ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ವಿಭಿನ್ನ ರೀತಿಯ ಗೌರಿಹಬ್ಬ ಆಚರಣೆ ; ಆರ್ಥಿಕ ಹಿಂದುಳಿದ ಹಾಗೂ ಆಶ್ರಮವಾಸಿ ಹೆಣ್ಮಕ್ಕಳಿಗೆ ಸಂಪ್ರದಾಯಬದ್ಧ ಉಚಿತ ಸಾಮೂಹಿಕ ಮೂಗುತಿ ಧಾರಣೆ 

13-09-26 08:10 pm       HK News   ಕರಾವಳಿ

 ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಈ ಬಾರಿಯ ಗೌರಿಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗಿದೆ. ಕ್ಷೇತ್ರದ‌ ಆಡಳಿತ ಸಮಿತಿಯ ವತಿಯಿಂದ ಪ್ರಥಮ‌ ಬಾರಿಗೆ ಹೆಣ್ಮಕ್ಕಳಿಗೆ ಸಂಪ್ರದಾಯಬದ್ಧವಾಗಿ ಸಾಮೂಹಿಕ ಮೂಗುತಿ ಧಾರಣಾ ಕಾರ್ಯಕ್ರಮ ಆಯೋಜಿಸಿದ್ದು,‌ ಆಶ್ರಮವಾಸಿ ಹಾಗೂ ಆರ್ಥಿಕವಾಗಿ ಹಿಂದುಳಿದ 26 ಹೆಣ್ಮಕ್ಕಳಿಗೆ ಉಚಿತವಾಗಿ ಹಾಗೂ 9 ಹೆಣ್ಮಕ್ಕಳಿಗೆ ಪೋಷಕರೇ ಶ್ರೀ ಕ್ಷೇತ್ರದಲ್ಲಿ ಮೂಗುತಿ ಧಾರಣೆ ನೆರವೇರಿಸಿದರು. 

ಉಳ್ಳಾಲ, ಸೆ.13 ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಈ ಬಾರಿಯ ಗೌರಿಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗಿದೆ. ಕ್ಷೇತ್ರದ‌ ಆಡಳಿತ ಸಮಿತಿಯ ವತಿಯಿಂದ ಪ್ರಥಮ‌ ಬಾರಿಗೆ ಹೆಣ್ಮಕ್ಕಳಿಗೆ ಸಂಪ್ರದಾಯಬದ್ಧವಾಗಿ ಸಾಮೂಹಿಕ ಮೂಗುತಿ ಧಾರಣಾ ಕಾರ್ಯಕ್ರಮ ಆಯೋಜಿಸಿದ್ದು,‌ ಆಶ್ರಮವಾಸಿ ಹಾಗೂ ಆರ್ಥಿಕವಾಗಿ ಹಿಂದುಳಿದ 26 ಹೆಣ್ಮಕ್ಕಳಿಗೆ ಉಚಿತವಾಗಿ ಹಾಗೂ 9 ಹೆಣ್ಮಕ್ಕಳಿಗೆ ಪೋಷಕರೇ ಶ್ರೀ ಕ್ಷೇತ್ರದಲ್ಲಿ ಮೂಗುತಿ ಧಾರಣೆ ನೆರವೇರಿಸಿದರು. 

ಸಂಸದ ಬ್ರಿಜೇಶ್ ಚೌಟ ಅವರ ಹೆತ್ತವರಾದ ಸೇಸಣ್ಣ ಚೌಟ ಹಾಗೂ ಪುಷ್ಪಾ ಚೌಟ ದಂಪತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸೇಸಣ್ಣ ಚೌಟರು ಹೆಣ್ಮಕ್ಕಳಿಗೆ ಮೂಗುತಿ ಧಾರಣೆಯು ಸೌಂಧರ್ಯದ ದೃಷ್ಟಿಯಿಂದ ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ಸಹಕಾರಿಯಾಗಿದೆ ಎಂಬ ನಂಬಿಕೆ ಇದೆ. ಸಂಪ್ರದಾಯಬದ್ಧ ಮೂಗುತಿ ಧಾರಣೆಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಡೆಸಲಾದ ಈ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆಯೆಂದರು.

ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ ಮಾತನಾಡಿ, ಹಿಂದೂ ಧರ್ಮದ ಸಂಸ್ಕೃತಿ ಹಾಗೂ ಸಂಪ್ರದಾಯದಂತೆ ಹೆಣ್ಮಕ್ಕಳಿಗೆ ಮೂಗುತಿ ಧಾರಣೆ ಮಾಡಿಸುವ ಉದ್ಧೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜಿ.ಪಂ ಮಾಜಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅವರ ಸಲಹೆಯಂತೆ ದಾನಿಗಳು ಹಾಗೂ ಸಮಿತಿಯವರು ಚರ್ಚಿಸಿ, ಆರ್ಥಿಕವಾಗಿ ಹಿಂದುಳಿದ ಹೆಣ್ಮಕ್ಕಳಿಗೂ ಈ ಅವಕಾಶ ದೊರೆಯಬೇಕೆಂಬ ನಿರ್ಧಾರ ಕೈಗೊಳ್ಳಲಾಯಿತು. ಸಂಸದ ಬ್ರಿಜೇಶ್ ಚೌಟರ ಹೆತ್ತವರು ಸೇರಿದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್ ಕುತ್ತಾರ್, ದುರ್ಗಾವಾಹಿನಿ ಮಹಿಳಾ ಮಂಡಲ, ವರಮಹಾಲಕ್ಷ್ಮಿ ಸಮಿತಿ ದುಬೈ ಹಾಗೂ ಹಲವು ದಾನಿಗಳ ಸಹಕಾರದಿಂದ ಈ ಕಾರ್ಯಕ್ರಮ ನೆರವೇರಿಸಲಾಗಿದೆಯೆಂದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಮಾತನಾಡಿ ಮೂಗುತಿ ಧಾರಣೆಯು ಹೆಣ್ಮಕ್ಕಳ ಜೀವನದಲ್ಲಿ ಎದುರಾಗುವ ವಿವಿಧ ನೋವುಗಳನ್ನು ಎದುರಿಸಲು ಮತ್ತು ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳಲು ಇರುವಂತಹ ಪದ್ಧತಿಯಾಗಿದೆ. ಋತುಚಕ್ರದ ಸಂದರ್ಭ ಎದುರಾಗುವ ನೋವುಗಳನ್ನು ಸಹಿಸಿಕೊಳ್ಳುವ ಮಾನಸಿಕ ದೃಢತೆಯನ್ನು ಬೆಳೆಸುವಲ್ಲಿಯೂ ಇದರ ಪಾತ್ರವಿದೆ. ಸಾಮೂಹಿಕ ಮೂಗುತಿ ಧಾರಣೆಯ ಕಲ್ಪನೆಯನ್ನು ಪ್ರಸ್ತಾಪಿಸಿದಾಗ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ದಾನಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು. 

ವಿಶ್ವಕರ್ಮ ಸಮುದಾಯದ ನಾಗೇಶ್‌ ಆಚಾರ್ಯ, ಸುರೇಶ್‌ ಆಚಾರ್ಯ, ಸತೀಶ್‌ ಆಚಾರ್ಯ, ಯಶೋಧರ ಆಚಾರ್ಯ ಮೂಗುತಿ ಧಾರಣೆ ನಡೆಸಿಕೊಟ್ಟರು. ಕ್ಷೇತ್ರದ ಉಪಾಧ್ಯಕ್ಷರಾದ ವಾಸು ಪೂಜಾರಿ, ಜಗನ್ನಾಥ್‌ ಸಾಲ್ಯಾನ್‌, ಪುಷ್ಪರಾಜ್‌, ಜೆ.ಕೆ ರೈ,‌ ಅರ್ಚಕ ವಿಜಯ ನಾವಡ, ಪ್ರಮುಖರಾದ ದಿನೇಶ್‌ ಗಟ್ಟಿ, ಮಾಧವ ನಾಯ್ಕ್‌ , ರಾಮಕೃಷ್ಣ ಬಬ್ಬುಕಟ್ಟೆ ಮೊದಲಾದವರಿದ್ದರು.