ರೆಸ್ಲರ್ ‘ಗ್ರೇಟ್ ಖಲಿ’ ನೋಡಲು ಹುಚ್ಚೆದ್ದು ಸೇರಿದ ಅಭಿಮಾನಿಗಳು ; ಮುಂದಿನ ಸಲ ಅಮೆರಿಕದ ರೆಸ್ಲರ್ ಜಾನ್ ಶೀನಾ ಬರ್ತಾರೆ ! ಮಂಗ್ಳೂರು ಕಮಿಷನರ್ ಬಗ್ಗೆ ಸುನಿಲ್ ಶೆಟ್ಟಿ ಪ್ರಶಂಸೆ, ರಿಷಬ್ ಫ್ಯಾನ್ ಎಂದ ವಿಜೇಂದರ್, ಪಿಲಿ ನಲಿಕೆಗೆ ಕಿಕ್ಕಿರಿದ ಜನ ! 

21-10-26 09:20 pm       HK News Desk   ಕರಾವಳಿ

ಮಿಥುನ್ ರೈ ನೇತೃತ್ವದ ಈ ಬಾರಿಯ ಪಿಲಿನಲಿಕೆಯಲ್ಲಿ ಒಂದು ಕಾಲದ ವರ್ಲ್ಡ್ ಚಾಂಪಿಯನ್ ರೆಸ್ಲರ್ ಗ್ರೇಟ್ ಖಲಿ ಆಗಮಿಸಿದ್ದು ಜನರನ್ನು ಹುಚ್ಚೆಬ್ಬಿಸಿತ್ತು. ಗ್ರೇಟ್ ಖಲಿ ಎಂದೇ ಹೆಸರಾಗಿರುವ ದಲೀಪ್ ಸಿಂಗ್ ರಾಣಾ ರೆಸ್ಲಿಂಗ್ ಚಾಂಪ್ಯನ್ ಆಗಿರುವ ಭಾರತ ಮೂಲದ ಏಕೈಕ ವ್ಯಕ್ತಿಯಾಗಿದ್ದು ಮಂಗಳೂರು ನಗರಕ್ಕೆ ಮೊದಲ ಬಾರಿಗೆ ಬಂದಿದ್ದಲ್ಲದೆ

ಮಂಗಳೂರು, ಅ.21ಮಿಥುನ್ ರೈ ನೇತೃತ್ವದ ಈ ಬಾರಿಯ ಪಿಲಿನಲಿಕೆಯಲ್ಲಿ ಒಂದು ಕಾಲದ ವರ್ಲ್ಡ್ ಚಾಂಪಿಯನ್ ರೆಸ್ಲರ್ ಗ್ರೇಟ್ ಖಲಿ ಆಗಮಿಸಿದ್ದು ಜನರನ್ನು ಹುಚ್ಚೆಬ್ಬಿಸಿತ್ತು. ಗ್ರೇಟ್ ಖಲಿ ಎಂದೇ ಹೆಸರಾಗಿರುವ ದಲೀಪ್ ಸಿಂಗ್ ರಾಣಾ ರೆಸ್ಲಿಂಗ್ ಚಾಂಪ್ಯನ್ ಆಗಿರುವ ಭಾರತ ಮೂಲದ ಏಕೈಕ ವ್ಯಕ್ತಿಯಾಗಿದ್ದು ಮಂಗಳೂರು ನಗರಕ್ಕೆ ಮೊದಲ ಬಾರಿಗೆ ಬಂದಿದ್ದಲ್ಲದೆ, ಹುಲಿಗಳ ಕುಣಿತವನ್ನು ನೋಡಿ ಆನಂದತುಂದಿಲರಾದರು. ಹುಲಿ ಕುಣಿತದ ಪಟ್ಟುಗಳನ್ನು ನೋಡಿ ತಾವೇ ಮೊಬೈಲಿನಲ್ಲಿ ವಿಡಿಯೋ ಮಾಡುತ್ತ ಕಪ್ಪು ಹುಲಿಯ ರೌಂಡ್ ಹೊಡಿಯುವ ಪಲ್ಟಿಯನ್ನು ನೋಡಿ ತಲೆಗೆ ಕೈಇಟ್ಟು ವೀಕ್ಷಿಸಿದರು.

