ಕೆಎಫ್ ಸಿ ಬಳಿಕ ಮಂಗಳೂರಿನಲ್ಲಿ ಎಂಎಫ್ ಸಿ ರೆಸ್ಟೋರೆಂಟ್ ತಪಾಸಣೆ ; ಬೇಯಿಸದ ಪದಾರ್ಥ ನೀಡುತ್ತಾರೆಂಬ ದೂರು, ಬಣ್ಣ ಹಾಕಿದ್ದ ಖಾದ್ಯಗಳನ್ನು ತಿನ್ನಬೇಡಿ ಎಂದ ಅಧಿಕಾರಿಗಳು

21-08-26 08:17 pm       HK News Staffer   ಕರಾವಳಿ

ಸರಿಯಾಗಿ ಬೇಯಿಸದ ಕಳಪೆ ದರ್ಜೆಯ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುತ್ತಿದ್ದಾರೆಂಬ ದೂರಿನ ಮೇರೆಗೆ ನಗರದ ಫಳ್ನೀರ್ ನಲ್ಲಿರುವ ಎಂಎಫ್‌‌ ಸಿ ರೆಸ್ಟೋರೆಂಟ್ ಮೇಲೆ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಗಳೂರು, ಆ.21: ಸರಿಯಾಗಿ ಬೇಯಿಸದ ಕಳಪೆ ದರ್ಜೆಯ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುತ್ತಿದ್ದಾರೆಂಬ ದೂರಿನ ಮೇರೆಗೆ ನಗರದ ಫಳ್ನೀರ್ ನಲ್ಲಿರುವ ಎಂಎಫ್‌‌ ಸಿ ರೆಸ್ಟೋರೆಂಟ್ ಮೇಲೆ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ಆಹಾರ ಕಳಪೆ ಬಗ್ಗೆ ಕ್ಯೂ ಆರ್ ಕೋಡ್ ಅಭಿಯಾನಕ್ಕೆ ಸಾರ್ವಜನಿಕರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದ್ದು ಇದರಲ್ಲಿ ಬಂದ ದೂರಿನ ಆಧಾರದಲ್ಲಿ ಮಂಗಳೂರಿನ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಂಕಿತ ಅಧಿಕಾರಿ ಡಾ.ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಸಿಬಂದಿ ದಾಳಿ ನಡೆಸಿದ್ದಾರೆ. 

ರೆಸ್ಟೋರೆಂಟ್ ‌ನಲ್ಲಿ ಶೋರ್ಮಾ ಸೇರಿದಂತೆ ಮಾಂಸಾಹಾರ ಖಾದ್ಯಗಳು ಮತ್ತು ಅವುಗಳಿಗೆ ಬಳಸುವ ಬಣ್ಣಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಎಲ್ಲಾ ಖಾದ್ಯಗಳ ಸ್ಯಾಂಪಲ್ಸ್ ಸಂಗ್ರಹಿಸಿರುವ ಅಧಿಕಾರಿಗಳು ಅದನ್ನು ಪ್ರಯೋಗಾಲಯಕ್ಕೆ ಕಳಿಸಿಕೊಡುವುದಾಗಿ ತಿಳಿಸಿದ್ದಾರೆ. ಚಿಕನ್ ಮತ್ತಿತರ ಮಾಂಸಾಹಾರಿ ಖಾದ್ಯಗಳಿಗೆ ಕೃತಕ ಬಣ್ಣಗಳನ್ನು ಬಳಸಿ ಆಕರ್ಷಕವಾಗಿಸುವುದರ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. '

ಹಸಿ ಮಾಂಸಗಳ ಸ್ಟೋರೇಜ್ ಮತ್ತು ಆಹಾರ ಪದಾರ್ಥಗಳ ತಯಾರಿ ಬಗ್ಗೆ ಶುಚಿತ್ವ ಇಟ್ಟುಕೊಂಡಿದ್ದಾರೆಯೇ ಎಂದು ಪರಿಶೀಲನೆ ನಡೆಸಿದ್ದಾರೆ. ಮಂಗಳೂರಿನಲ್ಲಿ ಕೆಎಫ್ ಸಿ, ಮೆಕ್ ಡೊನಾಲ್ಡ್ ಕಂಪನಿಗಳ ಆಹಾರ ಮಳಿಗೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಇದೀಗ ಎಂಎಫ್ ಸಿ ಹೆಸರಿನ ಮಳಿಗೆಯಲ್ಲಿ ತಪಾಸಣೆ ಕೈಗೊಂಡಿದ್ದಾರೆ. ಹೈಜೀನ್ ಇಟ್ಟುಕೊಳ್ಳುವ ಬಗ್ಗೆ ನೋಟಿಸ್ ಜಾರಿ ಮಾಡಿದ್ದು ಮಾಂಸ, ಆಹಾರ ಪದಾರ್ಥಗಳಲ್ಲಿ ಮಾಲಿನ್ಯ ಕಂಡುಬಂದಲ್ಲಿ ಕೇಸು ದಾಖಲಿಸುವುದಾಗಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ. ಕೆಲವು ಬಣ್ಣಗಳನ್ನು ಬಳಸುವಂತಿಲ್ಲ, ಕೆಲವನ್ನು ನಿಗದಿಯಷ್ಟೇ ಬಳಸಬೇಕು. ಇದರ ಬಗ್ಗೆ ಸಾರ್ವಜನಿಕರೇ ಜಾಗೃತಿಯಾಗಬೇಕು. ಬಣ್ಣಗಳಿದ್ದ ಕಬಾಬ್ ತಿನ್ನದೆ ನಿರಾಕರಣೆ ಮಾಡಬೇಕು ಎಂದು ಪ್ರವೀಣ್ ಹೇಳಿದ್ದಾರೆ.