Agnes Colllege Protest, Vedavyas Kamath: ಮಹಿಳಾ ಪೊಲೀಸರಿಲ್ಲದೆ ವಿದ್ಯಾರ್ಥಿನಿಯರನ್ನು ದೂಡಿ ಕೊರಳು ಪಟ್ಟಿ ಹಿಡಿದಿದ್ದು ಆಘಾತಕಾರಿ, ಕೃತ್ಯ ಎಸಗಿದ ಪೊಲೀಸರನ್ನು ಕೂಡಲೇ ಅಮಾನತುಗೊಳಿಸಿ, ಶಾಸಕ ವೇದವ್ಯಾಸ ಕಾಮತ್ ಆಗ್ರಹ

13-10-26 08:41 pm       HK News Desk   ಕರಾವಳಿ

ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ನಿರ್ವಹಿಸುವಲ್ಲಿ ಪೊಲೀಸರು ಅತಿರೇಕದ ವರ್ತನೆ ತೋರಿದ್ದು, ವಿದ್ಯಾರ್ಥಿನಿಯರನ್ನು ಮಹಿಳಾ ಪೊಲೀಸ್ ಅಧಿಕಾರಿಗಳಿಲ್ಲದೆ ಪುರುಷ ಪೊಲೀಸರು ದೂಡಿ, ಹಲ್ಲೆ ನಡೆಸಿರುವುದು ಖಂಡನೀಯ.

ಮಂಗಳೂರು, ಅ.13 : ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ನಿರ್ವಹಿಸುವಲ್ಲಿ ಪೊಲೀಸರು ಅತಿರೇಕದ ವರ್ತನೆ ತೋರಿದ್ದು, ವಿದ್ಯಾರ್ಥಿನಿಯರನ್ನು ಮಹಿಳಾ ಪೊಲೀಸ್ ಅಧಿಕಾರಿಗಳಿಲ್ಲದೆ ಪುರುಷ ಪೊಲೀಸರು ದೂಡಿ, ಹಲ್ಲೆ ನಡೆಸಿರುವುದು ಖಂಡನೀಯ. ಘಟನೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು.

ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿ ಸುದ್ದಿಗೋಷ್ಟಿ ನಡೆಸಿದ ಅವರು, ವಿದ್ಯಾರ್ಥಿಗಳ ಮತ್ತು ಕಾಲೇಜು ಆಡಳಿತದ ನಡುವಿನ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆದರೆ ಪ್ರತಿಭಟನೆಗೆ ಇಳಿದ ವಿದ್ಯಾರ್ಥಿಗಳ ಜೊತೆಗೆ ಪೊಲೀಸರು ನಡೆದುಕೊಂಡ ರೀತಿ ಆಘಾತಕಾರಿಯಾಗಿದೆ. ವಿದ್ಯಾರ್ಥಿಗಳನ್ನು ಎಳೆದೊಯ್ಯುವುದು, ಮಹಿಳಾ ಪೊಲೀಸರಿಲ್ಲದೆ ವಿದ್ಯಾರ್ಥಿನಿಯರ ಮೈಮುಟ್ಟಲು ಎಷ್ಟು ಧೈರ್ಯ. ಯಾರು ಈ ತಪ್ಪು ಎಸಗಿದ್ದಾರೋ ಅವರನ್ನು ಕೂಡಲೇ ಸಸ್ಪೆಂಡ್ ಮಾಡಬೇಕು ಎಂದು ಒತ್ತಾಯಿಸಿದರು. ‌

ಪರೀಕ್ಷೆ ಮುಂದೂಡುವ ವಿಚಾರದಲ್ಲಿ ಹಿಂದಿನ ಉದಾಹರಣೆ ಉಲ್ಲೇಖಿಸಿದ ಕಾಮತ್, ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಕಾಲೇಜುಗಳಿವೆ. 2025ರ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬವಿದ್ದ ಹಿನ್ನೆಲೆಯಲ್ಲಿ, ಮರುದಿನ ಡಿಸೆಂಬರ್ 26ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡುವಂತೆ ವಿದ್ಯಾರ್ಥಿ ಸಂಘಟನೆಗಳು ಮತ್ತು ಕಾಲೇಜುಗಳು ಮನವಿ ಮಾಡಿದ್ದವು. ಆಗ ಸುಮಾರು 140 ಕಾಲೇಜುಗಳ ಪರೀಕ್ಷೆಗಳನ್ನು ಮುಂದೂಡಲಾಗಿತ್ತು ಎಂದು ಹೇಳಿದರು. ಈಗಲೂ ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದರು, ರಜೆ ನೀಡುವಂತೆ ಕೇಳಿರಲಿಲ್ಲ. ಅವರ ಬೇಡಿಕೆಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬಹುದಿತ್ತು. ಆದರೆ, ವಿನಾಕಾರಣ ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ಮಾಡಿದ್ದಾರೆ. ಇದಕ್ಕೆ ತಕ್ಕ ಶಾಸ್ತಿ ಅನುಭವಿಸುತ್ತೀರಿ ಎಂದರು.

ವಿದ್ಯಾರ್ಥಿಯೊಬ್ಬ 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗಿದ್ದಕ್ಕೆ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ವಿದ್ಯಾರ್ಥಿಗಳು ದೇಶಭಕ್ತಿಯ ಘೋಷಣೆ ಕೂಗುವುದರಲ್ಲಿ ತಪ್ಪೇನಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ಭಾರತ್ ಮಾತಾ ಕಿ ಜೈ ಎಂದ ವಿದ್ಯಾರ್ಥಿಗಳ ಮೇಲೆ ಕೈ ಮಾಡಲು ಪೊಲೀಸರಿಗೇನು ಅಧಿಕಾರ ಇದೆ. ವಿದ್ಯಾರ್ಥಿಗಳು ಕಲ್ಲು ತೂರಾಟ, ಗಲಭೆ ನಡೆಸಿಲ್ಲ. ಕುತ್ತಿಗೆ ಪಟ್ಟಿ ಹಿಡಿದು ಎಳೆದೊಯ್ಯುವ ಅಗತ್ಯ ಏನಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೆಂದು ಪೊಲೀಸರು ಈ ರೀತಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಪೊಲೀಸ್ ಅಧಿಕಾರಿಗಳು ಆಡಳಿತ ಪಕ್ಷದ ಕೈಗೊಂಬೆಗಳಂತೆ ವರ್ತಿಸಬಾರದು. ಸರ್ಕಾರಗಳು ಬದಲಾಗುತ್ತವೆ ಎಂಬುದನ್ನು ಪೊಲೀಸರು ನೆನಪಿನಲ್ಲಿಡಬೇಕು ಎಂದು ಎಚ್ಚರಿಸಿದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಲಲೇಶ್ ಕುಮಾರ್, ರಮೇಶ ಕಂಡೆಟ್ಟು ಮತ್ತಿತರರು ಇದ್ದರು.