ಕದ್ರಿ ರಾಜಾಂಗಣದಲ್ಲಿ ‘ಅಷ್ಟಭುಜೆ’ಯಾಗಿ ಅವತರಿಸಿದ ಆರ್ಷಿಯಾ ; ಕೋಮು ವೈಷಮ್ಯದ ನೆಲದಲ್ಲಿ ಮುಸ್ಲಿಂ ಮಹಿಳೆಯ ‘ದೇವತೆ’ಯನ್ನು ಕಣ್ತುಂಬಿಕೊಂಡ ಹಿಂದುಗಳು ! ಕಟ್ಟುಪಾಡು ಮೀರಿ ನಿಂತ ಮಹಿಳೆಗೆ ಶಹಭಾಷ್ ಗಿರಿ 

21-10-26 07:52 pm       HK News Desk   ಕರಾವಳಿ

ಕರಾವಳಿಯ ನೆಲ ಕೆಲವೊಮ್ಮೆ ಕೋಮು ದ್ವೇಷಕ್ಕೆ ಹೊತ್ತಿಕೊಳ್ಳುವುದುಂಟು. ಹಿಂದು- ಮುಸ್ಲಿಂ ಎನ್ನುವ ಕಾರಣಕ್ಕೆ ಅಮಾಯಕ ಜನರು ಕೊಲೆಯಾಗಿದ್ದು ಆಬಳಿಕ ಒಂದೆರಡು ತಿಂಗಳು ಬೂದಿ ಮುಚ್ಚಿದ ಕೆಂಡದಂತಾಗುವುದು ಮಾಮೂಲಿ ಅನ್ನುವಂತಿದೆ.

ಮಂಗಳೂರು, ಅ.21 ಕರಾವಳಿಯ ನೆಲ ಕೆಲವೊಮ್ಮೆ ಕೋಮು ದ್ವೇಷಕ್ಕೆ ಹೊತ್ತಿಕೊಳ್ಳುವುದುಂಟು. ಹಿಂದು- ಮುಸ್ಲಿಂ ಎನ್ನುವ ಕಾರಣಕ್ಕೆ ಅಮಾಯಕ ಜನರು ಕೊಲೆಯಾಗಿದ್ದು ಆಬಳಿಕ ಒಂದೆರಡು ತಿಂಗಳು ಬೂದಿ ಮುಚ್ಚಿದ ಕೆಂಡದಂತಾಗುವುದು ಮಾಮೂಲಿ ಅನ್ನುವಂತಿದೆ. ಇದರ ನಡುವೆಯೂ, ಧಾರ್ಮಿಕ ಸೌಹಾರ್ದ, ಧರ್ಮ ಭೇದ ಇಲ್ಲದೆ ಜನರು ಒಂದೆಡೆ ಕಲೆಯುವುದನ್ನೂ ನೋಡಿದ್ದೇವೆ. ಇಂತಹ ಊರಿನಲ್ಲಿ ಮುಸ್ಲಿಂ ಯುವತಿಯೊಬ್ಬಳು ಹಿಂದುಗಳು ಈ ಬ್ರಹ್ಮಾಂಡದ ಮೂಲಸ್ವರೂಪಿ, ಜಗನ್ಮಾತೆ ಎಂದು ಆರಾಧಿಸುವ ದೇವಿಯ ವೇಷ ಧರಿಸಿದರೆ ಹೇಗಿರಬೇಡ. ಹೌದು.. ಮುಸ್ಲಿಂ ಯುವತಿ ಯಕ್ಷಗಾನದಲ್ಲಿ ದೇವಿ ಅವತಾರ ಎತ್ತಿದ್ದನ್ನು ಕಂಡು ಯಕ್ಷ ಅಭಿಮಾನಿಗಳು ಮುಕ್ತವಾಗಿ ಸ್ವಾಗತಿಸಿದ್ದಾರೆ. ಈ ಹೊಸ ಬೆಳವಣಿಗೆಯನ್ನು ಮುಸ್ಲಿಮರು ಒಪ್ಪಿಕೊಳ್ಳುವುದಕ್ಕಿಂತಲೂ ಹಿಂದುಗಳು ಒಪ್ಪಿಕೊಂಡಿದ್ದಾರೆ ಎನ್ನುವುದೇ ವಿಶೇಷ.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಒಕ್ಕೆತ್ತೂರು ಮಾಡ ನಿವಾಸಿ ಆರ್ಷಿಯಾ ಖಾನ್ ಎಂಬ ಮಹಿಳೆ ಹಿಂದಿನಿಂದಲೂ ಯಕ್ಷಗಾನ ಕಲೆಯನ್ನು ಆರಾಧಿಸಿಕೊಂಡು ಬಂದಿದ್ದಾರೆ. ನವರಾತ್ರಿ ಸಂಭ್ರಮದ ನಡುವೆ ಮಂಗಳೂರಿನ ಕದ್ರಿ ದೇವಸ್ಥಾನದ ಅಂಗಣದಲ್ಲಿ ಅ.20ರಂದು ನಡೆದ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಆರ್ಷಿಯಾ ಇದೇ ಮೊದಲ ಬಾರಿಗೆ ದೇವಿ ಪಾತ್ರವನ್ನು ನಿರ್ವಹಿಸಿದ್ದು ಜಾಲತಾಣದಲ್ಲಿ ಭಾರೀ ಪ್ರಚಾರ ಗಿಟ್ಟಿಸಿದೆ. ಯಕ್ಷಗಾನ ಅಭಿಮಾನಿಗಳ ನಡುವೆ ಚರ್ಚೆಗೂ ಕಾರಣವಾಗಿದೆ.  

