ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ್ಟು ಜಾಲತಾಣದಲ್ಲಿ ಪೋಸ್ಟ್ ; ಸಂಜೀವ ಮಟಂದೂರು ಹೆಸರಲ್ಲಿ ಪೋಸ್ಟ್ ಹಂಚಿಕೆ, ಎರಡು ಪ್ರಕರಣ ದಾಖಲು

23-08-26 05:36 pm       HK News Staffer   ಕರಾವಳಿ

ಪುತ್ತೂರು ದರ್ಬೆ ಎಂಬಲ್ಲಿನ‌ ಅಂಗಡಿಯೊಂದರಲ್ಲಿ ಇತ್ತೀಚೆಗೆ‌ ನಡೆದ‌ ಗಲಾಟೆಗೆ‌ ಸಂಬಂಧಿಸಿ ಧಾರ್ಮಿಕ ವೈಮನಸ್ಸು ಉಂಟಾಗುವಂತಹ ಹಾಗೂ ಸಾರ್ವಜನಿಕ ಶಾಂತಿ‌ ಸುವ್ಯವಸ್ಥೆ ಕದಡುವಂತಹ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ಬಂದ್ ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪುತ್ತೂರು, ಆ.23: ಪುತ್ತೂರು ದರ್ಬೆ ಎಂಬಲ್ಲಿನ‌ ಅಂಗಡಿಯೊಂದರಲ್ಲಿ ಇತ್ತೀಚೆಗೆ‌ ನಡೆದ‌ ಗಲಾಟೆಗೆ‌ ಸಂಬಂಧಿಸಿ ಧಾರ್ಮಿಕ ವೈಮನಸ್ಸು ಉಂಟಾಗುವಂತಹ ಹಾಗೂ ಸಾರ್ವಜನಿಕ ಶಾಂತಿ‌ ಸುವ್ಯವಸ್ಥೆ ಕದಡುವಂತಹ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ಬಂದ್ ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ದಿನೇಶ್ ಪಂಜಿಗ ಎಂಬ ವ್ಯಕ್ತಿ ವಾಟ್ಸಾಪ್ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು ಉಂಟಾಗುವಂತಹ ಹಾಗೂ ಸಾರ್ವಜನಿಕ ವಲಯದಲ್ಲಿ ಭಯ ಉಂಟು ಮಾಡುವಂತಹ ಸಂದೇಶವನ್ನು‌ ಪ್ರಸಾರ ಮಾಡುವ ಮೂಲಕ, ಬಂದ್ ಗೆ ಕರೆಕೊಟ್ಟು, ಜನರು ಅಕ್ರಮಕೂಟ ಸೇರಿ‌ ಕಾನೂನುಬಾಹಿರ ಕೃತ್ಯವೆಸಗಲು ದುಷ್ಪ್ರೇರಣೆ ನೀಡಿರುವುದು ಕಂಡುಬಂದಿದ್ದು, ಸದ್ರಿ ಸಂದೇಶವನ್ನು ಪ್ರಸಾರ ಮಾಡಿದ ದಿನೇಶ್ ಪಂಜಿಗ ಎಂಬ ವಾಟ್ಸಾಪ್ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ರ:100/2026,  ಕಲಂ: 353(2),57,189 THE BHARATIYA NYAYA SANHITA (BNS), 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. 

ಮತ್ತೊಂದು ಪ್ರಕರಣದಲ್ಲಿ "Sanjeeva Matandoor" ಎಂಬ ಫೇಸ್ ಬುಕ್ ಖಾತೆಯನ್ನು ಹೊಂದಿರುವ ವ್ಯಕ್ತಿ ಸಾಮಾಜಿಕ ಜಾಲತಾಣದ ಮೂಲಕ ಧಾರ್ಮಿಕ ವೈಮನಸ್ಸು ಹಾಗೂ ಸಾರ್ವಜನಿಕ ವಲಯದಲ್ಲಿ ಭಯವನ್ನುಂಟು ಮಾಡುವಂತಹ ಸಂದೇಶವನ್ನು‌ ಪ್ರಸಾರ ಮಾಡುವ ಮೂಲಕ, ಬಂದ್ ಗೆ ಕರೆಕೊಟ್ಟು, ಜನರು ಅಕ್ರಮ ಕೂಟ ಸೇರಿ‌ ಕಾನೂನುಬಾಹಿರ ಕೃತ್ಯವೆಸಗಲು ದುಷ್ಪ್ರೇರಣೆ ನೀಡಿರುವುದು ಕಂಡುಬಂದಿದ್ದು, ಸದ್ರಿ ಸಂದೇಶವನ್ನು ಪ್ರಸಾರ ಮಾಡಿದ "Sanjeeva Matandoor" ಎಂಬ ಫೇಸ್ ಬುಕ್ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ರ:102/2026,  ಕಲಂ: 353(2),57,189 THE BHARATIYA NYAYA SANHITA (BNS), 2023 ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ.

ಪ್ರತಿಯೊಬ್ಬರೂ ಪ್ರತಿಭಟನೆ ನಡೆಸುವ ಹಕ್ಕನ್ನು ಹೊಂದಿದ್ದು, ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ನೀಡಲಾಗುವುದು. ಆದರೆ  ಪ್ರತಿಭಟನೆಯ ದಿನಾಂಕ ಮತ್ತು ಸಮಯವನ್ನು ಸಮಾಜದ ಸ್ವಾಸ್ತ್ಯಕ್ಕೆ ದಕ್ಕೆಯಾಗುವಂತಹ ಯಾವುದೇ ಅನ್ಯ ಉದ್ದೇಶದಿಂದ ನಿಗದಿಪಡಿಸಿರುವುದು ಕಂಡುಬಂದಲ್ಲಿ, ಅಂತಹವರುಗಳ ವಿರುದ್ದ ಪೊಲೀಸ್ ಇಲಾಖೆಯು ಸೂಕ್ತ ಕಾನೂನು ಕ್ರಮ ಜರುಗಿಸಲಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.