ಆಬಳಿಕ ಮಾತನಾಡುತ್ತ ನನಗೆ ಹುಲಿ ಕುಣಿತ ನೋಡಿ ತುಂಬ ಸಂತಸ ಆಯ್ತು. ಈವತ್ತು ಗ್ರೇಟ್ ಖಲಿ ಬಂದಿದ್ದೇನೆ, ಮುಂದಿನ ಬಾರಿ ಅಮೆರಿಕದ ಖ್ಯಾತ ರೆಸ್ಲರ್ ಜಾನ್ ಶೀನಾ ಅವರನ್ನು ಕರೆತರುತ್ತೇನೆ. ಹೈದ್ರಾಬಾದ್ ನಲ್ಲಿ ಬೇರೆ ಪ್ರೋಗ್ರಾಮಿಗೆ ಒಪ್ಪಿಕೊಂಡಿದ್ದೆ. ಆದರೆ ಮಿಥುನ್ ರೈ ಆಹ್ವಾನದ ಮೇಲೆ ಇಲ್ಲಿಗೆ ಬಂದು ತುಂಬ ಖುಷಿಯಾಯ್ತು. ಇಂಥ ಜನಪದ ಕಲೆಯನ್ನು ನಾನು ಬೇರೆಲ್ಲೂ ಕಂಡಿಲ್ಲ ಎಂದು ಹೇಳಿದರು. ಸಾಮಾನ್ಯ ಜನರಿಗಿಂತ ವಿಭಿನ್ನವಾಗಿ ಗುರುತಿಸಲ್ಪಡುವ ಏಳಡಿ ಎತ್ತರ, ಅಜಾನುಬಾಹು ಗಾತ್ರದ ಗ್ರೇಟ್ ಖಲಿ ಅವರನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದರು. ವೇದಿಕೆಯಲ್ಲಿ ಎದ್ದು ನಿಂತು ಕೈಬೀಸುತ್ತಲೇ ಜನರು ಶಿಳ್ಳೆ, ಕೇಕೆ ಹಾಕಿದ್ದು ವಿಶೇಷವಾಗಿತ್ತು. ಪಂಜಾಬ್ ಮೂಲದ ಗ್ರೇಟ್ ಖಲಿ ಅಮೆರಿಕದಲ್ಲಿ ರೆಸ್ಲರ್ ಆಗಿದ್ದುದಲ್ಲದೆ, ಅಲ್ಲಿಯೇ ಇದ್ದುಕೊಂಡು ಹಲವು ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೆಸ್ಲಿಂಗ್ ನಿಂದ ನಿವೃತ್ತಿಯಾದ ಬಳಿಕ ಭಾರತದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಉಳಿದಂತೆ, ಪಿಲಿನಲಿಕೆ ಕಾರ್ಯಕ್ರಮದಲ್ಲಿ ಹಲವು ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಒಲಿಂಪಿಕ್ಸ್ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಒಂದೇ ಬಾರಿಗೆ ಬಂದಿದ್ದರು. ಇದೇ ವೇಳೆ, ವಿಜೇಂದರ್ ಸಿಂಗ್ ಅವರು ರಿಷಬ್ ಶೆಟ್ಟಿಯವರ ಫ್ಯಾನ್ ಎಂದು ಮಿಥುನ್ ರೈ ಹೇಳಿದಾಗ, ಸ್ವತಃ ಮೈಕ್ ಪಡೆದ ವಿಜೇಂದರ್ ಸಿಂಗ್, ನನ್ನ ಇಬ್ಬರು ಮಕ್ಕಳು ಕಾಂತಾರ ಸಿನಿಮಾವನ್ನು ತುಂಬ ಮೆಚ್ಚಿಕೊಂಡಿದ್ದು ರಿಷಬ್ ಅವರ ಫ್ಯಾನ್ ಆಗಿದ್ದಾರೆ, ಅವರಿಗೆ ವಿಡಿಯೋ ಕಾಲ್ ಮೂಲಕ ರಿಷಬ್ ಅವರನ್ನು ತೋರಿಸಿದೆ ಎಂದರಲ್ಲದೆ, ಮುಂದಿನ ಬಾರಿ ನಾವು ಒಟ್ಟಿಗೆ ಸೇರಿ ಸಿನಿಮಾ ಮಾಡೋಣ ಎಂದೂ ಆಫರ್ ನೀಡಿದರು.