ಕಲೆಗೆ ಧರ್ಮ, ಜಾತಿಯ ಭೇದ ಇಲ್ಲ ಎನ್ನುತ್ತಾರೆ. ಮುಸ್ಲಿಮರಲ್ಲಿ ಎಷ್ಟೇ ಕಟ್ಟುಪಾಡುಗಳಿದ್ದರೂ ಸಿನಿಮಾ, ನಾಟಕ ಇತರ ಪ್ರದರ್ಶನ ಕಲೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಯಕ್ಷಗಾನ ಸಾಮಾಜಿಕ ಕತೆಗಳನ್ನೂ ಒಳಗೊಂಡಿದ್ದರೂ, ಹಿಂದು ಪುರಾಣ ಕತೆಗಳಿಂದಲೇ ಹೆಚ್ಚು ಪ್ರಚಾರ ಗಿಟ್ಟಿಸಿದ ಕಾರಣಕ್ಕೋ ಏನೋ ದೂರ ನಿಂತಿದ್ದಾರೆ. ಕರಾವಳಿಯಲ್ಲಿ ಯಕ್ಷಗಾನ ಜನಪದ ಕಲೆಯಾಗಿ ಬೆಳೆದಿದ್ದರೂ ಇತರ ಸಮುದಾಯದ ಮಂದಿ ಈ ಕಲೆಯನ್ನು ಪ್ರವೃತ್ತಿಯಾಗಿಸಿ ತೊಡಗಿಸಿದ್ದಿಲ್ಲ. ಅಪರೂಪಕ್ಕೆ ಅನ್ಯಮತೀಯರು ಯಕ್ಷಗಾನವನ್ನು ಹರಕೆಯ ಸೇವೆಯಾಗಿ ಆಡಿಸಿಕೊಂಡು ಬರುತ್ತಿದ್ದರೂ, ತಾವೇ ಪಾತ್ರಧಾರಿಗಳಾಗಿ ಕಾಣಿಸಿಕೊಂಡು ಪ್ರಸಿದ್ಧಿ ಪಡೆದದ್ದಿಲ್ಲ. ಸುಳ್ಯದ ಜಬ್ಬಾರ್ ಸಮೋ ಇದಕ್ಕೊಂದು ಅಪವಾದವಾಗಿದ್ದರೂ ಸೀಮಿತವಾಗಿ ಪಾತ್ರಗಳನ್ನು ಮಾಡಿದರೂ ಅವರು ಹೆಚ್ಚು ಖ್ಯಾತಿ ಗಳಿಸಿದ್ದು ತಾಳಮದ್ದಲೆಗಳಲ್ಲಿ. ಅವರನ್ನೂ ಹಿಂದುಗಳು ತಮ್ಮದೇ ಓರಗೆಯವರು ಎನ್ನುವಂತೆ ಸ್ವೀಕರಿಸಿದ್ದಾರೆ. ಹಿಂದು ದೇವರ ಪಾತ್ರಗಳನ್ನು ಹೆಚ್ಚು ಆಕರ್ಷಕವಾಗಿ ಮಾಡುತ್ತಿರುವ ಕಾರಣ ಪ್ರತ್ಯೇಕ ಅಭಿಮಾನಿ ಬಳಗವನ್ನೂ ಸೃಷ್ಟಿಸಿಕೊಂಡಿದ್ದಾರೆ.

