿದ ದರ್ಗಾ ಕಮಿಟಿ ಸದಸ್ಯ ಫಾರೂಕ್ ಯು.ಎಚ್ ಅವರು, ಉಳ್ಳಾಲ ದರ್ಗಾ ಕಮಿಟಿಯ ಅವ್ಯವಹಾರ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ಹೇಳಿದ್ದರೂ ವಕ್ಫ್ ಮಂಡಳಿ ಮೌನ ವಹಿಸಿದೆ. ವಕ್ಷ್ ಮಂಡಳಿಯ ಸಿಇಓ ಅವರನ್ನು ಭೇಟಿ ಮಾಡಿ ಹೈಕೋರ್ಟ್ ಆದೇಶದ ಪ್ರತಿಯನ್ನು ನೀಡಿದ್ದರೂ ಕ್ರಮ ಜರುಗಿಸುತ್ತಿಲ್ಲ, ಅವರು ಯಾರ ಒತ್ತಡದಲ್ಲಿದ್ದಾರೆಂದು ಗೊತ್ತಿಲ್ಲ ಎಂದರು. 

ಇದರ ನಡುವೆ, ದುರಾಡಳಿತ ಮತ್ತು ಹಣದ ಅವ್ಯವಹಾರದ ಬಗ್ಗೆ ತನಿಖೆ ನಡೆಯಬಹುದೆಂಬ ಭಯದಲ್ಲಿ ವಕ್ಫ್ ಬೈಲಾವನ್ನು ಉಲ್ಲಂಘಿಸಿ ಜ.18ರಂದು ದರ್ಗಾ ಕಮಿಟಿಯ ಮಹಾಸಭೆಯನ್ನು ಕರೆದಿದ್ದಾರೆ. ಮಹಾಸಭೆಯನ್ನು ನಡೆಸುವುದಿದ್ದರೆ ಎಲ್ಲ ಮತದಾರರಿಗೂ ಆಹ್ವಾನ ನೀಡಬೇಕಾಗುತ್ತದೆ. ಆದರೆ ಇಲ್ಲಿ ಸದಸ್ಯರಲ್ಲದ ಜಮಾತಿನ ಮಸೀದಿ ಕಮಿಟಿ ಅಧ್ಯಕ್ಷರಿಗೆ ಮಹಾಸಭೆಯ ನೋಟೀಸ್ ನೀಡಿದ್ದಾರೆ. ದರ್ಗಾ ಕಮಿಟಿಯ ಅವಧಿ ಇದೇ ಮಾರ್ಚ್ ತಿಂಗಳಿಗೆ ಕೊನೆಗೊಳ್ಳಲಿದ್ದು, ಇದಕ್ಕೂ ಮುನ್ನ ಮಹಾಸಭೆ ಕರೆಯುವುದು ಕಾನೂನು ಉಲ್ಲಂಘನೆಯಾಗುತ್ತದೆ. ಈಗಾಗಲೇ ವಕ್ಫ್ ಮಂಡಳಿಯ ಸಿಇಓ ದರ್ಗಾ ಕಮಿಟಿಯ ಅವ್ಯವಹಾರದ ಬಗ್ಗೆ ತನಿಖೆಗೆ ಮುಂದಾಗಿರುವುದು ತಿಳಿದುಬಂದಿದೆ. ದರ್ಗಾ ಮತ್ತು ಮಸೀದಿ ವಠಾರದಲ್ಲಿ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಪಡೆದು ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇದರ ಬಗ್ಗೆ ಮತ್ತು ಉರೂಸ್ ಖರ್ಚು ವೆಚ್ಚಗಳ ಬಗ್ಗೆ ಈವರೆಗೂ ಲೆಕ್ಕಪತ್ರಗಳನ್ನು ನೀಡಿರುವುದಿಲ್ಲ. ಈಗ ತನಿಖೆಯಾಗುತ್ತದೆ ಎಂಬ ಭಯದಲ್ಲಿ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಸೇರಿ ತರಾತುರಿಯಲ್ಲಿ ಮಹಾಸಭೆ ಕರೆದಿದ್ದಾರೆ.