ಬಾಲಿವುಡ್ ನಟ ಸುನಿಲ್ ಶೆಟ್ಟಿ ಮತ್ತು ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸುಧೀರ್ ರೆಡ್ಡಿ ಮಾತನಾಡಿ, ನಾನು ಜೀವನದಲ್ಲಿ ಮೊದಲ ಸಿನಿಮಾ ನೋಡಿದ್ದು ಸುನಿಲ್ ಶೆಟ್ಟಿಯವರದ್ದು. ಹಾಗೆಯೇ ನಾನು ನೋಡಿದ ಮೊದಲ ತುಳು ಸಿನಿಮಾದಲ್ಲು ಸುನಿಲ್ ಶೆಟ್ಟಿ ಏಕ್ಟ್ ಮಾಡಿದ್ದರು ಎಂದು ಸ್ಮರಿಸುತ್ತಾ, ನಾನು ಮಂಗಳೂರಿಗೆ ಬಂದ ಮೇಲೆ ಗಲಾಟೆ ಆಗಿಲ್ಲ. ಇಲ್ಲಿನ ಜನ ಒಳ್ಳೆಯವರಿದ್ದಾರೆ, ಬೇರೆಲ್ಲ ಕಡೆ ಸಂಸ್ಕೃತಿ ನಾಶ ಆಗುತ್ತಿದ್ದರೆ, ಮಂಗಳೂರಿನ ಜನ ಸಂಸ್ಕೃತಿ ಉಳಿಸುತ್ತ ಅದನ್ನು ಪಾಲಿಸುತ್ತ ಸಾಗುತ್ತಿದ್ದಾರೆ. ಕಳೆದ ಬಾರಿಯೂ ಪಿಲಿನಲಿಕೆ ಕಾರ್ಯಕ್ರಮಕ್ಕೆ ಬಂದಿದ್ದೆ. ಈ ಬಾರಿ ಅದಕ್ಕಿಂತಲೂ ಹೆಚ್ಚು ಜನ ಇದ್ದಾರೆ, ನನಗೆ ಇಲ್ಲೇ ಹತ್ತಿರದಿಂದ ಬರೋದಕ್ಕೆ ಅರ್ಧ ಗಂಟೆ ಬೇಕಾಯಿತು ಎಂದರು.

ಸುನಿಲ್ ಶೆಟ್ಟಿ ಮಾತನಾಡಿ, ನಾನು ಇಲ್ಲಿನ ಕಮಿಷನರ್ ಬಗ್ಗೆ ಕೇಳಿದ್ದೇನೆ, ಅವರು ಕಾನೂನು ಬಗ್ಗೆ ಸ್ಟ್ರಿಕ್ಟ್ ಇದ್ದಾರೆ ಅಂತ. ಕಾನೂನು ಮಾಡಿದ್ದು ನಮಗಾಗಿ, ಅದನ್ನು ನಾವು ಪಾಲಿಸಿದರೆ ಎಲ್ಲವೂ ಸರಿಯಾಗಿರುತ್ತದೆ, ಕಾನೂನು ಎಂದೂ ನಮಗೆ ತೊಡಕು ಮಾಡುವುದಿಲ್ಲ ಎನ್ನುತ್ತ ತುಳು ಭಾಷೆಯನ್ನು ರಾಜ್ಯ ಭಾಷೆಯಾಗಿ ಮಾಡಿದ್ದಕ್ಕೆ ಡಿಕೆ ಶಿವಕುಮಾರ್ ಸರ್ಕಾರಕ್ಕೆ ಧನ್ಯವಾದ ಹೇಳಿದರು. ನಮ್ಮ ತುಳು ಭಾಷೆಯನ್ನು ದೇಶದ ಮಟ್ಟಕ್ಕೆ ನಾವು ಒಯ್ಯಬೇಕಾಗಿದೆ ಎಂದರು. ಇದೇ ವೇದಿಕೆಯಲ್ಲಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡ ಕಾಣಿಸಿಕೊಂಡು ತಮ್ಮ ಅಭಿಮಾನಿಗಳತ್ತ ಕೈಬೀಸಿದರು. ಆದರೆ ಹೆಚ್ಚಿನ ಜನರು ಹುಚ್ಚೆದ್ದು ಹಿಂದೆ ಬಿದ್ದದ್ದು ಸೆಲ್ಫಿಗಾಗಿ ಕಿಕ್ಕಿರಿದು ಸೇರಿದ್ದು ಗ್ರೇಟ್ ಖಲಿಗಾಗಿ. ಗ್ರೇಟ್ ಖಲಿ ಕೊನೆಯ ಸೆಲೆಬ್ರಿಟಿಯಾಗಿ ರಾತ್ರಿ 11 ಗಂಟೆ ವೇಳೆಗೆ ಬಂದಿದ್ದು, ಈ ವೇಳೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಮೈದಾನ ತುಂಬಿದ್ದರು.