ಈ ಬಾರಿ ಮುಸ್ಲಿಂ ಮಹಿಳೆಯೊಬ್ಬಳು ದೇವಿ ಪಾತ್ರವನ್ನು ನಿರ್ವಹಿಸಿದ್ದಾರೆನ್ನುವುದು ಪ್ರಚಾರ ಗಿಟ್ಟಿಸುವುದರ ಜೊತೆಗೆ ಚರ್ಚೆಗೂ ಕಾರಣವಾಗಿದೆ. ಯಾಕಂದ್ರೆ, ಮುಸ್ಲಿಮರಲ್ಲಿ ಅಲ್ಲಾನೊಬ್ಬನೇ, ಇತರ ದೇವರಿಲ್ಲ. ಇತರ ಧರ್ಮದ ಮಂದಿರಗಳಿಗೂ ತೆರಳಬಾರದು ಎನ್ನುವಷ್ಟು ಕಠಿಣ ನಿಯಮಗಳನ್ನು ಸಣ್ಣಂದಿನಲ್ಲೇ ಕಲಿಸಲಾಗುತ್ತದೆ. ಹಾಗಾಗಿ, ಮುಸ್ಲಿಮರು ಭಾರತದಲ್ಲಿ ಬಹು ವೈವಿಧ್ಯದ ಸಂಸ್ಕೃತಿಯ ನಡುವೆ ಬೆಳೆದುಬಂದರೂ ಇಲ್ಲಿನ ಸಂಸ್ಕೃತಿಯನ್ನು, ಇಲ್ಲಿನ ವೈವಿಧ್ಯಮಯ ಕಲೆಗಳನ್ನು ಮೈಗೂಡಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಇದೇ ಕಾರಣಕ್ಕೆ ಈ ಜನ ಸಮಾಜದಲ್ಲಿ ಒಳಗೊಳ್ಳುವುದರ ಬದಲು ಪ್ರತ್ಯೇಕತೆಯ ಭಾವನೆ ಹೆಚ್ಚು ಬೆಳೆಸಿಕೊಳ್ಳುವುದಕ್ಕೆ ಕಾರಣವಾಗಿದೆ. ಅದರಲ್ಲೂ ಮಹಿಳೆಗೆ ಯಾವುದೇ ಸ್ವಾತಂತ್ರ್ಯವೇ ಇಲ್ಲ ಎನ್ನುವಷ್ಟು ಕಟ್ಟುಪಾಡು ಅವರಲ್ಲಿ ಬೆಳೆದುಬಂದಿದೆ. ಇಂಥದ್ರಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ಕೋಮು ವೈಷಮ್ಯಕ್ಕೆ ಕುಖ್ಯಾತಿ ಹೊಂದಿರುವ ನೆಲದಲ್ಲೇ ಹಿಂದು ದೇವತೆಯಾಗಿ ಕಂಗೊಳಿಸಿದ್ದಾಳೆ. ಇದನ್ನು ಹಿಂದುಗಳು ತಮ್ಮದೇ ಒಡನಾಡಿ ಎನ್ನುವಂತೆ ಸ್ವೀಕರಿಸಿದ್ದು ದೇವಿ ಪಾತ್ರವನ್ನು ತಮ್ಮ ಮೊಬೈಲ್ ಗಳಲ್ಲಿ ಚಿತ್ರೀಕರಿಸಿ ಸ್ಟೇಟಸ್ ಹಾಕ್ಕೊಂಡು ಸಂಭ್ರಮಿಸಿದ್ದು ಸಣ್ಣ ವಿಷಯವಲ್ಲ. 

