ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆರ್ ಪಿಎಲ್ ಸಂಸ್ಥೆಯ ತ್ರೈಮಾಸಿಕ ವರದಿಯಲ್ಲಿ ಉಲ್ಲೇಖ

17-10-26 12:25 pm       HK News Staffer   ಕರಾವಳಿ

ಎಂಆರ್ ಪಿಎಲ್ ಮೂರನೇ ಹಂತದ ವಿಸ್ತರಣಾ ಘಟಕದಲ್ಲಿ ಸೆ.30ರಂದು ನಡೆದ ಸ್ಫೋಟ ಘಟನೆಯಲ್ಲಿ 118.76 ಕೋಟಿ ರೂ. ನಷ್ಟವಾಗಿರುವುದಾಗಿ ಕಂಪನಿ ತನ್ನ ತ್ರೈಮಾಸಿಕ ವರದಿಯಲ್ಲಿ ಉಲ್ಲೇಖಿಸಿದೆ.

ಮಂಗಳೂರು, ಅ.17: ಎಂಆರ್ ಪಿಎಲ್ ಮೂರನೇ ಹಂತದ ವಿಸ್ತರಣಾ ಘಟಕದಲ್ಲಿ ಸೆ.30ರಂದು ನಡೆದ ಸ್ಫೋಟ ಘಟನೆಯಲ್ಲಿ 118.76 ಕೋಟಿ ರೂ. ನಷ್ಟವಾಗಿರುವುದಾಗಿ ಕಂಪನಿ ತನ್ನ ತ್ರೈಮಾಸಿಕ ವರದಿಯಲ್ಲಿ ಉಲ್ಲೇಖಿಸಿದೆ. 

ಬುಧವಾರ ನಡೆದ ನಿರ್ದೇಶಕ ಮಂಡಳಿ ಸಭೆಯ ನಂತರ ಈ ಕುರಿತು ಸ್ಟಾಕ್ ಎಕ್ಸ್‌ಚೇಂಜಸ್‌ಗೆ ವರದಿ ಸಲ್ಲಿಸಲಾಗಿದೆ. ರಿಫೈನರಿ ಸಂಕೀರ್ಣದ ಮೂರನೇ ಹಂತದ ಕಾಕರ್ ಹೈಡ್ರೋಟ್ರೀಟರ್ ಘಟಕದಲ್ಲಿ (ಸಿಎಚ್‌ಟಿಯು) ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಉತ್ಪಾದನಾ ಘಟಕ ಮತ್ತು ಯಂತ್ರೋಪಕರಣಗಳಿಗೆ ಆಗಿರುವ ಹಾನಿಯ ಆಧಾರದಲ್ಲಿ ನಷ್ಟದ ಪ್ರಮಾಣವನ್ನು ಲೆಕ್ಕ ಹಾಕಲಾಗಿದ್ದು ಇದೆಲ್ಲದರ ಮರುಸ್ಥಾಪನೆಗೆ ₹225 ಕೋಟಿ ವೆಚ್ಚವಾಗಬಹುದು ಎಂದು ತಿಳಿಸಿದೆ. ಹಾನಿಗೊಳಗಾದ ಎಲ್ಲ ಭಾಗಗಳಿಗೂ ವಿಮೆ ಮಾಡಿಸಲಾಗಿತ್ತು ಎಂದು ತಿಳಿಸಲಾಗಿದೆ.

ಸಿಎಚ್‌ಟಿಯುವಿನಲ್ಲಿ ಸ್ಫೋಟ ಸಂಭವಿಸಿತ್ತು ಎಂದು ಹೇಳಲಾಗಿತ್ತಾದರೂ ವರದಿಯಲ್ಲಿ ಬೆಂಕಿ ಅವಘಡ ಎಂದಷ್ಟೇ ಉಲ್ಲೇಖಿಸಲಾಗಿದೆ. ಕಂಪನಿಗೆ ಈ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ₹ 1,881 ಕೋಟಿ ವರಮಾನ ದಾಖಲಿಸಿದೆ ಎಂದು ಪ್ರಕಟಣೆ ತಿಳಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕಂಪನಿಗೆ 639 ಕೋಟಿ ವರಮಾನ ಬಂದಿತ್ತು. ಈ ವರ್ಷ ಶೇಕಡ 194ರಷ್ಟು ಏರಿಕೆ ಕಂಡಿದೆ. 

ಅರ್ಧ ವಾರ್ಷಿಕ ಅವಧಿಯಲ್ಲಿ ರಫ್ತು ಮೂಲಕ ಬಂದಿರುವ ₹6,327 ಕೋಟಿ ಸೇರಿದಂತೆ ಒಟ್ಟು ₹35,590 ಕೋಟಿ ಆದಾಯ ಲಭಿಸಿದ್ದು ಕಳೆದ ವರ್ಷ ಈ ಅವಧಿಯ ವರಮಾನ ₹25,953 ಕೋಟಿ ಆಗಿತ್ತು. ಕಂಪನಿಯ ಒಟ್ಟು ಉತ್ಪಾದನೆ 4.18 ಮಿಲಿಯ ಟನ್ ಆಗಿದ್ದು ಕಳೆದ ಬಾರಿ ಇದರ ಪ್ರಮಾಣ 4.43 ಮಿಲಿಯನ್ ಟನ್ ಆಗಿತ್ತು ಎಂದು ತಿಳಿಸಿದೆ.