ಈ ಬಗ್ಗೆ ವಕ್ಫ್ ಮಂಡಳಿಗೂ ದೂರು ನೀಡಿದ್ದು, ಪ್ರಭಾವಿಗಳ ಒತ್ತಡದಿಂದಾಗಿ ವಕ್ಫ್ ಅಧಿಕಾರಿಗಳು ಮೌನವಾಗಿದ್ದಾರೆ. ನಾಳೆಯ ಸಭೆಗೆ ಆಹ್ವಾನ ಇಲ್ಲದಿದ್ದರೂ ನಾವು ಹಾಜರಾಗುತ್ತೇವೆ, ಆಕ್ಷೇಪವನ್ನೂ ಸಲ್ಲಿಸುತ್ತೇವೆ. ವಕ್ಫ್ ಇಲಾಖೆ ಅಧಿಕಾರಿಗಳಿಗೆ ಹೈಕೋರ್ಟ್ ತೀರ್ಪನ್ನು ಜಾರಿಗೆ ತರುವಂತೆ ಆಗ್ರಹ ಮಾಡುತ್ತೇವೆ. ಈ ಕುರಿತಾಗಿ ಕೋರ್ಟ್ ತೀರ್ಪು ಉಲ್ಲಂಘನೆಯೆಂದು ನ್ಯಾಯಾಲಯಕ್ಕೂ ಮನವಿ ಮಾಡುತ್ತೇವೆ ಎಂದು ಫಾರೂಕ್ ಹೇಳಿದರು.

ದರ್ಗಾ ವ್ಯಾಪ್ತಿಗೆ ಒಳಪಟ್ಟ ಕೋಟೆಪುರ, ಮೇಲಂಗಡಿ, ಮುಕ್ಕಚ್ಚೇರಿ, ಅಲೇಕಳ, ಕಲ್ಲಾಪು ವ್ಯಾಪ್ತಿಯ ಐದು ಕರಿಯಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮತದಾರರಿದ್ದು, ಅವರನ್ನು ಮತದಾರ ಪಟ್ಟಿಗೆ ಸೇರಿಸಬೇಕು. ವಕ್ಫ್ ಬೈಲಾ ಪ್ರಕಾರ ಆಡಳಿತ ಸಮಿತಿ ಅವಧಿ ಪೂರ್ಣಗೊಳ್ಳುವ 6 ತಿಂಗಳ ಒಳಗೆ ಮತದಾರ ಪಟ್ಟಿಯನ್ನು ಪರಿಷ್ಕರಣೆ ಮಾಡಬೇಕಾಗುತ್ತದೆ. ಸದ್ರಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಕಳೆದ ಮೂರು ವರ್ಷಗಳಿಂದ ಲೆಕ್ಕಪತ್ರವನ್ನು ಮಂಡನೆ ಮಾಡಿರುವುದಿಲ್ಲ. ಈಗ ಏಕಾಏಕಿ ಮಹಾಸಭೆಯನ್ನು ಕರೆದು ಲೆಕ್ಕಪತ್ರ ಮಂಡಿಸಲು ಹೊರಟಿದ್ದು, ಇದಕ್ಕೆ ಅವಕಾಶ ನೀಡಬಾರದು ಮತ್ತು ಸಭೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ವಕ್ಫ್ ಇಲಾಖೆಯನ್ನು ಆಗ್ರಹಿಸುವುದಾಗಿ ಫಾರೂಕ್ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಉಳ್ಳಾಲ ದರ್ಗಾ ಕಮಿಟಿ ಸದಸ್ಯರಾದ ಹಸೈನಾರ್, ರಿಯಾಜ್, ಮುಸ್ತಾಫ ಇದ್ದರು.

Members of the Ullal Syed Madani Dargah administrative committee have alleged that, despite a High Court order, the office-bearers convened a general body meeting in violation of Waqf rules. They accused the Waqf Board of inaction due to pressure from influential persons and demanded immediate enforcement of the court’s directive and cancellation of the meeting.