ಆರ್ಷಿಯಾ ಖಾನ್ ಇದ್ದಾಳೆ ಎನ್ನುವ ಕಾರಣಕ್ಕೆ ಕದ್ರಿ ರಾಜಾಂಗಣದಲ್ಲಿ ನಿನ್ನೆ ನಡೆದ ಯಕ್ಷಗಾನದಲ್ಲಿ ಎಂದಿಗಿಂತ ಹೆಚ್ಚು ಜನರು ಸೇರಿದ್ದರು. ಆಕೆಯ ಊರು ವಿಟ್ಲ ಆಸುಪಾಸಿನವರು ಬಹಳಷ್ಟು ಮಂದಿ ಆಗಮಿಸಿದ್ದರು. ಸಾಮಾನ್ಯ ದಿನಗಳಲ್ಲಿ ಇಲ್ಲಿನ ಯಕ್ಷಗಾನಕ್ಕೆ ಸೀಮಿತ ಜನರು ಸೇರುವುದಾದರೆ, ಅ.20ರ ದೇವಿ ಮಹಾತ್ಮೆ ನೋಡಲು ಸಾವಿರಾರು ಜನರು ಸೇರಿದ್ದು ಈ ಕ್ಷಣವನ್ನು ಯಕ್ಷಗಾನ ಅಭಿಮಾನಿಗಳು ವಿಭಿನ್ನವಾಗಿ ಗುರುತಿಸಿದ್ದಾರೆ ಎನ್ನುವುದಕ್ಕೆ ಸಾಕ್ಷಿ. ಜಾಲತಾಣದಲ್ಲಿಯೂ ಆರ್ಷಿಯಾ, ದೇವಿ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

‘ತನು ವಿಟ್ಲ’ ಎಂಬ ನಾಮಾಂಕಿತದಲ್ಲಿ ಹೆಸರು ಮಾಡಿರುವ ಅರ್ಷಿಯಾ ಖಾನ್ ತಮ್ಮನ್ನು ಯಕ್ಷಪ್ರಿಯೆ ಎಂದು ಗುರುತಿಸಿಕೊಳ್ಳುತ್ತಾರೆ. ಅಷ್ಟಭುಜೆ ದೇವಿಯಾಗಿ ಪಾತ್ರ ನಿರ್ವಹಿಸುವ ಸಲುವಾಗಿ ಆಕೆ ಆರು ತಿಂಗಳಿನಿಂದ ವ್ರತ ನಿಷ್ಠೆಯಿಂದ ನಡೆದುಬಂದಿದ್ದರೆನ್ನುವುದನ್ನು ಆಕೆಯೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಅವರೇ ಹೇಳುವಂತೆ, ತಂದೆ ಡೆಪ್ಯುಟಿ ತಹಸೀಲ್ದಾರ್ ಆಗಿ ನಿವೃತ್ತರಾದವರು. ಹೀಗಾಗಿ ತಮ್ಮದು ವಿದ್ಯಾವಂತ ಕುಟುಂಬ. ತನಗೇನೂ ಮನೆಯಲ್ಲಿ ನಿಯಮದ ಕಟ್ಟುಪಾಡು ಇರಲಿಲ್ಲ. ಇದರಿಂದಾಗಿ ಯಕ್ಷಗಾನ, ಕೋಲ ಎಲ್ಲವನ್ನೂ ನೋಡಿ ಬೆಳೆಯಲು ಸಾಧ್ಯವಾಯಿತು ಎನ್ನುತ್ತಾರೆ. ಈಗಲೂ ದಿನವೂ ಅನಂತಾಡಿಯಲ್ಲಿ ದೈವಸ್ಥಾನದ ಮುಂದೆ ಕೈಮುಗಿದೇ ದಿನವನ್ನು ಪ್ರಾರಂಭಿಸುತ್ತೇನೆ ಎಂದೂ ಹೇಳುತ್ತಾರೆ. ಹುಟ್ಟಿನಿಂದ ಮುಸ್ಲಿಂ ಆದರೂ ಇಷ್ಟದ ಸಂಸ್ಕೃತಿಯಿಂದಾಗಿ ಹಿಂದುವಾಗಿಯೇ ಗುರುತಿಸಿಕೊಂಡಿದ್ದಾರೆ. 

ಕದಳಿ ಕಲಾ ಕೇಂದ್ರದ ವತಿಯಿಂದ ನವರಾತ್ರಿ ಅಂಗವಾಗಿ ಕದ್ರಿ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಆಯೋಜಿಸಲಾಗಿದ್ದ 14ನೇ ವರ್ಷದ ‘ಕದಳಿ ದಶಾಹ’ ಯಕ್ಷಗಾನ ಸಪ್ತಾಹದಲ್ಲಿ ಅ.11ರಿಂದ ಆರಂಭಗೊಂಡು ಅ.20ರಂದು ಸಮಾರೋಪಗೊಂಡಿತು. ಸಮಾರೋಪದ ಅಂಗವಾಗಿ ‘ಸಂಪೂರ್ಣ ಶ್ರೀದೇವಿ ಮಹಾತ್ಮೆ’ ಯಕ್ಷಗಾನದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರು ಭಾಗವಹಿಸಿದ್ದರು.