Santhosh laad, Araga jnanendra ಕಾರ್ಮಿಕ ಇಲಾಖೆಯಲ್ಲಿ ಬಹುದೊಡ್ಡ ಹಗರಣ ; ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ದುರ್ಬಳಕೆ, ಸಚಿವ ಸಂತೋಷ್ ಲಾಡ್ ರಾಜಿನಾಮೆಗೆ ಒತ್ತಾಯ

08-10-26 04:27 pm       HK News Staffer   ಕರಾವಳಿ

ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ಬಹುದೊಡ್ಡ ಹಗರಣ ನಡೆದಿದ್ದು ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 800 ಕೋಟಿ ರೂಪಾಯಿ ದುರ್ಬಳಕೆ ಆಗಿದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಶಿವಮೊಗ್ಗ, ಅ.8: ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ಬಹುದೊಡ್ಡ ಹಗರಣ ನಡೆದಿದ್ದು ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 800 ಕೋಟಿ ರೂಪಾಯಿ ದುರ್ಬಳಕೆ ಆಗಿದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದಿಂದ ನೂರಾರು ಕೋಟಿ ರೂ. ದೆಹಲಿ ಮತ್ತು ಕೇರಳಕ್ಕೆ ವರ್ಗಾವಣೆ ಆಗಿದೆ ಎಂದು ಆರೋಪಿಸಿದ ಆರಗ ಜ್ಞಾನೇಂದ್ರ ಅವರು ಈ ಹಗರಣದ ವಿರುದ್ಧ ಬಿಜೆಪಿ ದೊಡ್ಡ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ ಅವರು, ‘ರಾಜ್ಯದಲ್ಲಿ 27,13,000 ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ತೋರಿಸಲಾಗಿದ್ದು, ಒಬ್ಬ ಕಾರ್ಮಿಕನ ಆರೋಗ್ಯ ತಪಾಸಣೆಗೆ 2,950 ರೂಪಾಯಿ ವೆಚ್ಚವಾಗಿದೆ ಎಂದು ಇಲಾಖೆ ಲೆಕ್ಕ ತೋರಿಸಿದೆ. ಆಮೂಲಕ ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ ಮೂರು ವರ್ಷದಲ್ಲಿ 800 ಕೋಟಿ ರೂ. ಹಣವನ್ನು ಲೂಟಿ ಮಾಡಲಾಗಿದೆ. ಎಂಟು ಏಜೆನ್ಸಿಗಳ ಮೂಲಕ ಕಾರ್ಮಿಕ ಇಲಾಖೆಯಲ್ಲಿ ಈ ಹಗರಣ ನಡಿದೆದೆ ಎಂದರು. 

ಹಗರಣವನ್ನು ಸಿಬಿಐ ಅಥವಾ ಇಡಿ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ ಜ್ಞಾನೇಂದ್ರ, ಪ್ರಕರಣದಲ್ಲಿ ಐಎಎಸ್​ ಅಧಿಕಾರಿಗಳು ಸೇರಿದಂತೆ ಎಲ್ಲರೂ ಭಾಗಿಯಾಗಿದ್ದಾರೆ. ಎಲ್ಲರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ಹಗರಣ ಸಂಬಂಧ ಕಾರ್ಮಿಕ ಸಚಿವ ಸಂತೋಷ್​ ಲಾಡ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಸಂತೋಷ್ ಲಾಡ್ ರಾಜೀನಾಮೆ ನೀಡದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ದೊಡ್ಡ ಹೋರಾಟ ನಡೆಸಲಿದೆ ಎಂದು ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.